ದೊಡ್ಮನೆಯವರಿಗೆ ಅಭಿಮಾನಿಗಳು ಜಾಸ್ತಿ. ಶತ್ರುಗಳೂ ಅಷ್ಟೇ. ದೊಡ್ಮನೆಯವರು ಗೆದ್ದರೆ.. ಖುಷಿ ಪಡುವವರು ಎಷ್ಟು ಜನವೋ.. ಸೋತರೆ.. ಖುಷಿ ಪಡುವವರೂ ಇರ್ತಾರೆ. ಯುವ ರಾಜ್ ಕುಮಾರ್ ಅವರ ಮೊದಲ ಸಿನಿಮಾ ʻಯುವʼ ಆವರೇಜ್ ಹಿಟ್ ಆದಾಗ.. ಇಂತಹವರ ಸಂಭ್ರಮವನ್ನು ನೋಡಿದ್ದಾರೆ. ಚಿತ್ರರಂಗದಲ್ಲಿ ಗೆಲುವು, ಸೋಲು ಹೊಸದಲ್ಲ. ಡಾ.ರಾಜ್ ಚಿತ್ರಗಳೂ ಕೂಡಾ ಸೋತಿವೆ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ, ಸೋತ ಪ್ರಮಾಣ ಶೇ.1 ಕ್ಕಿಂತ ಕಡಿಮೆ ಎಂಬುದಷ್ಟೇ ಹೆಗ್ಗಳಿಕೆ. ಹೀಗಿರುವಾಗ.. ಒಬ್ಬ ನಟನ ಸಿನಿಮಾ ಸೋಲುವುದನ್ನು, ಆವರೇಜ್ ಎನಿಸಿಕೊಂಡಿದ್ದನ್ನೂ ಸಂಭ್ರಮ ಪಡುವ ಮನಸ್ಥಿತಿ ಏಕೆ..? ಅರ್ಥವಾಗುತ್ತಿಲ್ಲ.
ಎಕ್ಕ ರಿಲೀಸ್ ಆಗುವ ಮೊದಲು ಟ್ರೇಲರಿನಲ್ಲಿ ಜಾಕಿ ಮತ್ತು ವಂಶಿಯ ನೆನಪಾಗುತ್ತಿತ್ತು. ಆದರೆ.. ಸಿನಿಮಾ ರಿಲೀಸ್ ಆಗೋಕೆ ಮೊದಲೇ.. ಅರ್ಧ ಜಾಕಿ, ಇನ್ನರ್ಧ ವಂಶಿ ಎಂದವರಿಗೆ ಕಡಿಮೆ ಇರಲಿಲ್ಲ. ಆದರೆ.. ಅಂತಿಮವಾಗಿ ಸಿನಿಮಾ ಬಂದಾಗ.. ದೃಶ್ಯಗಳಷ್ಟೇ ನೆನಪಾಗುತ್ತಿತ್ತು. ಕಥೆ ಬೇರೆಯೇ ಇತ್ತು.
ಇನ್ನ ಎಕ್ಕ ಜೊತೆಯಲ್ಲೇ ಬಂದ ಜೂನಿಯರ್ ಚಿತ್ರದಲ್ಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಸಖತ್ ಡ್ಯಾನ್ಸ್ ಮಾಡಿದ್ದರು. ಮೆಚ್ಚಿಕೊಳ್ಳಬೇಕಾದ ವಿಷಯವೇನೋ ಹೌದು. ಆದರೆ.. ಸೋಷಿಯಲ್ ಮೀಡಿಯಾ ಟ್ರೆಂಡಿಂಗಿನಲ್ಲಿ ಕಿರೀಟಿಯ ಡ್ಯಾನ್ಸ್ʻನ್ನು ಅಪ್ಪು ಡ್ಯಾನ್ಸ್‌ಗೆ ಹೋಲಿಸುವುದರ ಜೊತೆಗೆ, ಯುವ ರಾಜ್ ಕುಮಾರ್ ಹಾಗೂ ಎಕ್ಕ ಚಿತ್ರವನ್ನು ಲೇವಡಿ ಮಾಡುವ ಪೋಸ್ಟುಗಳೂ ಇದ್ದವು. ಜೂನಿಯರ್ ಚಿತ್ರದ ಟ್ರೇಲರ್ ಲಾಂಚ್ ಮಾಡಿದ್ದು ಶಿವಣ್ಣ. ಯುವ ರಾಜ್ ಕುಮಾರ್ ದೊಡ್ಡಪ್ಪ. ಅದನ್ನು ಮರೆತೇಬಿಟ್ಟರು. ಇಷ್ಟಕ್ಕೂ ಕಿರೀಟಿ ರೆಡ್ಡಿಯ ಜೂನಿಯರ್ ಕೂಡಾ ಗೆದ್ದಾಗ ಸಂಭ್ರಮಿಸಬೇಕೇ ಹೊರತು, ಹೊಟ್ಟೆಉರಿ ಯಾಕೆ..?
ಇನ್ನು ಇದೀಗ ಎಸ್ ನಾರಾಯಣ್ ಅವರ ವಿಚಾರ. ಎಕ್ಕ ಸಿನಿಮಾನ ನಾರಾಯಣ್ ನೋಡಿದ್ದಾರೆ. ಮೆಚ್ಚಿದ್ದಾರೆ. ರಾಘಣ್ಣಂಗೂ ಹೇಳಿದ್ಧಾಗಿದೆ. ಹೀಗಿರುವಾಗ.. ಎಸ್ ನಾರಾಯಣ್ ಅವರ ನಕಲಿ ಪೇಜ್ ಸೃಷ್ಟಿ ಮಾಡಿ, ಎಕ್ಕ ಚಿತ್ರವನ್ನು ಡಬ್ಬಾ ಎನ್ನುವ ಮನಸ್ಥಿತಿ ಯಾಕೆ..? ಯಾರು ಹೇಳಿಕೊಡ್ತಾರೆ..? ಯಾಕೆ ಹೀಗೆಲ್ಲ ಮಾಡ್ತಾರೆ..? ಹೀಗೆ ಮಾಡುವುದರಿಂದ ಲಾಭ ಏನು..? ಗೊತ್ತಾಗುತ್ತಿಲ್ಲ. ಎಸ್ ನಾರಾಯಣ್ ಅವರೇನೋ ದೂರು ಕೊಟ್ಟರು. ಆದರೆ.. ಅವರ ಹೆಸರಲ್ಲೊಂದು ನಕಲಿ ಪೇಜ್ ಇದೆ ಎಂಬ ಮಾಹಿತಿ ಅವರಿಗೆ ಗೊತ್ತಾಗಿದ್ದೇ 6 ತಿಂಗಳು ತಡವಾಗಿ. ಆ 6 ತಿಂಗಳು ಎಸ್ ನಾರಾಯಣ್ ಅವರೇ ಹೀಗೆ ಹೇಳ್ತಿದ್ಧಾರೆ. ಅವರಿಗೆ ಏನೇನೆಲ್ಲ ತೊಂದ್ರೆ ಕೊಟ್ಟಿರಬಹುದು ಎಂದು ಅನುಮಾನ ಪಟ್ಟಿರ್ತಾರಲ್ಲ.. ಅವರಲ್ಲಿ ಹುಟ್ಟುವ ಅನುಮಾನ.. ಸತ್ತರೂ ಹೋಗಲ್ಲ.
ಏಕೆಂದರೆ.. ಇವತ್ತಿಗೂ ಶಂಕರ್ ನಾಗ್, ಸುನಿಲ್ ಅವರ ಸಾವು, ನಟನಾಗಿ ವಿನೋದ್ ರಾಜ್ ಕುಮಾರ್ ವೈಫಲ್ಯ, ಶಶಿಕುಮಾರ್ ಆಕ್ಸಿಡೆಂಟ್.. ಇತ್ಯಾದಿ ಇತ್ಯಾದಿಗಳಿಗೆಲ್ಲ ದೊಡ್ಮನೆಯವರ ಹೆಸರು ಎಳೆದುಕೊಂಡು ಬರುವ ಪರಿಸ್ಥಿತಿ ಸೋಷಿಯಲ್ ಮೀಡಿಯಾದಲ್ಲಿ ಈಗಲೂ ಇದೆ.
ಇದೆಲ್ಲದರ ನಡುವೆ ಎಕ್ಕ ಗೆದ್ದಿದೆ. ಯುವ ರಾಜ್ ಕುಮಾರ್ ಹ್ಯಾಪಿ. ಜೂನಿಯರ್ ಕೂಡಾ ಗೆದ್ದಿದೆ. ಇವೆರಡನ್ನೂ ಮೀರಿಸುವಂತೆ ಸು ಫ್ರಂ ಸೋ ಬ್ಲಾಕ್ ಬಸ್ಟರ್ ಆಗಿದೆ. ಸೋತು ಸೊರಗಿದ್ದ ಬಾಕ್ಸಾಫೀಸ್‌ಗೆ ಮೊದಲ ಗೆಲುವಿನ ಸಂಚಲನ ಮೂಡಿಸಿದ್ದು ಎಕ್ಕ. ಎರಡು ವಾರದ ಒಟ್ಟಾರೆ ಕಲೆಕ್ಷನ್ ಹತ್ತಿರತ್ತಿರ 20 ಕೋಟಿ ಇದೆ.
ಆಮೇಲೆ ಜೂನಿಯರ್. ಒಟ್ಟಾರೆ ಕಲೆಕ್ಷನ್ 10 ಕೋಟಿಯ ಆಸುಪಾಸು ಇದೆ. ಪಕ್ಕಾ ಲೆಕ್ಕ ಸಿಕ್ಕಿಲ್ಲ.
ಈಗ ಸು ಫ್ರಂ ಸೋ.. ಸುರಿಮಳೆಯನ್ನೇ ಸುರಿಸುತ್ತಿದೆ. ಜೆಪಿ ತುಮಿನಾಡ್ ನಿರ್ದೇಶನದ ‘ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತಿದೆ. ಮೊದಲ ವಾರ ಕಳೆಯುವ ಹೊತ್ತಿಗೆ 20 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಗೆದ್ದಿರುವ ಎಲ್ಲವೂ ಕನ್ನಡ ಚಿತ್ರಗಳೇ..



