ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಈಗ ಮೊದಲಿನಂತಿಲ್ಲ. ಭಾರತ-ಪಾಕ್ ಸಂಘರ್ಷದ ಅಥವಾ ಚೀನಾ ಕಿರಿಕ್ಕು ಮಾಡಿದಾಗಲೆಲ್ಲ.. ಭಾರತಕ್ಕೆ ಬುದ್ದಿವಾದ ಹೇಳುತ್ತಿದ್ದ ಅಮೆರಿಕದ ವರ್ತನೆ, ಈಗ ಬದಲಾಗಿದೆ. ಅಮೆರಿಕ.. ಭಾರತದ ಪರ ನಿಲ್ಲುತ್ತಿದೆ. ಹಾಗಂತ ಭಾರತ ಅಮೆರಿಕ ಹೇಳಿದ್ದಕ್ಕೆಲ್ಲ ಹೂಂಗುಟ್ಟುತ್ತಿದೆಯಾ ಎಂದರೆ.. ಹಾಗೇನಿಲ್ಲ. ಅಮೆರಿಕದ ತೀವ್ರ ವಿರೋಧದ ನಡುವೆಯೇ ರಷ್ಯಾ, ಇರಾನ್ ಜೊತೆ ಪೆಟ್ರೋಲಿಯಂ ವ್ಯವಹಾರ ನಡೆಸುತ್ತಲೇ ಇದೆ. ಫ್ರಾನ್ಸ್, ಜರ್ಮನಿಗಳ ಜೊತೆ ಯುದ್ಧೋಪಕರಣಗಳ ಬಿಸಿನೆಸ್ ಮಾಡ್ತಿದೆ. ಭಾರತದ ಆಂತರಿಕ ವಿಷಯಗಳ ಬಗ್ಗೆ ಅಮೆರಿಕ ಮಾತನಾಡಿದಾಗಲೆಲ್ಲ ತೀವ್ರವಾಗಿಯೇ ಉತ್ತರಿಸುತ್ತಿದೆ ಭಾರತ. ಆದರೆ.. ವ್ಯವಹಾರಕ್ಕೆ ಪೆಟ್ಟು ಮಾಡಿಕೊಂಡಿಲ್ಲ. ಅದು ಭಾರತದ ರಾಜತಾಂತ್ರಿಕ ನೀತಿಯ ಯಶಸ್ಸೂ ಹೌದು.
ಇದೀಗ ಅಮೆರಿಕ ನಾವು ಮೋದಿಗೆ ಮಾತು ಕೊಟ್ಟಿದ್ದೇವೆ. ಅದರಂತೆಯೇ ನಡೆಯುತ್ತೇವೆ. ನಾವು ಮಾತು ತಪ್ಪುವುದಿಲ್ಲ ಎನ್ನುತ್ತಿರುವುದು ಬಾಹ್ಯಾಕಾಶ ಕ್ಷೇತ್ರದ ಹೊಸ ಹೆಜ್ಜೆಯ ಬಗ್ಗೆ.
2024ರ ವರ್ಷಾಂತ್ಯಕ್ಕೆ ಭಾರತದ ಗಗನಯಾತ್ರಿ ನಾಸಾದ ಬಾಹ್ಯಾಕಾಶ ನೌಕೆ ಮೂಲಕ ಬಾಹ್ಯಾಕಾಶ ನಿಲ್ದಾಣ ತಲುಪಲಿದ್ದಾರೆ. ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹಾಗೂ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಎರಡೂ ಜಂಟಿಯಾಗಿ ʻನಿಸಾರ್ʼ ಎಂಬ ಯೋಜನೆ ರೂಪಿಸಿವೆ. ಈ ಯೋಜನೆ ಅಡಿ ಈ ವರ್ಷಾಂತ್ಯಕ್ಕೆ ಭಾರತದ ಗಗನಯಾತ್ರಿ ಅಮೆರಿಕದ ಬಾಹ್ಯಾಕಾಶ ವಾಹನದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಲಿದ್ದಾರೆ ಎಂದು ಎರಿಕ್ ಗಾರ್ಸೆಟ್ಟಿ ವಿವರಿಸಿದ್ದಾರೆ. ಎರಿಕ್ ಗಾರ್ಸೆಟ್ಟಿ, ಭಾರತದಲ್ಲಿ ಇರುವ ಅಮೆರಿಕದ ರಾಯಭಾರಿ.
2023ರಲ್ಲಿ ಭಾರತ ಪ್ರಧಾನಿ ಮೋದಿ ಅವರು ಅಮೆರಿಕಗೆ ಭೇಟಿ ನೀಡಿದ್ದ ವೇಳೆ ನಾವು ಅವರಿಗೆ ಭರವಸೆ ನೀಡಿದ್ದೆವು. ಆ ಪ್ರಕಾರವಾಗಿ 2024ರ ಅಂತ್ಯದ ಒಳಗೆ ನಾವು ಭಾರತದ ಗಗನಯಾತ್ರಿಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳಿಸುತ್ತೇವೆ. ನಾವು ನಮ್ಮ ಮಾತನ್ನು ಉಳಿಸಿಕೊಳ್ಳುತ್ತೇವೆ. ಈ ಯೋಜನೆ ಇನ್ನೂ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದ್ಧಾರೆ ಗಾರ್ಸೆಟ್ಟಿ.
ಭಾರತದ ಪ್ರಾಕೃತಿಕ ಸಂಪತ್ತು, ಹವಾಮಾನ ಬದಲಾವಣೆ, ಅರಣ್ಯ ಸಂಪತ್ತು ಹಾಗೂ ಜಲ ಸಮೃದ್ಧ ಪ್ರದೇಶಗಳ ಸರ್ವೇಕ್ಷಣೆಗೆ ಮೆರಿಕ ಹಾಗೂ ಭಾರತ ಜಂಟಿಯಾಗಿ ಉಪಗ್ರಹಗಳನ್ನು ರೂಪಿಸಿ ಕಕ್ಷೆಗೆ ರವಾನಿಸಲಿವೆ. ಈ ಮೂಲಕ ಪ್ರಾಕೃತಿಕ ಸಂಪನ್ಮೂಲಗಳ ಸಮರ್ಪಕ ಸದ್ಭಳಕೆಗೆ ಸಹಕಾರಿ ಆಗೋದು ಯೋಜನೆಯ ಮೂಲ ಉದ್ದೇಶ. ಜೊತೆಯಲ್ಲೇ ಪ್ರಾಕೃತಿಕ ಅನಾಹುತಗಳು, ಹವಾಮಾನ ಬದಲಾವಣೆಯ ವೇಗ ಹಾಗೂ ಪರಿಣಾಮಗಳ ಕುರಿತಾಗಿಯೂ ಅಧ್ಯಯನ ನಡೆಸುವ ಕಾರ್ಯಕ್ರಮಗಳನ್ನು ನಿಸಾರ್ ಯೋಜನೆಯಡಿ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಗಾಗಿ ನಾಸಾ ಹಾಗೂ ಇಸ್ರೋ ಎರಡು ರಾಡಾರ್‌ಗಳನ್ನೂ ಮೀಸಲಿಟ್ಟಿವೆ.
ಭಾರತವು ಕಳೆದ ವರ್ಷವಷ್ಟೇ ಯಶಸ್ವಿಯಾಗಿ ಚಂದ್ರಯಾನ 3 ಯೋಜನೆ ಕೈಗೊಂಡಿತು. ಅಮೆರಿಕದ ಯೋಜನೆಗಳಿಗಿಂತಲೂ ಅತಿ ಕಡಿಮೆ ವೆಚ್ಚದಲ್ಲಿ ಭಾರತ ಈ ಯೋಜನೆಯನ್ನು ಯಶಸ್ವಿಯಾಗಿ ಕೈಗೊಂಡಿತು ಎಂದು ಗಾರ್ಸೆಟ್ಟಿ ಶ್ಲಾಘಿಸಿದ್ದರು.
ಇದೀಗ ಈ ಯೋಜನೆಯನ್ನು ಮೋದಿಯವರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಸಲುವಾಗಿ ಜಾರಿಗೆ ತಂದೇ ತರುತ್ತೇವೆ ಎಂದು ಹೇಳಿದ್ಧಾರೆ.



