ದರ್ಶನ್ ಅವರ ಸಿನಿಮಾ ಸಲಾರ್ ಬೆನ್ನಲ್ಲೇ ರಿಲೀಸ್ ಆಗುತ್ತದೆ ಎಂದಾಗ ರಿಸ್ಕ್ ತೆಗೆದುಕೊಂಡರೇನೋ ಎಂದಿದ್ದವರೂ ಅಚ್ಚರಿಯಾಗುವಂತೆ ಕಾಟೇರ ಗೆದ್ದಿದೆ. ಕಾಟೇರ, ಈ ವರ್ಷದ ಕನ್ನಡದ ಅತಿ ದೊಡ್ಡ ಹಿಟ್ ಸಿನಿಮಾ ಆಗಿ ದಾಖಲಾಗಿದೆ. ಕಾಟೇರ ದರ್ಶನ್ ಅವರ ವೃತ್ತಿ ಜೀವನದ ದೊಡ್ಡ ಹಿಟ್ ಆಗಿ ದಾಖಲಾಗುತ್ತಿದೆ. ಇದೇ ವೇಳೆ ಕಾಟೇರ ಹೊಸ ಇತಿಹಾಸವೊಂದನ್ನು ಸೃಷ್ಟಿಸುವ ಹಾದಿಯಲ್ಲಿದೆ. ದರ್ಶನ್ ಅವರ ಕೆರಿಯರಿಗೆ ಅತಿ ದೊಡ್ಡ ಹಿಟ್ ಚಿತ್ರಗಳಾದ ರಾಬರ್ಟ್, ಕುರುಕ್ಷೇತ್ರ ಚಿತ್ರಗಳಿಗೂ ಸಾಧ್ಯವಾಗದ ದಾಖಲೆಯೊಂದನ್ನು ಕಾಟೇರ ಬರೆಯುತ್ತಿದೆ. ಅದು ನೂರು ಕೋಟಿ ಕ್ಲಬ್ ಸೇರುವ ದಾಖಲೆ.
ದರ್ಶನ್ ಅಭಿನಯದ ಕಾಟೇರದ ಕಲೆಕ್ಷನ್ ವರ್ಕಿಂಗ್ ಡೇನಲ್ಲೂ ಸ್ಟಾಪ್ ಆಗಿಲ್ಲ. ರಿಲೀಸ್ ಆದ ದಿನದಿಂದ ಭಾನುವಾರದವರೆಗೆ ರಜಾ ದಿನಗಳಿದ್ದವು. ಸೋಮವಾರ ಮತ್ತು ಮಂಗಳವಾರ ಕೆಲಸದ ದಿನ. ಕಲೆಕ್ಷನ್ ಕಡಿಮೆಯಾಗಬಹುದು ಎನ್ನುವ ಅನುಮಾನ ಪರಿಹಾರವಾಗಿದ್ದು, ವರ್ಕಿಂಗ್ ಡೇನಲ್ಲೂ ಕಲೆಕ್ಷನ್ ಜೋರಾಗಿಯೇ ಇದೆ. ಸೋಮವಾರ ಮತ್ತು ಮಂಗಳವಾರ ಕೂಡಾ ಕಾಟೇರ ಚಿತ್ರದ 4 ಲಕ್ಷಕ್ಕೂ ಹೆಚ್ಚು ಟಿಕೆಟ್ʻಗಳು ಮಾರಾಟವಾಗಿವೆ.
ಕಾಟೇರದ ಕಲೆಕ್ಷನ್ ಬಗ್ಗೆ ನಿರ್ಮಾಪಕ ರಾಕ್ʻಲೈನ್ ವೆಂಕಟೇಶ್ ಏನನ್ನೂ ಹೇಳಿರಲಿಲ್ಲ. ಬದಲಿಗೆ ತಮ್ಮ ಈ ಹಿಂದಿನ ಬಜೆಟ್ ಮತ್ತು ಕಲೆಕ್ಷನ್ ಬಗ್ಗೆ ಏನನ್ನೂ ಹೇಳದೇ ಇರುವ ನಿರ್ಧಾರಕ್ಕೇ ಅಂಟಿಕೊಂಡಿದ್ದರು. ಆದರೆ ಹಿಟ್ ಎನ್ನುವುದನ್ನು ಒಪ್ಪಿಕೊಂಡಿದ್ದರು. ಇದೇ ವಿಷಯವನ್ನು ನಿರ್ದೇಶಕರಿಗೆ ಕೇಳಿದರೆ ನಿರ್ಮಾಪಕರು ಒಪ್ಪಿಕೊಂಡಿಲ್ಲ ಅಂದ್ರೆ ಕಡಿಮೆ ಅಂತಾನೇ ಏಕೆ ಅಂದ್ಕೋತೀರಿ, ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚೂ ಇರಬಹುದು ಎಂದು ಉತ್ತರ ಕೊಟ್ಟಿದ್ದರು.
ಹೀಗಾಗಿ ಈಗ ವೈರಲ್ ಆಗುತ್ತಿರುವ ಕಲೆಕ್ಷನ್ ಲೆಕ್ಕದ ಪ್ರಕಾರ ಕಾಟೇರದ ಕಲೆಕ್ಷನ್ 80 ಕೋಟಿ ದಾಟಿದೆ. ಇಡೀ ವಾರ ಕಲೆಕ್ಷನ್ ಹೀಗೆಯೇ ಮುಂದುವರಿದರೆ ಅನುಮಾನವೇ ಇಲ್ಲ, ಕಾಟೇರ 100 ಕೋಟಿ ಕ್ಲಬ್ ಸೇರಲಿದೆ.
ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಕುರುಕ್ಷೇತ್ರ ಕೂಡಾ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಈಗ ಕಾಟೇರ ಆ ದಾಖಲೆಗಳನ್ನೆಲ್ಲ ಮೀರಿ 100 ಕೋಟಿ ಕಲೆಕ್ಷನ್ ಮಾಡಿದರೆ, ದರ್ಶನ್ ವೃತ್ತಿ ಜೀವನದಲ್ಲಿಯೇ ಮೊದಲ 100 ಕೋಟಿ ಕ್ಲಬ್ ಸೇರಿದ ಸಿನಿಮಾ ಎಂಬ ದಾಖಲೆಗೆ ಕಾಟೇರ ಭಾಜನವಾಗಲಿದೆ.
ರುಣ್ ಕಿಶೋರ್ ಸುಧೀರ್ ನಿರ್ದೇಶನ ಮಾಡಿರುವ ‘ಕಾಟೇರ’ ಸಿನಿಮಾದಲ್ಲಿ ದರ್ಶನ್‌ಗೆ ನಾಯಕಿಯಾಗಿ ಆರಾಧನಾ ರಾಮ್ ನಟಿಸಿದ್ದು, ಕುಮಾರ್ ಗೋವಿಂದ್, ಶ್ರುತಿ, ವಿನೋದ್ ಆಳ‍್ವ, ಜಗಪತಿ ಬಾಬು, ಅವಿನಾಶ್, ಮಾ ರೋಹಿತ್, ಬಿರಾದಾರ್, ಪದ್ಮಾವಾಸಂತಿ ಮುಂತಾದವರು ಅಭಿನಯಿಸಿದ್ದಾರೆ. ಕಥೆಗಾರ ಜಡೇಶ್ ಕುಮಾರ್ ಕೆ. ಹಂಪಿಯ ಕಥೆಯನ್ನು ತರುಣ್ ಅವರೂ ತಿದ್ದಿದ್ದಾರೆ. ಸಂಭಾಷಣೆ ಮಾಸ್ತಿ ಅವರದ್ದು.



