ಪ್ರಜ್ವಲ್ ರೇವಣ್ಣ ಅವರ ಕಾಮಕಾಂಡ ದೇವೇಗೌಡರ ಕುಟುಂಬ ತಲೆತಗ್ಗಿಸುವಂತೆ ಮಾಡಿದೆ. ಇಷ್ಟು ವರ್ಷಗಳ ಕಾಲ ಅಣ್ಣ-ತಮ್ಮಂದಿರ ಒಗ್ಗಟ್ಟು ನೋಡುತ್ತಿದ್ದವರಿಗೆ ರೇವಣ್ಣನ ಕುಟುಂಬವೇ ಬೇರೆ.. ನಮ್ಮ ಕುಟುಂಬವೇ ಬೇರೆ ಎಂಬ ಕುಮಾರಸ್ವಾಮಿ ಮಾತು ಕೇಳಿ ದಿಗ್ಭ್ರಮೆಗೊಂಡಿದ್ಧಾರೆ. ಒಂದೆಡೆ ಪ್ರಜ್ವಲ್ ಅವರಿಗೆ ಶಿಕ್ಷೆಯಾಗಬೇಕು ಎನ್ನುತ್ತಿದ್ದವರಿಗೆ ಕಾಡುತ್ತಿರುವ ಇನ್ನೊಂದು ಪ್ರಶ್ನೆ.. ವಿಡಿಯೋಗಳನ್ನು ಹಂಚಿದ್ದು ಯಾರು ಎನ್ನುವುದು.
ಏಕೆಂದರೆ.. ಹಾಸನದಲ್ಲಿಯೇ ಸುಮಾರು 3 ಲಕ್ಷಕ್ಕೂ ಹೆಚ್ಚು ಪೆನ್ʻಡ್ರೈವ್ ಹಂಚಲಾಗಿದೆ ಎಂಬ ಮಾತುಗಳಿವೆ. 3 ಲಕ್ಷ ಪೆನ್ʻಡ್ರೈವ್ ಎಂದರೆ.. ಒಂದು ಪೆನ್ʻಡ್ರೈವ್ ಬೆಲೆ ಸರಾಸರಿ 500 ರೂ. ಎಂದಿಟ್ಟುಕೊಂಡರೂ.. ಖರ್ಚು ಕೋಟಿಗಳ ಲೆಕ್ಕಕ್ಕೆ ಬರುತ್ತದೆ. ಇಷ್ಟು ದೊಡ್ಡ ಖರ್ಚು ಮಾಡುವುದಕ್ಕೆ ಸಾಧ್ಯವಿರುವುದು ದೊಡ್ಡ ದೊಡ್ಡ ನಾಯಕರಿಗೆ. ಲಾಭವಿಲ್ಲದೆ ಮಾಡುವವರೂ ಅಲ್ಲ ಎನ್ನುವುದು ಒಂದು ವಾದ. ಪರ್ಸನಲ್ ಲಾಭವಿಲ್ಲದೆ ಹೋದರೆ.. ಯಾರೂ ಅಷ್ಟು ದೊಡ್ಡ ಕೆಲಸಕ್ಕೆ ಕೈಹಾಕುವುದಿಲ್ಲ ಎನ್ನುವ ವಾದಗಳೂ ಇವೆ. ಆದರೆ.. ಆ ವಿಡಿಯೋಗಳಲ್ಲಿ ಹಲವು ಮಹಿಳೆಯರ ಮುಖ ಕಾಣಿಸಿದೆ. ಪ್ರಜ್ವಲ್ ಮಾನ ಹರಾಜು ಹಾಕುವ ಬರದಲ್ಲಿ ಆ ಮಹಿಳೆಯರನ್ನು ಬೀದಿಗೆ ತಂದವರ ವಿರುದ್ಧ ಆಕ್ರೋಶ ಭುಗಿಲೇಳುತ್ತಿದೆ. ಆದರೆ.. ವಿಡಿಯೋ ಲೀಕ್ ಮಾಡಿದ್ಯಾರು..?
ಬಿಜೆಪಿಯ ದೇವರಾಜೇಗೌಡರಾ..? ಡ್ರೈವರ್ ಕಾರ್ತಿಕ್ ಅವರಾ..?
ಇವರು ಬಿಜೆಪಿ ಮುಖಂಡರೂ ಹೌದು. ಒಂದು ಕಾಲಕ್ಕೆ ಪ್ರಜ್ವಲ್ ರೇವಣ್ಣ ಅವರ ಬಳಿ ಡ್ರೈವರ್ ಆಗಿದ್ದ ಕಾರ್ತಿಕ್, ಈಗ ಶ್ರೇಯಸ್ ಪಟೇಲ್ ಜೊತೆಯಲ್ಲಿದ್ಧಾರೆ. ಡ್ರೈವರ್ ಕಾರ್ತಿಕ್ ಪ್ರಕಾರ ಪೆನ್ʻಡ್ರೈವ್ ಸಿಕ್ಕಿದ್ದು ಮೊದಲಿಗೆ ಕಾರ್ತಿಕ್ ಅವರಿಗೇನೇ.
ಹದಿನೈದು ವರ್ಷದಿಂದ ಪ್ರಜ್ವಲ್ ರೇವಣ್ಣ ಹಾಗೂ ಅವರ ಫ್ಯಾಮಿಲಿಗೆ ಕಾರು ಡ್ರೈವರ್ ಆಗಿ ಕೆಲಸ ಮಾಡಿದ್ದ ಕಾರ್ತಿಕ್, ಒಂದು ವರ್ಷದಿಂದ ಕೆಲಸ ಬಿಟ್ಟಿದ್ದಾರೆ. ರೇವಣ್ಣ ಅವರ ಫ್ಯಾಮಿಲಿ.. ಕಾರ್ತಿಕ್ ಅವರ ಜಮೀನು ಬರೆಸಿಕೊಂಡು ಅವರ ಪತ್ನಿ ಮೇಲೆ ಹಲ್ಲೆ ಮಾಡಿದ್ದರು ಎನ್ನುವ ಅಕ್ರೋಶ ಕಾರ್ತಿಕ್ ಅವರಿಗೆ ಇದೆ. ಪ್ರಜ್ವಲ್ ರೇವಣ್ಣ ಅವರ ಪೆನ್ʻಡ್ರೈವ್ ಮೊದಲು ಹೊರತೆಗೆದವರೇ ಕಾರ್ತಿಕ್.
ಕಾರ್ತಿಕ್ ಅವರಿಗೆ ಕಾರಣ ಇದೆ. ಸಿಟ್ಟೂ ಇದೆ. ಅವರೀಗ ಶ್ರೇಯಸ್ ಪಟೇಲ್ ಅವರ ಡ್ರೈವರ್ ಆಗಿದ್ದಾರೆ. ಆದರೆ.. ಅದನ್ನು ಕಾರ್ತಿಕ್ ಒಪ್ಪಲ್ಲ.
ವಕೀಲ ದೇವರಾಜೇಗೌಡ ರೇವಣ್ಣ ಅವರ ಫ್ಯಾಮಿಲಿ ವಿರುದ್ಧ ಹೋರಾಟ ಮಾಡುತ್ತಿದ್ದರು. ಯಾರಿಂದಲೂ ನ್ಯಾಯ ಸಿಗಲ್ಲ ಅಂತ ದೇವರಾಜೇಗೌಡ ಬಳಿ ಹೋದೆ. ಯಾವುದೇ ಅಶ್ಲೀಲ ವಿಡಿಯೋ ರಿಲೀಸ್ ಮಾಡಬಾರದು ಎಂದು ನನ್ನ ವಿರುದ್ದ ಪ್ರಜ್ವಲ್ ರೇವಣ್ಣ ಸ್ಟೇ ತರುತ್ತಾರೆ. ನಿನ್ನ ಬಳಿ ಇರುವ ವಿಡಿಯೋ, ಫೋಟೋಸ್, ನಾನು ಯಾರಿಗೂ ತೋರಿಸಲ್ಲ ಕೊಡು ಎಂದು ದೇವರಾಜೇಗೌಡ ಕೇಳಿದರು. ನಾನು ನಂಬಿ ನನ್ನ ಬಳಿಯಿದ್ದ ವಿಡಿಯೋದ ಒಂದು ಕಾಪಿ ಕೊಟ್ಟೆ. ಅವರು ಅದನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಂಡಿರೋದು ಗೊತ್ತಿಲ್ಲ ಎನ್ನುವುದು ಕಾರ್ತಿಕ್ ಅವರ ಮಾತು. ಅವರ ಪ್ರಕಾರ ವಿಡಿಯೋ ಲೀಕ್ ಮಾಡಿರುವುದು ದೇವರಾಜೇಗೌಡ.
ಆದರೆ.. ದೇವರಾಜೇಗೌಡರು ಹೇಳಿರೋದೇ ಬೇರೆ.. ಕಾರ್ತಿಕ್ ವಿಡಿಯೋ ಕೊಟ್ಟಿದ್ದು ಹೌದು. ಆದರೆ.. ಆತನ ವಿಡಿಯೋಗಳನ್ನು ಕಾಪಿ ಮಾಡಿಕೊಂಡು, ಆತನಿಗೆ ವಾಪಸ್ ಕೊಟ್ಟಿದ್ದೆ. ಕೋರ್ಟಿನಲ್ಲಿ ಹಾಕಿದ್ದೇನೆ. ನಮ್ಮ ಅಭ್ಯರ್ಥಿ ವಿರುದ್ಧವೇ ಪ್ರಚಾರ ಮಾಡೋದಕ್ಕೆ ನನಗೇನು ಹುಚ್ಚೇ ಎಂದಿದ್ದಾರೆ ದೇವರಾಜೇಗೌಡ.
ಅವರಿಗೂ ಕಾರಣ ಇದೆ. ಏಕೆಂದರೆ.. ಮೈತ್ರಿಗೆ ಹಾಸನ ಬಿಜೆಪಿ ನಾಯಕರ ಒಪ್ಪಿಗೆ ಇರಲಿಲ್ಲ. ಯಾರ ವಿರುದ್ಧ ಇಷ್ಟು ವರ್ಷ ಹೋರಾಡುತ್ತಿದ್ದೇವೋ.. ಅವರ ಪರವಾಗಿಯೇ ಕೆಲಸ ಮಾಡಬೇಕಾ ಎನ್ನುವ ಆಕ್ರೋಶ ಇತ್ತು. ದೇವರಾಜೇಗೌಡರು, ಜೆಡಿಎಸ್ ನಾಯಕರ ವಿರುದ್ಧ ಕೋರ್ಟು ಕಚೇರಿ ಎಂದು ಹೋರಾಡುತ್ತಿದ್ಧಾರೆ. ಇದೇ ಪ್ರಜ್ವಲ್ ರೇವಣ್ಣ ೨೦೧೯ರಲ್ಲಿ ಘೋಷಿಸಿದ್ದ ಆಸ್ತಿಯ ಲೆಕ್ಕ ಸರಿ ಇಲ್ಲ ಎಂದು ಕೇಸು ಹಾಕಿ, ಒಂದು ಹಂತದ ಗೆಲುವನ್ನೂ ಸಾಧಿಸಿದ್ದವರು.
ಇನ್ನು ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್ ಮೇಲೆ ಕುಮಾರಸ್ವಾಮಿ ಆರೋಪಿಸುತ್ತಿದ್ದಾರೆ. ಮಹಾನ್ ನಾಯಕನಿಗೆ ಗೊತ್ತು ಎನ್ನುತ್ತಿದ್ಧಾರೆ. ಅಂತಹ ಚಿಲ್ರೆ ಕೆಲಸ ನಾನು ಮಾಡ್ತೀನಾ ಅನ್ನೋದು ಡಿಕೆ ಬ್ರದರ್ಸ್ ಮಾತು.
ಒಂದಂತೂ ಸತ್ಯ. ಕಿರುಕುಳ ನೀಡಿದ್ದವನಷ್ಟೇ ಕ್ರಿಮಿನಿಲ್, ಆ ವಿಡಿಯೋಗಳನ್ನು ಮನೆಮನೆಗೆ ತಲುಪಿಸಿದ್ದವನದ್ದು. ಆತ ಆ ಮಹಿಳೆಯರ ಮುಖವನ್ನಾದರೂ ಮಾಸ್ಕ್ ಅಥವಾ ಬ್ಲರ್ ಮಾಡಬಹುದಿತ್ತು.



