ಭಜರಂಗಿ 2 ಚಿತ್ರದ ಹಾಡಿನಲ್ಲೊಂದು ಸೀನ್ ಬರುತ್ತೆ. ಹೀರೋಯಿನ್ ಆಗಿರೋ ಭಾವನಾ, ಹೀರೋ ಶಿವಣ್ಣಂಗೆ ಕೇಳೋ ಪ್ರಶ್ನೆ.. ನೀವ್ ಹುಟ್ಟಿದ್ ಮ್ಯಾಲೆ ಸಿಂಪ್ಲಿಸಿಟಿ ಹುಟ್ತಾ.. ಸಿಂಪ್ಲಿಸಿಟಿ ಹುಟ್ಟಿದ್ ಮ್ಯಾಲೆ ನೀವು ಹುಟ್ಟಿದ್ರಾ..? ಆಂಟಿ ಅಂಕಲ್ ಲವ್ ಸ್ಟೋರಿ ನೋಡೋಕಾಗ್ತಿಲ್ಲ ಅಂತಾ ಬ್ಯಾಕ್ʻಗ್ರೌಂಡಿನಲ್ಲಿ ಕುರಿ ಪ್ರತಾಪ್ ಬೆಂಕಿ ಇಟ್ಕೊಳ್ತಾರೆ. ಅದು ಪ್ರೇಕ್ಷಕರಿಗೆ ಇಷ್ಟವಾಗಿತ್ತು ಕೂಡಾ.. ಕಾರಣ ಶಿವಣ್ಣ ಇರೋದೇ ಹಾಗೆ..
ಅಂತಹ ಶಿವಣ್ಣ ಅವರ ಸಿಂಪ್ಲಿಸಿಟಿ ಕಂಡು ಬೆರಗಾಗಿ ಹೋಗುವ ಸರದಿ ಪ್ರಭುದೇವ ಅವರದ್ದು.ಕರಟಕ ದಮನಕ ಚಿತ್ರದಲ್ಲಿ ಪ್ರಭುದೇವ, ಶಿವಣ್ಣ ಅವರ ಜೊತೆಗೆ ನಟಿಸಿದ್ಧಾರೆ. ಚಿತ್ರದ ಹಾಡಿನ ಬಿಡುಗಡೆ ವೇಳೆ ಮಾತನಾಡುತ್ತಿದ್ದ ಪ್ರಭುದೇವ ʻಈ ಸಿನಿಮಾದಲ್ಲಿ ಹೇಗೆ ನಟನೆ ಮಾಡುತ್ತೇನೆ ಅನ್ನೋದು ಗೊತ್ತಿಲ್ಲ. ಆದರೆ, ಶಿವಣ್ಣ ಸರ್ ಕೈಯಲ್ಲಿ ಒಳ್ಳೆಯ ಹುಡುಗ ಅಂತ ಅನಿಸಿಕೊಳ್ಳಬೇಕು ಅಂತಿತ್ತು. ಫಸ್ಟ್ ಶೆಡ್ಯೂಲ್ ಮುಗಿದಿತ್ತು. ಎರಡನೇ ಶೆಡ್ಯೂಲ್ ಶುರುವಾಗಿತ್ತು. ಆಗ ಫೈಟ್ ಮಾಡ್ತಿದ್ರು. ಏನೋ ಕೇಳಬೇಕು ಸಾರ್ ಅಂತ ಅಂದೆ. ಏನು ಪ್ರಭು ಅಂದ್ರು. ನೀವು ಹೆಂಗೆ ಸಾರ್ ಇಷ್ಟು ಒಳ್ಳೆಯವರಾಗಿದ್ದೀರಿ ಅಂದೆ. ಅವರು ಹೇಳಿದ್ರು. ನಂಗೆ ಬೆಳೆಸಿದ್ದೇ ಹಂಗೆ ಪ್ರಭು. ನನ್ನನ್ನು ಸ್ಟಾರ್ ಮಗ ಅಂತ ಬೆಳೆಸಿಲ್ಲ. ಅವರನ್ನು ನೋಡಿದಾಗ ಇದು ಹೆಂಗೆ ಸಾಧ್ಯ ಅಂತ ಅನಿಸುತ್ತೆ.” ಎಂದು ಪ್ರಭುದೇವ ವೇದಿಕೆ ಮೇಲೆ ಶಿವಣ್ಣನ ಬಗ್ಗೆ ಮಾತಾಡಿದ್ದಾರೆ. ಅಂದಹಾಗೆ ಕರಟಕ ದಮನಕ ಚಿತ್ರತಂಡ ರಿಲೀಸ್ ಮಾಡಿರುವ ಟೈಟಲ್ ಸಾಂಗ್ ಸಖತ್ ವೆರೈಟಿಯಾಗಿದೆ.
ಜಗತ್ತಿನಲ್ಲೆಲ್ಲ ಒಳ್ಳೇವ್ರೇ ಇದ್ರೆ ಹೆಂಗೆ.. ಕೆಟ್ಟೋವ್ರೂ ಇರಬೇಕ್ ಅಲ್ವಾ.. ಅನ್ನೋ ಕಾನ್ಸೆಪ್ಟು. ಅತ್ತ ಕಾರ್ಟೂನೂ ಅಲ್ಲದ.. ಇತ್ತ ರಿಯಾಲಿಟಿಯೂ ಅಲ್ಲದ ಆಕ್ಟಿಂಗು.. ಹರಿಕೃಷ್ಣ ಅವರ ಮ್ಯೂಸಿಕ್ಕು.. ಭಟ್ಟರ ಲಿರಿಕ್ಸು.. ಶಂಕರ ಮಹಾದೇವನ್ ಅವರಂತಹ ದಿಗ್ಗಜರ ವಾಯ್ಸು.. ಶಿವಣ್ಣ ಮತ್ತು ಪ್ರಭುದೇವ ಕಾಮಿಡಿ ಲುಕ್ಕಿನಲ್ಲೇ ಹಾಡಿನಲ್ಲಿ ಕಾಣಿಸಿಕೊಳ್ತಾರೆ. ಸರಳವಾಗಿ ಹೇಳಬೇಕೆಂದರೆ ಸಿಂಪಲ್ಲಾದ ಸಾಹಿತ್ಯ ವೈಭವದ ಜೊತೆ ಮೇಕಿಂಗ್ ಕೂಡಾ ಅದ್ಭುತವಾಗಿದೆ.
ಒಂದೂರಲ್ಲ ಒಬ್ಬ ಇದ್ದ..
ಒಂದೂರಲ್ಲಿ ಇಬ್ರು ಇದ್ರು..
ಕರಟಕ ದಮನಕ.. ಅಂತಾ ಶುರುವಾಗೋ ಹಾಡಿನಲ್ಲಿ ಭಟ್ಟರ ಸ್ಟೈಲಿನ ಸಾಹಿತ್ಯವಿದೆ.
ಹತ್ತೂರಲ್ಲಿ ಕಷ್ಟ ಪಟ್ರು.. ಸಾರಿ.. ಹತ್ತೂರನ್ನೇ ಒತ್ತೆ ಇಟ್ರು..
ಭೂಮಿಯೇ ಒಂದು ಬೋಳುತಲೆ.. ಟೊಪ್ಪಿ ಇಟ್ರೆ ತಪ್ಪು ಏನು..
ನರ ಮಾನವ.. ನರಿ ಮಾನವ..
ನಮ್ ಸಮಾಜ ಜೇನುಗೂಡು.. ಕಡ್ಡಿ ಇಟ್ರೆ ತಪ್ಪು ಏನು..?
ಹೊಟ್ಟೆ ಹಸಿವು ಸೃಷ್ಟಿ ಲೀಲೆ.. ಲಡ್ಡು ಕದ್ರೆ ತಪ್ಪು ಏನು..?
ಇಂತಹ ಕೆಲವು ಭಟ್ಟರ ಸಾಹಿತ್ಯವೂ ಇದೆ. ಎಂದಿನಂತೆ ಕೇಳೋಕೆ ಮಜವಾಗಿದೆ. ಕರಟಕ ದಮನಕ ಚಿತ್ರಕ್ಕೆ ಯೋಗರಾಜ್ ಭಟ್ಟರೇ ನಿರ್ದೇಶಕ. ರಾಕ್ʻಲೈನ್ ವೆಂಕಟೇಶ್ ನಿರ್ಮಾಪಕ. ಸಿನಿಮಾ ರಿಲೀಸ್ ಹತ್ತಿರವಾಗಿದೆ.



