ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ.
ಸಿದ್ದರಾಮಯ್ಯ ಸರ್ಕಾರದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ.
ಡಿಸಿಎಂ ಡಿಕೆ ಶಿವಕುಮಾರ್ ಅವರ ಪ್ರೀತಿಯ ಹುಡುಗ ಮಧು ಬಂಗಾರಪ್ಪ.
ಶಿವ ರಾಜಕುಮಾರ್ ಅವರ ಬಾವಮೈದುನ ಮಧು ಬಂಗಾರಪ್ಪ.
ಕುಮಾರ್ ಬಂಗಾರಪ್ಪ ಹಾಗೂ ಗೀತಾ ಶಿವ ರಾಜ್ʻಕುಮಾರ್ ಅವರ ಸಹೋದರ ಮಧು ಬಂಗಾರಪ್ಪ.
ಕನ್ನಡ ಚಿತ್ರರಂಗದ ಯಶಸ್ವಿ ಸಂಸ್ಥೆಗಳಲ್ಲಿ ಒಂದಾದ ಆಕಾಶ್ ಆಡಿಯೋ ಮಾಲೀಕ ಮಧು ಬಂಗಾರಪ್ಪ.
ಆದಿತ್ಯ, ಗೋಕರ್ಣದಂತಹ ಚಿತ್ರಗಳಲ್ಲಿ ನಟಿಸಿದ್ದ ಮಧು, ಪುರುಷೋತ್ತಮ, ಬೆಳ್ಳಿಯಪ್ಪ ಬಂಗಾರಪ್ಪ, ಕಲ್ಲರಳಿ ಹೂವಾಗಿ ಮೊದಲಾದ ಚಿತ್ರಗಳ ನಿರ್ಮಾಪಕರೂ ಹೌದು.
ಅವರಿಗೀಗ ದಂಡ ಕಟ್ಟಲೇಬೇಕಾದ ಪರಿಸ್ಥಿತಿ. ಕಟ್ಟದೇ ಹೋದರೆ ಜೈಲು ಶಿಕ್ಷೆ ಎದುರಿಸುವ ಭಯ.
2011ರ ಚೆಕ್‌ಬೌನ್ಸ್ ಪ್ರಕರಣಕ್ಕೆ ಸಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 6.96 ಕೋಟಿ ರೂ. ದಂಡವನ್ನು ವಿಧಿಸಿ ಆದೇಶಿಸಿದೆ. ದಂಡ ಪಾವತಿ ಮಾಡದಿದ್ದರೆ 6 ತಿಂಗಳು ಜೈಲುವಾಸ ಅನುಭವಿಸುವಂತೆ ಆದೇಶಿಸಲಾಗಿದೆ.
ರಾಜ್ಯದ ಆಕಾಶ್ ಆಡಿಯೋ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಧು ಬಂಗಾರಪ್ಪ ಅವರು, ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಗೆ 6.60 ಕೋಟಿ ರೂಪಾಯಿಯ ನೀಡಿದ್ದರು. ಆದರೆ ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ವಿಚಾರಣೆ ಮಾಡಿದಾಗ ಉಡಾಫೆಯಾಗಿ ವರ್ತಿಸಿದ ಮಧು ಬಂಗಾರಪ್ಪ ವಿರುದ್ಧ ರಾಜೇಶ್ ಎಕ್ಸ್‌ಪೋರ್ಟ್ ಚೆಕ್‌ಬೌನ್ಸ್ ಕೇಸ್ ದಾಖಲಿಸಿತ್ತು. ಈ ಪ್ರಕರಣದ ಅರ್ಜಿಯನ್ನು ವಿಚಾರಣೆ ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹಾಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ 6,96,70,000 ರೂ. (6.96 ಕೋಟಿ ರೂ.) ದಂಡವನ್ನು ವಿಧಿಸಿದೆ. ಕಟ್ಟದೇ ಹೋದರೆ 6 ತಿಂಗಳು ಜೈಲು ಶಿಕ್ಷೆ ಖಾಯಂ. ದಂಡದ ಹಣದಲ್ಲಿ 6,96,60,000 ರೂ. ಹಣವನ್ನು ದೂರುದಾರರಿಗೆ ಪರಿಹಾರವಾಗಿ ನೀಡಬೇಕು. ಉಳಿದ 10 ಸಾವಿರ ರೂ. ಹಣವನ್ನು ಸರ್ಕಾರಕ್ಕೆ ದಂಡವಾಗಿ ಪಾವತಿಸಬೇಕು ಎಂದು ಆದೇಶ ನೀಡಿದೆ ನ್ಯಾಯಾಲಯ.
ಮುಚ್ಚಳಿಕೆ ಬರೆದುಕೊಡುತ್ತೇನೆ ಎಂಬ ಮಧು ಬಂಗಾರಪ್ಪ ಅವರ ವಾದವನ್ನೂ ಕೋರ್ಟ್ ಒಪ್ಪಿಲ್ಲ. ಈ ಹಿಂದೆ ನ್ಯಾಯಾಲಯಕ್ಕೇ ಮುಚ್ಚಳಿಕೆ ಬರೆದುಕೊಟ್ಟು ತಪ್ಪಿದ ಮಧು ಬಂಗಾರಪ್ಪ ಅವರನ್ನು ಕೋರ್ಟ್ ಒಪ್ಪಿಕೊಳ್ಳೋಕೆ ಸಿದ್ಧವಿಲ್ಲ. ಇತ್ತೀಚೆಗಷ್ಟೇ ಅಪಘಾತದಿಂದ ಪಾರಾಗಿದ್ದ ಮಧು ಬಂಗಾರಪ್ಪ ಅವರಿಗೆ ಇದು ಮತ್ತೊಂದು ಶಾಕ್ ಎನ್ನುವುದು ಸತ್ಯ.
ಜನರಿಗೆ ಕೊಟ್ಟ ಮಾತು ತಪ್ಪಿದರೆ ಅಮ್ಮಮ್ಮಾ ಎಂದರೆ ಸೋಲಿಸುತ್ತಾರೆ. ಆದರೆ ಕೋರ್ಟಿನ ಎದುರು ಕೊಟ್ಟ ಮಾತು ತಪ್ಪುವುದೆಂದರೆ ಸುಮ್ಮನೆ ಅಲ್ಲ. ಮಧು ಬಂಗಾರಪ್ಪ ಅವರಿಗೆ ಎದುರಾಗಿರುವ ಈ ಶಿಕ್ಷೆ ಸಿದ್ದರಾಮಯ್ಯ ಅವರ ಇಮೇಜಿಗೂ ಧಕ್ಕೆ ತಂದಿದೆ. ಪ್ರಕರಣ ಯಾವುದೇ ಇರಲಿ, ಹಾಲಿ ಸರ್ಕಾರದಲ್ಲಿ ಸಚಿವರಾಗಿರುವವರೊಬ್ಬರು ಜೈಲು ಶಿಕ್ಷೆ ಎದುರಿಸುತ್ತಿದ್ದರೆ ಸರ್ಕಾರದ ಇಮೇಜ್ ಹಾಳಾಗುತ್ತದೆ. ಈಗಾಗಲೇ ಡಿಕೆ ಶಿವಕುಮಾರ್ ವಿಚಾರಣೆ ಎದುರಿಸುತ್ತಿದ್ದಾರೆ. ಅದು ಆರ್ಥಿಕ ಅಪರಾಧದ ಆರೋಪ. ಇನ್ನೊಬ್ಬ ಶಾಸಕ ವಿನಯ್ ಕುಲಕರ್ಣಿ ಕೂಡಾ ಜೈಲಿಗೆ ಹೋಗಿ ಬಂದಿದ್ದಾರೆ. ಈಗ ಮಧು ಬಂಗಾರಪ್ಪ ಸರದಿ.



