ಕುಡುಕರಲ್ಲಿ ಹೆಚ್ಚಿನವರು.. ಅದೂ ಹೊಸದರಲ್ಲಿ ಬಿಯರ್ ಕುಡಿಯುವುದಕ್ಕೆ ಆದ್ಯತೆ ಕೊಡ್ತಾರೆ. ವಿಸ್ಕಿ, ವೋಡ್ಕಾಗೆ ಹೋಲಿಸಿದರೆ ಕಡಿಮೆ ಆಲ್ಕೋಹಾಲ್ ಪ್ರಮಾಣ ಇರುತ್ತದೆ. ವಿಸ್ಕಿಯಂತೆ ನೇರವಾಗಿ ಕಿಕ್ ಏರುವುದಿಲ್ಲ ಎಂಬ ನಂಬಿಕೆಯೂ ಇದಕ್ಕೆ ಕಾರಣ. ಇನ್ನು ಬಿಯರ್ ಕುಡಿದರೆ ಹೆಚ್ಚು ಕಿಕ್ ಇರುವುದಿಲ್ಲ ಎನ್ನುವುದರ ಜೊತೆಗೆ, ಬಿಯರ್ ಕುಡಿದರೆ ಕಿಡ್ನಿ ಸ್ಟೋನ್ ಕರಗುತ್ತವೆ ಎಂಬ ಕುಡುಕರ ನಂಬಿಕೆಯೂ ಕಾರಣ. ಬಿಯರ್ ಎಂದರೆ ಆಲ್ಕೋಹಾಲ್ ಅಲ್ಲವೇ ಅಲ್ಲ ಎಂದು ವಾದಿಸುವವರೂ ಇದ್ದಾರೆ. ಆದರೆ ಕುಡಿದರೆ ಕಿಕ್ ಏರೋದು ಖಚಿತ.
ಗೋಧಿ, ಬಾರ್ಲಿ ಮುಂತಾದ ಧಾನ್ಯಗಳಿಂದ ಸಿದ್ಧವಾಗುವ ಆಲ್ಕೋಹಾಲ್ ತಯಾರಿಯೇ ವಿಶೇಷ. ಈ ಧಾನ್ಯಗಳನ್ನು ಹುರಿದು ಪುಡಿ ಮಾಡಿ, ನೀರಿನಲ್ಲಿ ನೆನೆಸಿಟ್ಟು, ಅದರ ನೈಸರ್ಗಿಕ ಸಕ್ಕರೆಯಂಶವನ್ನು ಬೇರ್ಪಡಿಸಿ, ಸಂಸ್ಕರಿಸಿ, ಯೀಸ್ಟ್ ಸೇರಿಸಿ ಬಿಯರ್ ಸಿದ್ಧ ಮಾಡುತ್ತಾರೆ. ಹಾಗೆ ನೋಡಿದರೆ ವಿಸ್ಕಿಗಿಂತ ಬಿಯರ್ ದುಬಾರಿ ಎನ್ನಬಹುದು. ಏಕೆಂದರೆ ವಿಸ್ಕಿ ಕುಡಿಯುವವರು ವಿಸ್ಕಿ ಪ್ರಮಾಣಕ್ಕೆ ಹೋಲಿಸಿದರೆ ಬಿಯರ್ ಜಾಸ್ತಿ ಕುಡಿಯುತ್ತಾರೆ. ಹಾಗೆ ಕುಡಿಯುತ್ತ ಕುಡಿಯುತ್ತ ಕುಡಿಯುತ್ತಲೇ ಡುಮ್ಮನಾಗಿ ಬಿಡ್ತಾರೆ.
ಬಿಯರ್ ಕುಡುಕರು ಡುಮ್ಮನಾಗೋದು ಯಾಕೆ..?
ಬಿಯರ್ ಕುಡಿದರೆ ಡೊಳ್ಳು ಹೊಟ್ಟೆ ಡಾನ್ ಆಗುವುದು ಖಚಿತ. ಆಲ್ಕೋಹಾಲ್ ಪೇಯಗಳ ಕ್ಯಾಲರಿಗಳು ಹೆಚ್ಚು. ಅವೆಲ್ಲ ಶರೀರಕ್ಕೆ ಬೇಕಾಗುವಂಥ ಸತ್ವಗಳಲ್ಲದೆ, ಖಾಲಿ ಕ್ಯಾಲೊರಿಗಳೂ ಇರುತ್ತವೆ. ಅಂದರೆ ದೇಹಕ್ಕೆ ಕ್ಯಾಲೊರಿ ಹೋಗುತ್ತದೆ. ಹೊಟ್ಟೆ ಹಸಿವು ಹಾಗೆಯೇ ಇರುತ್ತದೆ. ಹೊಟ್ಟೆ ತುಂಬಿದ ಫೀಲ್ ಕೊಡುತ್ತದೆ. ಆದರೆ ಖಾಲಿಯಾಗಿಯೇ ಇರುತ್ತದೆ. ಅಂದರೆ ಎಷ್ಟೇ ಕುಡಿದರೂ.. ಹೊಟ್ಟೆ ತುಂಬಿದ ಫೀಲ್ ಇರುತ್ತದೆಯೇ ಹೊರತು, ಹೊಟ್ಟೆ ವಾಸ್ತವವಾಗಿ ಭರ್ತಿಯಾಗುವುದೇ ಇಲ್ಲ. ಕುಡಿದಿದ್ದು ಸಾಲದೆಂಬಂತೆ ಮತ್ತಷ್ಟು ತಿನ್ನುವುದು ಅನಿವಾರ್ಯ. ಜೊತೆಗೆ, ಈ ಪೇಯಗಳ ಜೊತೆಗೆ ತಿನ್ನುವುದೆಲ್ಲ, ಜಿಡ್ಡು ಮತ್ತು ಉಪ್ಪಿನ ತಿನಿಸುಗಳು. ಇವೆಲ್ಲವುಗಳ ಪರಿಣಾಮವೆಂದರೆ, ಅಗತ್ಯಕ್ಕಿಂತ ಅತಿ ಹೆಚ್ಚಿನ ಕ್ಯಾಲರಿ ಒಳಗೆ ಹೋಗುತ್ತವೆ.
ಸೈಂಟಿಫಿಕ್ ರೀಸನ್ ಕೂಡಾ ಇದೆ..!
ಬಿಯರ್ನ ರುಚಿ ಹೆಚ್ಚಿಸುವುದಕ್ಕೆ ಹಾಪ್ ಗಿಡದ ಹೂವುಗಳನ್ನ ಬಳಸ್ತಾರೆ. ಈ ಹೂವುಗಳಿಗೆ ವಿಭಿನ್ನ ಕಹಿ ರುಚಿ ಇದೆ. ಬಿಯರ್ನ ರುಚಿ ಹತ್ತಿಸುವ ಅರ್ಥಾತ್ ಹೆಚ್ಚಿಸುವ ಕಹಿಗೆ ಈ ಹಾಪ್ ಗಿಡದ ಹೂವೇ ಕಾರಣ. ಕಹಿ ಇರುತ್ತಲ್ವಾ.. ಸ್ಸೋ.. ಟೇಸ್ಟ್ ಜಾಸ್ತಿ ಮಾಡೋಕೆ ಸಾಕಷ್ಟು ಸ್ವೀಟ್ ಅರ್ಥಾತ್ ಶುಗರ್ ಬೆರೆಸ್ತಾರೆ. ಈ ಕಹಿ ರುಚಿಯನ್ನೂ ಇದಕ್ಕೆ ಸೇರಿಸ್ತಾರೆ. ಈ ಹಾಪ್ ಹೂವುಗಳಲ್ಲಿ ಫೈಟೊ ಈಸ್ಟ್ರೋಜೆನ್ ಅನ್ನೋ ಕೆಮಿಕಲ್ ಇರುತ್ತದೆ. ಇದರಿಂದ ಏನಾಗುತ್ತೆ ಅಂದ್ರೆ, ಪುರುಷರ ಹಾರ್ಮೋನುಗಳನ್ನು ಏರುಪೇರಾಗ್ತವೆ. ಫೈಟೊ ಈಸ್ಟ್ರೋಜೆನ್ ಅನ್ನೋ ಕೆಮಿಕಲ್ ಪರಿಣಾಮ, ಹೊಟ್ಟೆಯ ಸುತ್ತಳತೆಯನ್ನು ಹಿಗ್ಗಿಸುತ್ತಾ ಹೋಗುತ್ತವೆ. ಅಲ್ಲಿಗೆ ತಪ್ಪು ಕುಡಿಯುವವರದ್ದಲ್ಲ, ಫೈಟೊ ಈಸ್ಟ್ರೋಜೆನ್ದು.
ಬಿಯರ್ ಕುಡಿಯುವುದು ಕೇವಲ ಹೊಟ್ಟೆಯ ಸುತ್ತಳತೆಯನ್ನು ಹೆಚ್ಚಿಸುವುದಷ್ಟೇ ಅಲ್ಲ, ದೇಹದ ಒಟ್ಟಾರೆ ತೂಕವನ್ನೂ ಏರಿಸುತ್ತದೆ. ಇದರಿಂದ ಹೃದಯದ ತೊಂದರೆಗಳು, ಯಕೃತ್ತಿನ ಸಮಸ್ಯೆಗಳು, ರಕ್ತದೊತ್ತಡ, ಮಧುಮೇಹ, ಟ್ರೈಗ್ಲಿಸರೈಡ್ ಹೆಚ್ಚಳ ಮುಂತಾದ ಹತ್ತಾರು ಸಮಸ್ಯೆಗಳು ಅಮರಿಕೊಳ್ಳುತ್ತವೆ.