ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್. ಮೋದಿಯವರನ್ನು ಬಿಟ್ಟರೆ ಹಿಂದೂ ಕಾರ್ಯಕರ್ತರ ಐಕಾನ್ ಆಗಿದ್ದವರು. ಬುಲ್ಡೋಜರ್ ಬಾಬಾ ಎಂದೇ ಖ್ಯಾತರಾಗಿರುವ ಯೋಗಿ, ಉತ್ತರ ಪ್ರದೇಶಕ್ಕೆ ಹೊಸ ರೂಪ ಕೊಡುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ಧಾರೆ. ಆದರೆ.. ಕಠಿಣ ಕಾನೂನು ಕ್ರಮ, ರೌಡಿಸಂ ಮಟ್ಟ ಹಾಕಿದ್ದು, ಕ್ರಿಮಿನಲ್ಲುಗಳಿಗೆ ಭಯ ಹುಟ್ಟಿಸಿದ್ದು, ಇಂಡಸ್ಟ್ರಿಗಳನ್ನು ಉತ್ತರ ಪ್ರದೇಶಕ್ಕೆ ಬರುವಂತೆ ಮಾಡಿದ್ದು, ಅಯೋಧ್ಯೆ, ಕಾಶಿ ಅಭಿವೃದ್ಧಿ, ರಸ್ತೆಗಳು, ಏರ್ʻಪೋರ್ಟ್ ಮೊದಲಾದವುಗಳ ಹೊರತಾಗಿಯೂ.. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಯೋಗಿಗೆ ಸೋಲಾಗಿದೆ.
ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾದ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ರಾಜ್ಯ ನಾಯಕತ್ವ ಬಂಡಾಯವೆದ್ದಿದೆ ಎಂಬ ವದಂತಿ ಹರಡಿದೆ. ಅದಕ್ಕೆ ಪುಷ್ಟಿ ನೀಡುವಂತೆ ಉಪ ಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ ಅವರು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ದೆಹಲಿಯಲ್ಲಿ ಮಂಗಳವಾರ ಪ್ರತ್ಯೇಕವಾಗಿ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಆದರೆ, ಪಕ್ಷದ ನಾಯಕತ್ವದ ಬಗ್ಗೆ ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ಉತ್ತರ ಪ್ರದೇಶದ ಎಲ್ಲಾ ನಾಯಕರಿಗೂ ವರಿಷ್ಠರು ತಾಕೀತು ಮಾಡಿದ್ದು, ನಾಯಕತ್ವದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಶೀಘ್ರ ನಡೆಯಲಿರುವ 10 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಮೇಲೆ ಗಮನ ಹರಿಸಿ ಎಂದೂ ತಿಳಿಸಿದೆ ಎಂದು ಮೂಲಗಳು ಹೇಳಿವೆ.
ಆದರೂ, ಸದ್ಯದಲ್ಲೇ ನಡೆಯಲಿರುವ 10 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಬಳಿಕ ಉತ್ತರ ಪ್ರದೇಶದ ಬಿಜೆಪಿಯಲ್ಲಿ ‘ದೊಡ್ಡ ಬದಲಾವಣೆ’ ಆಗಲಿದೆ ಎಂದು ಹೇಳಲಾಗುತ್ತಿದೆ. ಪಕ್ಷ ಸಂಘಟನೆಯಲ್ಲಿ ಈ ಬದಲಾವಣೆ ಮಾಡಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ ಎಂದು ವರದಿಗಳು ಹೇಳಿವೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಕೇವಲ 36 ಸ್ಥಾನಗಳನ್ನು ಗೆದ್ದಿತ್ತು. ಇಂಡಿಯಾ ಮೈತ್ರಿಕೂಟ 43 ಸ್ಥಾನಗಳನ್ನು ಗೆದ್ದಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 64 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗೆ ಲೋಕಸಭೆ ಹಿನ್ನಡೆ ಆಘಾತವನ್ನೇ ತಂದಿತ್ತು. ಬೆನ್ನಲ್ಲೇ ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ನಾಯಕತ್ವದ ವಿರುದ್ಧ ಅಪಸ್ವರ ಎದ್ದಿದ್ದು, ಯೋಗಿ ಕಾರ್ಯಶೈಲಿಯೇ ಚುನಾವಣೆಯಲ್ಲಿ ಹಿನ್ನಡೆಗೆ ಕಾರಣ ಎಂದು ಸೋತ ನಾಯಕರು ಆರೋಪಿಸಿದ್ದಾರೆ. ಇದರ ನಡುವೆ ಡಿಸಿಎಂ ಮೌರ್ಯ ಕಳೆದ ವಾರ ಹೇಳಿಕೆ ನೀಡಿ, ‘ಸರ್ಕಾರಕ್ಕಿಂತ ಪಕ್ಷ ಸಂಘಟನೆಯೇ ಮುಖ್ಯ’ ಎಂದಿದ್ದರು. ಇದು ಯೋಗಿ ವಿರುದ್ಧದ ಬಂಡಾಯದ ಸುಳಿವು ನೀಡಿದ್ದರು.
ನಿಜವಾಗುತ್ತಾ ಕೇಜ್ರಿವಾಲ್, ಅಖಿಲೇಶ್ ಯಾದವ್ ಭವಿಷ್ಯ..?
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ , ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರು ಲೋಕಸಭೆ ಚುನಾವಣೆ ನಂತರ ಯೋಗಿ ಆದಿತ್ಯನಾಥ್ ಅವರನ್ನು ಬದಲಿಸಲಾಗುತ್ತೆ ಎಂದಿದ್ದರು. ಅವರ ಭವಿಷ್ಯ ನಿಜವಾಗಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಒಟ್ಟಿನಲ್ಲಿ ಚುನಾವಣೆಗೆ ಮೊದಲು ಇಡೀ ದೇಶದ ಐಕಾನ್ ಆಗಿದ್ದ ಯೋಗಿ ಆದಿತ್ಯನಾಥ್, ಚುನಾವಣೆ ಮುಗಿದ ಬೆನ್ನಲ್ಲೇ ಫೇಲ್ ಲೀಡರ್ ಆಗಿದ್ದಾರೆ. ಉತ್ತರ ಪ್ರದೇಶದ ಒಂದು ಹಿನ್ನಡೆ ಯೋಗಿ ಆದಿತ್ಯನಾಥ್ ಸಿಎಂ ಪಟ್ಟಕ್ಕೇ ಕಂಟಕ ತಂದಿಟ್ಟಿದೆ.



