ಪಾದಯಾತ್ರೆ ಮಾಡಿದ್ರೆ ಅಧಿಕಾರ ಸಿಗುತ್ತೆ ಅನ್ನೋದು 100% ನಿಜಾನಾ..? ಅದಕ್ಕಾಗಿಯೇ ಈಗ ಪಾದಯಾತ್ರೆ ನಡೀತಿದ್ಯಾ..? ಹೀಗೊಂದು ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಚುನಾವಣೆ ನಡೆಯುವುದಕ್ಕೆ ಇನ್ನೂ ಮೂರೂವರೆ ವರ್ಷ ಬಾಕಿ ಇದೆ. ಹೀಗಿರುವಾಗ ಇಷ್ಟೊಂದು ತರಾತುರಿ ಏಕೆ ಎಂಬ ಪ್ರಶ್ನೆಗೆ ಬಿಜೆಪಿ ನಾಯಕರೇ ʻಸಿಎಂ ಪಟ್ಟʼದತ್ತ ಕೈ ತೋರಿಸುತ್ತಾರೆ. ಏಕೆಂದರೆ.. ದಕ್ಷಿಣ ಭಾರತದಲ್ಲಿ ಪಾದಯಾತ್ರೆ ಮಾಡಿದ್ದಕ್ಕೆ ಅಧಿಕಾರ ಪಡೆದವರ ದೊಡ್ಡ ಲಿಸ್ಟೇ ಇದೆ. ಖುದ್ದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಲಿಸ್ಟು ದೊಡ್ಡದೇ ಇದೆ.
ಪಾದಯಾತ್ರೆ ಮಾಡಿ ಅಧಿಕಾರ ಹಿಡಿದವರು :
ಆಂಧ್ರಪ್ರದೇಶ : ವೈಎಸ್ʻಆರ್ ಎಂದೇ ಖ್ಯಾತರಾಗಿದ್ದ ರಾಜಶೇಖರ ರೆಡ್ಡಿ ಅವರು ಚಂದ್ರಬಾಬು ನಾಯ್ಡು ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಅಧಿಕಾರ ಹಿಡಿದದ್ದು ಪಾದಯಾತ್ರೆಯ ಮೂಲಕ. ಅದು ನಡೆದಿದ್ದು 2002ರಲ್ಲಿ. ಸುಮಾರು 3 ಸಾವಿರ ಕಿ.ಮೀ. ಪಾದಯಾತ್ರೆ ನಡೆಸಿದ್ದರು. 2004ರಲ್ಲಿ ಸಿಎಂ ಆದರು.
ಅದಾದ ಮೇಲೆ ಮತ್ತೊಮ್ಮೆ ವೈಎಸ್ʻಆರ್ ಪುತ್ರ ಜಗನ್ಮೋಹನ್ ರೆಡ್ಡಿ ಕೂಡಾ ಚಂದ್ರಬಾಬು ನಾಯ್ಡು ಅವರನ್ನು ಸೋಲಿಸಿದ್ದು ಪಾದಯಾತ್ರೆಯ ಮೂಲಕವೇ. ಅವರು 3500-4000 ಕಿ.ಮೀ. ಪಾದಯಾತ್ರೆ ಮಾಡಿದ್ರು.
ವಿಚಿತ್ರವೆಂದರೆ.. ಇದೇ ಜಗನ್ ವಿರುದ್ಧ ನಾಯ್ಡು ಮತ್ತು ಪವನ್ ಕಲ್ಯಾಣ್ ಜೋಡಿ ಗೆದ್ದು ಅಧಿಕಾರ ಹಿಡಿದದ್ದೂ ಪಾದಯಾತ್ರೆಯ ಮೂಲಕಾನೇ.
ಅಷ್ಟೇ ಅಲ್ಲ, 2013 ರಲ್ಲಿ ಚಂದ್ರಬಾಬು ನಾಯ್ಡು ಅವರಿಗೆ ಪಾದಯಾತ್ರೆ ಅಧಿಕಾರ ತಂದುಕೊಟ್ಟಿತ್ತು.
ಆಂಧ್ರಪ್ರದೇಶದಲ್ಲಿ ಪಾದಯಾತ್ರೆ ಮತ್ತು ಪವರ್ ಪಾಲಿಟಿಕ್ಸ್ ನಡುವೆ ಒಂದು ವಿಚಿತ್ರ ಲಿಂಕ್ ಇದೆ.
ಆದರೆ.. ಇದೇ ಆಂಧ್ರಪ್ರದೇದಲ್ಲಿ ಜಗನ್ ಅವರ ತಂಗಿ ಶರ್ಮಿಳಾ ಅವರಿಗೆ ಪಾದಯಾತ್ರೆ ಹೆಸರು ತಂತೇ ಹೊರತು, ಅಧಿಕಾರ ತರಲಿಲ್ಲ.
ತೆಲಂಗಾಣ : ಈಗ ತೆಲಂಗಾಣ ಸಿಎಂ ಆಗಿರುವ ಅನುಮಲ ರೇವಂತ್ ರೆಡ್ಡಿ ಕೂಡಾ ಪಾದಯಾತ್ರೆಯ ಮೂಲಕವೇ ಖ್ಯಾತಿ ಗಳಿಸಿದವರು. ಮಾಜಿ ಸಿಎಂ ಚಂದ್ರಶೇಖರ್ ರಾವ್ ಕೂಡಾ ಆಗಾಗ್ಗೆ ಪಾದಯಾತ್ರೆ ಮಾಡುತ್ತಲೇ ಅಧಿಕಾರ ಹಿಡಿಯುತ್ತಿದ್ದರು.
ತಮಿಳುನಾಡು : ಕಳೆದ ವರ್ಷ ತಮಿಳುನಾಡಿನಲ್ಲಿ ಅಣ್ಣಾಮಲೈ ಕೂಡ ಪಾದಯಾತ್ರೆ ಮಾಡಿದ್ರು. ನಿರೀಕ್ಷಿತ ಮಟ್ಟದಲ್ಲಿ ಪಕ್ಷ ಗೆಲ್ಲದೇ ಹೋದರೂ ಬಿಜೆಪಿಗೆ ದೊಡ್ಡ ಮಟ್ಟದ ನೆಲೆ ಸಿಗೋದ್ರ ಜೊತೆಗೆ ಅಣ್ಣಾಮಲೈಗೆ ದೊಡ್ಡ ಹೆಸರು ಬಂತು. ಹೀಗೆ ದಕ್ಷಿಣ ಭಾರತದ ರಾಜಕೀಯದಲ್ಲಿ ಪಾದಯಾತ್ರೆ ಪಾಲಿಟಿಕ್ಸ್ ಹಲವರಿಗೆ ವರವಾದ್ರೇ ಮತ್ತಷ್ಟು ನಾಯಕರಿಗೆ ಹೆಸರು ತಂದು ಕೊಟ್ಟಿದೆ. ಅಣ್ಣಾಮಲೈ ಅವರನ್ನು ತಮಿಳುನಾಡು ರಾಜಕೀಯದಲ್ಲೀಗ ಗಂಭೀರವಾಗಿ ಪರಿಗಣಿಸಲಾಗುತ್ತಿದೆ.
ಕರ್ನಾಟಕದಲ್ಲಿ..
ಕರ್ನಾಟಕದಲ್ಲಿಯೂ 2010ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ದೊಡ್ಡ ಮಟ್ಟದ ಪಾದಯಾತ್ರೆ ಮಾಡಿದ್ರು. ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ರೆಡ್ಡಿ ಸಹೋದರರು ಬಳ್ಳಾರಿ ಗಣಿ ಲೂಟಿ ಹೊಡೆದಿದ್ದಾರೆಂದು ಮತ್ತು ಸದನದಲ್ಲಿ ಜನಾರ್ದನ ರೆಡ್ಡಿ ಮತ್ತವರ ಬೆಂಬಲಿಗರ ಅಟ್ಟಹಾಸದ ವಿರುದ್ಧ ಸಿದ್ದರಾಮಯ್ಯ ಸಿಡಿದೆದ್ರು. 2010ರಲ್ಲಿ ಬೆಂಗಳೂರಿನಿಂದ ಬಳ್ಳಾರಿವರೆಗೂ 320 ಕಿ.ಮೀ. ಪಾದಯಾತ್ರೆ ಮಾಡಿದ್ರು. ಜನಾಂದೋಲನ ಮಾದರಿಯಲ್ಲಿ ನಡೆದ ಪಾದಯಾತ್ರೆ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು.
ಪರಿಣಾಮ 2013ರಲ್ಲಿ ಭರ್ಜರಿ ಬಹುಮತದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ್ರು.
2012ರಲ್ಲಿ ಬಿಎಸ್‌ಅರ್ ಪಕ್ಷ ಕಟ್ಟಿದ ಶ್ರೀರಾಮುಲು ಬೀದರ್‌ದಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಿದರಾದ್ರೂ, 4 ಸ್ಥಾನಗಳಷ್ಟೇ ಗೆದ್ರು. ಹೆಸರು ತಂದುಕೊಟ್ಟಿತಾದರೂ.. ಸೀಟುಗಳ ಲೆಕ್ಕದಲ್ಲಿ ಲಾಭವಾಗಲಿಲ್ಲ.
ರಾಹುಲ್ ಗಾಂಧಿ : ಇನ್ನು ದೇಶದ ಲೆಕ್ಕದಲ್ಲಿ ನೋಡುವುದಾದರೆ.. ಇತ್ತೀಚೆಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತ್ ಜೋಡೋ ಹೆಸರಿನಲ್ಲಿ ಒಂದು, ನ್ಯಾಯ್ ಹೆಸರಲ್ಲಿ ಮತ್ತೊಂದು ಯಾತ್ರೆ ಮಾಡಿದರು. ಈ ಎರಡೂ ಯಾತ್ರೆಗಳ ಪರಿಣಾಮವೋ ಏನೋ.. ಕಾಂಗ್ರೆಸ್ ಬರೋಬ್ಬರಿ 10 ವರ್ಷಗಳ ಬಳಿಕ ಅಧಿಕೃತ ವಿರೋಧಪಕ್ಷದ ಸ್ಥಾನ ಪಡೆದುಕೊಳ್ತು. ಪಾದಯಾತ್ರೆಗೆ ಪವರ್ ಇದೆ.
ಈಗ ಮೈಸೂರು ಚಲೋ ಪಾದಯಾತ್ರೆ ನಡೆಯುತ್ತಿದೆ. ಎಂದಿನಂತೆ ಯತ್ನಾಳ್ ಮೊದಲಾದವರು ಸೋಷಿಯಲ್ ಮೀಡಿಯಾದಲ್ಲಿ ಕೂಗಾಟ ಮಾಡುತ್ತಿದ್ದಾರೆ. ಅತ್ತ ವಿಜಯೇಂದ್ರ ಅವರು ಯಡಿಯೂರಪ್ಪ, ಆರ್.ಅಶೋಕ್, ನಿಖಿಲ್, ಜಿಟಿ ದೇವೇಗೌಡ ಅವರನ್ನೆಲ್ಲ ಜೊತೆಗೆ ಹಾಕ್ಕೊಂಡು ಪಾದಯಾತ್ರೆ ನಡೆಸುತ್ತಿದ್ದಾರೆ. ಅಧಿಕಾರ ಸಿಗುತ್ತಾ..? ಜಸ್ಟ್ ವೇಯ್ಟ್.. ಇನ್ನೂ ಮೂರೂವರೆ ವರ್ಷ ಟೈಮಿದೆ.



