ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಡೇಟ್ ಇನ್ನೂ ಘೋಷಣೆಯಾಗಿಲ್ಲ. ಆದರೆ, ಕುತೂಹಲವಂತೂ ದಿನದಿನಕ್ಕೂ ರಂಗೇರುತ್ತಿದೆ. ಇದ್ದಕ್ಕಿದ್ದಂತೆ ಸಿಪಿ ಯೋಗೇಶ್ವರ್ ನಿಲುವು ಬದಲಿಸಿದ್ದಾರೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸದಿರಲು ಮಾಜಿ ಸಚಿವ, ಬಿಜೆಪಿ ಎಂಎಲ್ಸಿ ಸಿಪಿ ಯೋಗೇಶ್ವರ್ ನಿರ್ಧರಿಸಿದ್ದಾರೆ. ನವದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದ ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರದಲ್ಲಿ ನನಗೆ ನನ್ನದೇ ಆದ ಬೆಂಬಲವಿದೆ. ಚುನಾವಣೆ ನಿಲ್ಲಲೇಬೇಕೆಂದು ಕಾರ್ಯಕರ್ತರು ಒತ್ತಡ ಹಾಕಿದ್ದಾರೆ. ಬಹುತೇಕ ಸ್ಪರ್ಧೆ ಮಾಡಲೇಬೇಕು ಎಂದುಕೊಂಡಿದ್ದೇನೆ. ಚಿಹ್ನೆ ಯಾವುದಾದರೂ ಇರಲಿ, ಸ್ಪರ್ಧೆ ಮಾಡುವ ಇಂಗಿತವಿದೆ. ಎಲ್ಲವನ್ನೂ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ತಮಗೆ ಮೈತ್ರಿ ಪಕ್ಷದವರು ಒಪ್ಪಿಗೆ ಕೊಟ್ಟು ಜೆಡಿಎಸ್ ಟಿಕೆಟ್ ಕೊಟ್ಟರೂ ಸ್ಪರ್ಧೆ ಮಾಡಲು ಸಿದ್ಧ ಎಂದಿದ್ದರು ಸಿಪಿ ಯೋಗೇಶ್ವರ್. ಪಕ್ಷದ ಮುಖಂಡರ ಆದೇಶದ ಮೇಲೆ ತೀರ್ಮಾನ ಮಾಡುತ್ತೇನೆ. ಸ್ಪರ್ಧೆ ಮಾಡಲೇಬೇಕು ಎಂದು ಹೇಳುತ್ತಿದ್ದೆ. ಈಗಲೂ ಅದೇ ನಿಲುವಿಗೆ ನಾನು ಬದ್ಧನಾಗಿದ್ದೇನೆ. ಎರಡೂ ಪಕ್ಷಗಳ ಮುಖಂಡರು ಕುಳಿತು ತೀರ್ಮಾನ ಹೇಳಲಿ. ಉಪಚುನಾವಣೆಗಾಗಿ ನನ್ನ ನಿಲುವು ಯಾಕೆ ಬದಲಾಯಿಸಿಕೊಳ್ಳಲಿ. ನನ್ನ ಮೊದಲನೇ ಚುನಾವಣೆ ಫಲಿತಾಂಶ ಬಂದು 26 ವರ್ಷ ಆಯ್ತು. ಕ್ಷೇತ್ರದಲ್ಲಿ ನನಗೆ ನನದೇ ಆದ ಬೆಂಬಲವಿದೆ. ಹೆಗಲಿಗೆ ಹೆಗಲು ಕೊಟ್ಟವರು ಚುನಾವಣೆಗೆ ಸ್ಪರ್ಧಿಸಿ ಎಂದು ಹೇಳುತ್ತಿದ್ದಾರೆ. ನಾನೂ ಕೂಡ ಚುನಾವಣೆಗಳಿಂದ ಬೇಸತ್ತಿದ್ದೇನೆ. ಎನ್ಡಿಎ ಮೈತ್ರಿಕೂಟಕ್ಕೆ ನನ್ನಿಂದ ತೊಂದರೆ ಆಗಬಾರದು. ಮೈತ್ರಿ ಮುರಿದ ಎಂಬ ಅಪಕೀರ್ತಿ ಬರಬಾರದು ಎಂದಿದ್ದಾರೆ ಸಿಪಿ ಯೋಗೇಶ್ವರ್.
ಇತ್ತ ಆರ್.ಅಶೋಕ್ ನೇತೃತ್ವದ ಬಿಜೆಪಿ ಟೀಂ ಚನ್ನಪಟ್ಟಣ ಉಪಚುನಾವಣೆಯಲ್ಲಿ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಬೇಕೆಂದು ಲಾಬಿ ನಡೆಸುತ್ತಿದೆ. ಅಂತಿಮ ನಿರ್ಧಾರವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಗೆ ಬಿಟ್ಟಿದೆ ಎನ್ನಲಾಗಿದೆ. ಏಕೆಂದರೆ ಚನ್ನಪಟ್ಟಣ, ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರ.
ಬಿಜೆಪಿ ಹೈಕಮಾಂಡ್’ನ ಈ ನಿರ್ಧಾರ ಮೈತ್ರಿ ಪಕ್ಷ ಜೆಡಿಎಸ್’ಗೆ ಮತ್ತಷ್ಟು ಶಕ್ತಿ ನೀಡಿದಂತಾಗಿದೆ. ಹೀಗಾಗಿ ಕುಮಾರಸ್ವಾಮಿಯವರು ಇದೀಗ ಚನ್ನಪಟ್ಟಣ ಕ್ಷೇತ್ರದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ ಎಂದು ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ನಿಖಿಲ್ ಕುಮಾರಸ್ವಾಮಿ ಹೇಳುತ್ತಿರುವುದೇ ಬೇರೆ. ಚನ್ನಪಟ್ಟಣದ ಉಪಚುನಾವಣೆಯಲ್ಲಿ ಅಂತಿಮವಾಗಿ ಗೆಲುವು ಸಾಧಿಸಬೇಕು. ಆ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. . ಟಿಕೆಟ್ ವಿಚಾರವನ್ನು ಎರಡೂ ಪಕ್ಷಗಳ ಚೌಕಟ್ಟಿನೊಳಗೆ ಕುಳಿತು ಚರ್ಚಿಸಿ ಅಂತಿಮಗೊಳಿಸಲಾಗುತ್ತದೆ. ಈ ಕುರಿತು ಬಹಿರಂಗವಾಗಿ ಹೇಳಿಕೆ ನೀಡುವುದು ಸೂಕ್ತವಲ್ಲ. ಪಕ್ಷದ ಕಾರ್ಯಕರ್ತರ ಜತೆ ಬೆರೆಯುವ ಕೆಲಸ ಮಾಡುತ್ತಿದ್ದೇನೆ. ನಾನೊಬ್ಬ ಕಾರ್ಯಕರ್ತನಾಗಿ ಕೆಲಸ ಮಾಡಬಹುದೇ ಹೊರತು, ನಾನು ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾರೆ ನಿಖಿಲ್ ಕುಮಾರಸ್ವಾಮಿ.
ಒಟ್ಟಿನಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಸೋಲಿಸಲು ಸೂಕ್ತ ಅಭ್ಯರ್ಥಿ ಹಾಕುವ ಕೆಲಸವನ್ನು ಹೈಕಮಾಂಡ್ ಮಾಡಲಿದೆ ಎಂದಿರುವ ನಿಖಿಲ್, ಅಭ್ಯರ್ಥಿ ಯಾರು ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.



