ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ವಾಪಸ್ ಪಡೆದುಕೊಂಡಿದ್ಧಾರೆ. ಕಲ್ಯಾಣನಗರದ ಭಕ್ತರೊಬ್ಬರ ಕಚೇರಿಯಲ್ಲಿ ನಾಮಪತ್ರ ವಾಪಸ್ ಪಡೆಯಲು ಬೇಕಾದ ಪ್ರಕ್ರಿಯೆ ಪೂರ್ಣಗೊಳಿಸಿದ ಸ್ವಾಮೀಜಿ ಅಧಿಕೃತ ಚುನಾವಣಾ ಏಜೆಂಟ್‌ರಾದ ಸಚಿನ್ ಪಾಟೀಲ, ವಕೀಲ ಅಮೃತ ಬಳ್ಳೊಳ್ಳಿ ಅವರನ್ನು ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಕಳುಹಿಸಿ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ ಎಂದು ಆರೋಪಿಸಿದ್ದ ದಿಂಗಾಲೇಶ್ವರ ಸ್ವಾಮೀಜಿ, ಅವರನ್ನು ಸೋಲಿಸಲು ಚುನಾವಣೆಗೆ ನಿಲ್ಲುತ್ತಿದ್ದೇನೆ ಎಂದು ಘೋಷಿಸಿದ್ದರು. ಲಿಂಗಾಯತ ಸ್ವಾಭಿಮಾನದ ಹೆಸರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಮೊದಲೇ ಹೇಳಿದ್ದರೆ ನಾವೇ ಟಿಕೆಟ್ ಕೊಡುತ್ತಿದ್ದೆವು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಹಿರಂಗವಾಗಿಯೇ ಹೇಳಿದ್ದರು. ಯಡಿಯೂರಪ್ಪ ಸೇರಿದಂತೆ ಯಾರ ಮಾತಿಗೂ ಬಗ್ಗದೆ ಇದ್ದ ಸ್ವಾಮೀಜಿ, ಇದ್ದಕ್ಕಿದ್ದಂತೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ನಾಮಪತ್ರ ವಾಪಸ್ʻಗೆ ಯಾರು ಕಾರಣ..?
ಬಸನಗೌಡ ಪಾಟೀಲ ಯತ್ನಾಳರ ಪ್ರಕಾರ ದಿಂಗಾಲೇಶ್ವರ ಶ್ರೀಗಳಿಗೆ ಕಾಂಗ್ರೆಸ್ʻನಿಂದ ಪೇಮೆಂಟ್ ಆಗಿದೆ. ಹೀಗಾಗಿಯೇ ಅವರ ಹಿಂದೆ ಸರದಿದ್ದಾರೆ. ಆದರೆ.. ಇದನ್ನೆಲ್ಲ ನಿರಾಕರಿಸಿರುವ ಸ್ವಾಮೀಜಿಗಳು ಅವರ ಪಕ್ಷ ಹಾಗೂ ಪಕ್ಷದ ನಾಯಕರು ವಿರುದ್ಧ ಮಾತನಾಡಿದ ವ್ಯಕ್ತಿ ಇನ್ನೊಬ್ಬರ ಬಗ್ಗೆ ಮಾತನಾಡಿದರೆ ಅಚ್ಚರಿಪಡಬೇಕಾಗಿಲ್ಲ. ಅವರ ಯೋಗ್ಯತೆ ಇಡೀ ರಾಜ್ಯಕ್ಕೆ ಗೊತ್ತಿದೆ ಸ್ಪರ್ಧೆಗೆ, ಹಿಂಪಡೆಯಲು ಹಣ ಕೊಟ್ಟಿದ್ದೇನೆ ಎನ್ನುವ ವ್ಯಕ್ತಿಯಿದ್ದರೆ ಜನರ ಮುಂದೆ ಬಂದು ಹೇಳಲಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ನಾಯಕರ ಟ್ವೀಟ್ ಮರ್ಮವೇನು?
ಸಿಎಂ ಸಿದ್ದರಾಮಯ್ಯ
ಫಕೀರೇಶ್ವರ ಮಠ ಜಾತ್ಯಾತೀತವಾಗಿದ್ದು, ಅದೇ ಸಿದ್ಧಾಂತದ ಕಾಂಗ್ರೆಸ್‌ಗೆ ನಿಮ್ಮ ಬೆಂಬಲದ ಅಗತ್ಯವಿದೆ. ಅದಕ್ಕಾಗಿ ನಾಮಪತ್ರ ವಾಪಸ್ ಪಡೆದು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದೆ.
ಇಂತಾದ್ದೊಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬಹಿರಂಗವಾಗಿಯೇ ದಿಂಗಾಲೇಶ್ವರ ಸ್ವಾಮೀಜಿಯವರ ಬೆಂಬಲ ಕಾಂಗ್ರೆಸ್ಸಿಗೆ ಎಂಬ ಸಂದೇಶ ನೀಡುತ್ತಿದ್ಧಾರೆ. ಅಂತಹ ಪ್ರತಿಕ್ರಿಯೆಗಳು ಬಿಜೆಪಿಯವರಿಂದ ಬಂದಿಲ್ಲ ಎನ್ನುವುದೂ ಗಮನಾರ್ಹ.
ಡಿಕೆ ಶಿವಕುಮಾರ್ ಮಾತ್ರವಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಮನವಿ ಮಾಡಿದ್ದರು. ದಿಂಗಾಲೇಶ್ವರ ಸ್ವಾಮೀಜಿ ಅವರು ನಾಮಪತ್ರ ವಾಪಸ್ ಪಡೆಯುವ ಮೂಲಕ ಕಾಂಗ್ರೆಸ್ನ ತಂತ್ರ ಸಫಲಾವಾಗಿದ್ದು, ಚದುರುತ್ತಿದ್ದ ಮತಗಳು ಒಂದಡೆಯಾಗಲಿವೆ ಎಂಬುವುದು ಕಾಂಗ್ರೆಸ್ನ ಚಿಂತನೆಯಾಗಿದೆ.
ಆದರೆ.. ನಾಮಪತ್ರ ಹಿಂಪಡೆದಿರುವುದರ ಹಿಂದೆ ಯಾವುದೇ ಪಕ್ಷದ, ಯಾರ ನಾಯಕರ ಕೈವಾಡಗಳಿಲ್ಲ. ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮೊದಲಿನಿಂದಲೂ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ನನ್ನೊಂದಿಗೆ ಸುದೀರ್ಘವಾಗಿ ಮಾತನಾಡಿದ್ದರು ಆದರೆ ನಮ್ಮ ಪೀಠದ ಹಿರಿಯ ಶ್ರೀಗಳು, ನಾಮಪತ್ರ ಹಿಂಪಡೆಯುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಹಿಂದೆ ಪಡೆದಿದ್ದೇನೆ. ನಾನು ಯಾವುದೇ ಪಕ್ಷದ ಪರ ಹಾಗೂ ವಿರುದ್ಧವಿಲ್ಲ. ನನ್ನ ಸಂಬಂಧ ಎರಡು ಪಕ್ಷದ ನಾಯಕರೊಂದಿಗಿದೆ ಎಂದು ತಿಳಿಸಿದ್ದಾರೆ.
ನೇಹಾ ಹಿರೇಮಠ್ ಹತ್ಯೆ ಪರಿಣಾಮ :
ಈ ಮಧ್ಯೆ ಹುಬ್ಬಳ್ಳಿ ಕ್ಯಾಂಪಸ್ಸಿನಲ್ಲಿಯೇ ನಡೆದ ನೇಹಾ ಹಿರೇಮಠ್ ಅವರ ಹತ್ಯೆ ಲಿಂಗಾಯತರನ್ನು ಕೆರಳಿಸಿದೆ. ಗೃಹ ಸಚಿವ ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಸಾಮರಸ್ಯದ ಹೆಸರಿನಲ್ಲಿ ನೇಹಾ ಅವರ ಚಾರಿತ್ರ್ಯಕ್ಕೆ ಕೆಟ್ಟ ಹೆಸರು ತರುತ್ತಿದ್ಧಾರೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಧಾರವಾಡ ಲೋಕಸಭೆ ರಂಗೇರುತ್ತಿದೆ.



