ನಿಖಿಲ್ ಕುಮಾರಸ್ವಾಮಿ. ಕನ್ನಡ ಚಿತ್ರರಂಗದ ಉದಯೋನ್ಮುಖ ಪ್ರತಿಭೆ. 2016ರಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟ ನಿಖಿಲ್, ಜಾಗ್ವಾರ್ ಚಿತ್ರದಿಂದ ಬೆಳ್ಳಿತೆರೆಗೆ ಪರಿಚಿತರಾದರು. ಅದಾದ ಮೇಲೆ ಸೀತಾರಾಮ ಕಲ್ಯಾಣ, ಕುರುಕ್ಷೇತ್ರ ಹಾಗೂ ರೈಡರ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಲೈಕಾ ಪ್ರೊಡಕ್ಷನ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ವಿಷಯಕ್ಕೆ ಬಂದರೆ ನಿಖಿಲ್ ಅವರ ಮೇಲೆ ಕಾನ್ಫಿಡೆನ್ಸ್ ಇಡಬಹುದು. ಸಿನಿಮಾದಿಂದ ಸಿನಿಮಾಕ್ಕೆ ಇಂಪ್ರೂವ್ ಆಗುತ್ತಿರುವ ನಿಖಿಲ್ ಅವರಿಗೆ ಕಲಾಸರಸ್ವತಿ ಒಲಿದಿದ್ದಾಳೆ. ಆದರೆ ನಿಖಿಲ್ ಅವರಿಗೆ ಬೇಡ ಬೇಡ ಎಂದರೂ ರಾಜಕೀಯ ಅಂಟಿಕೊಂಡಿದೆ. ಒಂದು ಲೋಕಸಭೆ ಮತ್ತೊಂದು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿ ಸೋತಿದ್ದಾರೆ.
ರಾಜಕೀಯ ಬೇಡ ಅನ್ನೋಕಾಗಲ್ಲ. ಏಕೆಂದರೆ ತಾತ ದೇವೇಗೌಡ ಮಾಜಿ ಪ್ರಧಾನಿ. ಅಪ್ಪ ಎರಡು ಬಾರಿ ಸಿಎಂ ಆಗಿದ್ದ ಕುಮಾರಸ್ವಾಮಿ. ಅಮ್ಮ ಅನಿತಾ ಶಾಸಕಿಯಾಗಿದ್ದವರು. ದೊಡ್ಡಪ್ಪ ರೇವಣ್ಣ ಮಿನಿಸ್ಟರ್ ಆಗಿದ್ದವರು. ದೊಡ್ಡಮ್ಮ ಭವಾನಿ ಜಿಲ್ಲಾ ಪಂಚಾಯ್ತಿ ಮೆಂಬರ್. ದೊಡ್ಡಪ್ಪನ ಮಕ್ಕಳಾದ ಸೋದರ ಪ್ರಜ್ವಲ್ ರೇವಣ್ಣ ಸಂಸದರಾದರೆ, ಇನ್ನೊಬ್ಬ ಸೋದರ ಸೂರಜ್ ವಿಧಾನ ಪರಿಷತ್ ಸದಸ್ಯ. ಹೀಗಿರುವಾಗ ಪಾಲಿಟಿಕ್ಸ್ ಬಾಬಾ ಬಾಬಾ ಅಂತಾ ಹೇಳ್ತಾನೆ ಇರುತ್ತೆ.
ಆದರೆ ಮೊದಲಿಗೆ ನಿಖಿಲ್ ಆರಿಸಿಕೊಂಡಿದ್ದು ಸಿನಿಮಾ ರಂಗವನ್ನೇ. ಏಕೆಂದರೆ ಅಪ್ಪ ಕುಮಾರಸ್ವಾಮಿ ರಾಜಕಾರಣಿ ಅಷ್ಟೇ ಅಲ್ಲ, ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ವಿತರಕ. ಆದರೆ ಇತ್ತೀಚೆಗೆ ಅವರೇ.. ಮಗನೇ..ನಿನಗೆ ರಾಜಕೀಯ ಯಾಕೋ ಸರಿ ಹೊಂದುತ್ತಿಲ್ಲ. ಒಳ್ಳೆಯ ಕಲೆ ಇದೆ. ಅದರಿಂದಲೇ ಬದುಕು ರೂಪಿಸಿಕೋ ಎಂದು ಮಗನಿಗೆ ಹೇಳಿದ್ದಾರಂತೆ.
ರಾಜಕೀಯದ ಸಹವಾಸ ಹೋಗಬೇಡ. ನಿನಗೆ ಭಗವಂತ ಕೊಟ್ಟಿರೋ ಕಲೆ ಸಿನಿಮಾ ಮಾಡು ಎಂದು ನಿಖಿಲ್`ಗೆ ಸಲಹೆ ನೀಡಿದ್ದೇನೆ. ಮುಂದಿನ ಐದು ವರ್ಷ ನಿಖಿಲ್ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ದಯವಿಟ್ಟು ರಾಜಕೀಯ ಜಂಗುಳಿ ಬಿಟ್ಟು ಕಲಾವಿದನಾಗಿ ಬದುಕು ರೂಪಿಸಿಕೊಳ್ಳಲು ಹೇಳಿದ್ದೇನೆ. ನಿಖಿಲ್ ಚುನಾವಣೆಗೆ ನಿಲ್ಲುವ ಪ್ರಶ್ನೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ನಿಖಿಲ್`ಗೆ ದೇವರು ಕೊಟ್ಟಿರುವ ಕಲೆ ಇದೆ. ಆ ಮೂಲಕವೇ ಆತ ಗುರುತಿಸಿಕೊಳ್ಳಲಿ ಎಂದಿದ್ದರು ಕುಮಾರಸ್ವಾಮಿ. ಇತ್ತ ಕುಟುಂಬದವರೆಲ್ಲ ರಾಜಕೀಯದಿಂದ ದೂರ ಹೋಗುವ ಮಾತುಗಳನ್ನಾಡುತ್ತಿರುವ ಕುಮಾರಸ್ವಾಮಿ, ಮಗ ನಿಖಿಲ್`ನನ್ನೂ ರಾಜಕೀಯದಿಂದ ದೂರ ಇಡುವ ಯೋಜನೆ ಹಾಕಿದ್ದಾರೆ. ಆದರೆ ಸದ್ಯಕ್ಕೆ 5 ವರ್ಷದ ಪ್ಲಾನ್ ಮಾತ್ರ. ಲೋಕಸಭೆಗಂತೂ ನಿಲ್ಲೋದಿಲ್ಲ. ಇನ್ನೈದು ವರ್ಷದ ನಂತರ ವಿಧಾನಸಭೆ ಚುನಾವಣೆ ಬರಲಿದ್ದು, ಆ ಹೊತ್ತಿಗೆ ನಿಖಿಲ್ ಪ್ಲಾನ್ ಚೇಂಜ್ ಆದರೂ ಆಗಬಹುದು.



