ಅಣ್ಣಾವ್ರ ಸಿನಿಮಾ ರಿಲೀಸ್ ಆದಾಗ ಟಿಕೆಟ್ ಖರೀದಿಸಲು ನೂಕುನುಗ್ಗಲು ಸಂಭವಿಸಿ ದುರಂತ ಸಂಭವಿಸಿದ್ದವು. ತಾಯಿಗೆ ತಕ್ಕ ಮಗ ಚಿತ್ರ ರಿಲೀಸ್ ಆದಾಗಲಂತೂ ಲಾಠೀಚಾರ್ಜ್, ತಳ್ಳಾಟ ಸಂಭವಿಸಿ ಸಿನಿಮಾ ನೋಡಲು ಬಂದಿದ್ದ ಅಭಿಮಾನಿಗಳು ಸತ್ತಿದ್ದರು. ಅದಾದ ಮೇಲೆ ಡಾ.ರಾಜ್ ಸಿನಿಮಾ ರಿಲೀಸ್ ಆಗುವ ಥಿಯೇಟರ್ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಆದರೆ ಇಂತಹ ಹುಚ್ಚು ಅಭಿಮಾನಕ್ಕೆ ಏನೆನ್ನಬೇಕು. ಕಟೌಟ್ ನಿಲ್ಲಿಸುವುದು ಹಾಗೂ ಅದಕ್ಕೆ ಲೈಟಿಂಗ್ ವ್ಯವಸ್ಥೆ ಮಾಡುವ ಹುಚ್ಚುತನಕ್ಕೆ ಮೂವರು ಮೃತಪಟ್ಟಿದ್ದಾರೆ. ಯಾರೊಬ್ಬರ ವಯಸ್ಸೂ 25 ದಾಟಿಲ್ಲ ಎನ್ನುವುದು ವಿಶೇಷ. ಹಾಗಂತ ಅವರೆಲ್ಲ ಶ್ರೀಮಂತರಲ್ಲ. ಅಫ್ʻಕೋರ್ಸ್.. ಪ್ರತಿಯೊಬ್ಬ ಸ್ಟಾರ್ ನಟನ ಬೆನ್ನ ಹಿಂದೆಯೂ ಇಂತಹ ಅಭಿಮಾನಿಗಳಿರುತ್ತಾರೆ. ಅವರು ಬಡವರೇ ಆಗಿರುತ್ತಾರೆ. ಈ ಬಾರಿಯೂ ಅಷ್ಟೆ. ಹೆತ್ತವರಿಗೆ ಮನೆಗೆ ದಿಕ್ಕಾಗಬೇಕಿದ್ದ ಮಗ ಮಣ್ಣಾಗಿ ಹೋಗಿದ್ಧಾನೆ.
ಯಶ್ ಹುಟ್ಟುಹಬ್ಬದ ಸಂಭ್ರಮಕ್ಕೆ ಬ್ಯಾನರ್ ಕಟ್ಟಲು ಹೋಗಿ ಮೂವರು ಅಭಿಮಾನಿಗಳು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಜನವರಿ 7ರ ಮಧ್ಯರಾತ್ರಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ಘಟನೆಗೆ ಯಶ್ ಕಣ್ಣೀರು ಹಾಕಿದ್ಧಾರೆ. ಚಿತ್ರೀಕರಣದಲ್ಲಿ ಬ್ಯುಸಿ ಇದ್ದ ಯಶ್ ಅಭಿಮಾನಿಗಳ ಮನೆಗೆ ಆಗಮಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿದ್ಧಾರೆ. ತಮ್ಮ ಹುಚ್ಚು ಅಭಿಮಾನಿಗಳಿಗೆ ಹೀಗೆಲ್ಲ ಮಾಡಬೇಡಿ ಎಂದೂ ಹೇಳಿದ್ಧಾರೆ.
ಸ್ಟಾರ್ ನಟರೊಬ್ಬರ ಹುಟ್ಟುಹಬ್ಬಕ್ಕೆ ಬ್ಯಾನರ್, ಕಟೌಟ್ ಕಟ್ಟಲು ಹೋಗಿ ಮೃತಪಟ್ಟಿರುವ ಘಟನೆ ಕರ್ನಾಟಕದಲ್ಲಿ ಇದೇ ಮೊದಲ ಬಾರಿ ನಡೆದಿದೆ. ಸುದೀಪ್ ಅಭಿಮಾನಿಯೊಬ್ಬರು ದುರಂತಕ್ಕೀಡಾಗಿದ್ದರಾದರೂ, ಅದು ಹೋರ್ಡಿಂಗ್ಸ್ ತೆಗೆದುಕೊಂಡು ಹೋಗುವ ವೇಳೆ ಸಂಭವಿಸಿದ್ದ ದುರಂತ. ಕಟೌಟ್ ಕಟ್ಟುವಾಗ ಅಲ್ಲ ಎಂಬುದಷ್ಟೇ ಪ್ರತ್ಯೇಕ ವಿಷಯ.
ಟಿಕೆಟ್ ಖರೀದಿ ನೂಕುನುಗ್ಗಲಿನಲ್ಲಿ ಅಭಿಮಾನಿಗಳು ಮೃತಪಟ್ಟ ಘಟನೆಗಳು ಜರುಗಿದ್ದವಾದರೂ, ಈ ರೀತಿ ಯಾವುದೇ ಸಿನಿಮಾ ಬಿಡುಗಡೆ ಇಲ್ಲದೇ ಇದ್ದಾಗ ಕಟೌಟ್ ಕಟ್ಟಲು ಹೋಗಿ ದುರಂತ ಸಂಭವಿಸಿರುವುದು ಇದೇ ಮೊದಲು. ಇಂತಹ ಘಟನೆಗಳು ತೆಲುಗು ಹಾಗೂ ತಮಿಳು ಸ್ಟಾರ್ʻಗಳ ವಿಷಯದಲ್ಲಿ ಆಗಿದೆ.
2023, ಡಿಸೆಂಬರ್ 22 : ಪ್ರಭಾಸ್ ಅಭಿಮಾನಿಯೊಬ್ಬರು ಸಲಾರ್ ಚಿತ್ರದ ಫ್ಲೆಕ್ಸ್ ಹಾಕಲು ಹೋಗಿ ಕರೆಂಟ್ ಶಾಕ್ ಹೊಡೆದು ಮೃತಪಟ್ಟಿದ್ದರು.
2023ರ ಜುಲೈ 23ರಂದು ತಮಿಳು ನಟ ಸೂರ್ಯ ಅಭಿಮಾನಿಯೊಬ್ಬರು ಕಟೌಟ್ ನಿಲ್ಲಿಸಲು ಹೋಗಿ ಕರೆಂಟ್ ಶಾಕ್ ಹೊಡೆದು ಮೃತಪಟ್ಟಿದ್ದರು.
2023ರ ಜನವರಿ 11ನೇ ತಾರೀಕು ತಮಿಳು ನಟ ಅಜಿತ್ ಅವರ 19 ವರ್ಷದ ಅಭಿಮಾನಿಯೊಬ್ಬ ಸಿನಿಮಾ ನೋಡಿ ಲಾರಿ ಮೇಲೆ ಡ್ಯಾನ್ಸ್ ಮಾಡಿಕೊಂಡು ಹೋಗುವಾಗ ಬಿದ್ದು ಸಾವನ್ನಪ್ಪಿದ್ದರು.
2020ರ ಸೆಪ್ಟೆಂಬರ್ 2ನೇ ತಾರೀಕು ಪವನ್ ಕಲ್ಯಾಣ್ (ತೆಲುಗು ಪವರ್ ಸ್ಟಾರ್) ಅಭಿಮಾನಿಯೊಬ್ಬರು ಹುಟ್ಟುಹಬ್ಬದ ಬ್ಯಾನರ್ ಕಟ್ಟುವಾಗ ಶಾಕ್ ಹೊಡೆದು ಸಾವನ್ನಪ್ಪಿದ್ದರು.
2019ರ ಆಗಸ್ಟ್ 29ರಂದು ಪ್ರಭಾಸ್ ಅಭಿಮಾನಿಯೊಬ್ಬರು ಫ್ಲೆಕ್ಸ್ ಹಾಕುವಾಗ ದುರಂತ ಸಾವಿಗೀಡಾಗಿದ್ದರು.
2015ರ ಆಗಸ್ಟ್ 4ರಂದು ಸುದೀಪ್ ಅವರ ಹೋರ್ಡಿಂಗ್ಸ್ ಸಾಗಿಸುವಾಗ (ಕಟ್ಟುವಾಗ ಸಂಭವಿಸಿದ ಅನಾಹುತವಲ್ಲ) ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದರು.
ತಮಿಳುನಾಡು ಹಾಗೂ ಆಂಧ್ರ, ತೆಲಂಗಾಣದಲ್ಲಿ ಇಂತಹ ಘಟನೆಗಳು ಜರುಗುತ್ತಲೇ ಇರುತ್ತವೆ. ಅಲ್ಲಿಯ ಅಭಿಮಾನಿಗಳ ಪ್ರೀತಿಯೂ ಹೆಚ್ಚು. ಹುಚ್ಚಾಟವೂ ಹೆಚ್ಚು. ನಮ್ ಹೀರೋನೇ ಗ್ರೇಟು ಎಂದು ಹೊಡೆದಾಟಗಳಾಗಿ ಕೊಲೆಗಳೂ ಆಗಿ ಹೋಗಿವೆ. ಕರ್ನಾಟಕದಲ್ಲಿ ಅಂತಹದ್ದೆಲ್ಲ ನಡೆದಿಲ್ಲ. ಆದರೂ.. ಯಶ್ ಅಭಿಮಾನಿಗಳ ದುರಂತ ಸಾವು ಆತಂಕ ಹುಟ್ಟಿಸಿರುವುದಂತೂ ನಿಜ.



