ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ಹೋರಾಟ, ವೈಯಕ್ತಿಕ ದಾಳಿಗೆ ಸೀಮಿತವಾಗುತ್ತಿದೆಯೇ? ಗೌರವದ ಹಂತವನ್ನು ದಾಟುತ್ತಿದೆಯೇ.. ಇತ್ತೀಚಿನ ಈ ಇಬ್ಬರೂ ನಾಯಕರ ಹೇಳಿಕೆ, ಟ್ವೀಟ್`ಗಳನ್ನು ನೋಡಿದರೆ ಹಾಗೆ ಅನ್ನಿಸುವುದು ಸಹಜ. ಸಚಿವ ಚೆಲುವರಾಯಸ್ವಾಮಿ ವಿಷಯದಲ್ಲಿ ಶುರುವಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವಿನ ಹೋರಾಟ.. ಸದನದಲ್ಲಿಯೇ.. ಏಕವಚನದಲ್ಲಿಯೇ ನಡೆದಿತ್ತು. ಅದಾದ ಮೇಲೆ ಮಾಧ್ಯಮಗಳ ಎದುರು ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್/ಫೇಸ್`ಬುಕ್ಕಿನಲ್ಲಿ ನಡೆಯುತ್ತಿದೆ.
ಏನಿದು ಚೆಲುವರಾಯಸ್ವಾಮಿ ವಾರ್?
ಸಚಿವ ಚೆಲುವರಾಯ ಸ್ವಾಮಿ ವಿರುದ್ಧ ಇತ್ತೀಚೆಗೆ ಒಂದು ಪತ್ರ ಹರಿದಾಡಿ ಭಾರಿ ಸದ್ದು ಮಾಡಿತ್ತು. ಕೃಷಿ ಸಚಿವರು ದುಡ್ಡು ಕೇಳುತ್ತಿದ್ದಾರೆ ಎಂದು ದೂರಲಾಗಿತ್ತು. ಪತ್ರ ರಾಜ್ಯಪಾಲರಿಗೂ ತಲುಪಿ, ಅವರು ತನಿಖೆಗೆ ಆದೇಶ ಕೊಟ್ಟಿದ್ದಾರೆ. ಇತ್ತ ಆ ಹೆಸರಿನ ಅಧಿಕಾರಿಗಳೇ ಇಲ್ಲ ಎಂದು ಗೊತ್ತಾಗಿ, ಚೆಲುವರಾಯಸ್ವಾಮಿ ಎದ್ದು ಕುಳಿತಿದ್ದಾರೆ. ಸಿದ್ದರಾಮಯ್ಯ ಸಿಐಡಿ ತನಿಖೆ ಎನ್ನುತ್ತಿರುವಾಗಲೇ, ಅದನ್ನು ಮಾಡಿಸಿರುವುದೇ ಕುಮಾರಸ್ವಾಮಿ ಎಂದು ಪರೋಕ್ಷವಾಗಿ ಹೇಳಿಯೇ ಬಿಟ್ಟಿದ್ದಾರೆ ಕುಮಾರಸ್ವಾಮಿ. ಅತ್ತ ಈಶ್ವರಪ್ಪ ಸೇರಿದಂತೆ ಕೆಲ ಹಿರಿಯ ನಾಯಕರೇ ಚೆಲುವರಾಯಸ್ವಾಮಿ ರಾಜೀನಾಮೆ ಕೇಳುತ್ತಿದ್ದಾರೆ.
ಕುಮಾರಸ್ವಾಮಿ ಟ್ವೀಟ್ ವಾರ್
ಮಂಡ್ಯ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂಬರ್ಥದಲ್ಲಿ ರಾಜ್ಯಪಾಲರಿಗೆ ದೂರು ನೀಡಿರುವ ಪತ್ರದ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ತನಿಖೆಗೆ ಮೊದಲೇ ‘ಇದೊಂದು ನಕಲಿ ಪತ್ರ’ ಎಂಬ ಹೇಳಿಕೆ ನೀಡಿದ್ದಾರೆ. ಸಿಎಂ ಹೇಳಿಕೆ ವಿರುದ್ಧ ಎಚ್ಡಿಕೆ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಮಂತ್ರಿಗಳ ಮಾನಗೇಡಿ ಕೃತ್ಯಗಳನ್ನೂ ಸಮರ್ಥನೆ ಮಾಡಿಕೊಳ್ಳುವ ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ!! ಸಚಿವರ ಸುಲಿಗೆಯನ್ನೇ ಸಿಗ್ಗಿಲ್ಲದೆ ಸಮರ್ಥನೆ ಮಾಡಿಕೊಳ್ಳುವ ‘ಸಿದ್ದಕಲೆ’ ಅಸಹ್ಯ ಮತ್ತು ವಾಕರಿಕೆ ತರಿಸುತ್ತಿದೆ. ನಕಲಿ ಪತ್ರ ಎಂದಾದರೆ ರಾಜ್ಯಪಾಲರ ಕಾರ್ಯಾಲಯ ನಕಲಿ (!?) ಪತ್ರದ ಮೇರೆಗೆ ಕ್ರಮ ಜರುಗಿಸಿ ಎಂದು ಷರಾ ಬರೆದಿದೆಯೇ? ಸುಳ್ಳಿನ ಪತ್ರಕ್ಕೆ ಮಾನ್ಯ ರಾಜ್ಯಪಾಲರು ಸ್ಪಂದಿಸಿದ್ದಾರೆಯೇ? ರಾಜಧರ್ಮದ ಪ್ರವಚನಕಾರರೇ ರಾಜಭವನದ ಪಾವಿತ್ರ್ಯವನ್ನೇ ಶಂಕಿಸುವುದು ತರವೇ? ಸ್ವಯಂ ಘೋಷಿತ ನಕಲಿ ಸಂವಿಧಾನ ತಜ್ಞನಿಗೆ ಇದು ಭೂಷಣವಲ್ಲ ಎಂದು ಹರಿಹಾಯ್ದಿದ್ದಾರೆ.
ಕಂಡೋರ ಭುಜದ ಮೇಲೆ ಬಂದೂಕಿಟ್ಟು ಇನ್ನೊಬ್ಬರ ರಾಜಕೀಯ ಜೀವನ ಎತ್ತಿಬಿಡುವ ನಿಮ್ಮಂಥ ‘ಎತ್ತುವಳಿ ಗಿರಾಕಿ’ಗೆ ನಕಲಿಪತ್ರಗಳ ಸೃಷ್ಟಿ ಬೆಣ್ಣೆ ಕಡಿದಷ್ಟೇ ಸಲೀಸು. ಮತ್ತೊಬ್ಬರ ಶ್ರಮದ ಬೆವರೇ ನಿಮ್ಮ ಸ್ವಾರ್ಥ ರಾಜಕಾರಣಕ್ಕೆ ಹವಿಸ್ಸು ಎಂದು ಕುಟುಕಿರುವ ಎಚ್ಡಿಕೆ ಅವರು ಮುಂದುವರಿದು, ನಿಮ್ಮ ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕರೇ ಬರೆದ ಪತ್ರವನ್ನೇ ನಕಲಿ ಎಂದು ಬಿಂಬಿಸಿದ ‘ನಕಲಿರಾಮ’ನ ಉಪ್ಪುಹುಳಿ ಖಾರದ ಬಗ್ಗೆ ನನಗೆ ಗೊತ್ತಿಲ್ಲದ್ದೇನಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಉಗಿದು ಉಪ್ಪಾಕಿದ ಮೇಲೆ ಆ ನಕಲಿ ಪತ್ರ ‘ಅಸಲಿ’ಯಾದ ಕಥೆಯ ಹಕೀಕತ್ತು ಏನಿರಬಹುದು ಸಿಎಂ ಸಾಹೇಬರೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ನಿಮ್ಮ ರಾಜಕೀಯ ಬದುಕಿಗೆ ಬ್ಲ್ಯಾಕ್’ಮೇಲೇ ಬಂಡವಾಳ. ಗೃಹ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ‘ಅಪ್ಪಯ್ಯ ಮತ್ತು ಅತೀಂದ್ರನ ಆಟಾಟೋಪ’ ಕಂಡು ಹೌಹಾರಿದವರು ಯಾರು? ವರ್ಗಾವಣೆ ಪಟ್ಟಿಗೆ ಅಲ್ಲಿ ಬಿದ್ದ ಟಿಕ್ಕುಗಳ ಲೆಕ್ಕ ಹೇಳಬೇಕಾ ಟಿಕ್ ಟಿಕ್ ಸಿದ್ದರಾಮಯ್ಯ? ಎಂದು ಪ್ರಶ್ನೆಗಳ ಸುರಿಮಳೆಗೈದು ವಾಗ್ದಾಳಿ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆಲ್ಲ ಉತ್ತರ ನೀಡಿರುವ ಸಿದ್ದರಾಮಯ್ಯ ಇತ್ತೀಚೆಗೆ ನೀವು ನನ್ನ ವಿರುದ್ಧ ಮಾಡುತ್ತಿರುವ ವೈಯಕ್ತಿಕ ಮಟ್ಟದ ಆರೋಪಗಳು ಮತ್ತು ಬಳಸುತ್ತಿರುವ ಭಾಷೆಯನ್ನು ಗಮನಿಸಿದರೆ ಚುನಾವಣಾ ಸೋಲಿನ ಆಘಾತದಿಂದಾಗಿ ನೀವು ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡಂತೆ ಕಾಣುತ್ತಿದೆ. ಶೀಘ್ರವಾಗಿ ಗುಣಮುಖರಾಗಿ ಎಂದಷ್ಟೇ ನಾನು ಹಾರೈಸಬಲ್ಲೆ. ಇನ್ನು ನೀವು ಪ್ರಸ್ತಾಪಿಸಿರುವ ಶಾಸಕರ ಪತ್ರದ ನಕಲಿ-ಅಸಲಿ ವಿಚಾರ ಶೀಘ್ರದಲ್ಲಿಯೇ ತನಿಖೆಯಿಂದ ಹೊರಬೀಳಲಿದೆ ಎಂದು ಉತ್ತರ ಕೊಟ್ಟಿದ್ದಾರೆ ಸಿದ್ದರಾಮಯ್ಯ.
ಕುಮಾರಸ್ವಾಮಿ ಬಳಸಿರುವ ನಕಲಿರಾಮ, ಸಿದ್ಧಕಲೆ, ಅಪ್ಪಯ್ಯ ಮತ್ತು ಅತೀಂದ್ರ, ಟಿಕ್ ಟಿಕ್ ರಾಮಯ್ಯ.. ಮುಂತಾದ ಪದಗಳು ಚರ್ಚೆಯಾಗುತ್ತಿವೆ. ಇತ್ತ ಕಾಂಗ್ರೆಸ್ ಟ್ವೀಟ್`ಗಳೂ ಭರ್ಜರಿಯಾಗಿಯೇ ಇವೆ. ರಾಜಕೀಯ ಬೇರೆಯದೇ ಟರ್ನ್ ತೆಗೆದುಕೊಂಡಿದೆ.



