ಟೀ ಅಂಗಡಿ, ಪಾನ್ ಶಾಪ್, ಸಣ್ಣ ಸಣ್ಣ ದಿನಸಿ ಅಂಗಡಿ, ಕಿರಾಣ ಮಾಲೀಕರು, ಬೇಕರಿ, ಕಾಂಡಿಮೆಂಟ್ಸ್, ಹೂವು, ಹಣ್ಣು, ತರಕಾರಿ ಅಂಗಡಿಯವರು ಸಡನ್ ಶಾಕ್ʻಗೆ ಗುರಿಯಾಗಿದ್ದಾರೆ. ವರ್ಷಕ್ಕೆ 40 ಲಕ್ಷ ಟರ್ನ್ ಓವರ್ ಮಾಡಿದವರೆಲ್ಲ ಈಗ ಲಕ್ಷ ಲಕ್ಷ ಟ್ಯಾಕ್ಸ್ ಕಟ್ಟಬೇಕು. ವರ್ಷಕ್ಕೆ 40 ಲಕ್ಷ ಟರ್ನ್ ಓವರ್ ಎನ್ನುವುದು ಈಗಿನ ಬೆಲೆ ಏರಿಕೆ ದುನಿಯಾದಲ್ಲಿ ದೊಡ್ಡ ಮಾತೇ ಅಲ್ಲ. ತಿಂಗಳಿಗೆ ಮೂರೂವರೆ ಲಕ್ಷ ಬಿಸಿನೆಸ್ ಮಾಡದೇ ಹೋದರೆ, ವ್ಯಾಪಾರ ಮಾಡುವವನಿಗೆ ಏನೇನೂ ಗಿಟ್ಟುವುದಿಲ್ಲ.
40 ಲಕ್ಷ ಟರ್ನ್ ಓವರ್.. ಲಾಭ ಅಲ್ಲ..!
ಇಲ್ಲಿ ಒಂದು ವಿಷಯ ನೆನಪಿನಲ್ಲಿರಲಿ, ತಿಂಗಳಿಗೆ ಮೂರೂವರೆ ಲಕ್ಷ ಅಥವಾ ವರ್ಷಕ್ಕೆ 40 ಲಕ್ಷ ಎನ್ನುವುದು ಬಿಸಿನೆಸ್ ಟರ್ನ್ ಓವರ್ ಅಷ್ಟೇ. ಲಾಭ ಅಥವಾ ಆದಾಗ ಅಲ್ಲ. ವರ್ಷಕ್ಕೆ 40 ಲಕ್ಷ ಟರ್ನ್ ಓವರ್ ಎಂದರೂ.. ವ್ಯಾಪಾರಿಗಳಿಗೆ ಸರಾಸರಿ 10% ಎಂದರೆ.. 4 ಲಕ್ಷ ಆದಾಯ ಬರುತ್ತದೆ. ಅಂದ್ರೆ ತಿಂಗಳಿಗೆ ಎಷ್ಟಾಯ್ತು..? 30 ರಿಂದ 35 ಸಾವಿರ ಇರಬಹುದು, ಅಷ್ಟೇ. ಬೆಂಗಳೂರಿನಲ್ಲಿ ವ್ಯಾಪಾರ ಮಾಡಿ 30-35 ಸಾವಿರ ದುಡಿದರೆ.. ಆತ ಶ್ರೀಮಂತ ಹೇಗಾಗುತ್ತಾನೆ. ಇದು ವಾಸ್ತವ.
ಸಮಸ್ಯೆ ಎಲ್ಲಿಂದ ಆಯ್ತು..?
2017ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಪ್ರಕಾರ ಜಿಎಸ್‌ಟಿ ನೋಂದಣಿ ಕಡ್ಡಾಯವಾಗಿದ್ದರೂ, ಕೆಲವರು ನೋಂದಣಿ ಮಾಡಿಸದೇ ಇದ್ದಾಗ ನೋಟಿಸ್ ನೀಡಲಾಗುತ್ತದೆ. ಸರಕುಗಳ ಮಾರಾಟ ಮೊತ್ತ ವರ್ಷಕ್ಕೆ 40 ಲಕ್ಷ ದಾಟಿದರೆ, ಸೇವೆಗಳ ಪೂರೈಕೆ ಮೊತ್ತ ವರ್ಷಕ್ಕೆ 20 ಲಕ್ಷ ದಾಟಿದರೆ ಅದಕ್ಕೆ GST ನೋಂದಣಿ ಕಡ್ಡಾಯವಂತೆ. ಬಹುತೇಕ ವ್ಯಾಪಾರಿಗಳು ಈ GST ನೋಂದಣಿ ಮಾಡಿಸಿಲ್ಲ. ಈಗ ನೋಟಿಸ್ ಬಂದ ಮೇಲೆ ಕಣ್ಣೀರು ಹಾಕ್ತಿದ್ದಾರೆ.
ವ್ಯಾಪಾರಿಗಳ QR ಕೋಡ್ ಬಂದ್..!
ಗೂಗಲ್ ಪೇ, ಫೋನ್ ಪೇ, ಭಾರತ್ ಪೇ, ಭೀಮ್ ಪೇ.. ಹೀಗೆ 196 ಆನ್‌ಲೈನ್ ಪಾವತಿ ಸೌಲಭ್ಯಗಳಿವೆ. ಒಂದು ಫೋನ್.. 100 ಯುಪಿಐ ಆಯ್ಕೆಗಳಿವೆ. ಆದ್ದರಿಂದ, ಜನರು ಶಾಪಿಂಗ್ ಮಾಡಲು ತಮ್ಮ ವ್ಯಾಲೆಟ್ ಮತ್ತು ಬ್ಯಾಗ್‌ಗಳಲ್ಲಿ ಹಣವನ್ನೇ ಇಟ್ಟುಕೊಳ್ತಿಲ್ಲ. 1 ಲಕ್ಷ ರೂಪಾಯಿಗಳವರೆಗಿನ ಯುಪಿಐ ಪಾವತಿಗಳನ್ನು ಸ್ಥಳದಲ್ಲೇ ಮಾಡಬಹುದು. ತುರ್ತು ಆಸ್ಪತ್ರೆ ಸೇವೆಗಳ ಸಂದರ್ಭದಲ್ಲಿ 5 ಲಕ್ಷ ರೂಪಾಯಿಗಳವರೆಗೆ ಮಾಡಬಹುದು. ಅದರೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ಎಫೆಕ್ಟ್ ಪರಿಣಾಮ, ಅಂಗಡಿ, ಬೇಕರಿ ಮಾಲೀಕರು ಆನ್ ಲೈನ್ ಪೇಮೆಂಟಿಗೆ ನೋ ಎನ್ನುತ್ತಿದ್ದಾರೆ. ಕ್ಯೂಅರ್ ಕೋಡ್ ಸ್ಕ್ಯಾನ್ ಕಿತ್ತು ಹಾಕ್ತಿದ್ದಾರೆ. UPI, QR ಕೋಡ್ ಸ್ಟಿಕ್ಕರ್‌ಗಳನ್ನು ತೆಗೆದುಹಾಕಲು ಪ್ರಾರಂಭಿಸಿದ್ದಾರೆ. ಗ್ರಾಹಕರಿಗೆ ನಾವು UPI ಪಾವತಿಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳ್ತಿದ್ದಾರೆ. QR ಕೋಡ್‌ಗಳನ್ನು ತೆಗೆದುಹಾಕಿ, No UPI Payments, Only Cash ಎಂದು ಹೇಳುವ ಬೋರ್ಡ್‌ಗಳನ್ನು ಹಾಕುತ್ತಿದ್ದಾರೆ. ಡಿಜಿಟಲ್ ಪಾವತಿಗಳಲ್ಲಿ ದೇಶದ ಎರಡನೇ ಅತಿದೊಡ್ಡ ನಗರ ಬೆಂಗಳೂರು. ಇದೀಗ UPI ಪಾವತಿಗಳ ಅಲೆ ತಗ್ಗಿದೆ.
ಸರಕಾರ ಮಾಡಿದ್ದೇನು.?
ಜಿಎಸ್‌ಟಿ ನೋಂದಣಿ ಮಾಡಿಸಿಕೊಳ್ಳದೆ ಯುಪಿಐ ಮೂಲಕ ವರ್ಷಕ್ಕೆ 40 ಲಕ್ಷ ರೂಗಿಂತ ಹೆಚ್ಚಿನ ವಹಿವಾಟು ನಡೆಸಿದ 14,000 ವ್ಯಾಪಾರಿಗಳನ್ನು ಬೆಂಗಳೂರು ಅಧಿಕಾರಿಗಳು ಗುರುತಿಸಿದ್ದಾರೆ. ಅವರಲ್ಲಿ 5,500 ಮಂದಿಗೆ ಮೊದಲ ಹಂತದಲ್ಲೇ ನೋಟಿಸ್ ನೀಡಲಾಗಿದೆ. ಯುಪಿಐ ಮೂಲಕ ವರ್ಷಕ್ಕೆ 40 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸಿದ ವ್ಯಾಪಾರಿಗಳು GSTಯಿಂದ ತಪ್ಪಿಸಿಕೊಳ್ತಿದ್ದಾರೆ. ಅಂದಹಾಗೆ ಈ ನೋಟಿಸ್ ವಾಪಸ್ ಪಡೆಯಲು ಬರುವುದಿಲ್ಲ.
ಬಂದ್ ಆಗಲಿದೆ ಬೆಂಗಳೂರು..!
ಜುಲೈ 25 ರಂದು ಬೇಕರಿ, ಕಾಂಡಿಮೆಂಟ್ಸ್ ಮತ್ತು ಇತರ ಅಂಗಡಿಗಳ ಮಾಲೀಕರು ಹೋರಾಟಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ಜುಲೈ 23 ರಂದು ಹಾಲು ಮಾರಾಟ, ಜುಲೈ 24 ರಂದು ಗುಟ್ಕಾ, ಸಿಗರೇಟ್ ಮತ್ತು ಜುಲೈ 25 ರಂದು ಬೇಕರಿ ಸೇರಿದಂತೆ ಸಣ್ಣ ಪುಟ್ಟ ಅಂಗಡಿಗಳನ್ನು ಬಂದ್ ಮಾಡುವ ಬಗ್ಗೆ ಚಿಂತನೆ ನಡೆಸಿ, ಹೋರಾಟಕ್ಕೆ ಕರೆ ನೀಡಿದ್ದಾರೆ.



