2024ರ ಚುನಾವಣೆ ಆರಂಭದಲ್ಲೇ ಸಂಚಲನ ಸೃಷ್ಟಿಸುತ್ತಿದೆ. ಒಂದೆಡೆ ಮೋದಿಯನ್ನು ಸೋಲಿಸುವ ಏಕೈಕ ಗುರಿಯೊಂದಿಗೆ ಸಿದ್ದಾಂತಗಳನ್ನೆಲ್ಲ ಪಕ್ಕಕ್ಕಿಟ್ಟು ಒಟ್ಟಾಗುತ್ತಿರುವ ಪ್ರತಿಪಕ್ಷಗಳು. ಮತ್ತೊಂದೆಡೆ ತಮ್ಮ ವಿರುದ್ಧವೇ ಟೀಕೆ ಮಾಡಿ ಈಗ ಮತ್ತೊಮ್ಮೆ ಜೊತೆಯಾಗಲು ಮುಂದಾಗಿರುವ ಮಿತ್ರಪಕ್ಷಗಳ ಜೊತೆಗೂಡುತ್ತಿರುವ ಬಿಜೆಪಿ.. ಇದೆಲ್ಲದರ ಮಧ್ಯೆ ಇದ್ದಕ್ಕಿದ್ದಂತೆ ನರೇಂದ್ರ ಮೋದಿ ತಮಿಳುನಾಡಿನಿಂದ (Tamilnadu) ಲೋಕಸಭೆಗೆ ಸ್ಪರ್ಧೆ ಮಾಡುತ್ತಾರಂತೆ ಎಂಬ ಸುದ್ದಿ ಸೆನ್ಸೇಷನ್ ಹುಟ್ಟುಹಾಕಿದೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಮುಂದಿನ ವರ್ಷ ನಡೆಯುವ ಲೋಕಸಭೆಗೆ ವಾರಾಣಸಿಯ (Varanasi) ಜೊತೆಗೆ ತಮಿಳುನಾಡಿನ ಕನ್ಯಾಕುಮಾರಿ (KanyaKumari) ಅಥವಾ ರಾಮನಾಥಪುರಂ (Rameshwaram) ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಮಾತು ಹೇಳಿರುವುದು ಬೇರಾರೋ ಆಗಿದ್ದರೆ, ಗಾಸಿಪ್ ಎನ್ನಬಹುದಿತ್ತು. ಆದರೆ, ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಅವರೇ ಹೇಳಿರೋದ್ರಿಂದ ಮೋದಿ ತಮಿಳುನಾಡಿನಿಂದ ಸ್ಪರ್ಧೆ ಮಾಡುವ ಐಡಿಯಾವನ್ನು ಸೀರಿಯಸ್ ಆಗಿಯೇ ತೆಗೆದುಕೊಂಡಿದ್ದಾರೆ.
2014ರಲ್ಲಿ ಹಾಗೂ ಅಟಲ್ ಬಿಹಾರಿ ವಾಜಪೇಯಿ (Atal Bihari Vajapayee) ಅವಧಿಯಲ್ಲಿ ಕನ್ಯಾಕುಮಾರಿಯಲ್ಲಿ ಪೊನ್ ರಾಧಾಕೃಷ್ಣನ್ ಗೆದ್ದಿದ್ದರು. ಇನ್ನು ರಾಮನಾಥಪುರಂ ಕ್ಷೇತ್ರವೂ ಅಷ್ಟೇ.. ರಾಮೇಶ್ವರ ಇರುವ ಪುಣ್ಯಕ್ಷೇತ್ರ. ಇಲ್ಲಿ ತಮಿಳುನಾಡಿನಲ್ಲಿ ಸ್ಪರ್ಧೆ ಮಾಡುವುದರಿಂದ ದಕ್ಷಿಣ ಭಾರತದಲ್ಲಿ ಹೊಸದಾಗಿ ಖಾತೆ ತೆರೆಯುವ ಪ್ಲಾನ್ ಮಾಡಿದೆ. ಮೋದಿಯ ಲೆಕ್ಕಾಚಾರ ಸಿಂಪಲ್. ಹೊಸ ಹೊಸ ಯುದ್ಧಗಳನ್ನು ಗೆಲ್ಲದ ರಾಜ, ಚಕ್ರವರ್ತಿಯಾಗಲಾರ. ಹಾಗೆಯೇ ಹೊಸ ಹೊಸ ಕ್ಷೇತ್ರಗಳನ್ನು ಗೆಲ್ಲದಿದ್ದರೆ ಚುನಾವಣೆ ಗೆಲ್ಲೋದು ಕಷ್ಟ. ಇದೇ ಲೆಕ್ಕಾಚಾರದಲ್ಲಿ ಮೋದಿಯಿದ್ದಾರೆ.
2014ರಲ್ಲಿ ಮೋದಿ ಗುಜರಾತ್`ನ ವಡೋದರ (Vadodara) ಹಾಗೂ ಉ.ಪ್ರದೇಶದ ವಾರಾಣಸಿಯಲ್ಲಿ (Varanasi) ಸ್ಪರ್ಧೆ ಮಾಡಿ ಗೆದ್ದಿದ್ದರು. ಅದು ಇಡೀ ಎಲೆಕ್ಷನ್ ಚಿತ್ರವನ್ನೇ ಬದಲಿಸಿತ್ತು. ಉತ್ತರ ಪ್ರದೇಶದಲ್ಲಿ ಆಗ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದಿದ್ದರೆ, 50 ಸೀಟು ಗೆಲ್ಲುತ್ತಿದ್ದ ಬಿಜೆಪಿ 8ಕ್ಕೆ ಕುಸಿದಿತ್ತು. ಒಳಜಗಳಗಳಲ್ಲೇ ಮೈಮರೆತಿದ್ದ ಬಿಜೆಪಿ ನಂತರ ಭರ್ಜರಿಯಾಗಿ 80ರಲ್ಲಿ 72ರಲ್ಲಿ ಗೆದ್ದಿತ್ತು. ಆ ನಂತರ ನಡೆದಿದ್ದು ಇತಿಹಾಸ. ಈಗಲೂ ಅಷ್ಟೇ ಅಂತದ್ದೇ ಮ್ಯಾಜಿಕ್ ಪುನರಾವರ್ತನೆ ಮಾಡುವ ಆಲೋಚನೆ ಮೋದಿಯವರಿಗೆ ಇದ್ದಂತೆ ಇದೆ. ಅದರ ಜೊತೆ ಇನ್ನೂ ಒಂದು ಪ್ಲಾನ್ ಇದೆ.
ಏಕೆಂದರೆ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟಿದ್ದು ಕರ್ನಾಟಕ. ದ.ಭಾರತದಲ್ಲಿ ಗೆದ್ದಿದ್ದ 28ರಲ್ಲಿ 25 ಕರ್ನಾಟಕದಿಂದಲೇ ಬಂದಿತ್ತು. ಆದರೆ, ಗೆದ್ದ 25 ಕ್ಷೇತ್ರಗಳಲ್ಲಿ, ಮತ್ತೆ 25 ಗೆಲ್ಲುವುದು ಅಸಾಧ್ಯ. ರಾಜ್ಯ ಬಿಜೆಪಿಯಲ್ಲೀಗ ನಾಯಕತ್ವವೇ ಇಲ್ಲ. ಅದು ಛಿದ್ರ ಛಿದ್ರವಾಗಿ ಹೋಗಿರುವ ಮನೆ. ಇದು ಒಂದು ಆಲೋಚನೆಯಾದರೆ, ಇನ್ನೊಂದು ಬಿಜೆಪಿ ವಿರುದ್ಧ ದಕ್ಷಿಣ ಭಾರತದಲ್ಲಿ ಹಬ್ಬುತ್ತಿರುವ ಹಿಂದಿ ಪ್ರೇಮಿ, ದ್ರಾವಿಡ ಭಾಷೆಗಳ ವಿರೋಧಿ ಎಂಬ ವಾದ. ರಾಷ್ಟ್ರೀಯ ಶಿಕ್ಷಣ ನೀತಿಯ (National Education Policy) ಮೂಲಕ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಿದ್ದರೂ ಆರೋಪ ಮಾತ್ರ ಹೋಗಿಲ್ಲ. ಅದನ್ನು ದೂರ ಮಾಡಿಕೊಳ್ಳುವ ಆಲೋಚನೆಯೂ ಮೋದಿ ಮತ್ತು ಬಿಜೆಪಿಗೆ ಇರುವಂತಿದೆ.
ಇನ್ನು ರಾಜ್ಯದಲ್ಲಿ ಬಿಜೆಪಿಗೆ ನಾಯಕತ್ವ ಇಲ್ಲದೇ ಹೋದರೂ ಬೇಸ್ ಇದೆ. ಆದರೆ ತಮಿಳುನಾಡಿನಲ್ಲಿ ಈಗಿನ್ನೂ ಅಣ್ಣಾಮಲೈ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಚಿಗುರುತ್ತಿರುವ ಬಿಜೆಪಿಗೆ ಮೋದಿ ಸ್ಪರ್ಧೆಯಿಂದ ಶಕ್ತಿ ಸಿಗಲಿದೆ. (Lokasabhe election 2024) ಅಷ್ಟೇ ಅಲ್ಲ, ತಮಿಳುನಾಡಿನ ರಾಜಕೀಯದ ಇಂಪ್ಯಾಕ್ಟ್ ಇಡೀ ದಕ್ಷಿಣ ಭಾರತಕ್ಕೆ ಆಗಲಿದೆ. ಈಗ ಗೆದ್ದಿರುವ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಸಮೀಕ್ಷೆಗಳು ಏನೇ ಹೇಳುತ್ತಿದ್ದರೂ, ವಾಸ್ತವದಲ್ಲಿ ಗುದ್ದಾಡಬೇಕಿರುವುದು ಬಿಜೆಪಿಯೇ. ಹೀಗಾಗಿಯೇ ಹೊಸ ಹೊಸ ಕ್ಷೇತ್ರಗಳನ್ನು ಗೆಲ್ಲುತ್ತಿದ್ದರಷ್ಟೇ ಬಿಜೆಪಿಗೆ ಭವಿಷ್ಯ ಎನ್ನುವುದು ಮೋದಿಯ ನಂಬಿಕೆ. ಅದಕ್ಕೆ ತಕ್ಕಂತೆ ಹೆಜ್ಜೆಯಿಡಲು ನಿರ್ಧಾರ ಮಾಡಿದಂತೆ ಕಾಣುತ್ತಿದೆ ಬಿಜೆಪಿ ಮತ್ತು ಮೋದಿ.
ಅಂದ ಹಾಗೆ ಮೋದಿ ಸ್ಪರ್ಧೆಯಿಂದ ವಾಸ್ತವಕ್ಕೂ ಬಿಜೆಪಿ ಹಣೆಬರಹ ಬದಲಾಗುತ್ತಾ..? ಏಕೆಂದರೆ ಕರ್ನಾಟಕ ಬಿಟ್ಟರೆ ಮಿಕ್ಕ ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ.. ಇಲ್ಲೆಲ್ಲೂ ಬಿಜೆಪಿ ದೊಡ್ಡ ಮಟ್ಟದಲ್ಲಿ ಗೆದ್ದಿಲ್ಲ. ತಮಿಳುನಾಡಿನಲ್ಲಂತೂ ಮೋದಿ ವಿರುದ್ಧ ದೊಡ್ಡ ಅಭಿಯಾನವೇ ನಡೆಯುತ್ತಿದೆ. ಮೋದಿ ತಮಿಳುನಾಡಿಗೆ ಭೇಟಿ ಕೊಟ್ಟಾಗಲೆಲ್ಲ ಗೋಬ್ಯಾಕ್ ಮೋದಿ ಎಂಬ ಅಭಿಯಾನ ನಡೆಯುತ್ತದೆ ಅಲ್ಲದೆ ಹಿಂದಿ ವಿರೋಧಿ ರಾಜ್ಯ. ಇವೆಲ್ಲವನ್ನೂ ಲೆಕ್ಕ ಹಾಕಿಕೊಂಡೇ ಹೆಜ್ಜೆ ಇಡುತ್ತಿದೆ ಬಿಜೆಪಿ.



