ಯತೀಂದ್ರ ಸಿದ್ಧರಾಮಯ್ಯ ಆಗಾಗ್ಗೆ ಕಾಂಟ್ರವರ್ಸಿ ಮಾಡ್ಕೊಳ್ತಾನೇ ಇರ್ತಾರೆ. ಈಗ ಅವರು ಮಾಡಿಕೊಂಡಿರುವ ಎಡವಟ್ಟು ಮತ್ತೊಮ್ಮೆ ಸಿದ್ಧರಾಮಯ್ಯ ಅವರಿಗೆ ಡ್ಯಾಮೇಜ್ ಮಾಡುವಂತೆಯೇ ಇದೆ. ಮೈಸೂರುಗೆ ನಾಲ್ವಡಿ ಕೃಷ್ಣರಾಜ ಒಡೆಯರ್ಗಿಂತಲೂ ಹೆಚ್ಚು ಅಥವಾ ಮಹಾರಾಜರಷ್ಟೇ ಅನುದಾನ ಕೊಟ್ಟು ಅಭಿವೃದ್ಧಿ ಮಾಡಿದವರು ಸಿದ್ದರಾಮಯ್ಯ ಎಂಬ ಹೇಳಿಕೆ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ.
ಯದುವೀರ್ ಒಡೆಯರ್ ಅವರೇ.. ರಾಜಪ್ರಭುತ್ವ ಅಥವಾ ಪ್ರಜಾಪ್ರಭುತ್ವ ಯಾವುದೇ ಇದ್ದರು ಜನರ ಕೆಲಸ ಮಾಡಬೇಕು ಅಷ್ಟೇ, ಇದರ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದರೂ..ಟೀಕೆ ನಿಂತಿಲ್ಲ. ವಿಜಯೇಂದ್ರ, ಅಶೋಕ್, ಹೆಚ್ ವಿಶ್ವನಾಥ್ ಸೇರಿದಂತೆ ಎಲ್ಲರೂ ಮುಗಿಬಿದ್ದಿದ್ದಾರೆ. ಸಮರ್ಥನೆ ಮಾಡಿಕೊಳ್ಳುವುದಕ್ಕೆ ಆಗುತ್ತಿಲ್ಲ.
ಅಂದಹಾಗೆ ಕರ್ನಾಟಕದಲ್ಲಿ ಮೈಸೂರು ಒಡೆಯರ್ ಅವರ ಕೊಡುಗೆ ಇಲ್ಲದೇ ಇದ್ದಿದ್ದರೆ, ಇಂದಿನ ಮೈಸೂರು ಕರ್ನಾಟಕಕ್ಕೂ, ಉತ್ತರ ಕರ್ನಾಟಕಕ್ಕೂ ಯಾವುದೇ ವ್ಯತ್ಯಾಸ ಇರುತ್ತಿರಲಿಲ್ಲ ಎನ್ನುವುದಂತೂ ಸತ್ಯ.
1902ರಿಂದ 1940ರ ತನಕ ಆಳ್ವಿಕೆ ನಡೆಸಿ, ಮೈಸೂರಿನ ಇತಿಹಾಸದ ‘ಸುವರ್ಣ ಯುಗ’ ಎನ್ನಲಾದ ಅವಧಿಯನ್ನು ರೂಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳನ್ನು ನೋಡುವುದಾದರೆ..
1902ರಲ್ಲಿ, ಶಿವನಸಮುದ್ರ ಜಲಪಾತ ಯೋಜನೆಯ ಮೂಲಕ, ಮೈಸೂರು ಜಲ ವಿದ್ಯುತ್ ಉತ್ಪಾದಿಸುವ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1905ರಲ್ಲಿ ಬೆಂಗಳೂರು ವಿದ್ಯುತ್ ಬೀದಿ ದೀಪಗಳನ್ನು ಹೊಂದಿದ ಏಷ್ಯಾದ ಮೊದಲ ನಗರ ಎಂಬ ಖ್ಯಾತಿಗೆ ಪಾತ್ರವಾಯಿತು.
1911ರಿಂದ 1932ರ ನಡುವೆ ನಿರ್ಮಾಣಗೊಂಡ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟು ಆ ಕಾಲಕ್ಕೆ ಏಷ್ಯಾದ ಅತಿದೊಡ್ಡ ಅಣೆಕಟ್ಟೆಯಾಗಿತ್ತು. ಮಂಡ್ಯ ಜನರು ನೀರಾವರಿ ಕಂಡಿದ್ದು ಆಗಲೇ. ಈಗಲೂ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ರೈತರ ಜೀವನಾಡಿಯಾಗಿದೆ.
1907ರಲ್ಲಿ ಚಿತ್ರದುರ್ಗದಲ್ಲಿ ನಿರ್ಮಿಸಿದ ವಾಣಿ ವಿಲಾಸ ಸಾಗರ ಅಣೆಕಟ್ಟು ಕರ್ನಾಟಕದ ಮೊದಲ ಅಣೆಕಟ್ಟು. ಇದರ ಜೊತೆಗೆ ನೂರಾರು ಕೆರೆಗಳನ್ನು ನಿರ್ಮಿಸಿದವರು ಒಡೆಯರ್.
ನಾಲ್ವಡಿಯವರು ಪ್ರಮುಖ ಉದ್ಯಮಗಳಿಗೂ ಚಾಲನೆ ನೀಡಿದ್ದು, ಮೈಸೂರು ಪೇಪರ್ ಮಿಲ್ಸ್ (1936), ಇಂದಿಗೂ ಚುನಾವಣೆಗಳಿಗೆ ಅಳಿಸಲಾಗದ ಶಾಯಿಯನ್ನು ಒದಗಿಸುತ್ತಿರುವ ಮೈಸೂರು ಪೇಂಟ್ಸ್ ಆ್ಯಂಡ್ ವಾರ್ನಿಷ್ (1936) ಪ್ರಮುಖವಾಗಿವೆ.
ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯ ಮಾಡಿದ ರಾಜ ಎಂದರೆ ಅದು ಒಡೆಯರ್. ಜಾತಿ ತಾರತಮ್ಯವನ್ನು ಹೋಗಲಾಡಿಸುವ ಸಲುವಾಗಿ, 1915ರ ವೇಳೆಗಾಗಲೇ ದಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಿಗೆ ಸೇರ್ಪಡೆಗೆ ಅವಕಾಶ ನೀಡಿದವರು ಒಡೆಯರ್.
1916ರಲ್ಲಿ ಮೈಸೂರು ವಿವಿ ಸ್ಥಾಪನೆ. ಭಾರತೀಯ ರಾಜ್ಯವೊಂದು ಸ್ಥಾಪಿಸಿದ ಮೊದಲ ವಿಶ್ವ ವಿದ್ಯಾಲಯ ಎಂಬ ಖ್ಯಾತಿ ಇದಕ್ಕೆ ಇದೆ. ಅಷ್ಟೇ ಅಲ್ಲ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಹ ಸ್ಥಾಪಕರಾಗಿ, ಅದರ ಮೊದಲ ಕುಲಪತಿಗಳಾದರು. ನಾಲ್ವಡಿಯವರ ತಾಯಿಯ ರೀಜೆನ್ಸಿ ಅವಧಿಯಲ್ಲಿ ಆರಂಭಗೊಂಡ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) 1911ರಲ್ಲಿ ಕಾರ್ಯಾರಂಭಗೊಳಿಸಿತು. ಇದಕ್ಕಾಗಿ ನಾಲ್ವಡಿಯವರು 371 ಎಕರೆ ಭೂಮಿ ಒದಗಿಸಿ, ಸಂಸ್ಥೆಯಲ್ಲಿ ಮಹತ್ವದ ಹೂಡಿಕೆಗಳನ್ನು ನಡೆಸಿದರು. ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿದ ಒಡೆಯರ್ 1917ರಲ್ಲಿ ಮಹಾರಾಣಿ ಮಹಿಳಾ ಕಾಲೇಜು ಸ್ಥಾಪಿಸಿ, ವಿಧವೆಯರಿಗೂ ವಿದ್ಯಾರ್ಥಿ ನಿಧಿ ಆರಂಭಿಸಿದರು. ಎಂಟು ವರ್ಷಕ್ಕಿಂತ ಸಣ್ಣ ಬಾಲಕಿಯರ ಬಾಲ್ಯ ವಿವಾಹವನ್ನು ನಿಷೇಧಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಪಾಶ್ಚಾತ್ಯ ದೇಶಗಳಿಗೂ ಮೊದಲೇ ಮೈಸೂರಿನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದರು.
ಮೈಸೂರು ರಾಜ್ಯ 1881ರಲ್ಲಿ ಭಾರತದ ಮೊದಲ ಪ್ರತಿನಿಧಿ ಸಭೆಯನ್ನು ಆರಂಭಿಸಿದರು. ಪ್ರಜಾಪ್ರಭುತ್ವ ಮಾದರಿಗೆ ಇದೇ ಬುನಾದಿಯೂ ಅಯ್ತು.
1903ರಲ್ಲಿ ಸ್ಥಾಪಿಸಿದ ಮಿಂಟೋ ಕಣ್ಣಿನ ಆಸ್ಪತ್ರೆ, ವಾಣಿ ವಿಲಾಸ, ಕೆಸಿ ಜನರಲ್ ಆಸ್ಪತ್ರೆ ಹೀಗೆ.. ಹಲವು ಆರೋಗ್ಯ ಸೇವೆಗಳಿವೆ. ಕನ್ನಡ ಸಾಹಿತ್ಯ ಪರಿಷತ್ ಶುರುವಾಗಿದ್ದು ಇವರ ಅವಧಿಯಲ್ಲೇ. ಮೈಸೂರು, ಬೆಂಗಳೂರಿನಲ್ಲಿ ಹಲವು ಆಸ್ಪತ್ರೆಗಳನ್ನು ಸ್ಥಾಪಿಸಿದ ಖ್ಯಾತಿಯೂ ಒಡೆಯವರ್ ಅವರಿಗೆ ಸಲ್ಲುತ್ತದೆ.
ಸ್ವತಃ ಮೈಸೂರು ಜಿಲ್ಲೆಯವರೇ ಆದರೂ, ಸಿದ್ದರಾಮಯ್ಯನವರು ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿಯ ಅಗತ್ಯವನ್ನು ಮನಗಾಣಲು ವಿಫಲರಾಗಿದ್ದಾರೆ ಎನ್ನುವುದಂತೂ ಸತ್ಯ. ಏಕೆಂದರೆ ಒಂದೇ ಒಂದು ದೂರದೃಷ್ಟಿಯ ಯೋಜನೆಗಳಿಲ್ಲ.



