ಸುಮಲತಾ ಅಂಬರೀಷ್ ಅವರಿಗೇ ಮಂಡ್ಯ ಟಿಕೆಟ್ ಕೊಡ್ತಾರಾ..? ಇದೂವರೆಗೆ ಕನ್ʻಫರ್ಮ್ ಆಗಿಲ್ಲ. ಆದರೆ ಈ ಬಾರಿ ದರ್ಶನ್ ಮತ್ತು ಯಶ್ ಸುಮಲತಾ ಪರ ಪ್ರಚಾರ ಮಾಡೋದಿಲ್ವಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಯಾಕಂದ್ರೆ ಸುಮಲತಾ ಅವರು ಮಂಡ್ಯದಲ್ಲಿ ನಾನು ನನ್ನ ಪ್ರಚಾರ ಮಾಡಿ ಅಂತಾ ಯಶ್ ಮತ್ತು ದರ್ಶನ್ ಅವರನ್ನ ಕೇಳೋದಿಲ್ಲ. ಅವರಾಗಿ ಬಂದ್ರೆ ಸ್ವಾಗತ ಎಂದಿದ್ಧಾರೆ.
ಕಳೆದ ಬಾರಿ ಸುಮಲತಾ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ನಿಂತು ಗೆದ್ದಿದ್ದರು. ಬಿಜೆಪಿ ಆಗ ಸುಮಲತಾ ಅವರಿಗೆ ಬೆಂಬಲ ಘೋಷಿಸಿತ್ತು, ಕ್ಯಾಂಡಿಡೇಟ್ ಹಾಕಿರಲಿಲ್ಲ. ಆದರೆ, ಈ ಬಾರಿ ಯಾರ ವಿರುದ್ಧ ಹೋರಾಡಿ ಗೆದ್ದಿದ್ದರೋ, ಅದೇ ಜೆಡಿಎಸ್ ಈಗ ಬಿಜೆಪಿ ಜೊತೆಯಲ್ಲಿದೆ. ಆಗ ಪಕ್ಷೇತರರಾಗಿದ್ದ ಸುಮಲತಾ, ಈ ಬಾರಿ ಬಿಜೆಪಿಯ ಜೊತೆ ಇದ್ಧಾರೆ. ಜೆಡಿಎಸ್ ಸೋತಿದ್ದರೂ, 5 ಲಕ್ಷಕ್ಕೂ ಹೆಚ್ಚು ಮತ ನೀಡಿದ ಕ್ಷೇತ್ರ ಮಂಡ್ಯ. ಸುಮಲತಾ ಪರ ಕಾಂಗ್ರೆಸ್ ಅತೃಪ್ತರು ಹಾಗೂ ಬಿಜೆಪಿಯ ಮತದಾರರ ಜೊತೆಗೆ ಪಕ್ಷವನ್ನು ಮೀರಿದ ಅಂಬರೀಷ್ ಅವರ ಅಭಿಮಾನಿಗಳು ಮತ ನೀಡಿದ್ದರು. ಆದರೆ.. ಈ ಬಾರಿ.. ಪರಿಸ್ಥಿತಿ ಸುಲಭವಾಗಿಲ್ಲ.
ಟಿಕೆಟ್‌ಗಾಗಿ ನಾನು ಡೆಲ್ಲಿಗೆ ಹೋಗುವ ಅವಶ್ಯಕತೆ ಇಲ್ಲ. ನನ್ನನ್ನು ಬರಲು ಹೇಳಿದ್ರೆ ಮಾತ್ರ ಹೋಗ್ತೇನೆ ಎಂದಿರುವ ಸುಮಲತಾ, ತಮಗೇ ಮಂಡ್ಯ ಟಿಕೆಟ್ ಅನ್ನೋ ವಿಶ್ವಾಸದಲ್ಲಿದ್ಧಾರೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೆನು. ಆಗ ನನಗೆ ಯಾವುದೇ ಅನುಭವ ಇರಲಿಲ್ಲ. ನನಗೆ ಬೇಕಾದವರು ನಿಮ್ಮ ಜೊತೆ ಇರ್ತೇವೆ ಅಂತ ಗಟ್ಟಿಯಾಗಿ ನಿಂತಿದ್ದರು. ಇವಾಗ ಸಂದರ್ಭ ಬೇರೆ ಇರುತ್ತದೆ. ಜೊತೆಗೆ, ಒಂದು ಚಿಹ್ನೆಯಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಪಕ್ಷ ಹಾಗೂ ಪಕ್ಷದ ಲೀಡರ್ ಏನು ಹೇಳ್ತಾರೆ ನೋಡಬೇಕು. ಆದ್ದರಿಂದ ಈಗ ಬೇರೆ ರೀತಿಯಲ್ಲಿ ಚುನಾವಣೆ ನಡೆಯುತ್ತದೆ. ಪ್ರಚಾರ, ಹೋರಾಟ, ಕ್ಯಾಂಪೇನ್ ಡಿಫೆರೆಂಟ್ ಇರುತ್ತದೆ ಎಂದಿದ್ದಾರೆ.
ಕಳೆದ ಬಾರಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದಕ್ಕೆ ರಾಜ್ಯದ ಇಬ್ಬರು ಸ್ಟಾರ್ ನಟರಾದ ಯಶ್ ಮತ್ತು ದರ್ಶನ್ 25 ದಿನಗಳ ಕಾಲ ನನ್ನ ಜೊತೆಗಿದ್ದು ಪ್ರಚಾರ ಮಾಡಿದ್ದರು. ಅವರಿಬ್ಬರು ನನಗೋಸ್ಕರ ತ್ಯಾಗವನ್ನೇ ಮಾಡಿದ್ದರು. ಯಾವುದೇ ಸ್ವಾರ್ಥ ಇಲ್ಲದೆ ನನ್ನ ಪರ ನಿಂತಿದ್ದರು. ಆದರೆ, ಪದೇ ಪದೇ ಎಲ್ಲ ಬಿಟ್ಟು ಬನ್ನಿ ಅನ್ನೋದು ಸರಿಯಲ್ಲ. ನನಗೆ ಮನಸ್ಸು ಒಪ್ಪಲ್ಲ. ಅವರು ಯಶ್, ದರ್ಶನ್ ಒಂದೊಂದು ಮೂವಿ ಮಾಡ್ತಿರುತ್ತಾರೆ. ಅದನ್ನೆಲ್ಲ ಬಿಟ್ಟು ಬನ್ನಿ ಅನ್ನೋದು ಸರಿಯಲ್ಲ. ಅವರು ಬಂದರೆ ಖಂಡಿತವಾಗಿಯೂ ಹಾರ್ಟ್ಲಿ ವೆಲ್ ಕಮ್ ಮಾಡ್ತೇನೆ. ದೊಡ್ಡ ಶಕ್ತಿಯಾಗಿ ನನಗೆ ಇರುತ್ತದೆ ಎಂದು ಹೇಳಿದ್ಧಾರೆ.
ಇತ್ತೀಚೆಗೆ ನಟ ದರ್ಶನ್ ಈ ಬಾರಿಯೂ ತಾವು ಸುಮಲತಾ ಅವರ ಜೊತೆಗಿರುತ್ತೇನೆ ಅನ್ನೋ ಮೂಲಕ ಪರೋಕ್ಷ ಸಂದೇಶ ಕೊಟ್ಟಿದ್ದರೆ, ನಟ ಯಶ್ ರಾಜಕೀಯ ಅಂದ್ರೆ ಅಲರ್ಜಿ ಅನ್ನೋ ಮೂಲಕ ಬೇರೆಯದೇ ಸುಳಿವು ಕೊಟ್ಟಿದ್ಧಾರೆ.
ದರ್ಶನ್ ಅವರ ಇಮೇಜ್ ಕಳೆದ ಬಾರಿ ಅಷ್ಟು ನೆಗೆಟಿವ್ ಇರಲಿಲ್ಲ. ಆದರೆ, ಈ 5 ವರ್ಷಗಳಲ್ಲಿ ದರ್ಶನ್ ಹೆಸರು ನೆಗೆಟಿವ್ ಆಗಿಯೇ ಜಾಸ್ತಿ ಸದ್ದು ಮಾಡಿದೆ. ಕಾಟೇರ ಹಿಟ್ ಆಗಿದ್ದರೂ, ದರ್ಶನ್ ವೃತ್ತಿ ಜೀವನ 25 ವರ್ಷ ಪೂರೈಸಿದ್ದರೂ.. ದರ್ಶನ್ ಅವರ ಫ್ಯಾನ್ಸ್ ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಖುದ್ದು ದರ್ಶನ್ ಕೂಡಾ.
ಆದರೆ, ಯಶ್ ಅವರ ಇಮೇಜ್ ಪ್ಯಾನ್ ಇಂಡಿಯಾ ಲೆವೆಲ್ ದಾಟಿ ಮುಂದಕ್ಕೆ ಹೋಗಿದೆ. ಈಗ ಯಶ್ ಅವರು ಪ್ರಚಾರ ಮಾಡ್ತಾರಾ..? ಹಾಗೆ ನೋಡಿದರೆ, ಕಳೆದ ಬಾರಿ ಸುಮಲತಾ ಗೆದ್ದ ಮೇಲೆ ನಡೆದ ಅಭಿನಂದನಾ ಸಮಾವೇಶದ ನಂತರ ಯಶ್ ಅವರು ಸುಮಲತಾ ಅವರ ಪೊಲಿಟಿಕಲ್ ವೇದಿಕೆಗಳಲ್ಲಿ ಕಾಣಿಸಿಕೊಂಡಿಲ್ಲ. ಹಾಗಂತ ಸುಮಲತಾ ಅವರ ಜೊತೆ ಯಶ್ ಬಾಂಧವ್ಯವೇನೂ ಹಾಳಾಗಿಲ್ಲ.



