ರಾಜ್ಯದಲ್ಲಿ ಈಗಾಗಲೇ ಪ್ರಜ್ವಲ್ ರೇವಣ್ಣ (MP Prajwar revanna) ಅವರು ಸಂಸದ ಸ್ಥಾನದಿಂದ ಅನರ್ಹತೆ ಭೀತಿ ಎದುರಿಸುತ್ತಿದ್ದಾರೆ. ಸದ್ಯಕ್ಕೆ ಆ ಪ್ರಕರಣ ಸುಪ್ರೀಂಕೋರ್ಟಿನಲ್ಲಿದೆ. ಹೀಗಿರುವಾಗಲೇ ಪ್ರಜ್ವಲ್ ರೇವಣ್ಣ ಅವರ ತಂದೆ ಹೆಚ್.ಡಿ.ರೇವಣ್ಣ (HD Revanna) ಅವರ ಸ್ಥಾನಕ್ಕೂ ಕಂಟಕ ಎದುರಾಗಿದೆ. ವಿಧಾನಸಭಾ ಚುನಾವಣೆಯಲ್ಲಿ (Assembly election) ಅಕ್ರಮಗಳನ್ನು ನಡೆಸಿ ಹೊಳೆನರಸೀಪುರದಿಂದ ಜೆಡಿಎಸ್ ಅಭ್ಯರ್ಥಿಯಾಗಿ JDS Candidate ಎಚ್ ಡಿ ರೇವಣ್ಣ ಜಯ ಗಳಿಸಿದ್ದಾರೆಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ಎಚ್ ಡಿ ರೇವಣ್ಣ ಮತ್ತಿತರರಿಗೆ ಮತ್ತೆ ಸಮನ್ಸ್ ಜಾರಿಗೊಳಿಸಿದೆ. ಇಷ್ಟಕ್ಕೂ ಆರೋಪ ಏನೆಂದರೆ ಕೋಳಿ ಮತ್ತು 2000 ರೂ. ಹಂಚಿದ ಆರೋಪ ಪ್ರಕರಣದ್ದು.
ಏನಿದು ಕೋಳಿ ಮತ್ತು 2 ಸಾವಿರ ರೂ. ಹಂಚಿದ ಪ್ರಕರಣ?
ಚುನಾವಣೆಯಲ್ಲಿ ಎಚ್‌ಡಿ ರೇವಣ್ಣ 88,103, ಎರಡನೇ ಅಭ್ಯರ್ಥಿ ಶ್ರೇಯಸ್ ಎಂ ಪಟೇಲ್ 84,951 ಹಾಗೂ ಅರ್ಜಿದಾರರು 4850 ಮತ ಪಡೆದಿದ್ದಾರೆ. ಉಳಿದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ರೇವಣ್ಣ ವ್ಯಾಪಕ ಚುನಾವಣಾ ಅಕ್ರಮಗಳನ್ನು ಎಸಗಿದ್ದಾರೆ. ಹಾಗಾಗಿ, ಅವರ ಆಯ್ಕೆ ಅಸಿಂಧುಗೊಳಿಸಬೇಕು ಎನ್ನುವ ವಾದ ಅರ್ಜಿದಾರರದ್ದು. ಪ್ರತಿವಾದಿ ರೇವಣ್ಣ ಪ್ರಜಾಪ್ರತಿನಿಧಿ ಕಾಯಿದೆ 1951ರ ಹಲವು ಸೆಕ್ಷನ್‌ಗಳಡಿ ಅಕ್ರಮಗಳನ್ನು ಎಸಗಿದ್ದಾರೆ. ಅವರ ಬೆಂಬಲಿಗರು ಅಣ್ಣೇಹಳ್ಳಿಯಲ್ಲಿ ಮತದಾರರಿಗೆ ತಲಾ 2 ಕೋಳಿ ಮತ್ತು 2000 ರೂ ನಗದು ಹಂಚಿದ್ದಾರೆ. ಶಾಂತಿಗ್ರಾಮದ ಬಳಿ ಜನರಿಗೆ ಆಮಿಷವೊಡ್ಡುತ್ತಿದ್ದುದನ್ನು ತಡೆಯಲು ಹೋದಾಗ ರೇವಣ್ಣ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಮಿಥುನ್, ಮೋಹನ್, ಮಂಜು ಮತ್ತು ಶಂಕರ್ ಸೇರಿ 30 ಮಂದಿ ವಿರುದ್ಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ವಿಚಾರಣೆ ನವೆಂಬರ್ 29ಕ್ಕೆ ಮುಂದೂಡಿಕೆ
ಬಿಜೆಪಿಯ ಪರಾಜಿತ ಅಭ್ಯರ್ಥಿ ಹಾಗೂ ವಕೀಲ ದೇವರಾಜೇಗೌಡ ಕೋರ್ಟಿನಲ್ಲಿ ಶಾಸಕ ಹೆಚ್.ಡಿ.ರೇವಣ್ಣ ಅವರ ಆಯ್ಕೆಯನ್ನು ಪ್ರಶ್ನಿಸಿದ್ದರು. ನ್ಯಾ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ, ಈ ಹಿಂದೆ ನ್ಯಾಯಾಲಯ ಶಾಸಕ ಎಚ್ ಡಿ ರೇವಣ್ಣ ಅವರಿಗೆ ಸಮನ್ಸ್ ಜಾರಿಯಾಗೊಳಿಸಿತ್ತು. ಆದರೆ ಅದು ಅವರಿಗೆ ತಲುಪಿಲ್ಲ. ಹಾಗಾಗಿ, ಪತ್ರಿಕಾ ಪ್ರಕಟಣೆ ಮೂಲಕ ಸಮನ್ಸ್ ಜಾರಿ ಮಾಡಬೇಕೆ ಎಂದು ಮನವಿ ಮಾಡಿದರು. ಆದರೆ ನ್ಯಾಯಪೀಠ, ಚುನಾವಣಾ ತಕರಾರು ಅರ್ಜಿಯ ನಿಯಮದಂತೆ ಮತ್ತೆ ಸಮನ್ಸ್ ಜಾರಿಗೊಳಿಸಿ ನೋಡೋಣ ಎಂದು ಪ್ರತಿವಾದಿಗಳಾದ ಎಚ್ ಡಿ ರೇವಣ್ಣ ಸೇರಿದಂತೆ ಎಲ್ಲಾಅಭ್ಯರ್ಥಿಗಳಿಗೂ ಸಮನ್ಸ್ ನೀಡಿ ವಿಚಾರಣೆಯನ್ನು ನವೆಂಬರ್ 29ಕ್ಕೆ ನಿಗದಿ ಪಡಿಸಿತು.
ಅರ್ಜಿಯಲ್ಲಿ ಕಣದಲ್ಲಿದ್ದ ಅಭ್ಯರ್ಥಿಗಳಾದ ಶ್ರೇಯಸ್ ಎಂ ಪಟೇಲ್, ಗೀತಾ ಶಿವಸ್ವಾಮಿ, ಬಿ ಕೆ ನಾಗರಾಜ, ಎಚ್ ಎಸ್ ತಾರೇಶ್, ಡಿ ಆರ್ ಗಸ್ವಾಮಿ ಅವರೂ ಕೂಡಾ ಪ್ರತಿವಾದಿಗಳಾಗಿದ್ದಾರೆ.



