ನಿಮ್ಮ ‘ಸಿದ್ವಿಲಾಸ’ಕ್ಕೆ ಉಘೇಉಘೇ ಎನ್ನಲೇಬೇಕು. “ಅಂದು : ಹಗರಣಗಳಿಂದ ಪಾರಾಗಲು ಲೋಕಾಯುಕ್ತಕ್ಕೇ ಸಮಾಧಿ ಕಟ್ಟಿ ಎಸಿಬಿ ರಚನೆ ಮಾಡಿಕೊಂಡಿರಿ! ಇಂದು : ಮೂಡಾಗರಣದಿಂದ ಬಚಾವಾಗಲು ನಿಮಗೀಗ ಅದೇ ಲೋಕಾಯುಕ್ತವೇsss ಗತಿ!!. Karma Hit back ಎಂದರೇ ಇದೇ ಅಲ್ಲವೇ ಸಿದ್ದರಾಮಯ್ಯನವರೇ?..
ಒಂದು ಟ್ವೀಟ್ ಮೂಲಕ ಕುಟುಕಿದ್ದಾರೆ ಕುಮಾರಸ್ವಾಮಿ. ನಿಮ್ಮ ಗ್ರಹಚಾರಕ್ಕೆ ಎಸಿಬಿಯನ್ನೂ ಹೈಕೋರ್ಟ್ ಬರ್ಖಾಸ್ತು ಮಾಡಿಬಿಟ್ಟಿತು. ಈಗ ಲೋಕಾಯುಕ್ತವನ್ನೇ ಗುರಾಣಿ ಮಾಡಿಕೊಂಡು ಸಿಬಿಐ ರಾಜ್ಯ ಪ್ರವೇಶಕ್ಕೆ ಸಂಪುಟದಿಂದ ಬಾಗಿಲು ಬಂದ್ ಮಾಡಿಸಿದ್ದೀರಿ. ಅಲ್ಲಿಗೆ ಆರೋಪಿ ಅಪರಾಧಿಯಾದ ಎಂದೇ ಲೆಕ್ಕ. ‘ ಸಿದ್ದಾಪರಾದ’ ಸಾಬೀತಿಗೆ ಇನ್ನೊಂದೇ ಹೆಜ್ಜೆ ಬಾಕಿ’’ ಎಂದು ಅವರು ಹೇಳಿದ್ದಾರೆ. “ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು.. ನಿಮಗೂ ಭಯವಿದೆsss!! ಅದೇ ಈ ನೆಲದ ಕಾನೂನಿನ ಶಕ್ತಿ. ಏನಂತೀರಿ?.. ಎಂದೂ ಕೆಣಕಿದ್ದಾರೆ. ಕುಮಾರಸ್ವಾಮಿಯವರ ಈ ಟೀಕೆಗೆ ಕಾರಣವೂ ಇದೆ.
ಸಿಬಿಐಗೆ ಮುಕ್ತ ತನಿಖೆ ಬಾಗಿಲು ಬಂದ್ ಮಾಡಿದ ಸಿದ್ಧರಾಮಯ್ಯ :
ಕರ್ನಾಟಕ ರಾಜ್ಯದ ಅಪರಾಧ ಪ್ರಕರಣಗಳ ತನಿಖೆ ನಡೆಸಲು ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ಮುಕ್ತ ಅನುಮತಿ ನೀಡಿದ್ದ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೆಹಲಿ ಪೊಲೀಸ್ ಎಸ್ಟಾಬ್ಲಿಷ್ʻಮೆಂಟ್-1946 ಅಡಿ ಸಿಬಿಐಗೆ ನೀಡಿದ್ದ ಮುಕ್ತ ತನಿಖೆಯ ಅನುಮತಿ ಹಿಂಪಡೆಯಲಾಗಿದೆ. ಹೀಗಾಗಿ ಇನ್ನು ಮುಂದೆ ಕರ್ನಾಟಕ ರಾಜ್ಯದ ಒಳಗೆ ಸಿಬಿಐ ಬರಬೇಕು ಎಂದರೆ ನ್ಯಾಯಾಲಯದ ಆದೇಶ ಇರಬೇಕು ಇಲ್ಲವೇ ರಾಜ್ಯ ಸರ್ಕಾರ ಅನುಮತಿ ಕೊಟ್ಟಿರಬೇಕು. ಕರ್ನಾಟಕದಲ್ಲಿ ಸ್ವಯಂ ಪ್ರೇರಿತವಾಗಿ ತನಿಖೆ ನಡೆಸುವ ಅಧಿಕಾರ ಸಿಬಿಐಗೆ ಇಲ್ಲ.
ಕೇಂದ್ರ ಸರ್ಕಾರವು ಸಿಬಿಐಯನ್ನು ಕಾನೂನಾತ್ಮಕ ವಾಗಿ ಬಳಕೆ ಮಾಡುತ್ತಿಲ್ಲ. ಸಿಬಿಐ ಸಂಪೂರ್ಣ ಪೂರ್ವಾಗ್ರಹಪೀಡಿತವಾಗಿದೆ. ಹೀಗಾಗಿ ಪ್ರತಿ ಪ್ರಕರಣವನ್ನು ಪರಿಶೀಲಿಸಿ, ಅಗತ್ಯವಿದ್ದರೆ ಮಾತ್ರ ಸಿಬಿಐ ತನಿಖೆಗೆ ನೀಡುತ್ತೇವೆ. ಸ್ವಯಂ ಪ್ರೇರಿತವಾಗಿ ತನಿಖೆ ಕೈಗೆತ್ತಿಕೊಳ್ಳುವ ಅನುಮತಿ ಹಿಂಪಡೆದಿದ್ದೇವೆ. ನ್ಯಾಯಾಲಯವೇ ಸಿಬಿಐ ತನಿಖೆಗೆ ನೀಡಿದರೆ ನಮ್ಮ ಈ ನಿರ್ಧಾರ ಅಡ್ಡಿಯಾಗುವುದಿಲ್ಲ ಎನ್ನುವುದು ಸರ್ಕಾರದ ವಾದ. ಸಿಬಿಐಗೆ ರಾಜ್ಯ ಸರ್ಕಾರ ನೀಡಿರುವ ಹಲವು ಪ್ರಕರಣಗಳ ಬಗ್ಗೆ ಎಂಟು ತಿಂಗಳಾದರೂ ಸಿಬಿಐ ಚಾರ್ಜ್ ಶೀಟ್ ಕೂಡ ಸಲ್ಲಿಕೆ ಮಾಡಿಲ್ಲ. ಅದೇ ಸಿಬಿಐ ಪೂರ್ವಾಗ್ರಹ ಪೀಡಿತವಾಗಿ ಒಂದು ಪಕ್ಷದವರನ್ನು ಗುರಿಯಾಗಿಸಿ ಸಿಬಿಐ ಕೆಲಸ ಮಾಡುತ್ತಿದೆ ಎನ್ನವುದು ಸಚಿವರೂ ಆಗಿರುವ ಎಚ್.ಕೆ.ಪಾಟೀಲ್ ಹೇಳುತ್ತಿರುವ ದೂರು. ಡಿ.ಕೆ.ರವಿ, ಎಂ.ಕೆ.ಗಣಪತಿ ಪ್ರಕರಣದಲ್ಲಿ ಸಿಬಿಐ ನಿಮ್ಮ ಸರ್ಕಾರದ ಪರವೇ ವರದಿ ನೀಡಿಲ್ಲವೇ ಎಂಬ ಪ್ರಶ್ನೆಗೆ, ಅದು ಬೇರೆ ಪ್ರಶ್ನೆ. ಈಗ ಕಳೆದ ಎರಡು ವರ್ಷದಿಂದ ಸಿಬಿಐ ನಡೆಯನ್ನು ಗಮನಿಸಿ. ತನಿಖಾ ಸಂಸ್ಥೆಗಳನ್ನು ಕೇಂದ್ರ ಹೇಗೆ ಬಳಸಿಕೊಳ್ಳುತ್ತಿದೆ ಎಂಬುದನ್ನು ಗಮನಿಸಿ ಎಂದಿದ್ದಾರೆ ಪಾಟೀಲ್.
ಕುಮಾರಸ್ವಾಮಿ ಇದೇ ವಿಷಯದಲ್ಲಿ ಸಿದ್ಧರಾಮಯ್ಯ ಅವರನ್ನು ಕೆಣಕುತ್ತಿದ್ದಾರೆ. ಈ ಹಿಂದೆಯೂ ಕೂಡಾ ಸಿದ್ಧರಾಮಯ್ಯ ಲೋಕಾಯುಕ್ತವನ್ನು ಬಲಹೀನರಾಗಿ ಮಾಡಿದ್ದರು. ಅಲ್ಲದೆ ಎಸಿಬಿ ರಚನೆ ಮಾಡಿದ್ದರು. ಹೈಕೋರ್ಟ್ ತೀರ್ಪಿನಿಂದಾಗಿ ಮತ್ತೆ ಲೋಕಾಯುಕ್ತಕ್ಕೆ ಬಲ ಬಂತು. ಇದೀಗ ಮುಂಜಾಗ್ರತೆ ಕ್ರಮವಾಗಿಯೇ ಸಿಬಿಐ ಎಂಟ್ರಿಯನ್ನು ನಿಷೇಧಿಸಲು ಹುನ್ನಾರ ನಡೆಯುತ್ತಿದೆ. ಆ ತಂತ್ರದ ಭಾಗವೇ ಈಗಿನ ದಿಢೀರ್ ಕ್ಯಾಬಿನೆಟ್ ನಿರ್ಣಯ ಎನ್ನುವುದು ಕುಮಾರಸ್ವಾಮಿ ಆರೋಪ. ಪ್ರತಿಪಕ್ಷಗಳು ಬೇಡಿಕೆಯಿಟ್ಟ ಬೆನ್ನಲ್ಲೇ ರಾಜ್ಯದಲ್ಲಿ ಮುಕ್ತ ಸಿಬಿಐ ತನಿಖೆ ನಡೆಸುವಂತಿಲ್ಲ ಎಂಬ ಆದೇಶವನ್ನು ಸರ್ಕಾರ ಜಾರಿಗೊಳಿಸಿರುವುದಕ್ಕೆ ಎಚ್ ಡಿ ಕುಮಾರಸ್ವಾಮಿಯವರು ಮೇಲಿನಂತೆ ಟೀಕಿಸಿದ್ದಾರೆ. ಆದರೆ ಇಷ್ಟೆಲ್ಲ ಆಗಿಯೂ ಬಿಜೆಪಿಯವರು ನಡೆಸಿದ ಪ್ರತಿಭಟನೆಯಲ್ಲಿ ಜೆಡಿಎಸ್‌ನ ಯಾವೊಬ್ಬ ಕಾರ್ಯಕರ್ತರೂ ಹೋಗದಂತೆ ತಡೆದಿದ್ದಾರೆ. ಕುಮಾರಸ್ವಾಮಿ ಮಾತುಗಳಿಗೂ ಕೃತಿಗಳಿಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ ಎಂಬ ಟೀಕೆಯೂ ವ್ಯಕ್ತವಾಗುತ್ತಿದೆ.



