ಯಶ್ 19ನೇ ಚಿತ್ರ ಕೊನೆಗೂ ಅನೌನ್ಸ್ ಆಗಿದೆ. ಇದೇ ಮೊದಲ ಬಾರಿಗೆ ಯಶ್ ಲೋಡಿಂಗ್ ನ್ಯೂಸ್ ಅಧಿಕೃತವಾಗಿದೆ. ಹಾಗಂತ ಈ ಹಿಂದೆ ಬಂದಿದ್ದ ಗಾಳಿ ಸುದ್ದಿಗಳೆಲ್ಲ ಬೋಗಸ್ ಅಂತೂ ಅಲ್ಲ. ಹೊಸ ಚಿತ್ರದ ಹೆಸರು ಟಾಕ್ಸಿಕ್. ಇದಷ್ಟೇ ಹೊಸದು. ಉಳಿದಂತೆ ಪ್ರೊಡ್ಯೂಸರ್, ಡೈರೆಕ್ಟರ್ ಹಾಗೂ ಯಶ್ ಕೂಡಾ ಪ್ರೊಡ್ಯೂಸರ್ ಆಗಿರುವ ಸುದ್ದಿ ಈಗಾಗಲೇ ಬಂದಿತ್ತು.
ಡೈರೆಕ್ಟರ್ ಗೀತು ಮೋಹನ್ ದಾಸ್. ಪ್ರೊಡ್ಯೂಸರ್ ಕೆವಿಎನ್ ಪ್ರೊಡಕ್ಷನ್ಸ್ನ ವೆಂಕಟ್ ನಾರಾಯಣ್. ಚಿತ್ರದ ಕಥೆ ಏನಿರಬಹುದು..? ಕುತೂಹಲ ಹಾಗೆಯೇ ಇದೆ.
ಟಾಕ್ಸಿಕ್ ಎಂದರೆ ವಿಷ ಅಥವಾ ಅಮಲು ಎಂಬರ್ಥದಲ್ಲಿಯೂ ಬಳಕೆಯಾಗುತ್ತದೆ. ವಿಕ್ಷಿಪ್ತ ಮನಸ್ಸಿನ ವ್ಯಕ್ತಿಗೂ ಟಾಕ್ಸಿಕ್ ಪರ್ಸನ್ ಎನ್ನಲಾಗುತ್ತದೆ. ಟಾಕ್ಸಿಕ್ ವ್ಯಕ್ತಿತ್ವದ ವ್ಯಕ್ತಿಗಳು ಎಂತಹವರನ್ನು ವಿಚಲಿತಗೊಳಿಸುತ್ತಾರೆ. ಹಾಗಾದರೆ ಕಥೆ ಏನಿರಬಹುದು? ಇನ್ನು ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಮತ್ತು ಕ್ಯಾಮೆರಾಗ್ರಫಿ ಯಾರದ್ದು ಅನ್ನೋದು ಗುಟ್ಟಾಗಿಯೇ ಇದೆ.
ಟಾಕ್ಸಿಕ್ ಟೀಸರ್ ರಿಲೀಸ್ ಮಾಡಿರುವ ಯಶ್ ಜೊತೆಯಲ್ಲೇ ಬಿಡುಗಡೆ ದಿನಾಂಕವನ್ನೂ ಘೋಷಣೆ ಮಾಡಿದ್ದಾರೆ. ಟಾಕ್ಸಿಕ್ ಸಿನಿಮಾ ನೋಡೋದಕ್ಕೆ ಇನ್ನೂ 1 ವರ್ಷ 4 ತಿಂಗಳು ಕಾಯಬೇಕು. ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗುವುದು 2025ರ ಏಪ್ರಿಲ್ 10ಕ್ಕೆ.
ಯಾರು ಈ ಗೀತು ಮೋಹನ್ ದಾಸ್?
ಇನ್ನು ಗೀತು ಮೋಹನ್ ದಾಸ್ ಮಲಯಾಳಿ. 1986ರಲ್ಲಿ ಬಾಲನಟಿಯಾಗಿ ಬಂದ ಗೀತು, ಮಲಯಾಳಂನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪೂರ್ಣ ಪ್ರಮಾಣದ ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 2009ರಲ್ಲಿ ಕ್ಯಾಮೆರಾಮನ್ ರಾಜೀವ್ ರವಿ ಜೊತೆಗೆ ಮದುವೆಯಾದ ಗೀತು, 2014ರಲ್ಲಿ ಲೈಯರ್ಸ್ ಡೈಸ್ ಅನ್ನೋ ಹಿಂದಿ ಸಿನಿಮಾ ಡೈರೆಕ್ಷನ್ ಮಾಡಿದ್ದರು. ಆ ಸಿನಿಮಾಗೆ ರಾಷ್ಟ್ರ ಪ್ರಶಸ್ತಿಯೂ ಲಭಿಸಿತ್ತು. ಆನಂತರ ಮಲಯಾಳಂ ನಟ ನಿವಿನ್ ಪೌಲಿ ಅವರ ಜೊತೆ ಮೂಥನ್ ಅನ್ನೋ ಸಿನಿಮಾ ನಿರ್ದೇಶಿಸಿದ್ದರು. ಈಗ ‘ಟಾಕ್ಸಿಕ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಯಶ್ ಬೆಳೆದಿರುವ ಎತ್ತರ ಮತ್ತು ಸ್ಟಾರ್ ಡಂಗೆ ಮಹಿಳಾ ನಿರ್ದೇಶಕಿಗೆ ಡೈರೆಕ್ಷನ್ ಅವಕಾಶ ಕೊಟ್ಟಿರುವುದಕ್ಕೆ ಪ್ರಶಂಸೆಯೂ ವ್ಯಕ್ತವಾಗುತ್ತಿದೆ. ಅದೇ ವೇಳೆ ಕೆಲವರು ರಿಸ್ಕ್ ತೆಗೆದುಕೊಂಡರು ಎಂದೂ ಹೇಳುತ್ತಿದ್ದಾರೆ.
ವೆಂಕಟ್ ನಾರಾಯಣ್ ಜೊತೆಗೆ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಕೂಡ ಈ ಸಿನಿಮಾದ ನಿರ್ಮಾಣದಲ್ಲಿ ಕೈಜೋಡಿಸಿದೆ. ಅದು ಯಶ್ ಅವರ ಬ್ಯಾನರ್ ಎನ್ನುತ್ತಿವೆ ಮೂಲಗಳು. ಹಾಗಾದರೆ ಯಶ್ ಕೂಡಾ ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ.
ಇನ್ನು ಚಿತ್ರದಲ್ಲಿ ಮೂವರು ನಾಯಕಿಯರು ಎನ್ನಲಾಗಿದ್ದು, ಸಾಯಿ ಪಲ್ಲವಿ, ಸಂಯುಕ್ತಾ ಸೇರಿದಂತೆ ಇನ್ನೂ ಒಬ್ಬರ ಹೆಸರು ಕೇಳಿ ಬರುತ್ತಿದೆ. ಆದರೆ ಇದ್ಯಾವುದೂ ಅಧಿಕೃತ ಅಲ್ಲ.



