ಜೋಗಿ ಪ್ರೇಮ್ ಅವರ ಡೈರೆಕ್ಷನ್ನಿನ ಮೊದಲ ಚಿತ್ರ ಕರಿಯ. ದರ್ಶನ್ ಅವರನ್ನು ಸ್ಟಾರ್ ನಟರನ್ನಾಗಿಸಿದ ಚಿತ್ರವೂ ಕೂಡಾ ಕರಿಯ. ಅಂತಹ ಪ್ರೇಮ್ ಸೆನ್ಸೇಷನ್ ಸೃಷ್ಟಿಸೋಕೆ ಫೇಮಸ್. ಇದೀಗ ಕೆಡಿ ಚಿತ್ರ ಮಾಡ್ತಿರೋ ಪ್ರೇಮ್, ಆ ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ ಜೊತೆ ಸಂಜಯ್ ದತ್, ರವಿಚಂದ್ರನ್, ಶಿಲ್ಪಾ ಶೆಟ್ಟಿ, ರಮೇಶ್ ಅವರನ್ನೆಲ್ಲ ಒಂದೇ ಸ್ಟೇಜಿಗೆ ತಂದಿದ್ದಾರೆ. ಇದರ ನಡುವೆ ಪ್ರೇಮ್, ಸಲ್ಮಾನ್ ಖಾನ್ ಚಿತ್ರವನ್ನ ನಿರ್ದೇಶನ ಮಾಡ್ತಾರೆ ಅನ್ನೋ ಸುದ್ದಿಯೂ ಇದೆ. ಇದರ ನಡುವೆಯೇ ಸಂಚಲನ ಹುಟ್ಟುಹಾಕಿರೋದು ಒಂದಷ್ಟು ಫೋಟೋಗಳು.
ನಟ ದರ್ಶನ್ ಸದ್ಯಕ್ಕಂತೂ ಕಾಟೇರ ಗೆಲುವಿನಲ್ಲಿ ತೇಲುತ್ತಿದ್ಧಾರೆ. ಕಾಟೇರನದ್ದು ಅಂತಿಂತಾ ಗೆಲುವಲ್ಲ. ಅಂತಾದ್ದೊಂದು ಗೆಲುವು ದರ್ಶನ್ ಅವರಿಗೂ ಬೇಕಿತ್ತು. ಈ ಸಂಭ್ರಮದ ನಡುವೆಯೇ ದರ್ಶನ್, ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಭೇಟಿ ಮಾಡಿದ್ದಾರೆ. ದರ್ಶನ್ ಮತ್ತು ಅಧೀರನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ ಇದು ಕೆಡಿ ಪಾರ್ಟಿ. ಕೆಡಿ ಚಿತ್ರದ ಪ್ರೊಡ್ಯೂಸರ್ ಆಗಿರುವ ಕೆವಿಎನ್ ಪ್ರೊಡಕ್ಷನ್ನಿನವರೇ ಅರೇಂಜ್ ಮಾಡಿದ್ದ ಪಾರ್ಟಿ. ಆದರೆ.. ಈ ಪಾರ್ಟಿಗೆ ಕೆಡಿ ಹೀರೋ ಧ್ರುವ ಸರ್ಜಾ ಬಂದಿರಲಿಲ್ಲ.. ಅಷ್ಟೆ.
ಕೆಜಿಎಫ್ʻನ ಅಧೀರನ ಪಾತ್ರದ ನಂತರ ಸಂಜಯ್ ದತ್ ದಕ್ಷಿಣದ ಚಿತ್ರಗಳಲ್ಲೂ ಬ್ಯುಸಿಯಾಗಿದ್ಧಾರೆ. ತಮಿಳಿನಲ್ಲಿ ಲಿಯೋದಲ್ಲಿಯೂ ಮಿಂಚಿದ ಸಂಜಯ್ ದತ್, ಕೆಡಿಯಲ್ಲಿ ಧ್ರುವ ಸರ್ಜಾ ಎದುರು ನಟಿಸುತ್ತಿದ್ಧಾರೆ. ಈ ಚಿತ್ರವನ್ನು ಡೈರೆಕ್ಟರ್ ಪ್ರೇಮ್ ನಿರ್ದೇಶಿಸಿದ್ದಾರೆ. ಇನ್ನೂ ಚಿತ್ರತಂಡ ಆಯೋಜಿಸಿದ್ದ ಪಾರ್ಟಿಯಲ್ಲಿ ಸಂಜಯ್ ದತ್ ಭಾಗಿಯಾಗಿದ್ದರು. ಈ ವೇಳೆ, ದರ್ಶನ್ ಸಂಜಯ್ ದತ್‌ರನ್ನು ಭೇಟಿಯಾಗಿ ಕೆಲ ಸಮಯ ಕಳೆದಿದ್ದಾರೆ.
ಅಂದಹಾಗೆ ಜೋಗಿ ಪ್ರೇಮ್, ದರ್ಶನ್ ಅವರ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ಗೊತ್ತಿರುವಂಥದ್ದೇ. ಪ್ರೇಮ್, ಇತ್ತ ಕಡೆ ಕೆಡಿ ಚಿತ್ರ ಮುಗಿಸುವ ಹೊತ್ತಿಗೆ, ಅತ್ತ ದರ್ಶನ್ ಮಿಲನ ಪ್ರಕಾಶ್ ಜೊತೆ ಡೆವಿಲ್ ಚಿತ್ರ ಮುಗಿಸಿರುತ್ತಾರೆ. ಅದಾಗುತ್ತಿದ್ದಂತೆಯೇ ಪ್ರೇಮ್ ಸಿನಿಮಾ ಶುರುವಾಗಲಿದೆ.
ಈ ಫೋಟೋ ನೋಡುತ್ತಿದ್ದಂತೆಯೇ ಎಲ್ಲರಿಗೂ ಪ್ರಶ್ನೆ ಉದ್ಭವವಾಗಿದೆ. ಏಕೆಂದರೆ ಪ್ರೇಮ್ ಅವರು ಎಂಥಹವರನ್ನೂ ಪಳಗಿಸುವ ತಾಕತ್ತಿರುವ ನಿರ್ದೇಶಕ. ಶಿವಣ್ಣ ಮತ್ತು ಸುದೀಪ್ ಅವರನ್ನೇ ಒಂದು ಚಿತ್ರದಲ್ಲಿ ತಂದ ಖ್ಯಾತಿ ಪ್ರೇಮ್ ಅವರಿಗೆ ಇದೆ. ಮಲ್ಲಿಕಾ ಶೆರಾವತ್ ಪೀಕ್ʻನಲ್ಲಿದ್ದ ದಿನಗಳಲ್ಲಿಯೇ ಕನ್ನಡಕ್ಕೆ ಬಂದು ಹಾಡಿ ಕುಣಿದಿದ್ದರು. ಸನ್ನಿಲಿಯೋನ್ ಕೂಡಾ ಅಷ್ಟೆ. ಸಿ ಅಶ್ವತ್ಥ್ ಅಂತಹವರ ಕೈಲಿ ರೌಡಿ ಸಾಂಗ್ ಕೆಂಚಾಲೋ ಮಂಚಾಲೋ.. ಹಾಡಿಸಿದ ಖ್ಯಾತಿಯೂ ಪ್ರೇಮ್ ಅವರದ್ದೇ. ಸ್ಸೋ.. ಸಂಜಯ್ ದತ್ ಅವರನ್ನು ದರ್ಶನ್ ಅವರ ಚಿತ್ರಕ್ಕೂ ಕರೆತರಬಹುದೇ.. ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡರೆ ತಪ್ಪೇನಿಲ್ಲ. ಅದು ಪ್ರೇಮ್ ಸೃಷ್ಟಿಸಿರುವ ಸಂಚಲನದ ಎಫೆಕ್ಟ್.. ಅಷ್ಟೆ.



