ಯಶ್ ಮನೆ ದೇವರು ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಾತು ಕೊಟ್ಟಿದ್ದಾರೆ. ಶೀಘ್ರದಲ್ಲೇ ಹೊಸ ಸಿನಿಮಾ ಘೋಷಣೆ ಮಾಡುವ ಭರವಸೆ ಕೊಟ್ಟಿದ್ದಾರೆ. ನಂಜನಗೂಡು ನಂಜುಂಡೇಶ್ವರ ಯಶ್ ಅವರ ಮನೆ ದೇವರು. ಆಗಾಗ್ಗೆ ಬರುತ್ತಲೇ ಇರುತ್ತಾರೆ. ಈಬಾರಿಯೂ ಅಷ್ಟೆ, ಪತ್ನಿ ಮಕ್ಕಳ ಜೊತೆ ಬಂಡೀಪುರ ಸಫಾರಿಗೆ ಹೋಗಿದ್ದ ಯಶ್, ವಾಪಸ್ ಬರುವ ಹಾದಿಯಲ್ಲಿ ನಂಜನಗೂಡಿಗೆ ಬಂದು ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸಿದರು.
ಕಳೆದ ಕೆಲವು ವರ್ಷಗಳಿಂದ ಅವರು ನಟಿಸಿರುವ ಚಿತ್ರ ಕೆಜಿಎಫ್ ಮಾತ್ರ. 2016ರಲ್ಲಿ ಶುರುವಾಗಿದ್ದು ಕೆಜಿಎಫ್. ಕಳೆದ 7 ವರ್ಷಗಳಲ್ಲಿ ಯಶ್ ನಟಿಸಿರುವುದು ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2ಗಳಲ್ಲಿ ಮಾತ್ರ. ಉಳಿದಂತೆ ಸಿನಿಮಾಗಳಿಲ್ಲ. ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಿದ್ದು ಏಪ್ರಿಲ್ 14, 2022ರಲ್ಲಿ. ಅದಾದ ಮೇಲೆ ಇಷ್ಟು ದಿನಗಳಾದರೂ ಹೊಸ ಪ್ರಾಜೆಕ್ಟ್ ಘೋಷಣೆಯಾಗಿಲ್ಲ. ಇದಕ್ಕೆಲ್ಲ ಯಶ್ ನಂಜನಗೂಡು ನಂಜುಂಡೇಶ್ವರನ ಸನ್ನಿಧಾನದಲ್ಲಿ ಉತ್ತರ ಕೊಟ್ಟಿದ್ದಾರೆ. ನಂಜುಂಡೇಶ್ವರ, ಯಶ್ ಅವರ ಮನೆ ದೇವರು.
ಶ್ರೀಘ್ರದಲ್ಲೇ ಮುಂದಿನ ಚಿತ್ರ ಅನೌನ್ಸ್ ಮಾಡುವೆ. ದೇವರ ಸನ್ನಿದಿಯಲ್ಲಿ ಇದ್ದೀನಿ. ಸುಖಾ ಸುಮ್ಮನೆ ತೇಲಿಸುವ ಮಾತುಗಳನ್ನು ಆಡುವುದಿಲ್ಲ. ಜನರು ದುಡ್ಡು ಕೊಟ್ಟು ಸಿನಿಮಾ ನೋಡುತ್ತಾರೆ. ಉಚಿತವಾಗಿ ಸಿನಿಮಾ ನೋಡುವುದಿಲ್ಲ. ಅವರು ಕೊಡುವ ದುಡ್ಡಿಗೆ ನ್ಯಾಯ ಒದಗಿಸುವಂತೆ ಸಿನಿಮಾ ಮಾಡಬೇಕು.ನಾನು ಒಂದು ಕ್ಷಣವನ್ನೂ ವ್ಯರ್ಥ ಮಾಡುತ್ತಿಲ್ಲ. ಸಿನಿಮಾಗಾಗಿ ನಿರಂತರ ಕೆಲಸ ಮಾಡುತ್ತಿದ್ದೇನೆ. ಆದಷ್ಟು ಬೇಕು ಹೊಸ ಚಿತ್ರದ ಮಾಹಿತಿ ನೀಡುತ್ತೇನೆ ಎಂದಿದ್ದಾರೆ ಯಶ್.
ಯಶ್ ಮತ್ತು ರಾಧಿಕಾ ಪಂಡಿತ್, ಮಕ್ಕಳೊಂದಿಗೆ ನಂಜನಗೂಡಿಗೆ ಭೇಟಿ ಕೊಟ್ಟಿದ್ದರು. ಬಂಡಿಪುರದಲ್ಲಿ ಸಫಾರಿ ಮುಗಿಸಿದ ನಂತರ ಮೈಸೂರಿಗೆ ಬಂದ ಯಶ್ ನಂಜನಗೂಡಿಗೂ ಭೇಟಿ ಕೊಟ್ಟರು. ಮಕ್ಕಳಂತೂ ಸಫಾರಿ ಎಂಜಾಯ್ ಮಾಡಿದರು. ಹುಲಿಯೊಂದು ಸಿಗಲಿಲ್ಲ ಅಷ್ಟೆ ಎಂದ ಯಶ್, ನಂಜನಗೂಡಿನಲ್ಲಿ ಯಾವ ಹರಕೆಯೂ ಇರಲಿಲ್ಲ. ನಂಜುಂಡೇಶ್ವರ ನಮ್ಮ ಮನೆದೇವರು. ಮೈಸೂರಿನಲ್ಲಿಯೇ ಇದ್ದೆವು. ಬಂದು ಪೂಜೆ ಮಾಡಿಸಿದೆವು ಅಷ್ಟೆ ಎಂದಿದ್ದಾರೆ.
ಇನ್ನು ಬಾಲಿವುಡ್ಡಿಗೆ ಹೋಗ್ತಾರಂತೆ ಎಂಬ ಪ್ರಶ್ನೆಗೆ ಡೋಂಟ್`ವರಿ, ಎಲ್ಲರನ್ನೂ ಇಲ್ಲಿಯೇ ಕರೆಸಿಕೊಂಡಿದ್ದೇನೆ. ಮುಂದೆಯೂ ಅಷ್ಟೆ, ಎಲ್ಲಿಯೂ ಹೋಗುತ್ತಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ ಯಶ್.



