ಬ್ಯಾಡ್ ಮ್ಯಾನರ್ಸ್ ಚಿತ್ರದ ಹೀರೋ ಅಭಿಷೇಕ್ ಅಂಬರೀಷ್. ಮೊದಲ ಚಿತ್ರ ಅಮರ್ ಸೂಪರ್ ಫ್ಲಾಪ್ ಆಗಿದ್ದ ಕಾರಣದಿಂದಾಗಿ ಅಭಿಷೇಕ್ ಅಂಬರೀಷ್ ಅವರ 2ನೇ ಚಿತ್ರದ ಮೇಲೆ ನಿರೀಕ್ಷೆ ಮತ್ತು ಆತಂಕ ಎರಡೂ ಇದೆ. ಆ ನಿರೀಕ್ಷೆ ಹೆಚ್ಚಿಸಿರುವುದು ದುನಿಯಾ ಸೂರಿ. ದುನಿಯಾ, ಟಗರು ನಂತರ ರಗಡ್ ಸಿನಿಮಾಗಳನ್ನೇ ಕೊಟ್ಟಿರುವ ಸೂರಿ, ಈ ಬಾರಿ ಅಭಿಯನ್ನು ಹೀರೋ ಮಾಡಿರುವ ಸಿನಿಮಾ ಬ್ಯಾಡ್ ಮ್ಯಾನರ್ಸ್.
ಕಥೆಯೇ ಇಲ್ಲವೇನೋ ಎಂಬಂತೆ ಇರುವ ಟ್ರೇಲರ್ ನೋಡಿದರೂ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿರುವುದು ದುನಿಯಾ ಸೂರಿ ಅನ್ನೋದ್ರಲ್ಲಿ ಅನುಮಾನ ಇಲ್ಲ. ಈ ಚಿತ್ರದಲ್ಲಿ ಇಬ್ಬರು ಹೀರೋಯಿನ್ಸ್. ಒಬ್ಬರು ರಚಿತಾ ರಾಮ್. ಮತ್ತೊಬ್ಬರು ಪ್ರಿಯಾಂಕ ಕುಮಾರ್.
ರಚಿತಾ ರಾಮ್, ಅಭಿಯ ಮೊದಲ ಚಿತ್ರ ಅಮರ್ ಚಿತ್ರದಲ್ಲೂ ಗೆಸ್ಟ್ ಆಗಿ ಕಾಣಿಸಿಕೊಂಡಿದ್ದರು. ಅವರ ಮೇಲೆಯೇ ಒಂದು ಹಾಡು ಕೂಡಾ ಇತ್ತು. ಈ ಚಿತ್ರದಲ್ಲಿ ಅಭಿಗೆ ಅವರೇ ನಾಯಕಿ.
ಜೀವವನ್ನು ಬೆಳಗೋಕೆ
ಬೇಕೊಂದು ಕಿಡಿ..
ನೋವೆಲ್ಲ ಅಳಿಸೋಕೆ..
ಸಾಕೊಂದೇ ನುಡಿ..
ಹಾಗೂ
ಐ ಆಮ್ ಇನ್ ಲವ್
ಹಾಡುಗಳು ಪಿಕ್ಚರೈಸ್ ಆಗಿರುವುದೇ ಅಭಿ ಮತ್ತು ರಚಿತಾ ರಾಮ್ ಅವರ ಪ್ರೀತಿಯ ಮೇಲೆ. ಆದರೆ ಚಿತ್ರದ ಪ್ರಚಾರದ ವೇಳೆ ರಚಿತಾ ರಾಮ್ ನಾಪತ್ತೆಯಾಗಿದ್ದಾರೆ.
ಚಿತ್ರದ ಪ್ರಮೋಷನ್ ಕೂಡಾ ಡಲ್ ಹೊಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಕಾಣುತ್ತಿರುವವಷ್ಟು ಪ್ರಚಾರ ಟಿವಿ ಮಾಧ್ಯಮಗಳಲ್ಲಿ ಕಾಣುತ್ತಿಲ್ಲ. ಹೀಗಿರುವಾಗಲೇ ನಾಯಕಿ ಎಲ್ಲಿ ಹೋಗಿದ್ದಾರೆ? ಯಾಕೆ ಚಿತ್ರದ ಪ್ರಮೋಷನ್ʻನಲ್ಲಿ ಭಾಗವಹಿಸುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ಉತ್ತರ ಸಿಗುತ್ತಿಲ್ಲ.
ಇದೆಲ್ಲದರ ಮಧ್ಯೆ ನಟ ಅಭಿಷೇಕ್ ಅಂಬರೀಷ್ ಅವರಿಗೆ ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಮೊದಲ ಮೆಚ್ಚುಗೆ ಸಿಕ್ಕಿದೆ. ಒಂದು ಅಮ್ಮನದ್ದು, ಮತ್ತೊಂದು ಅಣ್ಣನದ್ದು. ನವೆಂಬರ್ 24ಕ್ಕೆ ರಿಲೀಸ್ ಆಗುತ್ತಿರುವ ಬ್ಯಾಡ್ ಮ್ಯಾನರ್ಸ್ ಚಿತ್ರವನ್ನು ದರ್ಶನ್ ಮತ್ತು ಸುಮಲತಾ ಅಂಬರೀಷ್ ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರಕ್ಕೆ 5 ಸ್ಟಾರ್ಸ್ ಕೊಟ್ಟಿದ್ದಾರೆ.
ಸಿನಿಮಾ ವಿಭಿನ್ನತೆಯ ದೃಷ್ಟಿಯಿಂದ ಬೇರೆಯ ಲೆವೆಲ್ಲಿಗೆ ಇದೆ. ಅಭಿಯಂತೂ ಎರಡನೇ ಚಿತ್ರಕ್ಕೆ ಮಾಗಿದ್ದಾನೆ. ಆತನ ಆಕ್ಟಿಂಗ್ ನೋಡಿದರೆ ನಮಗೆ ಹೆಮ್ಮೆಯಾಗುತ್ತೆ ಎಂದಿದ್ದಾರೆ ದರ್ಶನ್. ಈ ಚಿತ್ರದಲ್ಲಿ ಪ್ರೇಕ್ಷಕರು ಬೇರೆಯದೇ ಅಭಿಷೇಕ್ʻನನ್ನು ನೋಡುತ್ತಾರೆ ಎಂದಿರುವ ಸುಮಲತಾ, ನನಗೆ ಪತಿ ಅಂಬರೀಷ್ ಅವರನ್ನೇ ಕಂಡಂತಾಯಿತು ಎಂದಿದ್ದಾರೆ.
ಕೆ.ಎಂ.ಸುಧೀರ್ ನಿರ್ಮಾನದ ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ದುನಿಯಾ ಸೂರಿ ಡೈರೆಕ್ಟರ್. ರಚಿತಾ ರಾಮ್, ಪ್ರಿಯಾಂಕಾ ಕುಮಾರ್ ನಾಯಕಿಯರಾಗಿದ್ಧಾರೆ. ಪ್ರಿಯಾಂಕಾ ಕುಮಾರ್ ಅವರೇನೋ ಮಾಧ್ಯಮಗಳಿಗೆ ಮಾತನಾಡಿದ್ಧಾರೆ. ಆದರೆ ರಚಿತಾ ರಾಮ್ ಸಣ್ಣ ಪ್ರತಿಕ್ರಿಯೆಯನ್ನೂ ಕೊಟ್ಟಿಲ್ಲ. ಸಾಮಾನ್ಯವಾಗಿ ದುನಿಯಾ ಸೂರಿಯ ಚಿತ್ರಗಳಲ್ಲಿ ನಾಯಕಿಗೆ ಪ್ರಾಧಾನ್ಯತೆ ಕಡಿಮೆ. ಅದರಲ್ಲೂ ಹೀರೋನನ್ನು ವಿಜೃಂಭಿಸುವ ಚಿತ್ರಗಳಲ್ಲಿ ನಾಯಕಿ ಇರುವುದೇ ಗೊತ್ತಾಗುವುದಿಲ್ಲ.
ದುನಿಯಾದಲ್ಲಿ ರಶ್ಮಿಯ ಪಾತ್ರ, ಕೆಂಡಸಂಪಿಗೆಯಲ್ಲಿ ಮಾನ್ವಿತಾ ಕಾಮತ್, ಜಾಕಿಯ ಭಾವಾನಾ ಪಾತ್ರವನ್ನು ಬಿಟ್ಟರೆ, ಸೂರಿಯ ಬಹುತೇಕ ಚಿತ್ರಗಳಲ್ಲಿ ನಾಯಕಿಯರು ಆಟಕ್ಕಿರುತ್ತಾರೆ. ಲೆಕ್ಕಕ್ಕೆ ಇರುವುದಿಲ್ಲ. ಸೂರಿಯ ಚಿತ್ರಗಳಲ್ಲಿ ನಟಿಸಿರುವ ಐಂದ್ರಿತಾ ರೇ, ಭಾವನಾ, ಪ್ರಿಯಾಮಣಿ, ನಿಧಿ ಸುಬ್ಬಯ್ಯ, ಸಪ್ತಮಿ ಗೌಡ ಮೊದಲಾದವರ ಪಾತ್ರಗಳಿಗೆ ಹೆಚ್ಚು ಸ್ಕೋಪ್ ಇರುವುದಿಲ್ಲ. ಆದರೆ ಇರುವ ಚಿಕ್ಕ ಅವಕಾಶಗಳಲ್ಲಿ ಮಿಂಚುವ ಅವಕಾಶಗಳಿರುವುದನ್ನೂ ಇಲ್ಲ ಎನ್ನುವುದಕ್ಕಾಗುವುದಿಲ್ಲ. ಹಾಗಾದರೆ ಬ್ಯಾಡ್ ಮ್ಯಾನರ್ಸ್‌ನಲ್ಲಿ ರಚಿತಾ ರಾಮ್ ಪಾತ್ರಕ್ಕೆ ಸ್ಕೋಪ್ ಇಲ್ಲವಾ..? ಹಾಗಾಗಿಯೇ ರಚಿತಾ ರಾಮ್ ಪ್ರಚಾರಕ್ಕೆ ಬರುತ್ತಿಲ್ಲವಾ.. ಸದ್ಯಕ್ಕೆ ನೋ ಆನ್ಸರ್.



