ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಭಿಮಾನಿಗಳ ಜೊತೆ ಮಗುವಂತೆ ಬೆರೆಯುವ ವ್ಯಕ್ತಿತ್ವದವರು. ಯಾರೇ ಕರೆಯಲಿ.. ಎಲ್ಲಿಗೇ ಕರೆಯಲಿ.. ಸಮಯ, ಬಿಡುವು ಇದ್ದರೆ ಮುಲಾಜಿಲ್ಲದೆ ಬರುತ್ತಾರೆ. ವಿಶೇಷ ಅಂದ್ರೆ ಅಭಿಮಾನಿಗಳಲ್ಲದಿದ್ದರೂ.. ಬರ್ತೇನೆ ಎನ್ನುವಷ್ಟು ಉದಾರಿ. ಅವರನ್ನು ಭೇಟಿ ಮಾಡೋಕೆ ಯಾವುದೇ ಇನ್ʻಫ್ಲುಯೆನ್ಸ್ ಬೇಕಿಲ್ಲ. ಇನ್ನು ಶಿವಣ್ಣ ಅಭಿಮಾನಿಗಳ ಜೊತೆ ನಡೆದುಕೊಳ್ಳೋದನ್ನೂ ಫ್ಯಾನ್ಸ್ ನೋಡಿದ್ದಾರೆ. ಅಂತಹ ಶಿವಣ್ಣ ಈಗ ಇದ್ದಕ್ಕಿದ್ದಂತೆ ಅಭಿಮಾನಿಗಳನ್ನು ದೂರ ನಿಲ್ಲಿ ಅಂತಿದ್ದಾರೆ.
ಖುಷಿಯಾಗಿದ್ದರೆ ಅಭಿಮಾನಿಗಳ ಜೊತೆ ಮಗುವಂತೆ ವರ್ತಿಸುವ ಶಿವಣ್ಣ ಅಷ್ಟೇ ತರಲೆ ಮಾಡ್ತಿರ್ತಾರೆ. ಇನ್ನು ಫ್ಯಾನ್ಸ್ ಕರೆಸಿದ ವೇದಿಕೆಗೆ ಬಂದರೆ, ಅದು ರಿಚ್ ಆಗಿಯೇ ಇರಬೇಕೆಂದೇನೂ ಇಲ್ಲ. ಸಾವಿರಾರು ಜನರೇ ಇರಬೇಕು ಎಂದೂ ಇಲ್ಲ. ಪುಟ್ಟದೊಂದು ಸ್ಟೇಜ್ ಸಿಕ್ಕಿ.. ಶಿವಣ್ಣ ಡ್ಯಾನ್ಸ್ ಎಂದರೆ ಸಾಕು.. ಸ್ಟೆಪ್ ಹಾಕ್ತಾರೆ. ಡೈಲಾಗ್.. ಅಂತ ಕೇಳಿದ್ರೆ ಡೈಲಾಗ್ ಹೊಡೀತಾರೆ. ನಾವು ತಿಂತಿರೋ ಅನ್ನ ಅಭಿಮಾನಿಗಳು ಕೊಟ್ಟಿರೋದು, ಅವರ ಜೊತೆ ಯಾಕೆ ಬಿಲ್ಡಪ್ಪು.. ಅನ್ನೋ ಶಿವಣ್ಣ, ಅಭಿಮಾನಿಗಳು ಅತಿರೇಕದಿಂದ ವರ್ತಿಸಿದಾಗ ಬೈದದ್ದೂ ಇದೆ. ಹೀಗಿದ್ದ ಶಿವಣ್ಣ ಈಗ ತಮ್ಮ ಜೊತೆ ಫೋಟೋ ತೆಗೆಸಿಕೊಳ್ಳೋಕೆ ಬಂದ ಅಭಿಮಾನಿಗಳನ್ನು ದೂರ ನಿಲ್ಲಿ.. ಪ್ಲೀಸ್ ಅಂತಿದ್ದಾರೆ. ಇತ್ತೀಚೆಗೆ ಬಹುಶಃ ಸುಮಾರು ಎರಡು ಅಥವಾ ಮೂರು ತಿಂಗಳಿಂದ ಈಚೆಗೆ ಶಿವಣ್ಣ ಅವರನ್ನು ಭೇಟಿ ಮಾಡಿರುವ, ಅವರ ಜೊತೆ ಫೋಟೋ ತೆಗೆಸಿಕೊಂಡಿರುವ ಅಭಿಮಾನಿಗಳಿಗೆ ಇದು ಅರಿವಿಗೆ ಬಂದಿರುತ್ತೆ. ಅರೆ.. ಶಿವಣ್ಣ ಹಿಂಗೆಲ್ಲ ಇರಲಿಲ್ವಲ್ಲಾ.. ಈಗ.. 60 ದಾಟಿದ ಮೇಲೆ ಅಹಂಕಾರ ಬಂದ್ ಬಿಡ್ತಾ.. ಶಿವಣ್ಣ ಲೆವೆಲ್ ತೋರಿಸ್ತಿದ್ದಾರಾ.. ಎಂದೆಲ್ಲ ಅಂದ್ಕೊಂಡಿರ್ತಾರೆ. ಆದರೆ.. ವಾಸ್ತವ ಅದಲ್ಲ.
ಅಭಿಮಾನಿಗಳ ಜೊತೆ ಅಂತರ ಕಾಯ್ದುಕೊಳ್ತಿರೋ ಶಿವಣ್ಣ, ಅದರ ಹಿಂದೆ ಅಭಿಮಾನಿಗಳ ಆರೋಗ್ಯದ ಕಾಳಜಿ ತೋರಿಸಿದ್ದಾರೆ. ಹೌದು, ಶಿವಣ್ಣ ಅವರಿಗೆ ಇತ್ತೀಚೆಗೆ ಅನಾರೋಗ್ಯವಾಗಿದೆ. ಟ್ರೀಟ್ʻಮೆಂಟ್ ಕೂಡಾ ನಡೀತಿದೆ. ಅದನ್ನು ಖುದ್ದು ಒಪ್ಪಿಕೊಂಡಿರೋ ಶಿವಣ್ಣ, ಅಭಿಮಾನಿಗಳಿಗೆ ಇನ್ʻಫೆಕ್ಷನ್ ಆಗಿ ಬಿಟ್ರೆ.. ಅನ್ನೋ ಕಾಳಜಿಯಿಂದಾಗಿ ಅಂತರ ಕಾಯ್ದುಕೊಳ್ತಿದ್ದಾರೆ.
ನಟ ಶಿವರಾಜ್ ಕುಮಾರ್ ಯೂಟ್ಯೂಬ್ ಚಾನೆಲ್ಲೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ʻʻನನಗೆ ಅನಾರೋಗ್ಯ ಇದೆ. ನಾನು ಸುಳ್ಳು ಹೇಳಲ್ಲ. ನಾನೂ ಮನುಷ್ಯನೇ. ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ. ‘ಟ್ರೀಟ್ಮೆಂಟ್ಗೆ ನಾಲ್ಕು ಸೆಷನ್ ಇದೆ. ಈಗಾಗಲೇ ಎರಡು ಸೆಷನ್ ಆಗಿದೆ. ಇನ್ನೆರಡು ಸೆಷನ್ ಮಾಡಬೇಕಿದೆ. ಒಂದು ಸರ್ಜರಿ ನಡೆಯಬೇಕಿದೆ. ಅಮೆರಿಕದಲ್ಲಿ ಮಾಡೋದಾ ಅಥವಾ ಇಲ್ಲಿ ಮಾಡೋದಾ ಎನ್ನುವ ಬಗ್ಗೆ ಯೋಚನೆ ನಡೆಯುತ್ತಿದೆ. ಅಮೆರಿಕದಲ್ಲಿ ಮಾಡೋದು ಎಂದಾದರೆ ಒಂದು ತಿಂಗಳು ನಾನು ಅಲ್ಲಿಗೆ ಹೋಗಬೇಕಾಗುತ್ತದೆ. ಜನವರಿಯಿಂದ ನಾನು ಫುಲ್ ಫಾರ್ಮ್ ಶಿವಣ್ಣ ಬರ್ತಾರೆʼʼ ಎಂದು ಹೇಳಿಕೊಂಡಿದ್ದಾರೆ ಶಿವಣ್ಣ.
ತಮ್ಮ ಅನಾರೋಗ್ಯದ ವಿಚಾರದ ಬಗ್ಗೆ ನಿರ್ಮಾಪಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇನೆ. ಮುಂದೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಹೇಳಿದ್ದೇನೆ ಎಂದಿರುವ ಶಿವಣ್ಣ, ಈ ನಡುವೆ ಯಾವುದೇ ಕೆಲಸ ನಿಲ್ಲಿಸಿಲ್ಲ. ಜೀಟಿವಿ ಜಡ್ಜ್ ಆಗಿ ನಡೆಸಿಕೊಡುತ್ತಿರುವ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋನಲ್ಲಿ ತಪ್ಪದೆ ಭಾಗಿಯಾಗುತ್ತಿದ್ದಾರೆ. ಭೈರತಿ ರಣಗಲ್ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದಾರೆ. ಆದರೆ ಅಭಿಮಾನಿಗಳ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಶಿವಣ್ಣ, ಅಭಿಮಾನಿಗಳನ್ನು ದೂರ ಇಟ್ಟವರಲ್ಲ. ಆದರೂ ದೂರ ಇರೋದ್ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ನೀಡಿರುವ ಶಿವಣ್ಣ ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳೋಕೆ ಬಂದಾಗ ದೂರ ನಿಲ್ಲಿ ಎನ್ನುತ್ತೇನೆ. ಅವರಿಗೆ ಇನ್ಫೆಕ್ಷನ್ ಆಗಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದೇನೆ ಅಷ್ಟೇ. ಇದೆಲ್ಲ ಇನ್ನೆರಡು ತಿಂಗಳು ಅಷ್ಟೇ ಎಂದು ಹೇಳಿದ್ದಾರೆ.
ಉಳಿದ ಸಮಯದಲ್ಲಿ ನಾವು ಅಭಿಮಾನಿಗಳು ಬೇಕು ಎನ್ನುತ್ತೇವೆ. ಈ ರೀತಿ ವಿಚಾರ ಬಂದಾಗ ಏಕೆ ಅವರನ್ನು ದೂರ ಇಡಬೇಕು? ಈ ಕಾರಣಕ್ಕೆ ನಾನು ಸುಳ್ಳು ಹೇಳೋದು ಬೇಡ ಎಂದು ಗೀತಾ ಅವರ ಬಳಿ ಹೇಳಿದೆ ಎಂದಿರುವ ಶಿವಣ್ಣ, ಜನವರಿ ಹೊತ್ತಿಗೆ ಫುಲ್ ರೆಡಿಯಾಗಿ ಬರ್ತೇನೆ ಎಂದು ವಿಶ್ವಾಸದಿಂದ ಮಾತನಾಡಿದ್ದಾರೆ.
ಇಟ್ಸ್ ಓಕೆ ಶಿವಣ್ಣ.. ಹುಷಾರಾಗಿ ಬನ್ನಿ ಅಂದಿರೋ ಫ್ಯಾನ್ಸ್, ಅಭಿಮಾನಿಗಳ ಬಗ್ಗೆ ಶಿವಣ್ಣ ಇಟ್ಟುಕೊಂಡಿರುವ ಕಾಳಜಿಗೂ ಥ್ಯಾಂಕ್ಸ್ ಹೇಳಿದ್ದಾರೆ. ಅಕಸ್ಮಾತ್.. ಶಿವಣ್ಣ ತಮ್ಮ ಅನಾರೋಗ್ಯದ ವಿಷಯ ಬಹಿರಂಗಪಡಿಸದೇ ಇದ್ದಿದ್ದರೆ.. ಅದು ಬೇರೆ ಕಥೆ. ಈಗ ಶಿವಣ್ಣ ಟೇಕ್ ಕೇರ್ ಎಂದು ಅಭಿಮಾನಿಗಳೇ ಕಾಳಜಿ ತೋರಿಸ್ತಿರೋದು ಹೊಸ ಬೆಳವಣಿಗೆ.



