ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಹುದ್ದೆ ಬದಲಾವಣೆ ಕುರಿತು ದೊಡ್ಡ ಮಟ್ಟದ ಚರ್ಚೆ, ಬಣಜಗಳ ನಡೆಯುತ್ತಿವೆ. ಸದ್ಯಕ್ಕೆ ಬಹಿರಂಗವಾಗಿ ನಡೆಯುತ್ತಿರುವ ವಾಕ್ ಸಮರಕ್ಕೆ ಮಲ್ಲಿಕಾರ್ಜುನ ಖರ್ಗೆ ಬ್ರೇಕ್ ಏನೋ ಹಾಕಿದ್ದಾರೆ. ಖರ್ಗೆ ಹೇಳಿಕೆ ನಂತರ ಯಾರೊಬ್ಬರು ಕೂಡಾ ತುಟಿ ಬಿಚ್ಚಿ ಮಾತನಾಡುತ್ತಿಲ್ಲ. ಸ್ವತಃ ಡಿಕೆ ಕೂಡಾ ಪಕ್ಷಕ್ಕಾಗಿ ತಾನೆಷ್ಟು ತ್ಯಾಗ ಮಾಡಿದ್ದೇನೆ ಗೊತ್ತಾ ಎಂದು ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಸರ್ಕಾರ ಮತ್ತು ಪಕ್ಷದ ರಕ್ಷಣೆ ನನ್ನ ಕರ್ತವ್ಯ ಎಂದಿದ್ದಾರೆ. ಆದರೆ ಸಿದ್ದರಾಮಯ್ಯ ಆಪ್ತರು ಇಷ್ಟಕ್ಕೆ ಸುಮ್ಮನಾಗುತ್ತಿಲ್ಲ. ಅವರ ಕೆಂಗಣ್ಣು ಸುರ್ಜೇವಾಲ ವಿರುದ್ಧ ತಿರುಗಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪಕ್ಷಪಾತಿ ಧೋರಣೆ ತೋರಿಸುತ್ತಿದ್ದಾರೆ. ಹೀಗಾಗಿ ಅವರನ್ನು ವಾಪಸ್ ಕರೆಸಿಕೊಳ್ಳಿ ಅನ್ನೋದು ಸಿದ್ದರಾಮಯ್ಯ ಆಪ್ತ ಸಚಿವರು ಹಾಗೂ ಶಾಸಕರ ವಾದ. ಇದು ಕೇಲವ ಒಳಗೊಳಗಿನ ಮಾತಿಗೆ ಸೀಮಿತವಾಗಿಲ್ಲ. ಬದಲಿಗೆ ರಾಹುಲ್ ಗಾಂಧಿ ಅವರಲ್ಲಿಗೆ ದೂರು ಆಗುವುದಕ್ಕೂ ಸಿದ್ಧವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಲ್ಲವಾ.. ರಾಹುಲ್ ಗಾಂಧಿಗೇಕೆ ದೂರು ಎಂದರೆ ಅದು ಕಾಂಗ್ರೆಸ್ ಸಂಸ್ಕೃತಿ. ಈಗ ರಾಜ್ಯ ಬಿಜೆಪಿಯವರು ದೂರು ಕೊಡಲು ಹೋಗುವುದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗಲ್ಲ, ಅಮಿತ್ ಶಾಗೆ. ಅಂಥದ್ದೇ ಪರಿಸ್ಥಿತಿ ಕಾಂಗ್ರೆಸ್ಸಿನಲ್ಲೂ ಇದೆ.
ಡಿ.ಕೆ.ಶಿವಕುಮಾರ್ ವಿರೋಧಿ ಬಣದ ಸಿಟ್ಟು ಇದೀಗ ನೇರವಾಗಿ ಸುರ್ಜೇವಾಲಾ ಅವರ ಮೇಲೆ ತಿರುಗಿದಂತಾಗಿದೆ. ಸುರ್ಜೇವಾಲಾ ಅವರು ಎರಡೂ ಬಣಗಳನ್ನು ಸಮಾನವಾಗಿ ನೋಡುತ್ತಿಲ್ಲ. ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದಾರೆ ಎನ್ನುತ್ತಿರುವ ನಾಯಕರು ಹೇಳುತ್ತಿರುವ ಕೆಲವು ಕಾರಣಗಳೂ ಅಷ್ಟೇ ಇಂಟ್ರೆಸ್ಟಿಂಗ್.
ಹಾಸನದ ಸ್ವಾಭಿಮಾನ ಸಮಾವೇಶದ ಹೆಸರು ಬದಲಾಯಿಸಿದ್ದು, ದಲಿತ ಸಚಿವರ, ಶಾಸಕರ ಔತಣ ಕೂಟಕ್ಕೆ ಬ್ರೇಕ್ ಹಾಕಿದ್ದು ಹಾಗೂ ಬೆಳಗಾವಿಯಲ್ಲೇ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಜತೆ ಪ್ರತ್ಯೇಕ ಸಭೆ ನಡೆಸಿದ್ದ ಸುರ್ಜೇವಾಲಾ ವಿರುದ್ಧ ಸಿದ್ದರಾಮಯ್ಯ ಬಣದ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಸುರ್ಜೇವಾಲಾ ಅವರ ಮೂಲಕ ನಮಗೆ ಲಗಾಮು ಹಾಕಿಸುತ್ತಿದ್ದಾರೆ. ಇದಕ್ಕೆ ಸುರ್ಜೇವಾಲಾ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ರಾಹುಲ್‌ಗಾಂಧಿ ಅವರೊಂದಿಗೆ ಮಾತನಾಡಿ ರಾಜ್ಯ ಉಸ್ತುವಾರಿ ವಾಪಸ್ ಕರೆಸಿಕೊಳ್ಳಲು ತಿಳಿಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಒಬ್ಬ ನಾಯಕನ ಪರ ನಿಂತಿರುವ ಸುರ್ಜೇವಾಲಾ ಅವರನ್ನು ವಾಪಸ್ ಕಳುಹಿಸಬೇಕು ಎಂದು ಸಿದ್ದರಾಮಯ್ಯ ಅವರ ಬಳಿ ಆಪ್ತ ಮುಖಂಡರು ಪ್ರಸ್ತಾಪಿಸಿದ್ದಾರಂತೆ.
ಆದರೆ ಅಂಥದ್ದೇನೂ ಇಲ್ಲ. ಯಾರೂ ದೂರು ಕೊಟ್ಟಿಲ್ಲ ಅಂತಿದ್ದಾರೆ ಸತೀಶ್ ಜಾರಕಿಹೊಳಿ. ಇಷ್ಟಾದರೂ ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ. ಇಷ್ಟಕ್ಕೂ ಕಾಂಗ್ರೆಸ್ ಒಳಗೆ ತಿಕ್ಕಾಟ ಇದೆ ಎನ್ನುವುದನ್ನೂ ಕಾಂಗ್ರೆಸ್ಸಿಗರು ಇನ್ನೂ ಒಪ್ಪಿಲ್ಲ. ಇನ್ನು ಈ ಸುದ್ದಿಯನ್ನು ಹೌದು, ನೀವ್ ಹೇಳಿದ್ದು ಕರೆಕ್ಟು ಅನ್ನುತ್ತಾರಾ ಎನ್ನುವುದು ಮಾಧ್ಯಮಗಳ ವಾದ.



