ಲಿಂಗಾಯತರೇ ಬೇರೆ.. ವೀರಶೈವೇ ಬೇರೆ ಅಂತಾರೆ ಕೆಲವರು. ಇಲ್ಲ.. ಇಲ್ಲ.. ಎರಡೂ ಒಂದೇ ಅಂತಾರೆ ಇನ್ನೂ ಕೆಲವರು. ಮತ್ತೊಂದು ಕಡೆ ಪಂಚಮಸಾಲಿಗಳ ವಾದವೇ ಬೇರೆ. ಮತ್ತೊಂದು ಕಡೆ ಒಳಪಂಗಡಗಳನ್ನೇ ಪ್ರಧಾನ ಜಾತಿಗಳು ಎಂಬ ವಾದ. ವೀರಶೈವ ಲಿಂಗಾಯತರ ಒಕ್ಕೂಟ ಒಂದು ಹೇಳಿದರೆ, ಲಿಂಗಾಯತರ ಮಹಾಸಭಾ ಇನ್ನೊಂದು ಮಾತು ಹೇಳುತ್ತಿದೆ. ಪಂಚಮಸಾಲಿ ಪೀಠದ ಒಬ್ಬ ಸ್ವಾಮೀಜಿ ಮಾತಿನ ಅರ್ಥವೇ ಬೇರೆ. ಇನ್ನೊಬ್ಬ ಸ್ವಾಮೀಜಿ ಹೇಳೋದೇ ಬೇರೆ.
ವೀರಶೈವ ಲಿಂಗಾಯತ ಮಹಸಭಾ ಪ್ರಕಾರ :
ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕು. ಒಳ ಪಂಗಡಗಳನ್ನು ನಮೂದಿಸಬೇಕು. ಇತರೆ ಕಾಲಂನಲ್ಲಿ ಹಿಂದೂ ಧರ್ಮ ಎಂದು ಬೇಡ. ವೀರಶೈವ ಲಿಂಗಾಯತ ಧರ್ಮ ಎಂದು ಬರೆಸಬೇಕು. ಹೀಗೆಂದು ಸಂದೇಶ ರವಾನೆ ಮಾಡಿರುವುದು ಈಶ್ವರ್ ಖಂಡ್ರೆ, ಶಂಕರ್ ಬಿದರಿ. ಶಾಮನೂರು ಶಿವಶಂಕರಪ್ಪ.
ಜಾಗತಿಕ ಲಿಂಗಾಯತ ಮಹಾಸಭಾ ಪ್ರಕಾರ :
ಲಿಂಗಾಯತರು ವೀರಶೈವರೂ ಅಲ್ಲ. ಹಿಂದೂಗಳೂ ಅಲ್ಲ. ಲಿಂಗಾಯತ ಎನ್ನುವುದೇ ಪ್ರತ್ಯೇಕ ಧರ್ಮ. ನಾವು ಲಿಂಗಾಯತರು. ಲಿಂಗಾಯತರು ಮಾತ್ರ ಎನ್ನುತ್ತಿದ್ದಾರೆ ಎಸ್ ಎಂ ಜಾಮದಾರ. ಜಾಮದಾರ ಅವರ ಮಾತಿಗೆ ಕೆಲವು ಸ್ವಾಮೀಜಿಗಳು ದನಿಗೂಡಿಸಿದ್ದಾರೆ.
ಪಂಚಮಸಾಲಿ ಸ್ವಾಮೀಜಿಗಳ ತಿಕ್ಕಾಟ :
ಲಿಂಗಾಯತರಲ್ಲಿಯೇ ನಮ್ಮದು ಜಾಸ್ತಿ ನಂಬರ್ ಇದೆ ಎನ್ನುತ್ತಿರುವ ಪಂಚಮಸಾಲಿಗಳಲ್ಲಿ, ರಾಜ್ಯದ ಅಷ್ಟೂ ಲಿಂಗಾಯತರಲ್ಲಿ ನಾವೇ ನಂಬರ್ 01 ಎನ್ನುವ ಭಾವನೆ ಇದೆ. ಮಠಗಳೂ ಜಾಸ್ತಿ ಇವೆ. ಮೀಸಲಾತಿಯಲ್ಲಿಯೂ ನಮಗೇ ಸಿಂಹಪಾಲು ಸಿಗಬೇಕು ಎನ್ನುತ್ತಿರುವ ಈ ಸ್ವಾಮೀಜಿಗಳಲ್ಲಿ ಮೂರು ಮಠಗಳಿವೆ. ಒಂದು ಮಠ ಸೈಲೆಂಟ್. ಇನ್ನೊಂದು ಕೂಡಲಸಂಗಮದ ದಿಂಗಾಲೇಶ್ವರ ಸ್ವಾಮೀಜಿಯವರ ಮಠ. ಮತ್ತೊಂದು ಹರಿಹರದ ವಚನಾನಂದ ಸ್ವಾಮೀಜಿ ಮಠ. ಮತ್ತೊಂದು ಜಮುಖಂಡಿ ಮಠ. ಸದ್ಯಕ್ಕೆ ರಾಜ್ಯದ ಮಟ್ಟಿಗೆ ಸೈಲೆಂಟ್ ಆಗಿರುವುದು ಈ ಮಠ ಮಾತ್ರ.
ವಚನಾನಂದ ಶ್ರೀಗಳ ಪ್ರಕಾರ ಸೆಪ್ಟೆಂಬರ್ 17ರಂದು ಒಂದು ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಜಾತಿ ಕಾಲಂನಲ್ಲಿ ಯಾರು.. ತಮ್ಮ ತಮ್ಮ ಜಾತಿಯನ್ನು ಹೇಗೆ ಬರೆಸಬೇಕು ಎಂದು ನಿರ್ಧಾರ ಮಾಡ್ತೇವೆ ಅಂತಿದ್ದಾರೆ ವಚನಾನಂದ ಸ್ವಾಮೀಜಿ. ಆದರೆ, ಅದಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಒಪ್ಪುವುದಿಲ್ಲ.
ಕ್ರಿಶ್ವಿಯನ್ ಜಾತಿ ಕೈಬಿಡಲು ಆಗ್ರಹ :
ಇದು ಕೇವಲ ಲಿಂಗಾಯತ ವೀರಶೈವರದ್ದಷ್ಟೇ ಅಲ್ಲ. ಹಲವು ಜಾತಿಗಳವರ ಬೇಡಿಕೆಯೂ ಹೌದು. ಕ್ರಿಶ್ಚಿಯನ್ ಧರ್ಮವನ್ನು ಅಸ್ಥಿತ್ವದಲ್ಲಿರುವ ಎಲ್ಲ ಜಾತಿಗಳ ಹಿಂದೆ ಮುಂದೆ ಸೇರಿಸಲಾಗಿದೆ. ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ಕುರುಬ, ದಲಿತ.. ಹೀಗೆ ಯಾವ ಪಂಗಡವನ್ನೂ ಬಿಟ್ಟಿಲ್ಲ. ಇದು ಕ್ರಿಶ್ಚಿಯನ್ನರೂ ಸೇರಿದಂತೆ ಬೇರೆ ಬೇರೆ ಧರ್ಮಕ್ಕೆ ಸೇರಿದವರನ್ನೂ ಮೀಸಲಾತಿ ವ್ಯಾಪ್ತಿಗೆ ತರುವ ಸಂಚು ಎನ್ನುವ ಆರೋಪಗಳಿವೆ. ಭಯವೂ ಇದೆ. ಹೀಗಾಗಿ ಬಹುತೇಕ ಎಲ್ಲ ಜಾತಿಯವರೂ ಈ ಜಾತಿಯ ಹಿಂದೆ ಮುಂದೆ ಇರುವ ಕ್ರಿಶ್ಚಿಯನ್ ಪದವನ್ನು ಜಾತಿ ಕಾಲಂನಿಂದ ತೆಗೆಯಿರಿ ಎನ್ನುತ್ತಿದ್ದಾರೆ. ಇದನ್ನು ಹೀಗೆಯೇ ಬಿಟ್ಟರೆ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಗಳು ಏನು ಎಂಬ ಬಗ್ಗೆ ಅರಿವಿದ್ದವರು ಇದನ್ನು ಒಪ್ಪುವುದಿಲ್ಲ.
ಇನ್ನು ಸಿದ್ಧರಾಮಯ್ಯ ಅವರನ್ನ ಕೇಳಿದ್ರೆ.. ನೀವು ಯಾವ ಜಾತಿಯನ್ನಾದ್ರೂ ಬರೆಸಿ. ಇಲ್ಲಿ ನಡೆಯುತ್ತಿರುವುದು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ. ಅಷ್ಟೇ ಎನ್ನುತ್ತಾರೆ. ಆದರೆ, ಅಷ್ಟೇ ಎನ್ನುವುದಾದರೆ.. ಸಮೀಕ್ಷೆಯಲಿ ಜಾತಿ ಕಾಲಂ ಅಗತ್ಯವಾದರೂ ಏನಿತ್ತು.. ಈ ಪ್ರಶ್ನೆಗೆ ಉತ್ತರ ಇಲ್ಲ.



