ಕರಿಮಣಿ ಮಾಲಿಕ ನೀನಲ್ಲ..
ಈ ಹಾಡು.. ಹಾಡಿನ ರೀಲ್ಸ್ ಸಿಕ್ಕಾಪಟ್ಟೆ ಟ್ರೆಂಡ್ ಆಗ್ಬಿಟ್ಟಿದೆ. ಕನಕ ಅನ್ನೋ ವ್ಯಕ್ತಿ ಶುರು ಮಾಡಿದ ರೀಲ್ಸ್ ಮಿಲಿಯನ್ನುಗಟ್ಟಲೆ ಓಡಿತು. ಕನಕ ಶುರು ಮಾಡಿದ ರೀಲ್ಸ್, ಅವರಿಗಿಂತಲೂ ಹೆಚ್ಚಾಗಿ ಬೇರೆ ಬೇರೆಯವರು ಮಾಡಿ ಸಕ್ಸಸ್ ಆಯ್ತು. ಆದರೆ.. ಈಗ ಈ ಹಾಡಿನ ವೊರಿಜಿನಲ್ ಯಜಮಾನ ಕೂಡಾ ಬಂದಿದ್ದಾರೆ. ಅಫ್ʻಕೋರ್ಸ್ ರೀಲ್ಸ್ ಮಾಡೋದಕ್ಕಲ್ಲ, ಹಾಡು ರೀಲ್ಸ್ ಆಗಿ ಟ್ರೆಂಡ್ ಆಗಿದ್ದನ್ನ ಸೆಲಬ್ರೇಟ್ ಮಾಡೋಕೆ.
ಉಪೇಂದ್ರ. ಈ ಸಿನಿಮಾ ರಿಲೀಸ್ ಆದ ಕಾಲಕ್ಕೆ ಸೃಷ್ಟಿಸಿದ್ದ ಕ್ರೇಜುಗಳದ್ದೇ ಒಂದು ಸಿನಿಮಾ ಆಗುವಷ್ಟಿದೆ. ಈ ಸಿನಿಮಾದ ಒಂದು ಹಾಡಿನ ಒಂದು ಸಾಲು ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ. ಏನಿಲ್ಲ.. ಏನಿಲ್ಲ.. ನನ್ನ ನಿನ್ನ ನಡುವೆ ಏನಿಲ್ಲ.. ಹಾಡು ಆಗಿನ ಕಾಲಕ್ಕೆ ಸೃಷ್ಟಿಸಿದ್ದ ಟ್ರೆಂಡೇ ಬೇರೆ. ಒಂದೊಂದು ಸಾಲಿಗೂ ಎರಡೆರಡು ಅರ್ಥ ಬರೋ ಹಾಡು ಉಪೇಂದ್ರ ಸಿನಿಮಾದಂತೆಯೇ ಇತ್ತು. ಆ ಹಾಡು ಈಗ ಅದ್ಯಾಕೆ ಟ್ರೆಂಡ್ ಆಯ್ತು.. ಗೊತ್ತಿಲ್ಲ. ಮೊದಲು ರೀಲ್ಸ್ ಮಾಡಿದ ಕನಕಗೂ ಅದು ಅಷ್ಟೊಂದು ಫೇಮಸ್ ಆಗಿದ್ದೇಕೆ.. ಅರ್ಥವಾಗಿಲ್ಲ.
ಹೊಸ ತಲೆಮಾರಿನ ಕೇಳುಗರು ಕೂಡ ಈ ಗೀತೆಯನ್ನು ಈಗ ಇಷ್ಟಪಡುತ್ತಿದ್ದಾರೆ. ಉಪೇಂದ್ರ ಮತ್ತು ಪ್ರೇಮಾ ಅವರು ಜೋಡಿಯಾಗಿ ಕಾಣಿಸಿಕೊಂಡ ಈ ಹಾಡಿಗೆ ಕಾಡುವ ಗುಣ ಇದೆ. ಸದ್ಯಕ್ಕಂತೂ ಎಲ್ಲೆಲ್ಲೂ ‘ಕರಿಮಣಿ ಮಾಲಿಕ ನೀನಲ್ಲ..’ ಎಂಬ ಸಾಲನ್ನು ಜನರು ಗುನುಗುತ್ತಿದ್ದಾರೆ. 25 ವರ್ಷಗಳ ಹಿಂದೆ ಉಪೇಂದ್ರ ಬರೆದ ಸಾಹಿತ್ಯವನ್ನು ಕೇಳಿ ಹೊಸ ತಲೆಮಾರಿನ ಫ್ಯಾನ್ಸ್ ವಾವ್ ಎನ್ನುತ್ತಿದ್ದಾರೆ. ಇದೇ ಹಾಡಿನ ರಿಮಿಕ್ಸ್ ವರ್ಷನ್ ಕೂಡ ಈಗ ಸಖತ್ ಸೌಂಡು ಮಾಡುತ್ತಿದೆ.
ಉಪೇಂದ್ರ’ ಸಿನಿಮಾದಲ್ಲಿ ‘ಏನಿಲ್ಲ.. ಏನಿಲ್ಲ..’ ಗೀತೆಯನ್ನು ಹಾಡಿದ ಮೂಲ ಗಾಯಕಿ ಪ್ರತಿಮಾ ರಾವ್. ಈಗ ಗುರುಕಿರಣ್ ಅವರು ಈ ಗೀತೆಯ ಒಂದು ಸಾಲನ್ನು ಹಾಡಿದ್ದಾರೆ. ಅದನ್ನು ತಮ್ಮದೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘25 ವರ್ಷಗಳ ಹಿಂದೆ ಸಂಗೀತ ಸಂಯೋಜಿಸಿದ ಹಾಡು. ಈಗಲೂ ಅಷ್ಟೇ ಪ್ರೀತಿ ಇದೆ’ ಎಂದು ಗುರುಕಿರಣ್ ಕ್ಯಾಪ್ಷನ್ ನೀಡಿದ್ದಾರೆ.
ಕರಿಮಣಿ ಮಾಲೀಕ ನೀನಲ್ಲ.. ಹಾಡಿನ ಅರ್ಥ ವಿವರಣೆ ನೋಡ್ತಾ ಹೋದರೆ.. ತಲೆತಿರುಗೋದು ಗ್ಯಾರಂಟಿ. ಅಲ್ಲಿ ಪದ ಪದಗಳನ್ನೂ ಒಡೆದು ಕಥೆ ಹೇಳಲಾಗಿದೆ. ಕರಿಮಣಿ ಮಾಲಿಕ ನೀನಲ್ಲ.. ಎನ್ನುವುದರ ಅರ್ಥ ನೀನು ನನ್ನ ಗಂಡನಲ್ಲ ಎಂದು ಬಂದರೆ.. ಅದೇ ಪದವನ್ನ ಒಡೆದು ಕರಿಮಣಿ ಮಾಲಿಕ ನೀ.. ನಲ್ಲ.. ಎಂದು ಹೇಳಿದಾಗ ನೀನೇ ನಲ್ಲ.. ನನ್ನ ಕರಿಮಣಿಗೆ ಒಡೆಯ, ತಾಳಿ ಕಟ್ಟಿದ ಗಂಡ ಎಂದು ಅರ್ಥ ಬರುತ್ತದೆ. ಈ ಹಾಡಿನ ವಿಶೇಷತೆಯೇ ಇದು.



