ರಂಭಾಪುರಿ, ಕಾಶೀ, ಉಜ್ಜೈನಿ, ಕೇದಾರ, ಶ್ರೀಶೈಲ. ಈ ಐದು ಗುರು ಪರಂಪರೆಯ ಪಂಚಪೀಠಗಳು. 16 ವರ್ಷಗಳ ಬಳಿಕ ವೀರಶೈವ ಲಿಂಗಾಯತ ಪಂಚ ಪೀಠಾಧೀಶರು ಒಂದೇ ವೇದಿಕೆಗೆ ಬಂದಿದ್ದು ಒಂದು ಸಾಧನೆಯಾದರೆ.. ಗುರು ಪೀಠಗಳ ಜೊತೆಗೆ ವಿರಕ್ತ ಮಠಗಳೂ ಒಗ್ಗೂಡುತ್ತವಾ.. ಇದು ಈಗ ಎಲ್ಲರಲ್ಲೂ ಇರುವ ಪ್ರಶ್ನೆಯೂ ಹೌದು. ಬರಲಿರುವ ಜಾತಿ ಗಣತಿಯಲ್ಲಿ ಎಲ್ಲಾ ಒಳ ಪಂಗಡಗಳು “ವೀರಶೈವ ಲಿಂಗಾಯತ” ಎಂದು ಬರೆಯಿಸಬೇಕು. ವೀರಶೈವ ಲಿಂಗಾಯತ ಸಮಗ್ರತೆ ಮತ್ತು ಒಗ್ಗಟ್ಟನ್ನು ಪ್ರತಿಪಾದಿಸಬೇಕೆಂದು ಸಭೆ ತೀರ್ಮಾನಿಸಿದೆ.
ವಿರಕ್ತ ಮಠಗಳು ಒಂದಾಗುತ್ತವಾ..?
ಆದರೆ.. ಅದು ಅಷ್ಟು ಸುಲಭವೇ..
ರಾಜ್ಯದಲ್ಲಿ ದೊಡ್ಡ ದೊಡ್ಡ ಮಠಗಳಿವೆ. ಸಿದ್ಧಗಂಗಾ, ಸುತ್ತೂರು, ಸಿದ್ಧಾರೂಡ, ಮೂರುಸಾವಿರ ಮಠ, ಗವಿ ಸಿದ್ಧೇಶ್ವರ ಮಠ, ಬೃಹನ್ಮಠ, ಗವಾಯಿಗಳ ಮಠ, ಕೂಡಲಸಂಗಮ.. ಹೀಗೆ ರಾಜ್ಯದಲ್ಲಿ ಮೂರರಿಂದ ನಾಲ್ಕು ಸಾವಿರದಷ್ಟು ದೊಡ್ಡ ದೊಡ್ಡ ಚಿಕ್ಕ ಚಿಕ್ಕ ಮಠಗಳಿವೆ. ಅವೆಲ್ಲವೂ ವಿರಕ್ತ ಪೀಠಗಳು. ಈ ಮಠಗಳಲ್ಲಿ ಕೆಲವು ಮಠಗಳು ವೀರಶೈವರೇ ಬೇರೆ.. ಲಿಂಗಾಯತರೇ ಬೇರೆ ಎಂಬ ವಾದ ಮುಂದಿಟ್ಟಿದ್ದವರು.
ಯಾವುದು ಮೂಲ..?
ಸಿದ್ಧಾಂತ ಶಿಖಾಮಣಿ, ಆಗಮ ಹಾಗೂ ವಚನಗಳು ನಮ್ಮ ಆಧಾರ ಗ್ರಂಥ ಎನ್ನುವ ಪಂಚಪೀಠಗಳ ವಾದವನ್ನು ಕೆಲವು ವಿರಕ್ತ ಮಠಗಳು ಒಪ್ಪುವುದಿಲ್ಲ. ಆಗಮವನ್ನು ಕೆಲವರು ತಿರಸ್ಕರಿಸಿದರೆ.. ಕೆಲವರು ಸಿದ್ಧಾಂತ ಶಿಖಾಮಣಿಯನ್ನು ತಿರಸ್ಕರಿಸುತ್ತಾರೆ. ರೇಣುಕಾರಾಧ್ಯರನ್ನು ಕೆಲವು ಮಠಗಳು ಒಪ್ಪುವುದಿರಲಿ.. ನಂಬುವುದೇ ಇಲ್ಲ.
ಪಂಚಮಸಾಲಿಗಳ ಕಥೆ ಏನು..?
ಹೀಗಿರುವಾಗಲೇ ಪಂಚಮಸಾಲಿಗಳು ಬೇರೆ ಲಿಂಗಾಯತರಿಂದ ದೂರವಾಗುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಶುರುವಾದ ಹೋರಾಟ, ಪಂಚಸಾಲಿಗಳೇ ಬೇರೆ. ಲಿಂಗಾಯತರೇ ಎಂಬಂತೆ ಮಾಡಿದೆ. ವೀರಶೈವ ಲಿಂಗಾಯರಲ್ಲೀಗ ಒಗ್ಗಟ್ಟು ಇಲ್ಲ. ಪಂಚಮಸಾಲಿ ಸ್ವಾಮಿಗಳೇ ಮಠ ಕಳೆದುಕೊಳ್ಳೋ ಭೀತಿಯಲ್ಲಿದ್ದಾರೆ. ಹೀಗಿರುವಾಗಲೇ.. ಮತ್ತೆ ಒಗ್ಗಟಿನ ಮಂತ್ರ ಕೇಳಿ ಬಂದಿದೆ.
ಸಮ್ಮೇಳನದಲ್ಲಿ ರಂಭಾಪುರಿಶ್ರೀ ಹೇಳಿದ್ದೇನು?
ಸಮಾಜ ಬಲವರ್ಧನೆ ಪಂಚಪೀಠಗಳಿಂದ ಮಾತ್ರ ಸಾದ್ಯ. ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಮಠಾಧೀಶರುಗಳ ಒಂದೇ ವೇದಿಕೆ ತರುವ ಸಂಕಲ್ಪ ಇದೆ. ಎಲ್ಲ ಪೀಠಾಚಾರ್ಯ ಹಾಗೂ ಶಿವಾಚಾರ್ಯರು ಒಂದಾದರೆ, ವೀರಶೈವ ಲಿಂಗಾಯತರನ್ನ ಒಂದು ಮಾಡುವುದು ಕಷ್ಟವಲ್ಲ. 2016 ರಲ್ಲಿ ರಂಭಾಪುರಿ ಪೀಠದಲ್ಲಿ ಗುರು ವಿರಕ್ತರನ್ನ ಒಂದು ಮಾಡಲಾಗಿತ್ತು. ವೀರಶೈವ ಮಹಾ ಸಭೆಗೂ ಮೊದಲೇ ಗುರು ವಿರಕ್ತರು ಒಂದು ಮಾಡುವ ಕೆಲ್ಸಾ ರಂಭಾಪುರಿ ಪೀಠ ಮಾಡಿದೆ. ಈ ಹಿಂದೆ ಕೂಡಲ ಸಂಗಮದಲ್ಲಿ ನಡೆದ ಸಮಾರಂಭದಲ್ಲಿ ಕೆಲ ಅಡೆತಡೆಗಳು ನಡೆದವು. ಒಂದು ವರ್ಗದ ಜನ 12ನೇ ಶತಮಾನದ ಬಸವಣ್ಣರನ್ನು ಬಿಟ್ಟರೆ ಬೇರೆಯದನ್ನ ಅರಿಯುತ್ತಿಲ್ಲ. ಆ ಸಂಕುಚಿತ ಮನೋಭಾವ, ರಾಜಕೀಯ ಲಾಭಕ್ಕಾಗಿ ವೀರಶೈವ ನೇ ಬೇರೆ ಲಿಂಗಾಯತ ವೇ ಬೇರೆ ಎಂಬ ಸಂದೇಶ ಸಾರಿದರು.
ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಂದ ಕೆಲ ನಾಯಕರು ಚುನಾವಣೆಯಲ್ಲಿ ಸೋತರು ದೇವರಾಜ ಅರಸು ಕಾಲದಲ್ಲಿ ಹಾವನೂರ ವರದಿ ತಂದು ಮೀಸಲಾತಿ ಹೆಸರಿನಲ್ಲಿ ವೀರಶೈವ ಲಿಂಗಾಯತ ರನ್ನ ಒಡೆಯಲಾಯಿತು. ಅಲ್ಲಿಂದ ಚಿದ್ರ ಚಿದ್ರವಾಗಿ ಹೋಗಿತ್ತು. ಆದ್ರೆ ಈಗ ಪಂಚಪೀಠಗಳ ಒಂದಾಗಿದೆ. ಇದು ಕ್ಷಣಿಕ ಖುಷಿ ಆಗಬಾರದು. ವಿರಕ್ತರಲ್ಲಿ ವೀರಶೈವ ಹಾಗೂ ಲಿಂಗಾಯತ ಒಂದು ಎಂಬ ಭಾವನೆ ಬಂದ್ರೆ ಅವರ ಬಾಯಿಗೆ ಹಾಲು ತುಪ್ಪು ಹಾಕುತ್ತೇವೆ. ವಿರಕ್ತರ ಮಟ್ಟಕ್ಕೆ ನಾವು ಇಳಿಯಲು ಆಗಲ್ಲ. ಆದ್ರೆ ಅವರನ್ನ ನಾವು ಒಡಲಿನಲ್ಲಿ ಇಟ್ಟಕೊಳ್ಳುತ್ತೇವೆ ಎಂದಿದ್ದಾರೆ.



