ಜೆಡಿಎಸ್ ಈಗ ಸಂಖ್ಯೆಗಳ ಲೆಕ್ಕದಲ್ಲಿ ಪ್ರಬಲ ರಾಜಕೀಯ ಪಕ್ಷವಾಗಿ ಉಳಿದಿಲ್ಲ. ರಾಜ್ಯದಲ್ಲಿ ಸದ್ಯಕ್ಕೆ ಜೆಡಿಎಸ್ ಬಳಿ ಇರುವ ಶಾಸಕ ಬಲ ವಿಧಾಸನಭೆಯಲ್ಲಿ ಕೇವಲ 18. ಸಂಸದ ಬಲ ಕೇವಲ 2. ದೇವೇಗೌಡರಿಗೆ ಈಗ ವಯಸ್ಸಾಗಿದೆ. ವಯಸ್ಸು 90ರ ಗಡಿ ದಾಟಿದೆ. ಹೀಗಿರುವಾಗ ಜೆಡಿಎಸ್‌ನ್ನು ಇಷ್ಟು ದಿನ.. ಅಲ್ಲಲ್ಲ.. ವರ್ಷಗಳವರೆಗೆ ಹೆಗಲ ಮೇಲೆ ಹೊತ್ತಿದ್ದ ದೇವೇಗೌಡರು, ರಾಷ್ಟ್ರೀಯ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರೋಕೆ ಶುರುವಾಗಿವೆ.
ಪ್ರಸ್ತುತ ಕೇಂದ್ರದಲ್ಲಿ ಸಚಿವರೂ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರೇ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕವಾಗಲಿದ್ದಾರೆ ಎಂಬ ಸುದ್ದಿಗಳಿಗೆ ಜೀವ ಬಂದಿದೆ. ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರ ಹುದ್ದೆಯ ಅವಧಿ ಮುಕ್ತಾಯದ ಹಂತದಲ್ಲಿದೆ. ಅದನ್ನು ಇನ್ನು 2 ತಿಂಗಳು ವಿಸ್ತರಿಸುವುದು ಹಾಗೂ ಅಕ್ಟೋಬರ್ ನಂತರ ಪಕ್ಷದ ಎಲ್ಲ ಸಾಂಸ್ಥಿಕ ಸ್ಥಾನಗಳಿಗೆ ಚುನಾವಣೆ ನಡೆಸುವುದು ಕುಮಾರಸ್ವಾಮಿ ಅವರ ಯೋಜನೆ.
ಡಿಸೆಂಬರ್ ವೇಳೆಗೆ ಪಕ್ಷದ ಅಧ್ಯಕ್ಷರ ಹುದ್ದೆಗಳಿಗೆ ನೇಮಕ ಮಾಡುವ ಪ್ರಕ್ರಿಯೆ ಮುಗಿಸುವ ಯೋಜನೆ ಕುಮಾರಸ್ವಾಮಿ ಅವರದ್ದು. ಅಂದರೆ ಪಕ್ಷದ ಜಿಲ್ಲಾ, ತಾಲೂಕು ಮಟ್ಟದ ಸ್ಥಾನಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮುಗಿಸಿ, ಆ ನಂತರ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಜ್ಯಾಧ್ಯಕ್ಷ ಹುದ್ದೆಗಳಿಗೆ ನೇಮಕ ಮಾಡುವ ಕುರಿತಂತೆ ಪ್ಲಾನ್ ಆಗಿದೆ.
ಮೂಲಗಳ ಪ್ರಕಾರ ಕುಮಾರಸ್ವಾಮಿ ಅವರೇ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕವಾಗಲಿದ್ದಾರೆ. ಇನ್ನು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ನಿಖಿಲ್ ಕುಮಾರಸ್ವಾಮಿ ಅವರನ್ನು ತರುವ ಯೋಜನೆ ಕುಮಾರಸ್ವಾಮಿ ಅವರದ್ದು.
ನಿಖಿಲ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ತರುವ ಪ್ಲಾನ್ ಇವತ್ತಿನದ್ದಲ್ಲ. ಈ ಹಿಂದೆ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಬಂದಾಗಲೂ ಈ ಪ್ರಶ್ನೆ ಎದುರಾಗಿತ್ತು. ಸಾಮೂಹಿಕ ಜವಾಬ್ದಾರಿ ಮೂಲಕ ಸಂಘಟನೆಗೆ ಹೆಚ್ಚು ಶಕ್ತಿ ತುಂಬಲು ತೀರ್ಮಾನಿಸಲಾಗಿದೆ. ನಿಖಿಲ್ ಕುಮಾರಸ್ವಾಮಿ ಸಂಘಟನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕು ಎಂದು ಎಲ್ಲರೂ ಸಲಹೆ ನೀಡಿದ್ದಾರೆ ಎಂದಿದ್ದ ಕುಮಾರಸ್ವಾಮಿ ಪಕ್ಷವನ್ನು ತಳಮಟ್ಟದಿಂದ ಮರು ಸಂಘಟಿಸುವುದು, ಸದಸ್ಯತ್ವ ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ನಡೆಸುವ ಕುರಿತಂತೆ ಮಾತನಾಡಿದ್ದರು. ಆದರೆ, ನಿಖಿಲ್ ಅವರೇ ಪಕ್ಷದ ರಾಜ್ಯಾಧ್ಯಕ್ಷ ಎಂಬ ಸುದ್ದಿಯನ್ನು ನಿರಾಕರಿಸಿರಲೂ ಇಲ್ಲ. ಹೌದು ಎಂದು ಒಪ್ಪಿಕೊಂಡಿಯೂ ಇರಲಿಲ್ಲ.
ಪದಾಧಿಕಾರಿಗಳ ಬದಲಾವಣೆ, ರಾಜ್ಯದ 31 ಜಿಲ್ಲೆಗಳಲ್ಲಿನ ವಿಧಾನಸಭೆ ಕ್ಷೇತ್ರಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸುವುದರ ಜೊತೆಗೆ ಪಕ್ಷವನ್ನು ಕೇಡರ್ ಆಧರಿತ ಪಕ್ಷವನ್ನಾಗಿ ರೂಪಿಸುವ ಯೋಜನೆಯೂ ಕುಮಾರಸ್ವಾಮಿ ಅವರಲ್ಲಿದೆ. ಒಕ್ಕಲಿಗರ ಪ್ರಾಬಲ್ಯ ಇರುವ ಕಡೆಯಷ್ಟೇ ಆಕ್ಟಿವ್ ಆಗಿರುವ ಪಕ್ಷವನ್ನು ರಾಜ್ಯದ ಎಲ್ಲ ಕಡೆ ವಿಸ್ತರಿಸುವ ಉದ್ದೇಶದಿಂದಲೇ ಕುಮಾರಸ್ವಾಮಿ ತಾವೇ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ಅಲಂಕರಿಸಲಿದ್ದಾರೆ. ಅಲ್ಲದೆ ದೇವೇಗೌಡರಿಗೆ ವಯಸ್ಸಾಗಿದ್ದು, ಮೊದಲಿನಷ್ಟು ಆಕ್ಟಿವ್ ಆಗಿರಲು ಸಾಧ್ಯವಿಲ್ಲ ಎಂಬ ಕಾರಣವೂ ಸೇರಿದೆ.



