2024ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ (Bengaluru Ruaral) ಬಿಜೆಪಿ (BJP) ಮತ್ತು ಜೆಡಿಎಸ್ (JDS) ಒಟ್ಟಾಗಿ ಕಣಕ್ಕೆ ಇಳಿಯುತ್ತವಾ..? ಸಂಸದ ಡಿಕೆ ಸುರೇಶ್ (MP DK Suresh) ಅವರನ್ನು ಸೋಲಿಸಲು ಒಂದಾಗುತ್ತವಾ.. ಹೀಗೊಂದು ಕುತೂಹಲ ಮೂಡಿದೆ. ಬಿಜೆಪಿ – ಜೆಡಿಎಸ್ ಹೊಂದಾಣಿಕೆ ಬಗ್ಗೆ ಮಾಜಿ ಸಚಿವ ಸಿಪಿ ಯೋಗೇಶ್ವರ್ (CP Yogishwar) ಮತ್ತೆ ಪ್ರಸ್ತಾಪಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಾನು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂದು ಸಿಪಿ ಯೋಗೇಶ್ವರ್ ಹೇಳಿದ್ದು, ಮತ್ತೆ ಜನತಾ ದಳ ಹಾಗೂ ಬಿಜೆಪಿ ಮೈತ್ರಿ ಚರ್ಚೆಗೆ ಜೀವ ಬಂದಂತಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ – ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಬೇಕು. ಬದಲಾದಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅನ್ನು ಸೋಲಿಸಬೇಕು. ಈ ಬಗ್ಗೆ ಜೆಡಿಎಸ್ ವರಿಷ್ಠರಿಗೆ (HD Kumaraswamy) ಹಾಗೂ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರಿಗೆ (HD Devegowda) ವೈಯಕ್ತಿಕವಾಗಿ ಮನವಿ ಮಾಡ್ತೀನಿ ಎಂದು ಹೇಳಿದ್ದಾರೆ ಸಿಪಿ ಯೋಗೀಶ್ವರ್.
ಆದರೆ ಇದು ನನ್ನ ಪರ್ಸನಲ್ ಒಪೀನಿಯನ್. ನಿರ್ಧಾರವನ್ನು ನಾಯಕರು ಮಾಡ್ತಾರೆ ಅನ್ನೋ ಮೂಲಕ ಮೈತ್ರಿಯ ದಾಳವನ್ನಂತೂ ತೇಲಿಬಿಟ್ಟಿದ್ದಾರೆ ಸಿಪಿವೈ.
ಅಂದಹಾಗೆ ಸಿಪಿ ಯೋಗೀಶ್ವರ್ ಕಳೆದ ಸುಮಾರು 30 ವರ್ಷಗಳಿಂದಲೂ ಕುಮಾರಸ್ವಾಮಿ ವಿರುದ್ಧವೇ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಕಳೆದ ಬಾರಿ ಚನ್ನಪಟ್ಟಣದಲ್ಲಿ ಸೋತ ನಂತರ ಯೋಗೀಶ್ವರ್ ಅವರಿಗೆ ಗೆಲುವು ಸಿಕ್ಕಿಲ್ಲ. ಆದರೆ ಲೋಕಸಭೆ ಚುನಾವಣೆಯ ರೂಪುರೇಷೆಯೇ ಬೇರೆ. ಏಕೆಂದರೆ ಬೆಂಗಳೂರು ಗ್ರಾಮಾಂತರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಒಟ್ಟಾಗಿ ಡಿಕೆ ಸುರೇಶ್ ಅವರಿಗೆ ಟಿಕೆಟ್ ನೀಡಲಾಗಿತ್ತ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸೋತು ಸುಣ್ಣವಾದರೂ, ಬೆಂಗಳೂರು ಗ್ರಾಮಾಂತರದಲ್ಲಿ ಗೆದ್ದಿತ್ತು. ಹಾಗಂತ ಇಲ್ಲಿ ಕಾಂಗ್ರೆಸ್ ವೀಕ್ ಎಂದಲ್ಲ. ಜೆಡಿಎಸ್ ಜೊತೆ ಮೈತ್ರಿ ಇಲ್ಲದೆಯೂ ಡಿಕೆ ಸುರೇಶ್, 2014ರಲ್ಲಿಯೂ ಗೆದ್ದಿದ್ದರು. ಆ ಹಿಂದೆಯೂ ಗೆದ್ದಿದ್ದರು. ಹಾಗಾದರೆ ಗೇಮ್ ಹೇಗೆ ಚೇಂಜ್ ಆಗಲಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಗರ ಪ್ರದೇಶಗಳ ವೋಟುಗಳೂ ಇವೆ. ಅತಿ ದೊಡ್ಡ ವಿಧಾನಸಭಾ ಕ್ಷೇತ್ರ ರಾಜರಾಜೇಶ್ವರಿ ನಗರ ಬರೋದು ಇದೇ ಲೋಕಸಭಾ ಕ್ಷೇತ್ರದಲ್ಲಿ. ಜೊತೆಗೆ ಇಲ್ಲೆಲ್ಲ ಜೆಡಿಎಸ್`ನ ಖಾಯಂ ವೋಟ್ ಬ್ಯಾಂಕ್ ಇದೆ. ಬಿಜೆಪಿಯ ಖಾಯಂ ವೋಟ್ ಬ್ಯಾಂಕ್ ಕೂಡಾ ಇದೆ. ಎರಡೂ ಪಕ್ಷಗಳು ಒಗ್ಗೂಡಿದರೆ ಡಿಕೆ ಸುರೇಶ್ ಅವರನ್ನು ಸೋಲಿಸಬಹುದು ಅನ್ನೋದು ಸಿಪಿವೈ ಲೆಕ್ಕಾಚಾರ. ಸಿಪಿ ಯೋಗೀಶ್ವರ್ ಈಗಾಗಲೇ ನಾನು ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ ಎಂದಿದ್ದಾರೆ.
ರಾಜಕೀಯ ಯಾವತ್ತೂ ನಿಂತ ನೀರಲ್ಲ. ಕಾಂಗ್ರೆಸ್ ವಿರೋಧಿಸಿ ಜೈಲಿಗೆ ಹೋಗಿದ್ದ ಸಿದ್ದರಾಮಯ್ಯನವರೇ, ಈಗ ಕಾಂಗ್ರೆಸ್`ನಲ್ಲಿ ಮುಖ್ಯಮಂತ್ರಿ. ಎಲ್ಲ ಪಕ್ಷಗಳಲ್ಲೂ ರೌಂಡ್ ಹೊಡೆದು ಬಂದಿರುವ ಸಿಪಿ ಯೋಗೀಶ್ವರ್, ಈಗ ಬಿಜೆಪಿಯ ನಾಯಕರು. ಈ ಹಿಂದೆ ವೇದಿಕೆಯಲ್ಲಿಯೇ ಡಿಕೆ ಶಿವಕುಮಾರ್ (DK Shivakumar) ಅವರ ಆಶೀರ್ವಾದ ಪಡೆದಿದ್ದ ವ್ಯಕ್ತಿ. ಇಂತಹ ನೂರು ಉದಾಹರಣೆಗಳನ್ನು ಕೊಡಬಹುದು. ದಟ್ ಈಸ್ ಪಾಲಿಟಿಕ್ಸ್. ನೋ ಶತ್ರುತ್ವ. ನೋ ಬಂಧುತ್ವ. ನೋ ಮಿತ್ರತ್ವ.. ಯಾವುದೂ ಶಾಶ್ವತ ಅಲ್ಲ.



