ವೀರಶೈವ ಲಿಂಗಾಯತ ಮಹಾಸಭಾ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಜಾತಿ ಗಣತಿ ವರದಿಯನ್ನು ತಿರಸ್ಕರಿಸಲು ಮುಂದಾಗಿದೆ. ಅಲ್ಲದೆ ಸ್ವತಃ ತಮ್ಮ ಒಕ್ಕೂಟದ ಮೂಲಕವೇ ಗಣತಿ ಮಾಡಲು ನಿರ್ಧಾರ ಕೈಗೊಂಡಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ವೀರಶೈವ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ್ ಬಿದರಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸಭೆಯಲ್ಲಿ ಸಮುದಾಯದ ಹಿರಿಯರೆಲ್ಲ ಭಾಗವಹಿಸಿದ್ದು, ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಗಿದೆ.
ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿ ನಡೆದಿದೆ ಹಾಗೂ ವೈಜ್ಞಾನಕ್ಕಾಗಿ ಸಮೀಕ್ಷೆ ನಡೆಸಬೇಕೆಂದು ಒತ್ತಾಯ ಮಾಡಲು ಸಭೆ ತೀರ್ಮಾನಿಸಿದೆ. ವರದಿಯನ್ನು ತಿರಸ್ಕರಿಸುತ್ತಿರುವುದಕ್ಕೆ ನೀಡಿರುವ ಕಾರಣ ಇಷ್ಟೇ. ಇದೇ ಸಮುದಾಯದ ಸಾವಿರಾರು ಜನರ ಮನೆಗೆ ಸಮೀಕ್ಷೆ ಮಾಡುವವರೇ ಬಂದಿಲ್ಲ. ಜನರನ್ನು ಸಂಪರ್ಕ ಮಾಡದೆ, ಜನರಿಂದ ವಿವರವನ್ನೇ ಸಂಗ್ರಹ ಮಾಡದೇ.. ನಡೆಸಿದ್ದೇವೆ ಎಂಬ ವರದಿಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಶಂಕರ್ ಬಿದರಿ ಅವರ ವಾದ.
ಸಭೆಯ ಪ್ರಮುಖ ನಿರ್ಧಾರಗಳು
- ಲಿಂಗಾಯತ ಸಮುದಾಯ ಜಾತಿಗಣತಿಯ ವಿರೋಧಿಗಳಲ್ಲ ಆದರೆ ಕಳೆದ 10 ವರ್ಷಗಳ ಹಿಂದೆ ನಡೆಸಲಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯು ಹಲವು ವೈರುದ್ಯ ಮತ್ತು ಲೋಪಗಳಿಂದ ಕೂಡಿದ್ದು. ಇದನ್ನು ಸರಿಪಡಿಸುವ ಅಗತ್ಯವಿದೆ. ಹೀಗಾಗಿ ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕೆಂದು ಮಹಾಸಭೆ ಆಗ್ರಹಿಸುತ್ತದೆ.
- ರಾಜ್ಯ ಸರ್ಕಾರದ ಪರಿಗಣನೆಯಲ್ಲಿರುವ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸುಗಳು, ಶ್ರೀ ಕಾಂತರಾಜು ಅಧ್ಯಕ್ಷತೆಯಲ್ಲಿ ನಡೆಸಿದ ಸಮೀಕ್ಷಾ ವರದಿಯಾಗಿದ್ದು, ಈ ವರದಿಯು ಅವೈಜ್ಞಾನಿಕ ಮತ್ತು ಅಸಂವಿಧಾನಿಕವಾದುದ್ದರಿಂದ ಸ್ವೀಕಾರಕ್ಕೆ ಅರ್ಹವಲ್ಲವೆಂದು ಮಹಾಸಭೆಯು ಸ್ಪಷ್ಟವಾಗಿ ಅಭಿಪ್ರಾಯಿಸುತ್ತದೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಈ ಕುರಿತಾದ ಯಾವುದೇ ಉದ್ದೇಶಿತ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಮಹಾಸಭೆಯು ಆಗ್ರಹಿಸುತ್ತದೆ.
- ರಾಜ್ಯ ಹಿಂದುಳಿದ ವರ್ಗಗಳ (ಓ.ಬಿ.ಸಿ) ಪಟ್ಟಿಯಲ್ಲಿ ವಿವಿಧ ವರ್ಗಗಳ ಅಡಿಯಲ್ಲಿ ಹಲವಾರು ಲಿಂಗಾಯತ ಉಪಪಂಗಡಗಳ ಹೆಸರಿನ ಜೊತೆಯಲ್ಲಿ “ಲಿಂಗಾಯತ” ಪದವಿಲ್ಲದೇ ಕೇವಲ ಉಪಪಂಗಡಗಳ ಹೆಸರನ್ನು ಮಾತ್ರ ನಮೂದಿಸಲಾಗಿರುತ್ತದೆ. ಆದುದರಿಂದ ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯ ಸಿವಿಲ್ ಅಪೀಲ್ ನಂ. 7241/2021 ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಆಧಾರವಾಗಿರಿಸಿಕೊಂಡು, ಎಲ್ಲಾ ಲಿಂಗಾಯತ ಉಪಪಂಗಡಗಳ ಜೊತೆಯಲ್ಲಿ “ಲಿಂಗಾಯತ” ಎಂದು ನಮೂದಿಸಿದ ಆಯ್ಕೆಯನ್ನು ಈಗಿರುವ ಪಟ್ಟಿಯಲ್ಲಿ, ಉಪಪಂಗಡಗಳಿರುವ ವರ್ಗಗಳನ್ನು ಬದಲಾಯಿಸದೇ ಸರ್ಕಾರದ ಆದೇಶಕ್ಕೆ ಸೂಕ್ತ ತಿದ್ದುಪಡಿ ತರಲು ರಾಜ್ಯ ಸರ್ಕಾರಕ್ಕೆ ಮಹಾಸಭಾ ಮನವಿ ಮಾಡುತ್ತದೆ.
- ವೀರಶೈವ-ಲಿಂಗಾಯತ ಎಲ್ಲಾ ಉಪಪಂಗಡಗಳನ್ನು ಕೇಂದ್ರ ಹಿಂದುಳಿದ ವರ್ಗಗಳ (ಓ.ಬಿ.ಸಿ) ಪಟ್ಟಿಯಲ್ಲಿ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮಾನ್ಯ ಮುಖ್ಯಮಂತ್ರಿಗಳು ಶಿಫಾರಸ್ಸು ಮಾಡಬೇಕೆಂದು ಮಹಾಸಭೆಯು ಮನವಿ ಮಾಡುತ್ತದೆ.
- ಸಾಮಾಜಿಕ ಅಸಮಾನತೆಯ ನಿರಾಕರಣೆ ಮತ್ತು ಸಾಮಾಜಿಕ ನ್ಯಾಯ ಕುರಿತಾದ ಸರ್ಕಾರದ ಎಲ್ಲಾ ಸೈದ್ಧಾಂತಿಕ, ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ವೀರಶೈವ ಲಿಂಗಾಯತ ಸಮುದಾಯ ಮುಂಚೂಣಿಯಲ್ಲಿ ನಿಂತು ಬೆಂಬಲಿಸುತ್ತದೆ ಎಂದು ನಮ್ಮ ಸಮುದಾಯದ ಪರವಾಗಿ ಮಹಾಸಭೆಯ ಅಧ್ಯಕ್ಷನಾಗಿ ನಾನು ತುಂಬು ಹೃದಯದಿಂದ ಆಶ್ವಾಸನೆಯನ್ನು ನೀಡುತ್ತೇನೆ.
ಇನ್ನು ಶಂಕರ್ ಬಿದರಿ ಅವರ ಪ್ರಕಾರ ಸಮಾಜದ ಒಳ ಪಂಗಡಗಳಾದ ನೇಕಾರ, ಮಡಿವಾಳ, ಹೂಗಾರ, ಸಿಂಪಿ, ಮಾದರ ಸಮಗಾರರಿಗೆ ಲಿಂಗಾಯತ ಎಂದು ಬರೆಸುತ್ತಿಲ್ಲ. ಲಿಂಗಾಯತ ಅಂತ ಬರೆದರೆ ಒಬಿಸಿ ಮೀಸಲಾತಿ ಸಿಗ್ತಿಲ್ಲ. ಸುಪ್ರೀಂ, ಹೈಕೋರ್ಟ್ ತೀರ್ಪುಗಳಿವೆ. ಹಿಂದೂ ಮಡಿವಾಳ ಅಂದ್ರೂ ಮೀಸಲಾತಿ ಸಿಗಬೇಕು, ಲಿಂಗಾಯತ ಮಡಿವಾಳ ಅಂದರೂ ಒಬಿಸಿ ಮೀಸಲಾತಿ ಕೊಡಬೇಕು. ವೃತ್ತಿ ಆಧಾರಿತ ರಿಸರ್ವೇಶನ್ ಬೇಕು. ಹಿಂದೂ ಸಾದರ, ಹೂಗಾರಗೆ ಬ್ಯಾಕ್ ವರ್ಡ್ ಆಗ್ತಾರೆ. ಆದರೆ ಲಿಂಗಾಯತ ಸಾದರ, ಹೂಗಾರ ಪಾರ್ವಡ್ ಹೇಗಾಗ್ತಾರೆ? ಹೀಗಾಗಿ ಕಾಂತರಾಜ್ ವರದಿ ಜಾರಿಗೆ ತರುವುದು ಬೇಡ ಎಂದಿದ್ದಾರೆ.
ಜಾತಿ ಗಣತಿ ವಿರೋಧಿಸುತ್ತಿರುವುದಕ್ಕೆ ಬಿದರಿ ಅವರು ನೀಡಿರುವ ಕಾರಣವೇ ಇದು, ಸರ್ಕಾರದಿಂದ ಇನ್ನೂ ನಮ್ಮ ಮನಗೆ ಬಂದಿಲ್ಲ. ನಮ್ಮನ್ನ ಸರ್ವೇ ಮಾಡಿಲ್ಲ ಎಂಬ ಮಾಹಿತಿಗಳಿವೆ. ಹೀಗಾಗಿ ವೈಜ್ಙಾನಿಕವಾಗಿ ವರದಿಯನ್ನ ಮಾಡಲಿ, ಅದನ್ನು ನಾವು ಒಪ್ಪುತ್ತೇವೆ. ನಮ್ಮ ಮಹಾಸಭಾ ತಾಲೂಕು ಮಟ್ಟದಲ್ಲಿ ಸರ್ವೇ ಮಾಡಿಸುತ್ತದೆ ಎಲ್ಲರ ಗಣತಿ ಮಾಡಿ ನಾವೇ ಸಿಡಿ ಮಾಡಿ ಸರ್ಕಾರಕ್ಕೆ ಕೊಡುತ್ತೇವೆ. ಲಿಂಗಾಯತ ಅನ್ನುವುದು ಒಂದು ಪಂಥ. ನಾವು ಈಗ ಪ್ರತ್ಯೇಕಧರ್ಮ ಅಂತ ಹೇಳಲ್ಲ ಎಂದಿದ್ದಾರೆ.
ಸಿಸ್ಟಮೆಟಿಕ್ ಆಗಿ ಮಾಡಲಿ ನಮ್ಮ ಅಭ್ಯಂತರವಿಲ್ಲ. ವೈಜ್ಞಾನಿಕವಾಗಿ ಮಾಡುವುದು ನಾವು ಒಪ್ಪುತ್ತೇವೆ ರಾಜ್ಯ ಸರ್ಕಾರ ಜಾತಿ ಗಣತಿ ಅಂತ ಮಾಡಿಲ್ಲ. ಆರ್ಥಿಕ, ಸಮಾಜಿಕ ಸಮೀಕ್ಷೆ ಅಂತ ಮಾಡಿದ್ದಾರೆ. ಅವರು ಎಲ್ಲಾ ಕಡೆ ಸಮೀಕ್ಷೆ ಮಾಡಿಲ್ಲ ಎಂದೂ ಹೇಳಿದ್ದಾರೆ.



