ನಟ, ನಿರ್ಮಾಪಕರಾಗಿದ್ದ ಕೆ.ಶಿವರಾಮ್, ಅದೆಲ್ಲಕ್ಕಿಂತ ಹೆಚ್ಚಿನದಾಗಿ ಐಎಎಸ್ ಅಧಿಕಾರಿಯಾಗಿ ಜನಪ್ರಿಯರಾದವರು. ಕನ್ನಡದಲ್ಲಿಯೇ ಐಎಎಸ್ ಬರೆದು ತೇರ್ಗಡೆಯಾಗಿದ್ದ ಕೆ.ಶಿವರಾಮ್, ಅದರಿಂದಾಗಿಯೇ ಸುದ್ದಿಯಲ್ಲಿದ್ದರು. ನಂತರ ರಾಜಕೀಯಕ್ಕೂ ಬಂದಿದ್ದ ಶಿವರಾಮ್, ಕಾಂಗ್ರೆಸ್, ಜೆಡಿಎಸ್ ಸೇರಿದ್ದರು. ಕೊನೆಯ ದಿನಗಳಲ್ಲಿ ಬಿಜೆಪಿಯಲ್ಲಿದ್ದ ಶಿವರಾಂ, ನಿಧನರಾದ ನಂತರವೂ ಸುದ್ದಿಯಾಗಿದ್ದಾರೆ.
ಕೆ ಶಿವರಾಮ್ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಶಿವರಾಮ್ ಅವರ ಪತ್ನಿ ವಾಣಿ ಶಿವರಾಂ ಸಿಟ್ಟಾಗಿದ್ದಾರೆ. ಇಲ್ಲಿಗೆ ಬಂದು ನೋಡಲು ಅವರಿಗೆ ಯಾವ ಅಧಿಕಾರವೂ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶಗೊಂಡಿದ್ಧಾರೆ. ಸಂಸದ ಡಿಕೆ ಸುರೇಶ್ ಅವರ ವಿರುದ್ಧವೂ ಆಕ್ರೋಶಗೊಂಡಿದ್ದಾರೆ.
ಚಿತ್ರರಂಗದ ಹಲವು ಗಣ್ಯರು, ಇತರೆ ರಾಜಕೀಯ ಪಕ್ಷಗಳ ಮುಖಂಡರು ಕೂಡಾ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದ್ದಾರೆ. ಆದರೆ ಆಕ್ರೋಶ ಹೊರಹಾಕಿರುವುದು ಸರ್ಕಾರದ ಪ್ರಭಾವಿ ಸಚಿವರ ವಿರುದ್ಧ ಹಾಗೂ ಸಂಸದರ ವಿರುದ್ಧ. ಹೀಗೇಕೆ ಎಂದು ಪ್ರಶ್ನೆ ಮಾಡಿದರೆ.. ಸರ್ಕಾರಿ ಅಧಿಕಾರಿಗಳು ಸೃಷ್ಟಿಸಿದ ವಿನಾಕಾರಣ ಗೊಂದಲದ ವಿಷಯ ಹೊರಬಿದ್ದಿದೆ.
ಅಂತ್ಯಕ್ರಿಯೆ ಎಲ್ಲಿ ಮಾಡಬೇಕು ಅನ್ನೋದು ಬೆಳಗ್ಗೆಯಿಂದ ಸಂಜೆವರೆಗೆ ಗೊಂದಲನವನ್ನೇ ಸೃಷ್ಟಿಸಿತ್ತು. ವಿಶ್ವೇಶ್ವರ ಲೇಔಟ್ನಲ್ಲಿರುವ ಛಲವಾದಿ ಮಹಾಸಭಾದ ಅವರಣದಲ್ಲೇ ಆಗಬೇಕು ಎಂದು ಕುಟುಂಬಸ್ಥರು ಒತ್ತಾಯ ಪಡಿಸಿದ್ದರು. ಛಲವಾದಿ ಸಮುದಾಯದ ದಲಿತರಿಗಾಗಿ ಶಿವರಾಮ್ ಮಾಡಿರುವ ಸೇವೆಯನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದ್ದರು. ಸಿಎಂ ಸಿದ್ದರಾಮಯ್ಯ ಕೂಡಾ ಹಾಗೆಯೇ ಮಾಡಿ ಎಂದು ಹೇಳಿದ್ದರಂತೆ. ಆದರೆ, ಅಧಿಕಾರಿಗಳಿಂದ ಆದೇಶ ಪ್ರತಿ ಸಿಗಲೇ ಇಲ್ಲ. ಹೀಗಾಗಿ ಕೊನೆಗೆ ತೋಟದ ಮನೆಯಲ್ಲಿಯೇ ಶಿವರಾಮ್ ಅವರ ಅಂತ್ಯಕ್ರಿಯೆ ನೆರವೇರಿದೆ.
ಸಚಿವರು, ಸಂಸದರು ಸ್ವಲ್ಪ ಆಸಕ್ತಿ ವಹಿಸಿದ್ದರೆ ಹೀಗಾಗುತ್ತಿರಲಿಲ್ಲ ಎನ್ನುವುದು ಅವರ ಪತ್ನಿ ವಾಣಿ ಶಿವರಾಂ ಅವರ ಆಕ್ರೋಶಕ್ಕೆ ಕಾರಣ.



