ಮಕ್ಕಳು ಏನಾದರೂ ಸಾಧನೆ ಮಾಡಿದಾಗ.. ತಮ್ಮ ತಂದೆ ತಾಯಿಗೆ, ಅಥವಾ ಅಣ್ಣ, ಅಕ್ಕನಿಗೆ, ಅಥವಾ.. ಗುರುಗಳಿಗೆ ಗೆಲುವನ್ನು ಅರ್ಪಿಸುತ್ತಾರೆ. ಛಲಪತಿಯವರ ಮಗಳು ಮಾತ್ರ ವಿಭಿನ್ನ. ಛಲಪತಿ ಅವರ ಮಗಳು ಅಮೂಲ್ಯ ಪಿಯುನಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ತಮ್ಮ ಈ ಸಾಧನೆಯನ್ನ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಿದ್ದಾರೆ.
ಛಲಪತಿ ಯಾರು ಎಂದರೆ ಪುನೀತ್ ರಾಜ್ ಕುಮಾರ್ ಅವರ ಡ್ರೈವರ್ ಆಗಿದ್ದವರು. ಬಾಡಿಗಾರ್ಡ್ ಆಗಿದ್ದವರು. ಪುನೀತ್ ನಿಧನದ ನಂತರವೂ ಅಲ್ಲಿಯೇ ಇದ್ದ ಛಲಪತಿ, ಆಮೇಲೆ ಕೆಲಸ ಬಿಟ್ಟಿದ್ದರು. ದಿನವೂ ಮನೆಗೆ ಹೋಗೋದು, ಸುಮ್ಮನೆ ಕೂರೋದು ಆಗುತ್ತಿರಲಿಲ್ಲ. ಪ್ರತಿದಿನವೂ ಯಜಮಾನರನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ ಎನ್ನುವ ಛಲಪತಿ ಅವರಿಗೆ ಇವತ್ತಿಗೂ ಪುನೀತ್ ಮನೆಯಲ್ಲಿ ಅದೇ ಗೌರವ. ಅದೇ ಪ್ರೀತಿ. ಇವರ ಮಗಳು ಅಮೂಲ್ಯ ಅವರೇ ಡಿಸ್ಟಿಂಕ್ಷನ್ ಪಡೆದು ಪಾಸ್ ಆಗಿರುವುದು. ಪಾಸ್ ಆದ ಮೇಲೆ ಆ ಗೆಲುವನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಿರುವುದು.
‘‘ನನ್ನ ಮಗಳ ಸಾಧನೆಗೆ ಯಜಮಾನರ (ಪುನೀತ್ ರಾಜ್ ಕುಮಾರ್) ಆಶೀರ್ವಾದ ಕಾರಣ. ನನ್ನ ಮಗಳು ಪ್ರಾಥಮಿಕ ಶಾಲೆಯಲ್ಲಿ ಇದ್ದಾಗಿನಿಂದಲೂ ಅಪ್ಪು ಸರ್ ಅವರೇ ಓದಿಸುತ್ತಿದ್ದರು. ನನ್ನ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಅವರೇ ಹೊತ್ತಿದ್ದರು. ನನ್ನ ಮಗಳು ಇವತ್ತು ಏನೇ ಸಾಧನೆ ಮಾಡಿದ್ದರೂ, ಅದಕ್ಕೆ ಯಜಮಾನರೇ ಕಾರಣ’’ ಎಂದು ಛಲಪತಿ ಹೇಳಿದರೆ.. ‘’ನಮ್ಮನ್ನು ಓದಿಸಿದ್ದು ಪುನೀತ್ ರಾಜ್‌ಕುಮಾರ್ ಸರ್. ಅವರ ಸಹಾಯಕ್ಕೆ ನಾನು ಓದಿನ ಮೂಲಕ ಧನ್ಯವಾದ ಹೇಳಿದ್ದೇನೆ’’ ಎಂದಿದ್ದಾರೆ ಮಗಳು ಅಮೂಲ್ಯ.
ವಾಣಿಜ್ಯ ವಿಭಾಗದಲ್ಲಿ 94.33% ಪಡೆದಿರುವ ಅಮೂಲ್ಯಗೆ ಬಿಕಾಂ ಓದುವ ಆಸೆ ಇದೆ. ಸಿಎ ಆಗಬೇಕು ಎಂಬ ಕನಸು ಹೊಂದಿದ್ದಾರೆ ಅಮೂಲ್ಯ. ಅಮೂಲ್ಯ ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ಅಮೂಲ್ಯ 98 ಅಂಕಗಳನ್ನ ಪಡೆದಿದ್ದಾರೆ. ಇಂಗ್ಲೀಷ್‌ನಲ್ಲಿ 90 ಮಾರ್ಕ್ಸ್, ಎಕನಾಮಿಕ್ಸ್‌ನಲ್ಲಿ 97, ಬಿಸಿನೆಸ್ ಸ್ಟಡೀಸ್‌ನಲ್ಲಿ 90, ಅಕೌಂಟೆನ್ಸಿನಲ್ಲಿ 96, ಸ್ಟಾಟಿಸ್ಟಿಕ್ಸ್‌ನಲ್ಲಿ 95 ಅಂಕಗಳನ್ನ ಗಳಿಸಿದ್ದಾರೆ.
ಪುನೀತ್ ಅವರು ಇಂತಹ ಕಾರಣಗಳಿಂದಾಗಿಯೇ ಜನಮಾನಸದಲ್ಲಿ ಇಂದಿಗೂ ಬದುಕಿದ್ದಾರೆ. ಮಾಡುತ್ತಿದ್ದ ಇಂತಹ ಸೇವೆಗಳನ್ನು ಸಹಾಯ ಪಡೆದವರೇ ಹೇಳಿಕೊಳ್ಳದೆ ಇದ್ದಿದ್ದರೆ, ಅವುಗಳೂ ಗೊತ್ತಾಗುತ್ತಿರಲಿಲ್ಲ. ಏಕೆಂದರೆ ಪುನೀತ್ ತಾವು ಮಾಡಿದ್ದೆಲ್ಲವನ್ನೂ ಹೇಳಿಕೊಳ್ಳುತ್ತಿದ್ದ ಅಶ್ವಿನಿ, ಶಿವಣ್ಣ ಅವರಿಂದಲೇ ವಿಷಯವನ್ನು ಹೇಳಿಕೊಂಡಿರಲಿಲ್ಲ. ಪುನೀತ್ ಅವರಿಂದ ಉಪಕೃತರಾದವರೇ.. ನನಗೆ ಇಂತಹ ಸಹಾಯ ಮಾಡಿದ್ದಾರೆ ಎಂದು ದಾಖಲೆಯನ್ನೂ ತೋರಿಸಿದ ಮೇಲೆ ಜನ ನಂಬುವಂತಾಯಿತು. ಹೀಗಾಗಿ ಪುನೀತ್ ಅವರ ಮೇಲೆ ಒಳ್ಳೆ ಆಕ್ಟಿಂಗ್ ಮಾಡ್ತಿದ್ರು, ಡಾ.ರಾಜ್ ಅವರ ಮಗ ಎಂದು ಇದ್ದ ಪ್ರೀತಿ, ಅಭಿಮಾನ ಹಲವು ಪಟ್ಟು ಹೆಚ್ಚಾಗಿ ಬದಲಾಗಿದೆ. ಈಗ ನೋಡಿ.. ಅವರ ಬಳಿ ಕೆಲಸ ಮಾಡ್ತಿದ್ದ ಬಾಡಿಗಾರ್ಡ್ ಮಗಳ ಓದಿಗೆ ನೆರವಾಗಿದ್ದ ವಿಷಯವೂ ಅಷ್ಟೇ, ಛಲಪತಿ ಅವರು ಹೇಳಿಕೊಂಡಿದ್ದಕ್ಕೆ, ಅವರ ಮಗಳು ಹೇಳಿಕೊಂಡ ಕಾರಣಕ್ಕೆ ಗೊತ್ತಾಗಿದೆ. ಪುನೀತ್ ಕರ್ನಾಟಕ ರತ್ನ ಆಗಿರುವುದು ಇಂತಹ ಕಾರಣಗಳಿಂದಲೇ.



