ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ನಮ್ಮ ಮಕ್ಕಳು ಶಾಲೆಗಳಲ್ಲಿ ಓದುವ ಪಠ್ಯ ಪುಸ್ತಕಗಳಲ್ಲಿ ಪಾಠವಾಗುತ್ತಿದ್ದಾರೆ. ಪುನೀತ್ ಹೀರೋ ಆಗಿ ನೂರಾರು ಸಿನಿಮಾಗಳಲ್ಲಿ ನಟಿಸಲಿಲ್ಲ. ಬಾಲನಟನಾಗಿಯೂ ಕೂಡಾ ಪುನೀತ್ ನಟಿಸಿದ ಚಿತ್ರಗಳ ಸಂಖ್ಯೆ ಕಡಿಮೆಯೇ. ಬಾಲನಟ ಮತ್ತು ಹೀರೋ ಎರಡೂ ಸೇರಿದರೂ ನಟಿಸಿದ ಚಿತ್ರಗಳ ಸಂಖ್ಯೆ 100 ದಾಟಲ್ಲ. 50ರ ಆಸುಪಾಸು ಇರಬಹುದಷ್ಟೇ. ಈಗ ಅವರು ಶಾಲೆಯ ಪಠ್ಯಗಳಲ್ಲಿ ಪಾಠವಾಗುತ್ತಿದ್ದಾರೆ. ನಾವೆಲ್ಲರೂ ಅಂದುಕೊಂಡಂತೆ ಪುನೀತ್ ಅವರಿಗೆ ಲಭಿಸಿದ ಅತಿ ದೊಡ್ಡ ಗೌರವ ಕರ್ನಾಟಕ ರತ್ನ. ಆದರೆ, ಅದಲ್ಲ.. ಶಾಲೆಯ ಪುಸ್ತಕಗಳಲ್ಲಿ ಪಠ್ಯವಾಗುವುದು ಅತೀ ದೊಡ್ಡ ಗೌರವ. ಇದಕ್ಕೂ ಇದಕ್ಕೆ ಕಾರಣ ಆದವರು ಒಬ್ಬ ಅಭಿಮಾನಿ.
ಬಾಲನಟನಾಗಿ, ನಾಯಕ ನಟನಾಗಿ ಗೆದ್ದ ಪುನೀತ್, ಚಿತ್ರೋದ್ಯಮದಿಂದ ಹೊರತಾದ ಸಾಮಾಜಿಕ ಸೇವೆಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿ ಹೋದವರು. ಇದೀಗ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಜೀವನ ಚರಿತ್ರೆ ಪಠ್ಯ ಪುಸ್ತಕಗಳಲ್ಲಿ ಅಳವಡಿಸುವ ದಿನ ಹತ್ತಿರವಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ಪುನೀತ್ ಅವರ ಜೀವನ ಚರಿತ್ರೆಯನ್ನೇ ಸೇರಿಸಲು ನಿರ್ಧಾರ ಆಗಿದೆ. ಪುನೀತ್ ಜೀವನ ಪಠ್ಯ ಸೇರಿಸೋಕೆ ʻಪಠ್ಯ ಪುಸ್ತಕ ಸಂಘʼ ನಿರ್ಧಾರ ಮಾಡಿದೆ.
ಅಭಿಮಾನಿ ದೇವರಾಜ ಅರಸು
ಇಂಥಾದ್ದೊಂದು ಪ್ರಸ್ತಾಪ 2022ರಲ್ಲಿಯೇ ಇತ್ತು. ಟಿ ನರಸೀಪುರದ ಅಭಿಮಾನಿಯೊಬ್ಬರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಪುನೀತ್ ಜೀವನ ಚರಿತ್ರೆಯನ್ನೂ ಶಾಲಾ ಪಠ್ಯಗಳಲ್ಲಿಯೂ ಸೇರಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಆ ಅಭಿಮಾನಿಯ ಹೆಸರು ದೇವರಾಜು ಅರಸು. ದೇವರಾಜ ಅರಸು ಎಂಬುವವರು ಕೇವಲ ಒಂದು ಮನವಿ ಪತ್ರ ಸಲ್ಲಿಕೆ ಮಾಡಿ ಸುಮ್ಮನಾಗಲಿಲ್ಲ. 4 ವರ್ಷಗಳ ಕಾಲ ಅದಕ್ಕಾಗಿ ಶ್ರಮಿಸಿ ಜಾಗೃತಿ ಮೂಡಿಸುತ್ತ ಹೋದರು. ಇಷ್ಟಕ್ಕೂ ದೇವರಾಜ ಅರಸು ಅವರಿಗೆ ಇದರಿಂದ ಸಿಕ್ಕಿದ್ದೇನು.. ಎಂದರೆ ಅದು ಆರ್ಥಿಕ ಲಾಭವಂತೂ ಅಲ್ಲ. ಒಂದು ಸಾರ್ಥಕ ಮನೋಭಾವ.
ಇವರು ಎಲ್ ಆರ್ ಶಿವರಾಮೇ ಗೌಡರ ಅಂಗರಕ್ಷಕರಾಗಿದ್ದವರು. ಮೈಸೂರು ತಾಲೂಕಿನ ಟಿ ನರಸೀಪುರ ತಾಲೂಕಿನ ಮುಡುಕುತೊರೆ ಎಂಬ ಹಳ್ಳಿಯವರು ಈ ದೇವರಾಜ ಅರಸು. ಇವರು ಆಗಿನ ಸಿಎಂ ಬೊಮ್ಮಾಯಿ, ಈಗಿನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರತಿಯೊಬ್ಬರನ್ನೂ ಭೇಟಿ ಮಾಡಿ ಮನವಿ ಮಾಡಿದ್ದರು. ಪುನೀತ್ ಅವರ ಬದುಕು ಪಠ್ಯ ಪುಸ್ತಕದಲ್ಲಿ ಏಕೆ ಇರಬೇಕು ಎಂದು ವಿವರಿಸಿದ್ದರು. ಈಗ ಪಠ್ಯದಲ್ಲಿ ಪುನೀತ್ ಬರುತ್ತಿದ್ದಾರೆ.
ʻಪ್ರಶಸ್ತಿ, ಪ್ರೀತಿ, ಅಭಿಮಾನವೇ ಬೇರೆ. ಪ್ರಶಸ್ತಿ ಪುರಸ್ಕಾರಗಳೇ ಬೇರೆ. ಶಾಲೆಯ ಪಠ್ಯ ಪುಸ್ತಕಗಳಲ್ಲಿ ಪುನೀತ್ ಅವರ ಜೀವನ ಚರಿತ್ರೆಯನ್ನು ಸೇರಿಸುವ ಪ್ರಕ್ರಿಯೆಯೇ ಬೇರೆ. ಇದು ಬೇರೆಲ್ಲ ಪ್ರಶಸ್ತಿ ಗೌರವಗಳಿಗಿಂತ ದೊಡ್ಡದು. ಪುನೀತ್ ಅವರ ಬದುಕು ಸ್ಫೂರ್ತಿ ಕೊಡುವ ಜೀವನ. ಮುಂದಿನ ತಲೆಮಾರಿನವರಿಗೆ ಪ್ರೇರಣೆ ನೀಡುತ್ತದೆ. ಇದು ಸಾಧ್ಯವಾದರೆ ಇದೊಂದು ಹೆಮ್ಮೆ ಪಡುವ ಕ್ಷಣʼ ಎಂದು ಹೇಳಿಕೊಂಡಿದ್ದಾರೆ ಅಶ್ವಿನಿ ಪುನೀತ್.
ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಅವರ ಪ್ರೀತಿಯ ಪುತ್ರ ಮಾ.ಲೋಹಿತ್ ಅವರು ಪುನೀತ್ ಆದರು. ಅಭಿಮಾನಿಗಳ ಪಾಲಿಗೆ ಅಪ್ಪು ಆದರು. ಹೊಸಬರಿಗೆ ಪ್ರೇರಣೆಯಾದರು. ಇದೆಲ್ಲವನ್ನೂ ಮೀರಿ ಅವರು ಮಾಡುತ್ತಿದ್ದ ಸಮಾಜ ಸೇವೆಗಳು ಜನರಿಗೆ ಗೊತ್ತಾಗಿದ್ದೇ ಅವರ ಅಕಾಲ ಮರಣದ ನಂತರ.
ಇದುವರೆಗೆ ಪಠ್ಯ ಪುಸ್ತಕಗಳಲ್ಲಿ ಕನ್ನಡದ ಕೆಲವೇ ಕೆಲವು ನಟರ ಪಾಠಗಳಿವೆ. ಡಾ.ರಾಜ್, ಪುಟ್ಟಣ್ಣ ಕಣಗಾಲ್ ಮೊದಲಾದವರ ಸಾಲಿಗೆ ಈಗ ಪುನೀತ್ ಕೂಡಾ ಸೇರುವ ದಿನ ಬರುತ್ತಿದೆ.



