ನಿಜಾನಾ..? ಕುಮಾರಸ್ವಾಮಿ ಅವರಿಗೆ ಬಹುಶಃ ಅವರ ಜೀವನದುದ್ದಕ್ಕೂ ಉತ್ತರ ಕೊಡಬೇಕೇನೋ ಎಂಬ ಸ್ಥಿತಿ ಇರುವುದು ರಾಧಿಕಾ ಕುಮಾರಸ್ವಾಮಿ ವಿಷಯದಲ್ಲಿ. ರಾಧಿಕಾ ಮತ್ತು ಕುಮಾರಸ್ವಾಮಿ ಅವರಿಬ್ಬರ ಸಂಬಂಧ ಅಧಿಕೃತವಲ್ಲ. ಹಾಗಂತ ರಹಸ್ಯವೂ ಅಲ್ಲ. ಕುಮಾರಸ್ವಾಮಿಯವರೇ ಬಹಿರಂಗವಾಗಿ ನನ್ನ ಜೀವನದಲ್ಲಿ ನಾನೊಂದು ತಪ್ಪು ಮಾಡಿದ್ದೇನೆ, ಕ್ಷಮಿಸಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆದರೆ ರಾಧಿಕಾ ವಿಷಯವನ್ನ ಪದೇ ಪದೇ ಎದುರಾಳಿಗಳು ಹಿಡಿದು ತರ್ತಾರೆ. ಈ ಬಾರಿಯೂ ಅಷ್ಟೇ, ಜಮೀರ್ ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ಕರಿಯ ಕಾಳಗದಲ್ಲಿ ರಾಧಿಕಾ ಕುಮಾರಸ್ವಾಮಿ ಹೆಸರು ಬಂದಿದೆ.
ಈ ಬಾರಿ ರಾಧಿಕಾ ಕುಮಾರಸ್ವಾಮಿ ಹೆಸರು ಹೇಳೀರೋದು ತೇಜಸ್ವಿನಿ ಗೌಡ. ಬಿಜೆಪಿಯಲ್ಲಿದ್ದು ಇತ್ತೀಚೆಗೆ ಕಾಂಗ್ರೆಸ್‌ಗೆ ಬಂದಿರುವ ತೇಜಸ್ವಿನಿ ಮೀಸಲಾತಿ ಬಗ್ಗೆ ಮಾತಾಡ್ತಾ ಆಡ್ತಾ ಕುಮಾರಸ್ವಾಮಿಯನ್ನು ಕರಿಯ ಎಂದ ಜಮೀರ್ ಹೇಳಿಕೆ ಬಗ್ಗೆ ಕೂಡ ಮಾತಾಡಿದ್ರು. ರಾಧಿಕಾ ಅವರು ಯಾವುದೋ ಕಾರ್ಯಕ್ರಮದಲ್ಲಿ ಮಾತಾಡ್ತಾ ಈ ಪದವನ್ನು ಬಳಸಿದ್ರು. ನೀವು ಅವರನ್ನು ಏನಂತ ಕರೀತೀರಾ ಎಂದು ಕೇಳಿದಾಗ ರಾಧಿಕಾ ಅವರು ಕರಿಯ ಅಂತ ಕರೆಯುವೆ ಅಂತ ಹೇಳಿಕೊಂಡಿದ್ರು. ಅವರು ಕರಿಯಾ ಅಂದ್ರೆ ಓಕೆ ಎನ್ನುವವರು, ಜಮೀರ್ ಕರಿಯಾ ಅಂದ್ರೆ ಯಾಕೆ ಅಂತಾರೆ ಇದು ಎಷ್ಟು ಸರಿ ಎಂದು ತೇಜಸ್ವಿನಿ ಗೌಡ ಟಾಂಗ್ ಕೊಟ್ಟಿದ್ದಾರೆ.
ವಾಸ್ತವದಲ್ಲಿ ಏನಾಗಿತ್ತು..?
ರಾಧಿಕಾ ಕುಮಾರಸ್ವಾಮಿ ಅವರು ಗೌರೀಶ್ ಅಕ್ಕಿಯವರ ಸಂದರ್ಶನದಲ್ಲಿ ಮಾತನಾಡುತ್ತಾ ನೀವು ಅವರನ್ನ ಏನಂತ ಕರೀತೀರಿ ಅನ್ನೋ ಪ್ರಶ್ನೆ ಕೇಳಿದ್ದರು. ಅದಕ್ಕೆ ಅವರು ರೀ.. ಅಂತಾ ಕರೀತೀನಿ ಅಂತಾ ಹೇಳಿದ್ದರು. ಕರಿಯ ಎಂದು ಹೇಳಿರಲಿಲ್ಲ. ಇಂದಿಗೂ ಆ ವಿಡಿಯೋ ಸುವರ್ಣ ನ್ಯೂಸ್ ಯೂಟ್ಯೂಬಿನಲ್ಲಿ ಸಿಗುತ್ತೆ. ಏಕೆಂದರೆ ರಾಧಿಕಾ ಕುಮಾರಸ್ವಾಮಿ ಸಂದರ್ಶನ ಮಾಡಿದಾಗ ಗೌರೀಶ್ ಅಕ್ಕಿ, ಸುವರ್ಣ ನ್ಯೂಸಿನಲ್ಲಿದ್ದರು. ಫಿಲ್ಮ್ ಬ್ಯೂರೋ ಮುಖ್ಯಸ್ಥರಾಗಿದ್ದರು. ಅದೇ ಮೊದಲ ಬಾರಿಗೆ ರಾಧಿಕಾ ಬಹಿರಂಗವಾಗಿ ತಮ್ಮಿಬ್ಬರ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ಆದರೆ ವಿಷಯ ಗೊತ್ತಿರಲಿ, ಇಡೀ ಸಂದರ್ಶನದಲ್ಲಿ ಕುಮಾರಸ್ವಾಮಿ ಹೆಸರು ಪ್ರಸ್ತಾಪ ಮಾಡದೆಯೇ ಮಾತನಾಡುತ್ತಾರೆ ರಾಧಿಕಾ ಕುಮಾರಸ್ವಾಮಿ.
ಮತ್ತೆ ಮತ್ತೆ ರಾಧಿಕಾ ಹೆಸರು ಬರೋದ್ಯಾಕೆ..?
ಪದೇ ಪದೇ ರಾಧಿಕಾ ಹೆಸರು ಪ್ರಸ್ತಾಪ ಮಾಡಿದರೆ ಕುಮಾರಸ್ವಾಮಿ ಅವರು ಇವತ್ತಿಗೂ ಡಿಸ್ಟರ್ಬ್ ಆಗುತ್ತಾರೆ. ರಾಜಕೀಯವಾಗಿ ಸದ್ಯಕ್ಕೆ ಕುಮಾರಸ್ವಾಮಿ ಅವರದ್ದು ಮೇಲುಗೈ ಆಗಿದೆ. ರಾಧಿಕಾ ಹೆಸರು ಹೇಳಿದರೆ ಕುಮಾರಸ್ವಾಮಿ ಎಷ್ಟರಮಟ್ಟಿಗೆ ಡಿಸ್ಟರ್ಬ್ ಆಗ್ತಾರೆ ಅಂದ್ರೆ, ಅವರು ಮಾತಿನ ಮೇಲೆ ಕಂಟ್ರೋಲ್ ತಪ್ತಾರೆ. ರಾಜಕೀಯವಾಗಿ ಎದುರಾಳಿಗಳಿಗೆ ಬೇಕಾಗಿರುವುದು ಅದೇ. ಕುಮಾರಸ್ವಾಮಿ ತಪ್ಪು ಮಾಡಿದರೆ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಬಹುದು.
ಕುಮಾರಸ್ವಾಮಿ ಮಾಡಿದ್ದು ಸರಿಯೋ.. ತಪ್ಪೋ.. ಅದು ಜನರಿಗೆ ಬಿಟ್ಟಿದ್ದು. ಆದರೆ ವಾಸ್ತವವಾಗಿ ರಾಧಿಕಾ ಹೆಸರು ಪ್ರಸ್ತಾಪವಾಗುವುದರ ಮೂಲ ಕಾರಣ ಇದೇ. ಜಸ್ಟ್ ಡಿಸ್ಟರ್ಬ್ ಕುಮಾರಸ್ವಾಮಿ.



