ಬಿಜೆಪಿಯಲ್ಲಿ 11 ಜನರಿಗೆ ನೋಟಿಸ್ ಕೊಟ್ಟಿದ್ದೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಪ್ರತಿಯೊಬ್ಬರ ಜೊತೆಯಲ್ಲೂ ಕುಳಿತು ಮಾತನಾಡಿದ್ದಾರೆ. ಅವರು ಮಾತನಾಡುವಾಗ ಇವರಿಲ್ಲ. ಇವರು ಮಾತನಾಡುವಾಗ ಅವರಿಲ್ಲ. ನಳಿನ್ ಕುಮಾರು ಕಟೀಲ್ ಅವರೆನೇ ಎಲ್ಲರನ್ನೂ ಕರೆದು ಮಾತನಾಡಿದ್ದಾರೆ. ಆದರೆ, ರೆಬಲ್ ಆಗಿರುವ ರೇಣುಕಾಚಾರ್ಯ ಕೊನೆಗೂ ಸಭೆಗೆ ಬರಲೇ ಇಲ್ಲ. ಇನ್ನು ಬಂದಿದ್ದ ಯತ್ನಾಳ್, ನಿರಾಣಿ, ಬೊಮ್ಮಾಯಿ, ಸಿಟಿ ರವಿ, ಪ್ರತಾಪ್ ಸಿಂಹ.. ಹೀಗೆ ಎಲ್ಲರೂ ತಾವು ಮಾತನಾಡಿದ್ದು ಸಮರ್ಥನೆ ಮಾಡಕೊಂಡರೇ ಹೊರತು, ಬೇರೇನೂ ಹೇಳಲಿಲ್ಲ. ನಳಿನ್ ಕುಮಾರ್ ಕಟೀಲ್ ಅವರ ಬಳಿ ಉತ್ತರಗಳೂ ಇರಲಿಲ್ಲ. ಇದಿಷ್ಟು ಬಿಜೆಪಿಯ ಸ್ಟೋರಿ.
ಶುಕ್ರವಾರ ತುರ್ತಾಗಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ, ಎಸ್.ಮುನಿರಾಜು, ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಪರಾಜಿತ ಅಭ್ಯರ್ಥಿ ತಮ್ಮೇಶ್ಗೌಡ ಮೊದಲಾದವರನ್ನು ಪಕ್ಷದ ಕಚೇರಿಗೆ ಕರೆಸಿಕೊಂಡ ಹಿರಿಯ ನಾಯಕರು ಮುಖಾಮುಖಿ ಅವರೊಂದಿಗೆ ಚರ್ಚಿಸಿ ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಜತೆಗೆ ಇನ್ನು ಮುಂದೆ ಈ ರೀತಿ ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಾಧ್ಯಕ್ಷ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಎಲ್ಲರೂ ನಾಯಕರ ವಾದ ಆಲಿಸಿದರು. ಆದರೆ ಸಮಾಧಾನ ಪಡಿಸುವ ಕೆಲಸ ಮಾಡಿದ್ದು ಮಾತ್ರ ಯಡಿಯೂರಪ್ಪ.
ಸಭೆಗೆ ಬಂದಿದ್ದ ಯತ್ನಾಳ್ ವಿವರಣೆ ಕೊಟ್ಟರಾದರೂ, ತಮಗೆ ಪಕ್ಷ ನೋಟಿಸ್ ಕೊಟ್ಟಿಲ್ಲ. ನೋಟಿಸ್ ಬಂದಿರುವುದನ್ನು ತೋರಿಸಿದವರಿಗೆ 10 ಲಕ್ಷ ಕೊಡುತ್ತೇನೆ ಎಂದು ಸವಾಲ್ ಹಾಕಿದರು. ಅತ್ತ ಪ್ರತಾಪ್ ಸಿಂಹ, ಸಿಟಿ ರವಿ ನಾವು ಹೇಳಿದ್ರಲ್ಲಿ ತಪ್ಪೇನಿದೆ ಎಂದು ವಾದಿಸಿದರು. ಆದರೆ ಸಭೆಗೆ ಬಾರದೆ ಮಾಧ್ಯಮಗಳಲ್ಲಿಯೇ ಗುಡುಗಿದ ರೇಣುಕಾಚಾರ್ಯ ಯಡಿಯೂರಪ್ಪ ವಿರುದ್ಧ ಮಾತನಾಡಿದವರಿಗೆ ನೋಟಿಸ್ ಇಲ್ಲ. ಪರ ಮಾತನಾಡಿದವರಿಗೆ ಮಾತ್ರ ನೋಟಿಸ್ ಕೊಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು. ಆದರೆ ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಯಾರೂ ಉತ್ತರ ಕೊಟ್ಟಿಲ್ಲ. ಬಿಎಸ್‍ವೈ ವಿರುದ್ಧ ಮಾತನಾಡಿದವರಿಗೆ ರಾಜಮರ್ಯಾದೆ ಕೊಡ್ತೀರ..ಪರ ಮಾತನಾಡಿದವರಿಗೆ ನೋಟಿಸ್ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಕೊನೆಗೆ ರೇಣುಕಾಚಾರ್ಯ ಸೇರಿದಂತೆ ಕೆಲವರ ಬಾಯಿಗೆ ಬೀಗ ಹಾಕುವ ಕೆಲಸವನ್ನು ಯಡಿಯೂರಪ್ಪ ಅವರಿಗೇ ವಹಿಸಿದ್ದಾರೆ ಬಿಜೆಪಿ ನಾಯಕರು.



