ಚನ್ನಪಟ್ಟಣ. ಈ ಬಾರಿ ನಡೆಯಲಿರುವ ಮೂರು ಬೈ ಎಲೆಕ್ಷನ್ನುಗಳಲ್ಲಿ ಅತ್ಯಂತ ಕುತೂಹಲ ಹುಟ್ಟಿಸಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಅಖಾಡಕ್ಕೆ ಧುಮುಕುತ್ತಾರೆ ಎಂಬ ಮಾತು ಚಾಲ್ತಿಯಲ್ಲಿದೆ. ಅದಕ್ಕೆ ತಕ್ಕಂತೆ ಕಳೆದ 15 ದಿನಗಳಲ್ಲಿ 3 ಬಾರಿ ಚನ್ನಪಟ್ಟಣ ರೌಂಡ್ಸ್ ಮಾಡಿದ್ದಾರೆ ಡಿಕೆ ಶಿವಕುಮಾರ್.
ಬೆಂಗಳೂರು ಗ್ರಾಮಾಂತರದದಲ್ಲಿ ಹೋದ ಮಾನವನ್ನ ಚನ್ನಪಟ್ಟಣದಲ್ಲಿ ಮರಳಿ ಪಡೆಯಬೇಕು ಎಂಬ ಗುರಿ ಡಿಕೆ ಶಿವಕುಮಾರ್ ಅವರಲ್ಲಿದ್ದಂತೆ ಕಾಣುತ್ತಿದೆ. ಯಾರೇ ಕ್ಯಾಂಡಿಡೇಟ್ ಆದರೂ, ನಾನೇ ಅಭ್ಯರ್ಥಿ ಎಂಬ ಬಾಣ ಪ್ರಯೋಗವೂ ಇದೆ.
ಕುಮಾರಸ್ವಾಮಿ ಸಂಸದರಾದ ಕಾರಣ ತೆರವಾದ ಚನ್ನಪಟ್ಟಣಕ್ಕೆ ಜೆಡಿಎಸ್ ಅಭ್ಯರ್ಥಿ ನಿಲ್ತಾರೋ.. ಅಥವಾ ಬಿಜೆಪಿ ಅಭ್ಯರ್ಥಿ ನಿಲ್ತಾರೋ.. ಎನ್ನುವುದು ದೊಡ್ಡ ಪ್ರಶ್ನೆ. ಸಿಪಿ ಯೋಗೀಶ್ವರ್, ಬಿಜೆಪಿಯಲ್ಲಿದ್ದರೂ.. ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಅನ್ನೋ ಸುದ್ದಿಯೂ ಚಾಲ್ತಿಯಲ್ಲಿದೆ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರ ಹೆಸರೂ ಕೇಳಿ ಬರುತ್ತಿರುವಾಗ ಇದ್ದಕ್ಕಿದ್ದಂತೆ ದೇವೇಗೌಡರ ಮಗಳು ನಿಲ್ಲಬಹುದು ಎಂಬ ಚರ್ಚೆ ಶುರುವಾಗಿದೆ.
ದೇವೇಗೌಡರ ಮಗಳು ಎಂದರೆ ಅನುಸೂಯ. ಈಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರೂ ಆಗಿರುವ ಡಾ.ಮಂಜುನಾಥ್ ಅವರ ಪತ್ನಿ. ವಾಸ್ತವದಲ್ಲಿ ಅನುಸೂಯ ಅವರು ಮಂಜುನಾಥ್ ಅವರ ರಾಜಕೀಯ ಪ್ರವೇಶಕ್ಕೆ ಆಸಕ್ತಿ ಹೊಂದಿರಲಿಲ್ಲ. ಪತ್ನಿಯನ್ನು ಒಪ್ಪಿಸುವ ಸಲುವಾಗಿಯೇ ಡಾ.ಮಂಜುನಾಥ್, ಅಧಿಕೃತ ಘೋಷಣೆಯನ್ನು ವಿಳಂಬ ಮಾಡಿದರು. ಕೊನೆಗೆ ಅಣ್ಣ ಕುಮಾರಸ್ವಾಮಿಯ ಮಾತನ್ನು ಮೀರಲಾಗದೆ.. ಮಂಜುನಾಥ್ ಅವರ ರಾಜಕೀಯ ಎಂಟ್ರಿಗೆ ಓಕೆ ಎಂದಿದ್ದರು ಅನುಸೂಯ.
ಅನುಸೂಯ ಅವರಿಗಾಗಲೀ, ಅವರ ಮಕ್ಕಳಿಗಾಗಲೀ.. ರಾಜಕೀಯ ಅಂದ್ರೆ ಅಷ್ಟಕ್ಕಷ್ಟೆ. ಈಗ ಅನುಸೂಯ ಅವರನ್ನೇ ಅಖಾಡಕ್ಕಿಳಿಸುವ ಮಾತುಗಳು ಕೇಳಿ ಬರುತ್ತಿವೆ.
ಅಂದ್ರೆ ಡಿಕೆ ಶಿವಕುಮಾರ್ ಅವರು ನಿಂತರೆ ಅನುಸೂಯ ಕಣಕ್ಕಿಳಿಯಬಹುದು ಎಂಬ ಸುದ್ದಿಗೆ ಜೀವ ಬಂದಿದೆ. ಆದರೆ, ಒಂದು ವಿಷಯ ಗೊತ್ತಿರಬೇಕು. ಇದು ಕೇವಲ ಟೆಸ್ಟಿಂಗ್ ಕೂಡಾ ಆಗಿರಬಹುದು. ಜನರ ಪ್ರತಿಕ್ರಿಯೆ ಹೇಗಿರಬಹುದು ಎಂದು ನೋಡಿಕೊಂಡು ಇಡುವ ರಾಜಕೀಯ ಹೆಜ್ಜೆಯೂ ಆಗಿರಬಹುದು. ಸದ್ಯದ ಮಟ್ಟಿಗೆ ಈ ಸುದ್ದಿಗಳು ಕೇವಲ ಸುದ್ದಿಗಳಷ್ಟೇ. ವಾಸ್ತವ ಅಲ್ಲ.



