ದೇವೇಗೌಡರ ಕುಟುಂಬ ನಾಶ ಮಾಡಲು ಹೊರಟ ಪ್ರೀತಂ ಗೌಡನನ್ನು ಸಭೆಯಲ್ಲಿ ಕೂರಿಸಿಕೊಂಡು, ನನ್ನನ್ನು ಸಭೆಗೆ ಕರೆಯುತ್ತೀರಾ?
ಹಾಸನದಲ್ಲಿ ಪೆನ್ ಡ್ರೈವ್ ಹಂಚಿದೋರು ಯಾರು ಅಂಥ ಗೊತ್ತಿಲ್ವಾ?
ಚುನಾವಣಾ ಮೈತ್ರಿಯೇ ಬೇರೆ, ರಾಜಕೀಯವೇ ಬೇರೆ..
ಪಾದಯಾತ್ರೆಯಿಂದ ಆಗುವ ಲಾಭ ಏನು ? ಕಾನೂನು ಹೋರಾಟವೇ ಮುಖ್ಯ, ರಾಜಕೀಯ ನಮಗೆ ಪ್ರಮುಖ ವಿಷಯ ಅಲ್ಲ.
ಈ ಪಾದಯಾತ್ರೆಗೆ ನಾವು ನೈತಿಕ ಬೆಂಬಲವನ್ನೂ ಕೊಡಲ್ಲ
ಹೀಗೆಲ್ಲ ಹೇಳುತ್ತಾ ಹೋಗಿರುವ ಹೆಚ್.ಡಿ.ಕುಮಾರಸ್ವಾಮಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಾಗ ಯಾಕೆ ಬೆಂಬಲ ಕೊಡಬೇಕು. ಬೆಂಗಳೂರಿನಿಂದ ಮೈಸೂರುವರೆಗೂ ನಮ್ಮ ಶಕ್ತಿ ಇದೆ. ನಮ್ಮನ್ನು ಪರಿಗಣಿಸಿದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ನನ್ನ ಮನಸ್ಸಿಗೆ ನೋವಾಗಿದೆ. ಯಾವ ಕಾರಣಕ್ಕಾಗಿ ನಾವು ಬೆಂಬಲ ಕೊಡಬೇಕು? ಪ್ರೀತಂಗೌಡ ಯಾರು? ಪೆನ್ ಡ್ರೈವ್ ಹಂಚಿಕೆಗೆ ಯಾರು ಕಾರಣ ಅನ್ನೋದು ಗೊತ್ತಿದೆ. ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟುವನು ಆತ. ಅಂತವರ ಜೊತೆಗೆ ವೇದಿಕೆ ಮೇಲೆ ಕೂರಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಪ್ರೀತಂ ಗೌಡ ಕಾರಣದಿಂದ ಬಿಜೆಪಿ-ಜೆಡಿಎಸ್ ಜಂಟಿಯಾಗಿ ನಡೆಸಬೇಕಿದ್ದ ಮುಡಾ ಸೈಟ್ ಕುರಿತಾದ ಮೈಸೂರು ಚಲೋ ರದ್ದಾಗಬಹುದಾದ ಸನ್ನಿವೇಶ ಸೃಷ್ಟಿಯಾಗಿದೆ. ಪಾದಯಾತ್ರೆಯ ಸಿದ್ಧತೆಯಲ್ಲಿ, ಸಭೆಗಳಲ್ಲಿ, ನಿರ್ಧಾರಗಳಲ್ಲಿ ಹಾಸನ ಮಾಜಿ ಶಾಸಕರೂ ಆಗಿರುವ ಪ್ರೀತಂ ಗೌಡ ಮುಂಚೂಣಿಯಲ್ಲಿರುವುದು ಕುಮಾರಸ್ವಾಮಿ ಕಣ್ಣು ಕೆಂಪಗಾಗಿಸಿದೆ.
ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದಿದ್ದ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಬಿಜೆಪಿ ಕೋರ್ ಕಮಿಟಿ ಸದಸ್ಯರಲ್ಲದ ಪ್ರೀತಂ ಗೌಡ ಹಾಜರಾಗಿದ್ದರು. ಅದು ಅಂದೇ ಕುಮಾರಸ್ವಾಮಿ ಕಣ್ಣು ಕೆಂಪಗಾಗಿಸಿತ್ತು. ಮಾಹಿತಿಗಳ ಪ್ರಕಾರ, ಸಭೆಯಲ್ಲೇ ಪ್ರೀತಂ ಗೌಡ ಉಪಸ್ಥಿತಿ ಬಗ್ಗೆ ಬಿಜೆಪಿ ನಾಯಕರ ಮುಂದೆ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಅದರ ಮುಂದುವರಿದ ಭಾಗವಾಗಿ ಬುಧವಾರ ದೆಹಲಿಯಲ್ಲಿ ಕೇಂದ್ರ ಸಚಿವರ ಬಾಯಿಂದ ನೇರವಾಗಿ ಪ್ರೀತಂ ಗೌಡ ವಿರುದ್ಧ ಅಸಹನೆ ಹೊರಬಿದ್ದಿದೆ. ಪಾದಯಾತ್ರೆಗೆ ಎನ್ಡಿಎ ಮಿತ್ರ ಪಕ್ಷ ಜೆಡಿಎಸ್ ಬೆಂಬಲ ನಿರಾಕರಿಸಿದೆ.
ಆದರೆ.. ಪಾದಯಾತ್ರೆಗೆ ಬೆಂಬಲ ಕೊಡದಿರುವ ಹಿಂದೆ ಬೇರೆಯದೇ ಕಾರಣಗಳೂ ಕಾಣಿಸುತ್ತಿವೆ. ಹೇಳಿ ಕೇಳಿ ಪಾದಯಾತ್ರೆ ನಡೆಯುವುದು ಒಕ್ಕಲಿಗರ ಕೋಟೆಯಲ್ಲಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿರುವ ಕಾರಣ ಭಾಗವಹಿಸುವಂತಿಲ್ಲ. ಭಾಗವಹಿಸುವುದಕ್ಕೆ ವಯಸ್ಸೂ ಸಹಕರಿಸುವುದಿಲ್ಲ. ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಹೋದರೂ.. ಮೈಲೇಜ್ ಸಿಗುವುದು ಬಿಜೆಪಿಯ ವಿಜಯೇಂದ್ರ ಅವರಿಗೆ. ಜೆಡಿಎಸ್ ಕಾರ್ಯಕರ್ತರೂ ದೊಡ್ಡ ಮಟ್ಟದಲ್ಲಿ ಭಾಗವಹಿಸಿದರೂ.. ಆಗಲೂ ಕ್ರೆಡಿಟ್ ಹೋಗುವುದು ವಿಜಯೇಂದ್ರ ಅವರಿಗೆ.
ಇದೂವರೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ದೆಹಲಿ ಮಟ್ಟದಲ್ಲಿ ಸಕ್ಸಸ್ ಆಗಿದೆಯಾದರೂ.. ಸ್ಥಳೀಯ ನಾಯಕರ ಮಟ್ಟದಲ್ಲಿ ಆಗಿಲ್ಲ. ಹೀಗಿರುವಾಗ ವಿಜಯೇಂದ್ರ ಅವರಿಗೆ ಬೆಂಬಲ ಕೊಟ್ಟು, ನಾಯಕತ್ವ ಕೊಟ್ಟು, ಯಶಸ್ವಿಗೊಳಿಸುವುದಾದರೂ ಏಕೆ..? ಎಂಬ ಪ್ರಶ್ನೆ ಕುಮಾರಸ್ವಾಮಿ ಅವರದ್ದು.
ಆದರೆ ಬಹಿರಂಗವಾಗಿ ಬಿತ್ತನೆ ಸಮಯ, ಕೇರಳ ಪ್ರವಾಹ ಮತ್ತು ಅಂತಿಮವಾಗಿ ಪ್ರೀತಂಗೌಡ ಕಾರಣವನ್ನು ಕೊಡಲಾಗಿದೆ. ಅಷ್ಟೆ.



