ನಟಿ ರಂಭಾ. ಆಕೆಯ ಮೂಲ ಹೆಸರು ವಿಜಯಲಕ್ಷ್ಮಿ ಯೆಡ್ಡಿ. ಈ ವಿಜಯಲಕ್ಷ್ಮಿ ಎಂದು ಹೆಸರಿಟ್ಟುಕೊಂಡಿರುವವರ ಬದುಕೇ ಹೀಗೇನೇನೋ.. ಎಂಬ ಅನುಮಾನ ಮೂಡುವಂತಿದೆ. ಇತ್ತೀಚೆಗೆ ಚಿತ್ರರಂಗದಲ್ಲಿ ಬಿರುಗಾಳಿಗಳ ಸುದ್ದಿಗಳೇ ದೊಡ್ಡದಾಗುತ್ತಿವೆ. ಆ ಲಿಸ್ಟಿಗೆ ಈಗ ನಟಿ ರಂಭಾ ಕೂಡಾ ಸೇರಲಿದ್ದಾರೆ ಎಂಬ ಸುದ್ದಿ ಭಾರಿ ಸದ್ದು ಮಾಡ್ತಿದೆ.
ಕನ್ನಡ, ತೆಲುಗು, ಹಿಂದಿ, ತಮಿಳು, ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ರಂಭಾ, 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬೆಂಗಾಲಿ, ಭೋಜ್ ಪುರಿ, ಇಂಗ್ಲಿಷ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ರಂಭಾ ಅವರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಅನ್ನೋದು ಸದ್ಯದ ಮಟ್ಟಿಗೆ ಬ್ರೇಕಿಂಗ್ ನ್ಯೂಸ್. ಸದ್ಯದ ಮಟ್ಟಿಗೆ ಎನ್ನುವುದಕ್ಕೂ ಕಾರಣ ಇದೆ, ರಂಭಾ ಅವರ ವೈವಾಹಿಕ ಜೀವನ ಛಿಧ್ರ ಛಿದ್ರವಾಗಿದೆ ಎನ್ನೋ ಸುದ್ದಿ ಈ ಹಿಂದೆಯೂ ಬಂದಿತ್ತು. ಆದರೆ ಎಷ್ಟು ವೇಗವಾಗಿ ಸುದ್ದಿಯಾಗಿತ್ತೋ ಅಷ್ಟೇ ವೇಗವಾಗಿ ತಣ್ಣಗಾಗಿತ್ತು.
2010ರಲ್ಲಿ, ಅವರು ಕೆನಡಾ ಮೂಲದ ಶ್ರೀಲಂಕಾದ ತಮಿಳು ಉದ್ಯಮಿ ಇಂದ್ರಕುಮಾರ್ ಪದ್ಮನಾಥನ್ ಅವರನ್ನು ವಿವಾಹವಾಗಿರುವ ರಂಭಾ ಅವರಿಗೆ ಮೂವರು ಮಕ್ಕಳಿದ್ದಾರೆ. ಎರಡು ಹೆಣ್ಣು ಹಾಗೂ ಒಬ್ಬ ಮಗನಿದ್ದಾನೆ. ರಂಭಾ ಅವರಿಗೆ ಮಕ್ಕಳು ಭಾರತದಲ್ಲಿ ಬೆಳೆಯಲಿ ಎನ್ನುವ ಅಭಿಲಾಷೆ ಇದ್ದರೆ, ರಂಭಾ ಅವರ ಪತಿ ಇಂದ್ರಕುಮಾರ್ (ಮೂಲತಃ ಶ್ರೀಲಂಕಾದವರಾದ ಇಂದ್ರಕುಮಾರ್, ಪ್ರಸ್ತುತ ಕೆನಡಾ ನಾಗರಿಕತ್ವ ಪಡೆದುಕೊಂಡಿದ್ದಾರೆ), ಮಕ್ಕಳು ಅಮೆರಿಕ, ಕೆನಡಾದಲ್ಲಿಯೇ ಬೆಳೆಯಲಿ ಎಂದು ಬಯಸುತ್ತಿದ್ದಾರಂತೆ. ಈ ಹಿಂದೆ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಾಗ ತೆಲುಗಿನ ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್ ಅದನ್ನು ಸರಿಪಡಿಸಿದ್ದರಂತೆ. ಇದೀಗ ಮತ್ತೆ ಡಿವೋರ್ಸ್ ಸುದ್ದಿ ಎದ್ದಿದೆ. ತಮ್ಮ ಕುಟುಂಬದಲ್ಲಿ ಪತಿಯ ಜೊತೆ ಭಿನ್ನಾಭಿಪ್ರಾಯ ಇರೋದು ನಿಜ ಎಂದು ಒಪ್ಪಿಕೊಂಡಿದ್ದ ರಂಭಾ, ಅದು ವಿಚ್ಚೇದನ ಹಂತದಲ್ಲಿಲ್ಲ. ಎಲ್ಲ ಸಂಸಾರಗಳಂತೆಯೇ ನಮ್ಮಲ್ಲೂ ಜಗಳ, ಮನಸ್ತಾಪ ಇದೆ ಎಂದು ಹೇಳಿಕೊಂಡಿದ್ದರು.
ನಟಿ ರಂಭಾ ಅವರು ಮೂಲತಃ ಆಂಧ್ರಪ್ರದೇಶದವರು. ಮೂಲ ಹೆಸರು ವಿಜಯಲಕ್ಷ್ಮಿ ಯೆಡ್ಡಿ. 15ನೇ ವಯಸ್ಸಿಗೆ ಚಿತ್ರರಂಗ ಪ್ರವೇಶಿಸಿದ ರಂಭಾ, ಬೆಂಗಾಲಿ, ಭೋಜ್ ಪುರಿ, ಇಂಗ್ಲಿಷ್ ಸಿನಿಮಾಗಳಲ್ಲೂ ನಟಿಸಿದ್ದಾರೆ.
ತೆಲುಗಿನಲ್ಲಿ ಎನ್‌ಟಿಆರ್, ಬಾಲಕೃಷ್ಣ, ಹರಿಕೃಷ್ಣ, ಜೂ.ಎನ್‌ಟಿಆರ್ ಜೊತೆ ಮೂರು ತಲೆಮಾರಿನ ನಟರ ಜೊತೆ ನಟಿಸಿರುವ ಕೆಲವೇ ನಟಿಯರ ಪೈಕಿ ರಂಭಾ ಅವರೂ ಒಬ್ಬರು. ಕೃಷ್ಣ, ನಾಗಾರ್ಜುನ, ವೆಂಕಟೇಶ್, ಚಿರಂಜೀವಿ ಅಷ್ಟೇ ಅಲ್ಲ, ಕನ್ನಡದಲ್ಲಿ ರವಿಚಂದ್ರನ್, ಜಗ್ಗೇಶ್, ಶಿವರಾಜ್ ಕುಮಾರ್, ಶಶಿಕುಮಾರ್ ಜೊತೆಯಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ರಂಭಾ ಅವರು ಮೊದಲು ನಟಿಸಿದ್ದು ಸರ್ವರ್ ಸೋಮಣ್ಣ ಚಿತ್ರದಲ್ಲಿ. ಜಗ್ಗೇಶ್ ಜೊತೆ. ಅದಾದ ಮೇಲೆ ಮತ್ತೊಂದು ಸಿನಿಮಾದಲ್ಲಿ ನಟಿಸುವ ಹೊತ್ತಿಗೆ ಸ್ಟಾರ್ ಹೀರೋಯಿನ್ ಆಗಿದ್ದರು. ರವಿಚಂದ್ರನ್ ಜೊತೆ ಓ ಪ್ರೇಮವೇ, ಸಾಹುಕಾರ, ಪಾಂಡು ರಂಗ ವಿಠಲ ಚಿತ್ರಗಳಲ್ಲಿ ನಟಿಸಿದ್ದರೆ, ಶಿವರಾಜ್ ಕುಮಾರ್ ಜೊತೆ ಭಾವ ಬಾಮೈದ ಚಿತ್ರದಲ್ಲಿ ಹಾಗೂ ಉಪೇಂದ್ರ-ದರ್ಶನ್ ಅಭಿನದಯ ಅನಾಥರು ಚಿತ್ರದಲ್ಲಿ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಬೇರೆ ಬಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ನಟಿಸಿದ್ದು ಕಡಿಮೆ ಎಂದೇ ಹೇಳಬೇಕು.
90ರ ದಶಕದಲ್ಲಿ ಭಾರತೀಯ ಚಿತ್ರರಂಗದ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿರುವ ರಂಭಾ, ಟಿವಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಿರುವ ರಂಭಾ ಅವರ ವೈವಾಹಿಕ ಬದುಕು ತೂಗುಯ್ಯಾಲೆ ಆಡುತ್ತಿದೆ ಎಂಬ ಸುದ್ದಿ ಅಭಿಮಾನಿಗಳ ಪಾಲಿಗೆ ಬೇಸರದ ಸುದ್ದಿಯಂತೂ ಹೌದು.



