ಯುವ ರಾಜ್ ಕುಮಾರ್, ಈಗಿನ್ನೂ ಪರಿಚಯವಾಗುತ್ತಿರುವ ಕಲಾವಿದ. ದೊಡ್ಮನೆ ಹುಡುಗ ಎಂಬ ಕಾರಣಕ್ಕೆ ಹೊಸ ಹುಡುಗರಿಗಿಂತ ವಿಭಿನ್ನವಾದ ಕ್ರೇಜ್ ಸೃಷ್ಟಿಯಾಗಿದೆ, ಅಷ್ಟೆ. ಡಾ.ರಾಜ್ ಕುಟುಂಬದಿಂದ ಮೊದಲಿಗೆ ಯಾರೇ ಎಂಟ್ರಿ ಕೊಟ್ಟರೂ, ಅಣ್ಣಾವ್ರ ಜೊತೆ ಹೋಲಿಕೆ ಮಾಡ್ತಿದ್ರು. ಇದೀಗ ಮೂರನೇ ತಲೆಮಾರು. ಹೋಲಿಕೆ ಇನ್ನಷ್ಟು ವಿಸ್ತಾರವಾಗಿದೆ. ಶಿವಣ್ಣ, ರಾಘವೇಂದ್ರ ಹಾಗೂ ಅಪ್ಪು ಜೊತೆಯಲ್ಲೂ ಹೋಲಿಕೆ ಮಾಡ್ತಾರೆ. ಅದನ್ನು ಮೀರುವ ತಾಕತ್ತು ಯುವಗೆ ಇರಬೇಕು. ಅಂತಾದ್ದೊಂದು ಝಲರ್ ತೋರಿಸಿದ್ದವರು ಯುವ. ಸಿನಿಮಾಗೆ ಎಂಟ್ರಿ ಕೊಡುವ ಮೊದಲೇ ಚಿಕ್ಕದೊಂದು ಟೀಸರ್ ತೋರಿಸಿ, ಐತಿಹಾಸಿಕ ಪಾತ್ರಕ್ಕೂ ಸೂಟ್ ಆಗುತ್ತೇನೆ ಎಂದು ತೋರಿಸಿದ್ದರು ಯುವ. ಅವರೀಗ ಹೊಸದೊಂದು ಐತಿಹಾಸಿಕ ಚಿತ್ರಕ್ಕೆ ಓಕೆ ಅಂತಾರಾ ಅನ್ನೋ ಕುತೂಹಲ ಇದೆ.
ಕನ್ನಡದಲ್ಲಿ ಅದೆಷ್ಟೋ ಐತಿಹಾಸಿಕ ಚಿತ್ರಗಳಾಗಿವೆ. ಆದರೆ ನಾಡಪ್ರಭು ಕೆಂಪೇಗೌಡರ ಬಗ್ಗೆ ಮಾತ್ರ ಚಿತ್ರಗಳಾಗಿಲ್ಲ. ಅಂಬರೀಷ ಚಿತ್ರದಲಿ ಪುಟ್ಟ ಕಥೆಯಾಗಿ ಕೆಂಪೇಗೌಡರ ಕಥೆ ಬರುತ್ತದೆಯಷ್ಟೆ, ಉಳಿದಂತೆ ಕೆಂಪೇಗೌಡರ ಸಿನಿಮಾ ಆಗಿಲ್ಲ. ಇದೀಗ ಅದಕ್ಕೆ ಕಾಲ ಕೂಡಿಬಂದಂತೆ ಕಾಣುತ್ತಿದೆ. ಪ್ರಯತ್ನಗಳಂತೂ ಜೋರಾಗಿವೆ.
ಕೆಂಪೇಗೌಡರ ಕಥೆಯನ್ನು ಸಿನಿಮಾ ಮಾಡೋಕೆ ನಿರ್ದೇಶಕ ನಾಗಾಭರಣ ಸಿದ್ಧರಾಗುತ್ತಿದ್ದಾರಂತೆ. ಕೆಂಪೇಗೌಡರ ಪಾತ್ರವನ್ನು ಯುವರಾಜ್ ಕುಮಾರ್ ಮಾಡಿದರೆ ಚೆನ್ನಾಗಿರುತ್ತೆ ಎಂದು ಅನ್ನಿಸಿದ್ದು, ಅವರನ್ನೇ ಕಲ್ಪನೆಯಲ್ಲಿಟ್ಟುಕೊಂಡು ಚಿತ್ರಕಥೆ ರೂಪಿಸುತ್ತಿದ್ದಾರಂತೆ. ಸದ್ಯಕ್ಕೆ ಇರೋ ಮಾಹಿತಿ ಇಷ್ಟು ಮಾತ್ರ. ಉಳಿದಂತೆ ಮುಂದೇನು.. ನಿರ್ಮಾಪಕರು ಯಾರು.. ಯುವರಾಜ್ ಕುಮಾರ್ ಓಕೆ ಎಂದಿದ್ದಾರಾ.. ಈ ಯಾವ ಮಾಹಿತಿಯೂ ಲಭ್ಯ ಇಲ್ಲ.
ಡಾ.ರಾಜ್ ಅವರಿಗೆ ಕೆಂಪೇಗೌಡರ ಸಿನಿಮಾ ಮಾಡುವ ಉತ್ಸಾಹವಿತ್ತು. ಆದರೆ ಚಿತ್ರಕಥೆ, ಸೆಟ್ ಸಮಾಧಾನವಾಗದ ಕಾರಣ ಸಿನಿಮಾ ಸೆಟ್ಟೇರಲೇ ಇಲ್ಲ. ಈಗ ಆ ಕನಸನ್ನು ಮೊಮ್ಮಗ ಈಡೇರಿಸುತ್ತಾರಾ ಎನ್ನುವ ನಿರೀಕ್ಷೆ ಶುರುವಾಗಿದೆ.
ನಾಗಾಭರಣ ಅವರಿಗೆ ಡಾ.ರಾಜ್ ಕುಟುಂಬ ಹೊಸದೇನಲ್ಲ. ಡಾ.ರಾಜ್ ಅವರಿಗೆ ಆಕಸ್ಮಿಕ ಸಿನಿಮಾ, ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಹಾಡನ್ನು ಕೊಟ್ಟವರು ನಾಗಾಭರಣ. ಶಿವಣ್ಣ ಅವರಿಗೂ ಅಷ್ಟೆ, ಜನುಮದ ಜೋಡಿ ಎಂಬ ಇಂಡಸ್ಟ್ರಿ ಹಿಟ್ ಸಿನಿಮಾ, ಚಿಗುರಿದ ಕನಸು ಎಂಬ ಕ್ಲಾಸ್ ಸಿನಿಮಾ ಕೊಟ್ಟವರು ನಾಗಾಭರಣ. ಹಾಗೆಯೇ ಮರೆಯಲಾಗದ ಸೋಲು ಎಂದೇ ಕರೆಸಿಕೊಳ್ಳಬಹುದಾದ ಜನುಮದಾತ ಎಂಬ ಚಿತ್ರವನ್ನೂ ಕೊಟ್ಟವರು. ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ಸಾಗರದೀಪ ಸಿನಿಮಾ ಮಾಡಿದವರು.
ಇದೀಗ ಯುವ ರಾಜ್ ಕುಮಾರ್ ಅವರಿಗಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಸಡನ್ ಆಗಿ ಉದ್ಭವವಾಗಿದೆ.
ನಾಗಾಭರಣ ಡಾ.ರಾಜ್ ಕುಟುಂಬದ ಹೊರತಾಗಿಯೂ ಪ್ರತಿಭಾವಂತ. ಚಿತ್ರಗಳು ಮಾಸ್ ಹಿಟ್ ಆಗಿದ್ದರೂ, ಮಾಸ್ ಸಿನಿಮಾ ಮಾಡಿದವರಲ್ಲ. ಕ್ಲಾಸ್ ಚಿತ್ರಗಳನ್ನೇ ಮಾಡಿದವರು. ಮೈಸೂರು ಮಲ್ಲಿಗೆ, ನಾಗಮಂಡಲ, ಜನುಮದ ಜೋಡಿ, ಚಿಗುರಿದ ಕನಸು, ಆಸ್ಫೋಟ, ಚಿನ್ನಾರಿ ಮುತ್ತ, ಸಂತ ಶಿಶುನಾಳ ಷರೀಫ.. ದಂತಹ ಚಿತ್ರಗಳನ್ನು ಕೊಟ್ಟವರು. ಈಗ ಕೆಂಪೇಗೌಡ ಸಿನಿಮಾ ಮಾಡ್ತಾರೆಂಬ ಸುದ್ದಿ ಇದೆ.



