ಇಡೀ ದೇಶವನ್ನಲ್ಲ, ಕ್ರೀಡಾಲೋಕವನ್ನೇ ಕೆಣಕುತ್ತಿರುವ, ತಲ್ಲಣ ಎಬ್ಬಿಸಿರುವ ಘಟನೆ ಇದು. ದೇಶಕ್ಕೆ ಮೆಡಲ್ ತಂದುಕೊಟ್ಟ ವಿನೇಶ್ ಪೊಗಟ್, ಸಾಕ್ಷಿ ಮಲಿಕ್, ಭಜರಂಗ್ ಪೂನಿಯಾ, ಸಂಸ್ಥೆಯ ಅಧ್ಯಕ್ಷ ಬ್ರಿಜ್ ಭೂಷಣ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಒಂದೆಡೆ ಇಲಾಖೆಯ ತನಿಖೆಯೂ ನಡೆಯುತ್ತಿದೆ. ಮತ್ತೊಂದೆಡೆ ದೆಹಲಿ ಪೊಲೀಸರೂ ತನಿಖೆ ನಡೆಸುತ್ತಿದ್ದಾರೆ. ಆದರೆ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಮಾತ್ರ ಹುದ್ದೆಯಲ್ಲಿಯೇ ಪಟ್ಟಾಗಿ ಕುಳಿತಿದ್ದಾರೆ. ಬ್ರಿಜ್ ಭೂಷಣ್ ಅವರನ್ನು ಸರ್ಕಾರ ಹುದ್ದೆಯಿಂದ ಸಸ್ಪೆಂಡ್ ಕೂಡಾ ಮಾಡಿಲ್ಲ. ಅವರೂ ರಾಜೀನಾಮೆ ಕೊಟ್ಟಿಲ್ಲ. ಇತ್ತ ಪ್ರತಿಭಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ಬ್ರಿಜ್ ಭೂಷಣ್ ವಿರುದ್ಧ 4 ತಿಂಗಳ ಹಿಂದೆಯೇ ಗಂಭೀರ ಆರೋಪಗಳನ್ನು ಹೊರಿಸಿದ್ದ ಕುಸ್ತಿಪಟುಗಳು, ಏ.23ರಿಂದ ಜಂತರ್ಮಂತರ್ನಲ್ಲಿ ಧರಣಿ ಆರಂಭಿಸಿ ಹೋರಾಟ ತೀವ್ರಗೊಳಿಸಿದ್ದರು. ಈ ನಡುವೆ ತಿಂಗಳ ಹಿಂದೆಯೇ ಬ್ರಿಜ್ ಭೂಷಣ್ ವಿರುದ್ಧ ಪೋಕ್ಸೋ ಸೇರಿದಂತೆ 2 ಎಫ್ಐಆರ್ ದಾಖಲಿಸಿ ದೆಹಲಿ ಪೊಲೀಸರು ವಿಚಾರಣೆ ಆರಂಭಿಸಿದ್ದರು. ದೂರು ನೀಡಿದ್ದ ಅಪ್ರಾಪ್ತೆಯರ ಹೇಳಿಕೆಗಳನ್ನೂ ದಾಖಲಿಸಲಾಗಿತ್ತು. ಆದರೆ ಈ ವರೆಗಿನ ತನಿಖೆಯಲ್ಲಿ ಆರೋಪ ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗದ ಹಿನ್ನೆಲೆಯಲ್ಲಿ, ತನಿಖೆ ಮುಕ್ತಾಯಗೊಳಿಸಿ 15 ದಿನಗಳೊಳಗೆ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ. ದೆಹಲಿ ಪೊಲೀಸರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ‘ಇನ್ನೂ ತನಿಖೆ ಮುಗಿದಿಲ್ಲ. ಕ್ಲೀನ್ ಚಿಟ್ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು’ ಎಂದಿದ್ದಾರೆ. ಆದರೂ ಈ ವರೆಗಿನ ತನಿಖೆಯಲ್ಲಿ ಬ್ರಿಜ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಲೈಂಗಿಕ ದೌರ್ಜನ್ಯವೇ ಬೇರೆ. ಲೈಂಗಿಕ ಕಿರುಕುಳವೇ ಬೇರೆ. ಇಲ್ಲಿ ನಡೆದಿದೆ ಎನ್ನಲಾಗುತ್ತಿರುವುದು ಲೈಂಗಿಕ ಕಿರುಕುಳ. ಅವುಗಳಿಗೆ ಇದ್ದರೆ ಡಿಜಿಟಲ್ ಸಾಕ್ಷಿಗಳನ್ನು ಕೊಡಬೇಕು. ಅವುಗಳೂ ಇಲ್ಲ. ಇನ್ನು ಕುಸ್ತಿಪಟುಗಳು ಕಿರುಕುಳ ನಡೆದಿದೆ ಎಂದು ಹೇಳಿರುವ ಸಮಯಕ್ಕೂ, ಬ್ರಿಜ್ ಭೂಷಣ್ ಇದ್ದ ಸಮಯಕ್ಕೂ ತಾಳೆಯಾಗುತ್ತಿಲ್ಲ. ಟರ್ಕಿಯಲ್ಲಿ ಕಿರುಕುಳ ನಡೆದಿದೆ ಎನ್ನಲಾಗಿತ್ತು. ಆದರೆ ಟಿರ್ಕಿಗೆ ಬ್ರಿಜ್ ಭೂಷಣ್ ಹೋಗಿಯೇ ಇರಲಿಲ್ಲ ಎಂದಾಯ್ತು. ಆಗ ಕಿರುಕುಳ ನಡೆದಿದ್ದು ಮಂಗೋಲಿಯಾದಲ್ಲಿ, ಟರ್ಕಿಯಲ್ಲಿ ಅಲ್ಲ. 2016ರಲ್ಲಿ, 2015ರಲ್ಲಿ ಅಲ್ಲ ಎಂಬ ಸ್ಪಷ್ಟೀಕರಣ ಕುಸ್ತಿಪಟುಗಳಿಂದ ಬಂತು.
ಇನ್ನು ಕುಸ್ತಿಪಟುಗಳು ಹೇಳಿದ್ದ ಅಪ್ರಾಪ್ತೆಯರು ಪೊಲೀಸರ ಎದುರು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ ಎಂಬ ವರದಿಗಳಿವೆ. ಯಾರು ಸಂತ್ರಸ್ತರು ಎಂದು ಹೇಳಿದ್ದರೋ, ಒಂದು ಪ್ರಕರಣದಲ್ಲಿ ಆಕೆ ಅಪ್ರಾಪ್ತೆಯಲ್ಲ ಎಂದು ಸಾಬೀತಾಗಿದೆಯಂತೆ. ಅಲ್ಲದೆ ಸಂತ್ರಸ್ತೆಯೇ ಲೈಂಗಿಕ ಕಿರುಕುಳವನ್ನು ಒಪ್ಪಿಕೊಂಡಿಲ್ಲ. ಇನ್ನೊಂದು ಪ್ರಕರಣದಲ್ಲಿ ಸಂತ್ರಸ್ತೆ ಎನ್ನಲಾದ ಯುವತಿಯ ಕುಟುಂಬದವರು, ಕುಸ್ತಿಪಟುಗಳೇ ಒತ್ತಡ ಹೇರುತ್ತಿದ್ದಾರೆ ಎಂದು ಉಲ್ಟಾ ಹೇಳಿಕೆ ಕೊಟ್ಟಿದ್ದಾರೆ.
ಪ್ರಕರಣದ ಬಗ್ಗೆ ಮೌನ ಮುರಿದಿರುವ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ‘ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದುವರೆಗೂ ಕ್ರೀಡೆ ಹಾಗೂ ಕ್ರೀಡಾಳುಗಳಿಗೆ ತೊಂದರೆಯಾಗುವ ಯಾವುದೇ ನಿರ್ಧಾರ ಕೈಗೊಳ್ಳಬೇಡಿ’ ಎಂದು ಕುಸ್ತಿಪಟುಗಳಿಗೆ ಮನವಿ ಮಾಡಿದ್ದಾರೆ. ‘ಪೊಲೀಸರ ತನಿಖೆಯಲ್ಲಿ ನಂಬಿಕೆ ಇಡಿ, ನಾವೂ ನಿಮ್ಮ ಜೊತೆಗಿದ್ದೇವೆ. ಆರೋಪ ಸಾಬೀತಾದರೆ ಕಠಿಣ ಶಿಕ್ಷೆ ನೀಡುತ್ತೇವೆ. ಎಂದಿದ್ದಾರೆ. ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸುತ್ತಿರುವ ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್, ಒಂದೇ ಒಂದು ಆರೋಪ ಸಾಬೀತಾದರೂ ಸ್ವತಃ ತಾವೇ ನೇಣಿಗೇರುವುದಾಗಿ ಮತ್ತೊಮ್ಮೆ ಸವಾಲು ಹಾಕಿದ್ದಾರೆ.



