ಅಮೇಥಿ. ದಶಕಗಳಿಂದ ಕಾಂಗ್ರೆಸ್ ಹಾಗೂ ನೆಹರು, ಗಾಂಧಿ ಕುಟುಂಬದ ವಶದಲ್ಲಿದ್ದ ಕ್ಷೇತ್ರ. ಉತ್ತರ ಪ್ರದೇಶದ ಅಮೇಥಿಯನ್ನು ಕಳೆದ ವರ್ಷ ರಾಹುಲ್ ಗಾಂಧಿ ಸೋಲೋದ್ರೊಂದಿಗೆ ಕಳೆದುಕೊಂಡಿದ್ದರು. ಭಾರತ್ ಜೋಡೋ ನ್ಯಾಯ ಯಾತ್ರೆ ಮೂಲಕ ಲೋಕಸಭಾ ಚುನಾವಣೆಗೆ ಭರ್ಜರಿ ತಾಲೀಮು ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನೋ ಚರ್ಚೆಗಳು ಈಗಾಗಲೇ ಶುರುವಾಗಿದೆ. ಕಳೆದ ಬಾರಿ ಅಮೇಥಿ ಹಾಗೂ ಕೇರಳದ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ, ವಯನಾಡುವಿನಲ್ಲಿ ಗೆದ್ದಿದ್ದರು. ಅಮೇಥಿಯಲ್ಲಿ ಸೋತಿದ್ದರು. ಅಮೇಥಿಯಲ್ಲಿ ಗೆದ್ದಿದ್ದವರು ಈಗ ಕೇಂದ್ರ ಸಚಿವೆಯಾಗಿರುವ ಸ್ಮೃತಿ ಇರಾನಿ. ಈ ಬಾರಿಯೂ ರಾಹುಲ್ ಗಾಂಧಿ ಅವರನ್ನು ಬನ್ನಿ, ಕಂಟೆಸ್ಟ್ ಮಾಡಿ ಎಂದು ಸವಾಲು ಹಾಕುತ್ತಿದ್ಧಾರೆ. ಆದರೆ ರಾಹುಲ್ ಗಾಂಧಿಯವರ ಲೆಕ್ಕಾಚಾರ ಬೇರೆಯದೇ ಇರುವಂತಿದೆ.
ಈ ಬಾರಿ ಇಂಡಿಯಾ ಒಕ್ಕೂಟದ ಮೂಲಕ ಕಾಂಗ್ರೆಸ್ ಲೋಕಸಭಾ ಚುನಾವಣೆ ಮುಂದಾಳತ್ವ ವಹಿಸಿಕೊಂಡಿದೆ. ಮೈತ್ರಿ ಬಲಗೊಳಿಸಲು ರಾಹುಲ್ ಗಾಂಧಿಯ ವಯನಾಡು ಕ್ಷೇತ್ರವನ್ನು ಮುಸ್ಲಿಮ್ ಲೀಗ್‌ಗೆ ಬಿಟ್ಟುಕೊಡುವ ಸಾಧ್ಯತೆ ಇದೆ. ವಯನಾಡು ಕ್ಷೇತ್ರವನ್ನು ಕಾಂಗ್ರೆಸ್ ಮಿತ್ರ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್‌ಗೆ ಬಿಟ್ಟುಕೊಡುವಂತೆ ಮನವಿ ಮಾಡಿದೆ. 2 ಕ್ಷೇತ್ರದ ಬದಲು ಮೂರು ಕ್ಷೇತ್ರದ ಟಿಕೆಟ್ ನೀಡಲು ಮುಸ್ಲಿಮ್ ಲೀಗ್ ಮನವಿ ಮಾಡಿದೆ. ವಯನಾಡು ಮುಸ್ಲಿಮ್ ಸಂಖ್ಯಾ ಬಲ ಹೆಚ್ಚಿರುವ ಕಾರಣ ಹೊಸ ಕ್ಷೇತ್ರವಾಗಿ ವಯನಾಡು ನೀಡಲು ಮುಸ್ಲಿಮ್ ಲೀಗ್ ಮನವಿ ಮಾಡಿದೆ.
ಕರ್ನಾಟಕದಿಂದ ಸ್ಪರ್ಧೆ ಮಾಡ್ತಾರಾ?
ಇಂಥಾದ್ದೊಂದು ಸುದ್ದಿ ಹಲವು ದಿನಗಳಿಂದ ಚಾಲ್ತಿಯಲ್ಲಿದೆಯಾದರೂ, ಈ ಬಾರಿ ಮತ್ತೆ ಮುನ್ನೆಲೆಗೆ ಬಂದಿದೆ. ಎಲೆಕ್ಷನ್ನಿಗೆ ಕೆಲವೇ ದಿನಗಳು ಬಾಕಿಯಿದ್ದು, ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದೆ. ಉಚಿತ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಸರ್ಕಾರ ರಚನೆಯಾಗಿ ಇನ್ನೂ ಒಂದು ವರ್ಷವಾಗಿಲ್ಲ. ಹೀಗಾಗಿ ವಿರೋಧಿ ಅಲೆಗಳೂ ಇಲ್ಲ. ರಾಹುಲ್ ಗಾಂಧಿ ಸ್ಪರ್ಧೆಯಿಂದ ಕರ್ನಾಟಕ ಇತರ ಕಾಂಗ್ರೆಸ್ ಅಭ್ಯರ್ಥಿಗಳಿಗೂ ಲಾಭವಾಗಲಿದೆ. ಬಿಜೆಪಿ ಅಭೂತಪೂರ್ವ ಗೆಲುವಿನ ನಾಗಾಲೋಟ ತಪ್ಪಿಸಲು ನೆರವಾಗಲಿದೆ ಅನ್ನೋ ಲೆಕ್ಕಾಚಾರಗಳು ನಡೆಯುತ್ತಿದೆ.
ಆದರೆ ಕರ್ನಾಟಕದಲ್ಲಿ ಕಳೆದ ಬಾರಿ ಬಿಜೆಪಿ ೨೭ ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ೨೫ರಲ್ಲಿ ಗೆದ್ದಿತ್ತು. ಸುಮಲತಾ ಅವರಿಗೆ ಬಹಿರಂಗ ಬೆಂಬಲ ಘೋಷಿಸಿತ್ತು. ಅವರೂ ಗೆದ್ದಿದ್ದರು. ಕರ್ನಾಟಕದ ಜನ ಅಸೆಂಬ್ಲಿಗೆ ವೋಟ್ ಹಾಕುವಾಗ ಹಾಕುವ ಲೆಕ್ಕಾಚಾರವೇ ಬೇರೆ. ವಿಧಾನಸಭೆಗೆ ವೋಟ್ ಹಾಕುವಾಗ ನೋಡುವ ಮನಸ್ಥಿತಿಯೇ ಬೇರೆ. ಇದನ್ನು ಹಲವು ಬಾರಿ ಸಾಬೀತು ಮಾಡಿರುವ ಇತಿಹಾಸ ಕರ್ನಾಟಕದ ಮತದಾರರದ್ದು. ಹೀಗಾಗಿ ರಿಸ್ಕ್ ಬೇಕಾ ಅನ್ನೋ ಪ್ರಶ್ನೆಯೂ ಇದೆ.
ಹೀಗಾದರೆ ಲಂಗಾಣದ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಕೂಡಾ ಇದೆ. ಅಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವೂ ಆಗಿಲ್ಲ. ಹೀಗಾಗಿ ಸುಲಭ ಗೆಲುವು ಸಾಧ್ಯ ಎನ್ನಲಾಗುತ್ತಿದೆ. ಇದೇ ವೇಳೆ ಅಮೇಥಿಯಿಂದಲೂ ಸ್ಪರ್ಧಿಸುವ ಸಾಧ್ಯತೆಗಳಿವೆ.



