ಉಪೇಂದ್ರ ಸಿನಿಮಾ ಅಂದ್ರೇನೇ ಪಬ್ಲಿಸಿಟಿ. ಅದರಲ್ಲೂ ಅವರೇ ಡೈರೆಕ್ಟರ್ ಆಗಿದ್ರೋ.. ಒಂದೊಂದು ಹೆಜ್ಜೆಯೂ.. ಒಂದೊಂದು ನಡೆಯೂ ತಾನಾಗಿಯೇ ಪ್ರಚಾರ ಆಗುತ್ತೆ. ತರ್ಲೆ ನನ್ಮಗ ಚಿತ್ರದಲ್ಲಿ ಡಗಾರ್ ಅನ್ನೋ ಡೈಲಾಗ್ ಪಬ್ಲಿಸಿಟಿ ಕೊಟ್ಟಿತ್ತು. ಶ್ ಚಿತ್ರ ಮಾಡಿದಾಗ ಅರೆ.. ಒಂದಕ್ಷರದ ಟೈಟಲ್ ಅನ್ನೋದೇ ಕುತೂಹಲ ಹುಟ್ಟಿಸಿತ್ತು. ಓಂ ಚಿತ್ರ ಮಾಡಿದಾಗಲಂತೂ ಡಾ.ರಾಜ್ ಸಂಸ್ಥೆಯ ಬ್ಯಾನರ್, ರೌಡಿಸಂ ಚಿತ್ರ, ರೌಡಿಗಳೇ ನಟಿಸಿದ್ದಾರೆ, ಶಿವಣ್ಣ ರೌಡಿಯಾಗಿ ನಟಿಸಿದ್ದಾರೆ ಎನ್ನೋದೇ ಪಬ್ಲಿಸಿಟಿ ಕೊಟ್ಟಿತ್ತು. ಅದಾದ ಮೇಲೆ ಎ ಮಾಡಿದ್ರು. ಚಿತ್ರ ವಿಚಿತ್ರ ಪೋಸ್ಟರುಗಳು. ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರ ಅನ್ನೋ ಟ್ಯಾಗ್`ಲೈನು. ಉಪೇಂದ್ರ ಸಿನಿಮಾದಲ್ಲಿ ನಾನೇನಾದ್ರೂ ಪಿಎಂ ಆದ್ರೆ ನಲ್ಲಿಯಲ್ಲಿ ನೀರು ಬದಲು ಬೀರು ಬರೋ ಹಾಗೇ ಮಾಡ್ತೀನಿ ಅನ್ನೋ ಸಂಭಾಷಣೆ, ಉಪೇಂದ್ರನ ಫೋಟೋ ಇರುವ ಡ್ರೆಸ್ ಹಾಕಿಕೊಂಡಿರೋ ಉಪೇಂದ್ರ, ಜುಟ್ಟು, ರವೀನಾ ಟಂಡನ್, ಪ್ರೇಮಾ ಕಾಂಬಿನೇಷನ್ ಪ್ರಚಾರ ಕೊಟ್ಟಿತ್ತು. ಅದಾದ ಮೇಲೆ ಸೂಪರ್ ಸಿನಿಮಾದಲ್ಲಿ ರಾಕ್`ಲೈನ್ ವೆಂಕಟೇಶ್ ಬ್ಯಾನರ್ ಹಾಗೂ ಸೂಪರ್ ಎಂದು ತೋರಿಸುವ ಚಿಹ್ನೆಯನ್ನೇ ತೋರಿಸಿ ಪ್ರಚಾರ ಪಡೆದಿದ್ದರು. ನಯನತಾರಾ ಕೂಡಾ ಕನ್ನಡಕ್ಕೆ ಬಂದು ಸಂಚಲನ ಸೃಷ್ಟಿಸಿದ್ದರು. ಉಪ್ಪಿ 2 ಚಿತ್ರ ಮಾಡಿದಾಗ ಒನ್ಸ್ ಎಗೇನ್ ತಲೆಕೆಳಕಾಗಿ ನಿಂತ ಫೋಟೋ.. ಉಪೇಂದ್ರದಲ್ಲಿ ನಾನು ಪಾತ್ರ ಇದ್ದರೆ, ಅದಕ್ಕೆ ಉಲ್ಟಾ ಆಗಿ ಇಲ್ಲಿ ನೀನು ಪಾತ್ರ.. ಹೀಗೆ ಒಂದೊಂದು ಸಿನಿಮಾಕ್ಕೂ ಒಂದೊಂದು ರೀತಿಯಲ್ಲಿ ಪ್ರಚಾರ ಮಾಡುವ ಉಪೇಂದ್ರ, ಈ ಬಾರಿ ಪ್ರಚಾರವನ್ನೆ ಬೇಡ ಎಂದರೆ ಏನಾಗಬೇಡ..
ಯುಐ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡುವುದಕ್ಕೆ ಪ್ಲಾನ್ ಮಾಡ್ತಿರೋವಾಗ್ಲೇ.. ಅದನ್ನೆಲ್ಲ ಯಾಕ್ ಮಾಡ್ಬೆಕು ಅನ್ನೋ ಪ್ರಶ್ನೆ ಎತ್ತಿದ್ದಾರೆ ಡೈರೆಕ್ಟರ್ ಕಂ ಹೀರೋ ಉಪೇಂದ್ರ. ಯುಐ’ ಸಿನಿಮಾ ಶುರುವಾದ ದಿನದಿಂದಲೂ ಭಾರಿ ಕುತೂಹಲ ಮೂಡಿಸಿದೆ. ಅದರಲ್ಲೂ ಉಪೇಂದ್ರ ಬಹಳ ಗುಟ್ಟಾಗಿಯೇ ಸಿನಿಮಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಸಿನಿಮಾ ಶುರುವಾಗಿ ಒಂದೂವರೆ ವರ್ಷ ಆಗ್ತಿದೆ. ಈವರೆಗೂ ಒಂದೇ ಒಂದು ಪೋಸ್ಟರ್, ಟೀಸರ್ ಕೂಡ ರಿಲೀಸ್ ಮಾಡಿಲ್ಲ. ಏನಾದರೂ ಅಪ್ಡೇಟ್ ಬೇಕೇ ಬೇಕು ಎಂದು ಸ್ವತಃ ನಿರ್ಮಾಪಕರೇ ಉಪ್ಪಿಗೆ ಕೇಳುತ್ತಿದ್ದಾರೆ. ಆದರೆ ಉಪೇಂದ್ರ ಮಾತ್ರ, ಫಸ್ಟ್ ಲುಕ್, ಟೀಸರ್ನ ರಿಲೀಸ್ ಮಾಡ್ಲೇಬೇಕಾ…? ಸಿನಿಮಾಗೆ ಪಬ್ಲಿಸಿಟಿ ಯಾಕ್ ಮಾಡ್ಬೇಕು ಎಂದು ಪ್ರಶ್ನೆ ಮಾಡ್ತಿದ್ದಾರೆ. ರಿಲೀಸ್ ಡೇಟ್ ಘೋಷಣೆ ಮಾಡಿದ್ರೆ ಸಾಕಾಗಲ್ವಾ ಎಂದು ಹೇಳ್ತಿದ್ದಾರೆ ಉಪೇಂದ್ರ.
ಸಿನಿಮಾ ಹೈಪ್ ಮಾಡೋದಾ, ಅದೇ ಆಗೋದಾ..? ಒಂದು ನಿಮಿಷ ಟೀಸರ್ ಅಲ್ಲಿ ನಮ್ ಸಿನಿಮಾ ಯಾವ ರೇಂಜ್ನಲ್ಲಿದೆ ಎಂಬುದನ್ನು ಹೇಳಬಹುದಾದರೆ, ನಾವೇಕೆ ಎರಡು ಗಂಟೆ ಸಿನಿಮಾ ಮಾಡಬೇಕು? ಸುಳ್ಳಿಗೆ ಹೈಪ್ ನೀಡಬೇಕು, ಸತ್ಯಕ್ಕೆ ತಾನಾಗಿಯೇ ಹೈಪ್ ಸಿಗುತ್ತದೆ.. ನೀವು ತಲೆ ಕೆಡಿಸಿಕೊಳ್ಳಬೇಡಿ ಅನ್ನೋ ಉತ್ತರ ಕೊಟ್ಟು ನಿರ್ಮಾಪಕರನ್ನು ಸಮಾಧಾನಿಸಿದ್ದಾರೆ ಉಪೇಂದ್ರ.
ಹಾಗಂತ ಏನೂ ಇಲ್ವಾ ಎಂಬ ಅನುಮಾನವೇನು ಬೇಡ. ಸೆ.18ಕ್ಕೆ ಯುಐ ಚಿತ್ರದ ಒಂದು ಝಲಕ್ ಪ್ರೇಕ್ಷಕರಿಗೆ ಸಿಗಲಿದೆ.



