ಬೆಂಗಳೂರು ಅಭಿವೃದ್ಧಿಗೆ ಅನುದಾನ ಕೇಳಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಶಾಸಕರ ನಿಯೋಗ, ಸಿಎಂ ಕಾವೇರಿ ನಿವಾಸಕ್ಕೆ ಆಗಮಿಸಿ ಅನುದಾನ ಹಂಚಿಕೆ, ಗ್ರೇಟರ್ ಬೆಂಗಳೂರು ಮಸೂದೆಗೆ ಸಂಬಂಧಿಸಿದಂತೆ ತಮ್ಮ ಪ್ರಮುಖ ಪ್ರಮುಖ ಬೇಡಿಕೆಗಳನ್ನು ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಹಿಂದೆ ನಮ್ಮ ಸರಕಾರ ಸಿದ್ದರಾಮಯ್ಯನವರಿಗೆ ವರ್ಷಕ್ಕೆ 100 ಕೋಟಿ ಅನುದಾನವನ್ನು ಕೊಟ್ಟಿತ್ತು ಎಂದು ಗಮನ ಸೆಳೆದರು. ಈಗ ಪ್ರತಿ ಕ್ಷೇತ್ರಕ್ಕೆ 120ರಿಂದ 150 ಕೋಟಿ ಕೊಡಲು ಕೇಳಿದ್ದಾಗಿ ತಿಳಿಸಿದ ವಿಜಯೇಂದ್ರ ಅವರ ಜೊತೆ ಆರ್. ಅಶೋಕ್ ಕೂಡಾ ಇದ್ದರು.
ಅರೆ.. ಇದರಲ್ಲೇನು ವಿಶೇಷ ಎಂದಿರಾ.. ಹೌದು, ವಿಶೇಷ ಇದೆ. ಏಕೆಂದರೆ ಆರ್. ಅಶೋಕ್, ವಿಜಯೇಂದ್ರ ಕರೆದ ಸಭೆಗಳಿಗೆ ಆಬ್ಸೆಂಟ್ ಆಗ್ತಿದ್ದಾರೆ. ಈ ಮನವಿ ಸಲ್ಲಿಸುವ ಸಂಬಂಧ ವಿಜಯೇಂದ್ರ ಅವರು ಇತ್ತೀಚೆಗೆ ಬೆಂಗಳೂರು ಶಾಸಕರು ಹಾಗೂ ಸಂಸದರ ಸಭೆ ಕರೆದಿದ್ದರು. ಆ ಸಭೆಗೆ ಆರ್.ಅಶೋಕ್, ಬೆಂಗಳೂರಿನಲ್ಲೇ ಇದ್ದರೂ ಹೋಗಿರಲಿಲ್ಲ. ಯಾವುದೋ ಕಾರ್ಯಕ್ರಮದ ನೆಪ ಹೇಳಿ ತಪ್ಪಿಸಿಕೊಂಡಿದ್ದರು.
ಇನ್ನು ಈಗಲೂ ಅಷ್ಟೇ, ವಿಜಯೇಂದ್ರ ಅವರು ಎಲ್ಲ ಶಾಸಕರೂ ಒಟ್ಟಿಗೇ ಹೋಗಿ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸೋಣ ಎಂದರೆ, ಅಲ್ಲಿಯೂ ಆರ್.ಅಶೋಕ್ ಆಬ್ಸೆಂಟ್. ನೇರವಾಗಿ ಸಿಎಂ ಕಚೇರಿಗೇ ಬಂದ ಆರ್.ಅಶೋಕ್, ಕಮಿಟಿಯಲ್ಲೇನೋ ಇದ್ದರು. ಆದರೆ ಈ ಹಂತದಲ್ಲಿ ಆರ್.ಅಶೋಕ್, ವಿಜಯೇಂದ್ರ ಜೊತೆಗೆ ಅಂತರ ಕಾಯ್ದುಕೊಳ್ತಿದ್ದಾರೆ ಎನ್ನುವುದು ಪಕ್ಷದ ಮೂಲಗಳ ಮಾಹಿತಿ.
ವಿಜಯೇಂದ್ರ ಅವರು ವರಿಷ್ಠರ ಎದುರು ಆರ್.ಅಶೋಕ್ ಕುರಿತು ದೂರು ಕೊಟ್ಟಿದ್ದಾರೆ ಎನ್ನುವುದು ಆರ್.ಅಶೋಕ್ ಅಸಮಾಧಾನಕ್ಕೆ ಕಾರಣ. ಅಶೋಕ್ ಅವರು ವಿಧಾನಸಭೆಯಲ್ಲಿ ಎಲ್ಲರನ್ನೂ ಒಟ್ಟಿಗೇ ತೆಗೆದುಕೊಂಡು ಹೋಗುತ್ತಿಲ್ಲ. ಶಾಸಕರಿಗೆ ಮಾಹಿತಿಯೇ ಇರುವುದಿಲ್ಲ. ಇದ್ದಕ್ಕಿದ್ದಂತೆ ಪ್ರತಿಭಟನೆ, ವಾಕ್ ಔಟ್ ಎಂದು ಬಿಡುತ್ತಾರೆ. ಗಂಭೀರ ವಿಷಯಗಳನ್ನು ತೇಲಿಸುತ್ತಾರೆ. ಸಣ್ಣ ವಿಷಯಗಳಿಗೆ ಪ್ರತಿಭಟನೆಯ ಕಹಳೆ ಮೊಳಗಿಸುತ್ತಾರೆ. ಜನರ ದೃಷ್ಟಿಯಲ್ಲಿ ಇದು ನಗೆಪಾಟಲಿಗೀಡಾಗುತ್ತಿದೆ ಎಂದು ಒಂದು ವರದಿ ಹೈಕಮಾಂಡ್ ವರಿಷ್ಠರ ಮುಂದೆ ಹೋಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯೇಂದ್ರ, ಸ್ವತಃ ದೂರು ಹೇಳದೇ ಹೋದೂ.. ಆ ವರದಿ ಸುಳ್ಳು ಎಂದು ಹೇಳಿಲ್ಲ. ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎನ್ನುವುದು ಸಾಮ್ರಾಟರ ಅಸಾಮಾಧಾನಕ್ಕೆ ಕಾರಣ. ಇದು ಪಕ್ಷದ ಸಭೆಗಳಲ್ಲಿ ವ್ಯಕ್ತವಾಗುತ್ತಿದೆ.
ಇನ್ನು ಬಿಜೆಪಿಯ ಅತೃಪ್ತ ಶಾಸಕ ಬಸನಗೌಡ ಯತ್ನಾಳ್ ಬಿ.ವೈ. ವಿಜಯೇಂದ್ರ ವಿರುದ್ಧ ಲಿಂಗಾಯತ ದಾಳವನ್ನು ಉರುಳಿಸಿದ್ದು, ಈ ಮೂಲಕ ಇಬ್ಬರೂ ನಾಯಕರ ನಡುವೆ ಲಿಂಗಾಯತ ಸಮರ ಶುರುವಾಗಿದೆ. ಬಿ.ಎಸ್. ಯಡಿಯೂರಪ್ಪನವರ ಆಪ್ತರು, ನೆಲಮಂಗಲ, ದಾಬಸ್ ಪೇಟೆ ಭಾಗದ ವೀರಶೈವ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ. ಮಾರ್ಚ್ 1ರಂದು ದಾವಣಗೆರೆ ಬೈಪಾಸ್ನಲ್ಲಿ, ಚಿತ್ರದುರ್ಗ, ಹಾವೇರಿ ಮುಖಂಡರ ಜೊತೆ ಮೀಟಿಂಗ್ ಮಾಡಲಿದ್ದಾರೆ. ಮಾರ್ಚ್ 4ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ದೊಡ್ಡ ಸಭೆ ಸೇರೋಕೆ ನಿರ್ಧಾರ ಮಾಡಿದ್ದಾರೆ. ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಶಂಕರ ಪಾಟೀಲ್ ಮುನೇನಕೊಪ್ಪ ನೇತೃತ್ವದಲ್ಲಿ ಸಭೆ ಆಯೋಜನೆ ಮಾಡಲಾಗಿದೆ. ಈ ಸಭೆಯನ್ನು ಬಿಜೆಪಿ ವರಿಷ್ಠರು ಹೇಗೆ ನಿಭಾಯಿಸಲಿದ್ದಾರೆ ಎನ್ನುವುದು ಕುತೂಹಲಕಾರಿ.
ಬ್ರೇಕ್ ಹಾಕುವುದಕ್ಕೆ ಹೋದರೆ, ಯತ್ನಾಳ್ ವಿಷಯದಲ್ಲಿ ವಹಿಸಿದ್ದ ಮೌನವನ್ನು ಪ್ರಶ್ನೆ ಮಾಡುತ್ತಾರೆ. ಬ್ರೇಕ್ ಹಾಕದೇ ಹೋದರೆ.. ಈಗಾಗಲೇ ಛಿದ್ರವಾಗಿರುವ ಪಕ್ಷವ ಗೌರವವನ್ನು ಹರಾಜಿಗಿಟ್ಟಂತೆ ಆಗುತ್ತದೆ. ಅಡಕತ್ತರಿಯಲ್ಲಿರೋದು ಹೈಕಮಾಂಡ್.



