19.05.2003. ಇದು ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ನಡುವೆ ಮದುವೆಯಾದ ದಿನ. ಮದುವೆ ನಡೆದಿದ್ದು ಧರ್ಮಸ್ಥಳದಲ್ಲಿ. ಇಬ್ಬರ ನಡುವೆ ಎಲ್ಲವೂ ಚೆಂದವಿತ್ತು. ಆಗ ದರ್ಶನ್ ಸ್ಟಾರ್ ಹೀರೋ ಆಗಿರಲಿಲ್ಲ. ಚಿತ್ರರಂಗದಲ್ಲಿ ಏನೇನೋ ಕೆಲಸ ಮಾಡಿಕೊಂಡು ಬದುಕುತ್ತಿದ್ದ ವ್ಯಕ್ತಿ. ಮದುವೆಯಾದ ಮೇಲಿನ ಮಾತು ಬೇರೆ.. ಮದುವೆಗೂ ಮೊದಲು ಆಗ ದರ್ಶನ್ ಅವರ ಜೀವನ ನೋಡಿಕೊಳ್ತಿದ್ದವರು ವಿಜಯಲಕ್ಷ್ಮಿ. ಖರ್ಚು ನೋಡಿಕೊಳ್ತಿದ್ದವರೂ ವಿಜಯಲಕ್ಷ್ಮಿ. ಏಕೆಂದರೆ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರದ್ದು ಲವ್ ಮ್ಯಾರೇಜ್. ಆದರೆ.. ಅದೇ ದರ್ಶನ್ ಬದಲಾಗಿದ್ದು ಸ್ಟಾರ್ ಆದ ಮೇಲೆ. ದುಡ್ಡು ಬಂದ ಮೇಲೆ. ಯಾವ ಪತ್ನಿ ತನ್ನ ಕಷ್ಟದ ದಿನಗಳಲ್ಲಿ ಹೆಗಲು ಕೊಟ್ಟಿದ್ದಳೋ.. ಆಕೆಯನ್ನೇ ದೂರ ಮಾಡಿದ್ದರು ದರ್ಶನ್.
ಆದರೆ, ವಿಜಯಲಕ್ಷ್ಮಿ ದೂರ ಮಾಡಲಿಲ್ಲ. ರಕ್ತ ಬರುವಂತೆ ಹೊಡೆತ ತಿಂದರೂ, ಮೈಮೇಲೆಲ್ಲ ಬಾಸುಂಡೆ ಬಿದ್ದರೂ, ಸಾವಿನ ಕದ ತಟ್ಟಿ ಬಂದರೂ, ಕಿವಿಗಳಲ್ಲಿ ರಕ್ತ ಬರುವಂತ ಪದಗಳಲ್ಲಿ ಬೈಸಿಕೊಂಡರೂ.. ದರ್ಶನ್ ಜೊತೆಯಲ್ಲೇ ಇದ್ದಾರೆ. ಅದರ ಎಫೆಕ್ಟ್ ಬೇರೆಯದೇ ರೀತಿಯಲ್ಲಿ ಆಗಿದೆ.
ಹೀಗಿದ್ದರೂ.. ರೇಣುಕಾಸ್ವಾಮಿ ಹತ್ಯೆ ಕೇಸ್ ಬೆಳಕಿಗೆ ಬಂದು ದರ್ಶನ್ ಜೈಲು ಸೇರಿದ ಮೇಲೆ ಒಂದು ಪ್ರಶ್ನೆ ಉದ್ಭವವಾಗಿದೆ. ದರ್ಶನ್ ಅವರ ಪ್ರೇಯಸಿ ಪವಿತ್ರಾ ಗೌಡ ಪತ್ನಿ ಹೌದೋ.. ಅಲ್ಲವೋ.. ಎನ್ನುವುದು. ಒಂದು ಕಡೆ ದರ್ಶನ್ ಅವರನ್ನ ಜೈಲಿನಿಂದ ಹೊರಗೆ ಕರೆತರಲು ಪತ್ನಿ ವಿಜಯಲಕ್ಷ್ಮೀ ಹರಸಾಹಸ ಮಾಡುತ್ತಿದ್ದು, ಮತ್ತೊಂದೆಡೆ ತಾವು ಮಾತ್ರವೇ ದರ್ಶನ್ ಅವರ ಪತ್ನಿ ಎಂದು ಸಾಬೀತು ಪಡಿಸಲು ಹೆಣಗುತ್ತಿದ್ದಾರೆ. ಅದರ ಒಂದು ಭಾಗವಾಗಿ ʻನಾನು ದರ್ಶನ್ ಅವರ ಏಕೈಕ ಪತ್ನಿʼ ಎಂದು ಪೊಲೀಸ್ ಕಮಿಷನರ್ ದಯಾನಂದ್ ಅವರಿಗೆ ವಿಜಯಲಕ್ಷ್ಮೀ ದರ್ಶನ್ ಪತ್ರ ಬರೆದಿದ್ದಾರೆ.
ಕಮಿಷನರ್ʻಗೆ ಬರೆದ ಪತ್ರದ ಯಥಾವತ್ ಸಾರಾಂಶ
ಗೆ..
ಶ್ರೀ ಬಿ.ಕೆ. ದಯಾನಂದ್
ಕಮಿಷನರ್ ಆಫ್ ಪೊಲೀಸ್, ಬೆಂಗಳೂರು ನಗರ
ವಿಷಯ: ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಶ್ರೀಮತಿ ಪವಿತ್ರಾ ಗೌಡ ಬಗ್ಗೆ ದಾಖಲೆಗಳಲ್ಲಿ ಸರಿಯಾದ ಮಾಹಿತಿ ಉಲ್ಲೇಖಿಸಲು ವಿನಂತಿ..
ಮಾನ್ಯರೇ..
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನನ್ನ ಪತಿ ದರ್ಶನ್ ಹಾಗೂ ಕೆಲವರನ್ನು ನಿಮ್ಮ ಇಲಾಖೆ ಬಂಧಿಸಿ ಎರಡು ವಾರ ಕಳೆದಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಕಾನೂನು ತನ್ನದೇ ಆದ ಮಾರ್ಗ ಪಡೆದುಕೊಳ್ಳುತ್ತದೆ ಎಂದು ನಾನು ನಂಬುತ್ತೇನೆ. ಆದಾಗ್ಯೂ, ಈ ಹತ್ಯೆ ಕೇಸ್‌ನ ಮಾಸ್ಟರ್ ಮೈಂಡ್ ಆಗಿರುವ ಮತ್ತು ಎ-1 ಆರೋಪಿ ಶ್ರೀಮತಿ ಪವಿತ್ರಾ ಗೌಡ ಬಗ್ಗೆ ದಾಖಲೆಗಳಲ್ಲಿ ಸರಿಯಾದ ಮಾಹಿತಿ ಉಲ್ಲೇಖಿಸುವಂತೆ ನಾನು ನಿಮ್ಮಲ್ಲಿ ವಿನಂತಿ ಮಾಡುತ್ತೇನೆ.
ನನ್ನ ಪತಿ ಶ್ರೀ ದರ್ಶನ್ ಶ್ರೀನಿವಾಸ್ ಅವರಿಗೆ ಪವಿತ್ರಾ ಗೌಡ ಸ್ನೇಹಿತೆ ನಿಜ. ಆದರೆ ಹೆಂಡತಿಯಲ್ಲ ಎಂಬುದನ್ನ ತಾವು ದಯವಿಟ್ಟು ಗಮನಿಸಿ. ನಾನು ದರ್ಶನ್ ಅವರ ಏಕೈಕ ಪತ್ನಿ. ನಾನು ಕಾನೂನುಬದ್ಧವಾಗಿ ವಿವಾಹವಾದ ಏಕೈಕ ಪತ್ನಿ. ನಮ್ಮ ಮದುವೆ ಧರ್ಮಸ್ಥಳದಲ್ಲಿ 19.05.2003 ರಂದು ನಡೆಯಿತು.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ತಾವು ತಪ್ಪಾಗಿ ಪವಿತ್ರಾ ಗೌಡ ಅವರನ್ನ ದರ್ಶನ್ ಪತ್ನಿ ಎಂದು ಸಂಬೋಧಿಸಿದ್ದೀರಿ. ಆನಂತರ ಕರ್ನಾಟಕದ ಮಾನ್ಯ ಗೃಹ ಸಚಿವರೂ ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತು ಪತ್ನಿ ಬಂಧನ ಎಂದೇ ಸುದ್ದಿ ಪ್ರಕಟಿಸಲು ಮುಂದುವರಿಸಿದರು.
ನಾನು ಕಾನೂನುಬದ್ಧವಾಗಿ ವಿವಾಹವಾದ ದರ್ಶನ್ ಅವರ ಏಕೈಕ ಹೆಂಡತಿ ಮತ್ತು ನಮ್ಮ ಮಗ ವಿನೀಶ್. ತಪ್ಪಾಗಿ ಪ್ರಸ್ತಾಪವಾಗಿರುವ ಪರಿಣಾಮ ಭವಿಷ್ಯದಲ್ಲಿ ಈ ಪ್ರಕರಣದಿಂದ ನನಗೆ ಹಾಗೂ ಮಗ ವಿನೀಶ್‌ಗೆ ಯಾವುದೇ ಗೊಂದಲ ಅಥವಾ ತೊಂದರೆ ಆಗಬಾರದು.
ಶ್ರೀ ಸಂಜಯ್ ಸಿಂಗ್ ಎಂಬುವರನ್ನ ಶ್ರೀಮತಿ ಪವಿತ್ರಾ ಗೌಡ ಮದುವೆಯಾಗಿದ್ದರು ಎನ್ನಲಾಗಿದೆ. ಸಂಜಯ್ ಸಿಂಗ್ ಮೂಲಕ ಪವಿತ್ರಾ ಗೌಡಗೆ ಮಗಳಿದ್ದಾಳೆ. ಆದುದರಿಂದ ಈ ಕುರಿತಾಗಿ ನಿಮ್ಮ ಪೊಲೀಸ್ ಫೈಲ್‌ಗಳಲ್ಲಿ ದಾಖಲೆಗಳು ಹಾಗೂ ಮಾಹಿತಿಗಳನ್ನು ಸರಿಪಡಿಸಲು ನಾನು ಕೋರಿಕೊಳ್ಳುತ್ತೇನೆ. ತಪ್ಪಾಗಿ ಪವಿತ್ರಾ ಗೌಡ ಅವರನ್ನ ಹೆಂಡತಿ ಎಂದು ಉಲ್ಲೇಖಿಸಿರುವುದರಿಂದ ನನಗೆ ಕಾನೂನು ಸೇರಿದಂತೆ ಯಾವುದೇ ರೀತಿಯ ತೊಂದರೆಯಾಗಬಾರದೆಂದು ವಿನಂತಿಸುತ್ತೇನೆ.
ಧನ್ಯವಾದಗಳು..
ವಿಜಯಲಕ್ಷ್ಮೀ ದರ್ಶನ್
ವಿಜಯಲಕ್ಷ್ಮಿ ಅವರು ಈ ಪತ್ರ ಬರೆದಿರುವುದಕ್ಕೂ ಕಾರಣಗಳಿವೆ. ದರ್ಶನ್ ಮತ್ತು ಪವಿತ್ರಾ ಅವರು ಅರೆಸ್ಟ್ ಆದ ನಂತರ ಕಮಿಷನರ್ ದಯಾನಂದ್ ಪವಿತ್ರಾ ಗೌಡ ಅವರನ್ನು ದರ್ಶನ್ ಅವರ ಪತ್ನಿ ಎಂದೇ ಸಂಬೋಧಿಸಿದ್ದರು. ಅದಾದ ನಂತರ ಒಮ್ಮ್ ಮಾಧ್ಯಮಗಳ ಜೊತೆ ಮಾತನಾಡುವಾಗ ಗೃಹ ಸಚಿವ ಪರಮೇಶ್ವರ್ ಅವರೂ ಪವಿತ್ರಾ ಗೌಡ ಅವರನ್ನು ದರ್ಶನ್ ಅವರ ಪತ್ನಿ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಇದೇನಾದರೂ ಪೊಲೀಸ್ ದಾಖಲೆಗಳಲ್ಲಿ ಅಧಿಕೃತವಾಗಿ ದಾಖಲಾದರೆ ಕಷ್ಟ ಎನ್ನುವುದು ವಿಜಯಲಕ್ಷ್ಮಿ ಅವರ ಇಂಗಿತ. ಇದಷ್ಟೇ ಅಲ್ಲ, ಈ ಪ್ರಕರಣ ಶುರುವಾಗಿದ್ದೇ ಪವಿತ್ರಾ ಗೌಡ ಅವರು ದರ್ಶನ್ ಅವರೊಂದಿಗೆ ನನ್ನದು 10 ವರ್ಷಗಳ ಸಂಬಂಧ ಎಂದು ಪೋಸ್ಟ್ ಹಾಕಿದ ನಂತರ. ಆಗ ವಿಜಯಲಕ್ಷ್ಮಿ ಸಿಡಿದೆದ್ದು ಪೋಸ್ಟ್ ಹಾಕಿದ್ದರು. ಈ ಘಟನೆಯ ನಂತರ ಸಾವಿರಾರು ಅಭಿಮಾನಿಗಳು ದರ್ಶನ್ ಮತ್ತು ವಿಜಯಲಕ್ಷ್ಮಿ ಪರ ನಿಂತಿದ್ದರು. ಅಂತಹವರಲ್ಲಿ ಒಬ್ಬ ಈ ರೇಣುಕಾಸ್ವಾಮಿ. ಅವನು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಅಸಹ್ಯದ ಪೋಸ್ಟ್ ಹಾಕಿದ್ದ ಎನ್ನಲಾಗಿದ್ದು, ಅದೇ ಕಾರಣಕ್ಕೆ ಕೊಲೆಯಾಗಿದ್ದಾನೆ. ತಾವೇ ಮದುವೆಯಾಗಿದ್ದರೂ, ಧರ್ಮಪತ್ನಿಯಾಗಿದ್ದರೂ, ತಾವೇ ದರ್ಶನ್ ಹೆಂಡತಿ ಎಂದು ಹೇಳಿ ಎಂದು ಹೋಮ್ ಮಿನಿಸ್ಟರ್ ಮತ್ತು ಕಮಿಷನರ್ʻಗೆ ಪತ್ರ ಬರೆಯಬೇಕಾದ ಸ್ಥಿತಿ ವಿಜಯಲಕ್ಷ್ಮಿ ದರ್ಶನ್ ಅವರದ್ದು.



