AR ರೆಹಮಾನ್ ಅವರು ಬಾಲಿವುಡ್ ಮೇಲೆ ಕೋಮುವಾದದ ಆರೋಪ ಮಾಡಿದ್ದಾರೆ. ಕಾರಣ ಬೇರೇನಿಲ್ಲ, ರೆಹಮಾನ್ ಅವರಿಗೆ ಕಳೆದ 8 ವರ್ಷಗಳಿಂದ ಬಾಲಿವುಡ್ ಸಿನಿಮಾಗಳಲ್ಲಿ ಚಾನ್ಸ್ ಸಿಗ್ತಾ ಇಲ್ಲ. ಅದಕ್ಕೆ ಕೋಮುವಾದವೇ ಕಾರಣ ಇರಬಹುದು ಎಂದು ದೂರಿದ್ದಾರೆ. ಆಕ್ಚುವಲಿ ವಾಸ್ತವ ಏನು ಗೊತ್ತೇ..
ರೆಹಮಾನ್ ಹೇಳಿರುವುದು ಇಷ್ಟು. ʻʻ90ರ ದಶಕದಲ್ಲಿ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಈ ರೀತಿಯ ಯಾವುದೇ ಪೂರ್ವಾಗ್ರಹ, ಪಕ್ಷಪಾತ ಇರಲಿಲ್ಲ. ಮ್ಯೂಸಿಕ್ ಕಂಪನಿಯೊಂದು ನಿಮ್ಮನ್ನು ಬದಿಗೊತ್ತಿ ಐವರು ಸಂಗೀತ ನಿರ್ದೇಶಕರ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಇತ್ತೀಚೆಗೆ ಒಬ್ಬರು ನನ್ನ ಕಿವಿಗೆ ಹಾಕಿದ್ರು. ಅವರಿಗೆ ನಾನೇನೋ ಫ್ಯಾಮಿಲಿ ಜೊತೆ ಇರಬಹುದು ಎಂದ ಹೇಳಿದೆ. . ಆದರೆ, ಕಳೆದ 8 ವರ್ಷಗಳಲ್ಲಿ ಅಧಿಕಾರ ಬದಲಾವಣೆ ಆಗಿದ್ದು, ಸೃಜನಶೀಲತೆ ಇಲ್ಲದವರು ಈಗ ಎಲ್ಲವನ್ನೂ ನಿರ್ಣಯಿಸ್ತಿದ್ದಾರೆ. ಇದು ಮತೀಯವಾದವೂ ಇರಬಹುದುʼʼ ಎಂದಿದ್ದಾರೆ ರೆಹಮಾನ್.
AR ರೆಹಮಾನ್ ಅವರ ಸಾಧನೆಯನ್ನು ಮಾತುಗಳಲ್ಲಿ ಹೇಳೋಕೆ ಆಗಲ್ಲ. ಅವರು ಪಡೆದಿರುವ ಪ್ರಶಸ್ತಿ, ಪುರಸ್ಕಾರಗಳೇ ಡಿಸೈಡ್ ಮಾಡುತ್ತವೆ. ಭಾರತೀಯ ಚಿತ್ರರಂಗದಲ್ಲಿ ಡಬಲ್ ಆಸ್ಕರ್ ಪಡೆದಿರುವ ಏಕೈಕ ಸಂಗೀತ ನಿರ್ದೇಶಕ. 6 ರಾಷ್ಟ್ರ ಪ್ರಶಸ್ತಿ, 6 ತಮಿಳುನಾಡು ರಾಜ್ಯ ಪ್ರಶಸ್ತಿ, 15 ಫಿಲ್ಮ್ ಫೇರ್, 8 ದಕ್ಷಿಣ ಭಾರತದ ಫಿಲ್ಮ್ ಫೇರ್, ಎರಡು ಗ್ರ್ಯಾಮಿ ಅವಾರ್ಡ್, BAFTA ಗೌರವ, ಗೋಲ್ಡನ್ ಗ್ಲೋಬ್ ಪುರಸ್ಕಾರ ಎಲ್ಲವುಗಳ ಜೊತೆಗೆ ಪದ್ಮಭೂಷಣ ಪುರಸ್ಕಾರವನ್ನೂ ಪಡೆದಿರುವ ಖ್ಯಾತಿ ರೆಹಮಾನ್ ಅವರಿಗೆ ಇದೆ.
ರೋಜಾ, ಬಾಂಬೆ, ದಿಲ್‌ಸೇ, ತಾಲ್, ಲಗಾನ್, ರಂಗೀಲಾ, ಜೀನ್ಸ್, ಗುರು, ಸ್ಲಂಡಾಗ್ ಮಿಲಿಯನೇರ್, ಜೋಧಾ ಅಕ್ಬರ್, ಸಾಥಿಯಾ.. ಒಂದಾ..ಎರಡಾ.. ರೆಹಮಾನ್ ಸೃಷ್ಟಿಯ ಸಾಧನೆಗಳಿಗೆ ಲೆಕ್ಕವಿಲ್ಲ. ಸೃಷ್ಟಿಸಿರುವ ಸಂಗೀತದ ಮೆಲೋಡಿ ಹಾಡುಗಳು ಕೋಟ್ಯಂತರ ಸಂಗೀತ ಪ್ರಿಯರ ಹೃದಯ ಕದ್ದಿವೆ. ಇಂತಹ ರೆಹಮಾನ್ ಅವರಿಗೆ ಅವಕಾಶಗಳಿಲ್ಲ ಎಂದರೆ ಅಚ್ಚರಿಯಾಗುವುದು ಸಹಜ. ತಮಗೆ ಅವಕಾಶಗಳಿಲ್ಲ, ಇದಕ್ಕೆಲ್ಲ ಕೋಮುವಾದವೇ ಕಾರಣ ಎಂದಾಗ ಛೆ.. ಹೀಗಾಗಬಾರದಿತ್ತು ಎನಿಸುತ್ತದೆ. ಆದರೆ, ವಾಸ್ತವ ಬೇರೆಯದ್ದೇ ಇದೆ.
ಬಾಲಿವುಡ್‌ನಲ್ಲಿ ರೆಹಮಾನ್ ಅವರೇ ಹೇಳಿಕೊಂಡಿರುವ ಪ್ರಕಾರ ಅವರಿಗೆ 8 ವರ್ಷಗಳಿಂದ ಅವಕಾಶ ಸಿಗ್ತಿಲ್ಲ. ರೆಹಮಾನ್ ಅವರೀಗ ಯಶ್-ರಣಬೀರ್ ಕಪೂರ್-ಸಾಯಿ ಪಲ್ಲವಿ ಮೊದಲಾದವರು ನಟಿಸುತ್ತಿರುವ ರಾಮಾಯಣ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಇದನ್ನು ಹೊರತುಪಡಿಸಿದರೆ ಕಾರಣ ಏನಿರಬಹುದು..
ಬೇರೇನಲ್ಲ, ಅವರು ಮುಸ್ಲಿಂ ಎಂಬುದು ಕಾರಣ ಅಲ್ಲವೇ ಅಲ್ಲ. ಸಂಭಾವನೆ ಮೊದಲ ಕಾರಣವಾದರೆ, ಲಭ್ಯತೆ 2ನೇ ಕಾರಣ. ರೆಹಮಾನ್ ಅವರು ಭಾರತೀಯ ಚಿತ್ರರಂಗದ ದುಬಾರಿ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಒಂದು ಸಿನಿಮಾಗೆ ಸಂಗೀತ ನಿರ್ದೇಶನಕ್ಕೆ ಕೇಳುವುದು 10 ಕೋಟಿ. ಕೆಲವೊಮ್ಮೆ ಒಂದು ಹಾಡಿಗೆ 3 ಕೋಟಿ ಕೇಳುತ್ತಾರೆ. ಅಲ್ಲದೆ ರೆಹಮಾನ್ ಅವರು ಸಂಗೀತ ನಿರ್ದೇಶನಕ್ಕಿಂತ ಮ್ಯೂಸಿಕ್ ಕನ್ಸರ್ಟ್ ಕಡೆ ಗಮನ ಕೊಡುವುದು ಹೆಚ್ಚಾಗಿದೆ. ಕನ್ಸರ್ಟ್‌ಗೆ ಒಂದೂವರೆಯಿಂದ ಎರಡು ಕೋಟಿ ಪಡೆಯುತ್ತಾರೆ. ಕೆಲವು ವಿಶೇಷ ಪ್ರಾಜೆಕ್ಟ್ ಒಪ್ಪಿಕೊಂಡರೆ 10 ಕೋಟಿಯವರೆಗೂ ಸಂಭಾವನೆ ಪಡೆಯುತ್ತಾರೆ. ಅಲ್ಲಿ ಈಗಾಗಲೇ ಕ್ಲಿಕ್ ಆಗಿರುವ ಹಾಡುಗಳನ್ನು, ಮ್ಯೂಸಿಕ್‌ನ್ನು ರೀ-ಪ್ಲೇ ಮಾಡಿದರೆ, ಒಂದು ದಿನ ಅಥವಾ ಕೆಲವೇ ಗಂಟೆಗಳಲ್ಲಿ ಒಂದೂವರೆ ಎರಡು ಕೋಟಿ ಸಿಗುವ ಚಾನ್ಸ್ ಇದೆ. ಹೀಗಾಗಿ ಹಂತ ಹಂತವಾಗಿ ರೆಹಮಾನ್ ತಮ್ಮ ನಿರ್ಮಾಪಕರು, ನಿರ್ದೇಶಕರನ್ನು ಕಳೆದುಕೊಂಡರು.
ರೆಹಮಾನ್ ಕನ್ಸರ್ಟ್ ಕಡೆ ಗಮನ ಕೊಟ್ಟ ಅವಧಿಯಲ್ಲಿ ಬೇರೆ ಸಂಗೀತ ನಿರ್ದೇಶಕರು ಜಾಗ ಆಕ್ರಮಿಸಿಕೊಂಡರು.
ಈಗ ರೆಹಮಾನ್ ಹೇಳುತ್ತಿರುವ ಅವಧಿಯಲ್ಲಿ ರೆಹಮಾನ್ ಅವರು ಸಂಗೀತ ನಿರ್ದೇಶನ ಮಾಡಿದ್ದಕ್ಕಿಂತ ಮ್ಯೂಸಿಕ್ ಕನ್ಸರ್ಟ್ ಮಾಡಿದ್ದೇ ಹೆಚ್ಚು. ಹೀಗಾಗಿ ದುಬಾರಿ ಹಾಗೂ ಲಭ್ಯತೆಯ ಕಾರಣದಿಂದ ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕಿಲ್ಲ ಎಂಬ ವಾದ ಅರ್ಥವಿಲ್ಲದ್ದು. ಪದ್ಮಭೂಷಣ ಪುರಸ್ಕೃತರಾಗಿರಬಹುದು, ಅದ್ಭುತ ಕಲಾತಂತ್ರಜ್ಞನೇ ಇರಬಹುದು. ಸುಖಾಸುಮ್ಮನೆ ಆರೋಪ ಮಾಡೋದ್ರಲ್ಲಿ ಅರ್ಥ ಇಲ್ಲ. ರೆಹಮಾನ್, ಕೆಟ್ಟ ರಾಜಕೀಯದ ಟೂಲ್ ಆಗಬಾರದಿತ್ತು.



