ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ವಿ ಸೋಮಣ್ಣ ಬರಲಿದ್ದಾರೆ. ಹೈಕಮಾಂಡ್ ಓಕೆ ಎಂದಿದೆ ಎಂಬ ಸುದ್ದಿ ರಾಜ್ಯದ ಒಂದೇ ಒಂದು ಸುದ್ದಿ ಚಾನೆಲ್ಲಿನಲ್ಲಿ ಓಡಾಡುತ್ತಿದೆ. ವಿ ಸೋಮಣ್ಣನವರೇ ಬಿಜೆಪಿ ರಾಜ್ಯಾಧ್ಯಕ್ಷರಾಗಲಿದ್ದಾರೆ ಎಂಬುದು ಎಲ್ಲವನ್ನೂ ಬಿಟ್ಟು ಒಂದೇ ಒಂದು ಚಾನೆಲ್ಲಿನಲ್ಲಿ ಮಾತ್ರ ಸುದ್ದಿಯಾಗುತ್ತಿರುವುದೇಕೆ.. ಎಂದರೆ.. ಅದರ ಹಿಂದೊಂದು ಕಥೆ ಇದೆ. ವಿ ಸೋಮಣ್ಣ ಅವರು ರಾಜ್ಯಾಧ್ಯಕ್ಷ ಹುದ್ದೆಗೆ ಸಮರ್ಥ ನಾಯಕ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ.. ಇದು ಸಾಧ್ಯವೇ.. ಏಕೆಂದರೆ ವಿ ಸೋಮಣ್ಣ ಅವರಿಗೀಗ 74 ವರ್ಷ ವಯಸ್ಸು. 75 ದಾಟಿದು ಎಂಬ ನೆಪ ಹೇಳಿಯೇ ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಿದ ಬಿಜೆಪಿ, ವಿ ಸೋಮಣ್ಣ ಅವರಿಗೆ 75 ದಾಟಿದ ಮೇಲೆ ಅಧಿಕಾರ ಕೊಡುತ್ತದೆಯೇ.. ಯಡಿಯೂರಪ್ಪ ಅವರೇನೋ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಕೆಡವಿದ್ದರು. ಅದಕ್ಕಾಗಿ ಅವರಿಗೆ ಒಂದು ಅವಕಾಶ ಕೊಟ್ಟಿದ್ದ ಹೈಕಮಾಂಡ್, ಯಡಿಯೂರಪ್ಪ ಅಧಿಕಾರಾವಧಿ ಪೂರೈಸಲು ಬಿಡಲಿಲ್ಲ. ಹೀಗಿರುವಾಗ.. ವಿ ಸೋಮಣ್ಣ ಅವರ ಹೆಸರು ದಿಢೀರನೆ ಮುನ್ನೆಲೆಗೆ ಬಂದಿದ್ದು ಹೇಗೆ..? ಅದು ಏಕೆ ಒಂದೇ ಚಾನೆಲ್ಲಿನಲ್ಲಿ ಸುದ್ದಿಯಾಗುತ್ತಿದೆ..? ರಾಜಕೀಯದಲ್ಲಿ ಬ್ಯುಸಿ ಇದ್ದವರಿಗೆ ಅರ್ಥವಾಗುತ್ತದೆ. ಒಂದು ವಿಷಯ ಸ್ಪಷ್ಟ. ಸೋಮಣ್ಣ ಹೆಸರು ಚರ್ಚೆಯಲ್ಲಿರುವುದು ನಿಜ.
ವಿಜಯೇಂದ್ರ ಪುನರ್ ಆಯ್ಕೆಗೆ ಸಂಸದರ ವಿರೋಧ :
ಬಿಜೆಪಿಯಲ್ಲಿ ವಿಜಯೇಂದ್ರ ಅವರನ್ನು ಕಂಟಿನ್ಯೂ ಮಾಡುವುದಕ್ಕೆ ಒಂದು ಬಣ ವಿರೋಧವಾಗಿಯೇ ಇದೆ. ಅದರಲ್ಲೂ ರಾಜ್ಯದ 17 ಸಂಸದರ ಪೈಕಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚಿಕ್ಕಬಳ್ಳಾಪುರದ ಸಂಸದ ಡಾ.ಕೆ.ಸುಧಾಕರ್, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ, ಬಾಗಲ ಕೋಟೆಯ ಪಿ.ಸಿ.ಗದ್ದಿಗೌಡರ್, ಬಿಜಾಪುರದ ಸಂಸದ ರಮೇಶ್ ಜಿಗಜಿಣಗಿ.. ಸೇರಿದಂತೆ ಹಲವರಿಗೆ ಸಿಟ್ಟಿದೆ. ಆ ಆಕ್ರೋಶಕ್ಕೆ ನೀರು ಹಾಕಿ ಪೋಷಿಸುತ್ತಿರುವುದೇ ವಿ ಸೋಮಣ್ಣ.
ಬೆಳಗಾವಿಯಿಂದ ಗೆದ್ದ ಜಗದೀಶ್ ಶೆಟ್ಟರ್, ಬೆಂಗಳೂರು ಉತ್ತರ ಕ್ಷೇತ್ರದಿಂದ ಗೆದ್ದ ಶೋಭಾ ಕರಂದ್ಲಾಜೆ, ಉತ್ತರ ಕನ್ನಡದಿಂದ ಗೆದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಚಿಕ್ಕಮಗಳೂರಿನಿಂದ ಗೆದ್ದ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಮೈಸೂರಿನಿಂದ ಗೆದ್ದ ಯದುವೀರ್ ಒಡೆಯರ್ ಅವರು ವಿಜಯೇಂದ್ರ ನಾಯಕತ್ವದ ವಿರೋಧಿಗಳಲ್ಲವಾದರೂ ತಟಸ್ಥ ಬಣದಲ್ಲಿರುವುದರಿಂದ ‘ವಿಜಯೇಂದ್ರ ಬೇಕೇ ಬೇಕು’ ಎನ್ನುವವರಲ್ಲ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ದೇವೇಗೌಡರ ಅಳಿಯ ಡಾ.ಮಂಜುನಾಥ್ ಅವರು ದೇವೇಗೌಡ, ಕುಮಾರಸ್ವಾಮಿ ಹೇಳಿದಂತೆ ಕೇಳುವವರೇ ಹೊರತು, ಬಿಜೆಪಿ ಹೇಳಿದಂತೆ ಅಲ್ಲ.
ಸದ್ಯಕ್ಕೆ ವಿಜಯೇಂದ್ರ ಜತೆಗಿರುವವರು ಮಂಗಳೂರಿನ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಿವಮೊಗ್ಗದ ಬಿ.ವೈ.ರಾಘವೇಂದ್ರ, ಬೆಂಗಳೂರು ಸೆಂಟ್ರಲ್ಲಿನ ಪಿ.ಸಿ.ಮೋಹನ್, ಬೆಂಗಳೂರು ದಕ್ಷಿಣದ ತೇಜಸ್ವಿ ಸೂರ್ಯ ಮಾತ್ರ.
ಎಲೆಕ್ಷನ್ ಹೊತ್ತಿಗೆ ವಿ ಸೋಮಣ್ಣ..?
ಮೂಲಗಳ ಪ್ರಕಾರ ವಿ ಸೋಮಣ್ಣ ಅವರಿಗೆ ಕುಮಾರಸ್ವಾಮಿ ಬೆಂಬಲವೂ ಇದೆ. ಏಕೆಂದರೆ ಕುಮಾರಸ್ವಾಮಿಗೆ ಮತ್ತೆ ಕರ್ನಾಟಕ ಸಿಎಂ ಆಗಬೇಕು ಎಂಬ ಕನಸಿದೆ. ವಿಜಯೇಂದ್ರ ಇದ್ದರೆ ಅದು ಸಾಧ್ಯವಿಲ್ಲ ಎನ್ನುವುದೂ ಗೊತ್ತಿದೆ. ಹೀಗಾಗಿ ಮಿತ್ರಕೂಟ ಸುಗಮವಾಗಿ ಮುನ್ನಡೆಯಲು ಸೋಮಣ್ಣ ಅವರಂಥ ನಾಯಕ ಬಿಜೆಪಿಯ ಮುಂಚೂಣಿಯಲ್ಲಿರಬೇಕು ಎಂಬ ಸಂದೇಶ ಕೊಟ್ಟಿದ್ದಾರೆ. ಹೀಗಾಗಿ ಸದ್ಯಕೆಕ ವಿಜಯೇಂದ್ರ ಅವರನ್ನು ಆ ಸ್ಥಾನಕ್ಕೆ ಕೂರಿಸುವುದು, ಚುನಾವಣೆ ಹೊತ್ತಿಗೆ ವಿಜಯೇಂದ್ರ ಅವರನ್ನು ಬದಲಿಸಿ ಸೋಮಣ್ಣ ಅವರನ್ನು ತರುವುದು ಎಂಬ ಚಿಂತನೆಯೂ ಶುರುವಾಗಿದೆ. ಸದ್ಯಕ್ಕೆ ಅದು ಚಿಂತನೆ ಹಂತದಲ್ಲಿ ಮಾತ್ರ ಇದೆ.



