ದುನಿಯಾ ವಿಜಯ್ ಅವರ ‘ಭೀಮ’ ಸಿನಿಮಾ ನಿರೀಕ್ಷೆಗೂ ಮೀರಿ ಗೆದ್ದಿದೆ. ಚಿತ್ರಮಂದಿರಗಳನ್ನೇ ನಂಬಿ ಸಿನಿಮಾ ಮಾಡಿದೆವು. ಗೆದ್ದೆವು ಎನ್ನುತ್ತಿದ್ದಾರೆ ವಿಜಯ್. ಭೀಮ, ವಿಜಯ್ ಅವರದ್ದೇ ನಿರ್ದೇಶನದ ಎರಡನೇ ಸಿನಿಮಾ. ಮೊದಲ ಸಿನಿಮಾ ಸಲಗ ಕೂಡಾ ಸೂಪರ್ ಹಿಟ್ ಆಗಿತ್ತು. ಈ ಬಗ್ಗೆ ಮಾತನಾಡಿರುವ ವಿಜಯ್ ನಮ್ಮನ್ನು ಕೆಣಕಿ, ಹಂಗಿಸಿದವರಿಗೆ ಈ ಚಿತ್ರದ ಯಶಸ್ಸು ಉತ್ತರ ಕೊಟ್ಟಿದೆ. ಎಲ್ಲರೂ ಇಂಥ ಚಿತ್ರಗಳನ್ನು ನೋಡಬೇಕು, ಮಕ್ಕಳು, ಪೋಷಕರು ಎಲ್ಲರೂ ಕೂತು ನೋಡುವ ಚಿತ್ರವಿದು ಎಂದು ಮೆಚ್ಚಿಕೊಳ್ಳುತ್ತಿದ್ದಾರೆ. ಒಳ್ಳೆಯ ವಿಚಾರ- ಸಂದೇಶ ಹೇಳುವುದಕ್ಕೆ ನಾನು ರಗಡ್ ದಾರಿಯನ್ನು ಆಯ್ಕೆ ಮಾಡಿಕೊಂಡೆ. ತ್ರಮಂದಿರ ನಂಬಿಕೊಂಡು ಸಿನಿಮಾ ಮಾಡಿದರೆ ಗೆದ್ದೇ ಗೆಲ್ಲುತ್ತೇವೆ ಎಂಬುದು ಸಾಬೀತಾಗಿದೆ ಎಂದಿದ್ದಾರೆ. ಆದರೆ ಗೆಲುವಿಗೆ ಕೇವಲ ಇದಿಷ್ಟೇ ಕಾರಣವಾ ಎಂದು ನೋಡಿದರೆ.. ಹಾಗಿಲ್ಲ. ಕಾರಣ ಕೇವಲ ಇಷ್ಟೇ ಅಲ್ಲ..
ವಿಜಯ್ ಅವರು ಚಿತ್ರದ ನಿರ್ಮಾಪಕರಾದ ಜಗದೀಶ್ ಗೌಡ ಹಾಗೂ ಕೃಷ್ಣಸಾರ್ಥಕ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕೃಷ್ಣಸಾರ್ಥಕ್, ಜಗದೀಶ್ ಗೌಡ, ಪ್ರೀ ರಿಲೀಸ್ ಬಿಸಿನೆಸ್ ಇಲ್ಲದೆ ಇರುವ ಹೊತ್ತಿನಲ್ಲಿ ಶೇ.99ರಷ್ಟು ರಿಸ್ಕ್‌ನಲ್ಲಿ ಪ್ರೇಕ್ಷಕರ ಮೇಲೆ ನಂಬಿಕೆ ಇಟ್ಟು ನಮ್ಮ ಚಿತ್ರವನ್ನು ಬಿಡುಗಡೆ ಮಾಡಿದ್ದೆವು. ಆ ನಂಬಿಕೆ ಈಗ ನಿಜವಾಗಿದೆ. ಈ ಚಿತ್ರದ ಮೂಲಕ ಒಂದು ಸೂಕ್ಷ್ಮ ವಿಚಾರವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದೇನೆ. ಸೆನ್ಸಾರ್‌ನಿಂದ ಎ ಸರ್ಟಿಫಿಕೇಟ್ ನೀಡಿದ್ದಾರೆ. ಆದರೂ ಎಲ್ಲಾ ವಯಸ್ಸಿನವರು ನೋಡಬೇಕಾದ ಕತೆ ಈ ಚಿತ್ರದಲ್ಲಿದೆ. ವಿದ್ಯಾರ್ಥಿಗಳು, ಹದಿಹರೆಯದವರು, ಅದರಲ್ಲೂ ಹೆಣ್ಣು ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ ಇದು ಎಂದು ಹೇಳಿದ್ದಾರೆ ವಿಜಯ್.
ಸಂಭಾಷಣೆಕಾರ ಮಾಸ್ತಿ, ಸಂಗೀತ ನಿರ್ದೇಶಕ ಚರಣ್ ರಾಜ್, ನಾಯಕಿ ಅಶ್ವಿನಿ, ಪ್ರಮುಖ ಪಾತ್ರಧಾರಿಗಳಾದ ಡ್ರ್ಯಾಗನ್ ಮಂಜು, ಪ್ರಿಯಾ ಷಟಮರ್ಶನ, ನಯನಾ ಸೂಡ, ಜಯಸೂರ್ಯ, ಆಂಟೋನಿ, ನೃತ್ಯ ನಿರ್ದೇಶಕ ಧನು, ಸಾಹಸ ನಿರ್ದೇಶಕ ಶಿವು ಇಡೀ ಚಿತ್ರತಂಡ ಭೀಮನ ಪಾರ್ಟಿಯನ್ನು ಎಂಜಾಯ್ ಮಾಡಿದೆ.
ಆದರೆ.. ಭೀಮ ಗೆದ್ದಿದ್ದು ಏಕೆ ಎಂದು ಕಾರಣ ಹುಡುಕೋದಾದರೆ..
ಕರಟಕ ದಮನಕ ಬಿಟ್ಟರೆ, ಇತ್ತೀಚೆಗೆ ಸ್ಟಾರ್ ನಟರ ಚಿತ್ರಗಳು ಬಂದೇ ಇರಲಿಲ್ಲ. ಮಾಸ್ ಹೀರೋಗೆ ಬೇಕಾದ ಮಸಾಲಾ ಕಥೆಯೂ ಇತ್ತು.
ಅಲ್ಲದೆ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲೇ ಚಿತ್ರೀಕರಣಗೊಂಡಿದ್ದ ಸಿನಿಮಾ. ನೋಡಿದ ಪ್ರೇಕ್ಷಕರು ಪ್ರತಿ ದೃಶ್ಯದಲ್ಲೂ ತಮ್ಮ ತಮ್ಮ ಏರಿಯಾ ನೆನಪಿಸಿಕೊಂಡು ಕನೆಕ್ಟ್ ಆಗುತ್ತಿದ್ದರು.
ಚಿತ್ರದಲ್ಲಿ ಹಸಿ ಹಸಿ ಡೈಲಾಗ್, ದೃಶ್ಯ ರಕ್ತಸಿಕ್ತ ದೃಶ್ಯಗಳಿದ್ದರೂ.. ಆ ಎಲ್ಲದಕ್ಕೂ ಸೋಷಿಯಲ್ ರೆಸ್ಪಾನ್ಸಿಬಿಲಿಟಿಯ ಹಣೆ ಪಟ್ಟಿ ಕಟ್ಟಿದ್ದರು ವಿಜಯ್.
ಮಾದಕ ವಸ್ತುಗಳಿಗೆ ಸಾವಿರಾರೇ ಏನು.. ಲಕ್ಷಾಂತರ ಮಕ್ಕಳು ಬಲಿಯಾಗುತ್ತಿದ್ದಾರೆ. ಹೇಳಿಕೊಳ್ಳೋದಕ್ಕೆ ಸಂಕೋಚ, ಹಿಂಜರಿಕೆಯಿಂದ ಹೇಳಿ ಕೊಳ್ಳದ ಸಾವಿರಾರು ಕುಟುಂಬಗಳಿವೆ. ಇದು ಜನರಿಗೆ ಕನೆಕ್ಟ್ ಆಯ್ತು.
ಚಿತ್ರದ ಹಾಡುಗಳು ಥ್ರಿಲ್ ಕೊಟ್ಟಿದ್ದವು. ಯಾವುದೇ ಸಿನಿಮಾದ ನಿಜವಾದ ರಾಯಭಾರಿಗಳೆಂದರೆ ಹಾಡುಗಳು. ಆ ನಿಟ್ಟಿನಲ್ಲಿ ವಿಜಯ್ ಗೆದ್ದಿದ್ದರು.
ಚಿತ್ರದ ಹಿರಿಯ ಕಲಾವಿದರೆಲ್ಲರ ಅಭಿನಯ, ಹೊಸ ಪ್ರತಿಭೆಗಳ ಸಂಗಮ ಚೆನ್ನಾಗಿ ವರ್ಕೌಟ್ ಆಯ್ತು.
ಚಿತ್ರದ ಮ್ಯೂಸಿಕ್, ಅದಕ್ಕೆ ತಕ್ಕ ಛಾಯಾಗ್ರಹಣ ಪ್ರೇಕ್ಷಕರನ್ನು ಗಟ್ಟಿಯಾಗಿ ಕೂರುವಂತೆ ಮಾಡ್ತು.
ಸೋಲಿಗೆ ಹೇಗೆ ಸಾವಿರಾರು ಅಪ್ಪಂದಿರು ಹುಟ್ಟಿಕೊಳ್ತಾರೋ.. ಹಾಗೆಯೇ ಗೆಲುವಿಗೆ ಇಂತಹುದೇ ಒಂದು ಕಾರಣ ಇರೋದಿಲ್ಲ. ಭೀಮ ಗೆಲುವು ಕೂಡಾ ಹಾಗೆಯೇ.. ವಿಜಯ್ ಅವರು ಹೀರೋ ಮತ್ತು ಡೈರೆಕ್ಟರ್. ಗೆಲುವಿನ ದೊಡ್ಡ ಶ್ರೇಯಸ್ಸು ಅವರಿಗೆ ಸಲ್ಲಬೇಕು ಎನ್ನುವುದೇನೋ ನಿಜ.. ಆದರೆ. ಇಡೀ ತಂಡದ ಶ್ರಮ ಗೆಲುವಿನಲ್ಲಿ ಎದ್ದು ಕಾಣ್ತಿದೆ.



