ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆ ಖರ್ಚಿಗಾಗಿ 50 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕಿದ್ದಾರೆ. ಇಂತಾದ್ದೊಂದು ಬೆದರಿಕೆ ಹಾಕಿರುವ ವ್ಯಕ್ತಿಯ ಹೆಸರು ವಿಜಯ್ ಟಾಟಾ. ಇವರನ್ನು ವಿಜಯ್ ತಾತಾ ಎಂದೂ ಕರೆಯುತ್ತಾರೆ.
ತಮಗೆ ಕೇಂದ್ರ ಸಚಿವರು ಬೆದರಿಕೆ ಹಾಕಿದ್ದಾರೆ. ತಮಗೆ 50 ಕೋಟಿ ರೂ. ನೀಡಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಅದೇ ಹಣಕ್ಕಾಗಿ ಜೀವ ಬೆದರಿಕೆಯನ್ನೂ ಹಾಕಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಇದೇ ದೂರಿನಲ್ಲಿ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ಅವರ ಹೆಸರನ್ನೂ ಉಲ್ಲೇಖಿಸಿದ್ದಾರೆ. ಇಬ್ಬರೂ ಜನಪ್ರತಿನಿಧಿಗಳಿಂದ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ಕಾಪಾಡಬೇಕು. ತಮಗೆ ರಕ್ಷಣೆ ಒದಗಿಸಬೇಕು ಅನ್ನೋದು ವಿಜಯ್ ಟಾಟಾ ಅವರ ಮನವಿ.
ಇದು ಶುರುವಾಗಿದ್ದು ಹೆಚ್ ಡಿ ಕುಮಾರಸ್ವಾಮಿ ಅವರು ಲೋಕಾಯುಕ್ತ ಅಧಿಕಾರಿಯ ಮೇಲೆ ದೂರು ಕೊಟ್ಟ ದಿನ ಮಾಡಿದ ಆರೋಪದಿಂದ. ಅಂದು ವಿಜಯ್ ಟಾಟಾ ಅವರ ಹೆಸರನ್ನೂ ಉಲ್ಲೇಖ ಮಾಡಿದ್ದ ಕುಮಾರಸ್ವಾಮಿ, ಲೋಕಾಯುಕ್ತ ಅಧಿಕಾರಿ ಚಂದ್ರಶೇಖರ್ ವಿರುದ್ಧ ದೂರಿದ್ದರು. ಅದಾದ ಮೇಲೆ ಆ ಅಧಿಕಾರಿ ಮತ್ತು ಕುಮಾರಸ್ವಾಮಿ ನಡುವೆ ಹಂದಿ ಯುದ್ಧವಾಗಿದ್ದೂ ಗೊತ್ತಿದೆಯಲ್ಲ. ಆ ದಿನ ಕುಮಾರಸ್ವಾಮಿ ಬಾಯಲ್ಲಿ ಕೇಳಿ ಬಂದ ಉದ್ಯಮಿಯ ಹೆಸರು ವಿಜಯ್ ಟಾಟಾ.
ಈಗ ಅದೇ ವಿಜಯ್ ಟಾಟಾ ಕುಮಾರಸ್ವಾಮಿ ವಿರುದ್ಧ 50 ಕೋಟಿ ಬೇಡಿಕೆ ಇಟ್ಟ ದೂರು ಕೊಟ್ಟಿದ್ದರೆ, ಅದೇ ವಿಜಯ್ ಟಾಟಾ ವಿರುದ್ಧ ಜೆಡಿಎಸ್‌ನವರು 100 ಕೋಟಿ ಬೇಡಿಕೆ ಇಟ್ಟ ದೂರು ಕೊಟ್ಟಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಿಜಯ್ ಟಾಟಾ ಸುಳ್ಳು ದೂರು ನೀಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ರಮೇಶ್ ಗೌಡ ಅಮೃತಹಳ್ಳಿ ಪೊಲೀಸ್ ಠಾಣೆಗೆ ಪ್ರತಿ ದೂರು ದಾಖಲಿಸಿದ್ದಾರೆ.
ವಿಚಿತ್ರವೇನು ಗೊತ್ತೇ.. ಈ ವಿಜಯ್ ಟಾಟಾ ಮೂಲತಃ ಜೆಡಿಎಸ್ ಪಕ್ಷದಲ್ಲಿದ್ದವರು. ಹೊರಗಿನವರಲ್ಲ. 2018 ರಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಸೋಷಿಯಲ್ ಮೀಡಿಯಾ ವಿಭಾಗ ನೋಡಿಕೊಳ್ತಿದ್ದರಂತೆ. . ನಾನು ಜೆಡಿಎಸ್ ಕಾರ್ಯಕರ್ತ. 2019ರಲ್ಲಿ ಸಾಕಷ್ಟು ಖರ್ಚು ಮಾಡಿದ್ದೇನೆ. ಅದಕ್ಕೆ ಸಾಕ್ಷಿಗಳಿವೆ. ಸೂಪರ್ ಮಂಡ್ಯ ಅನ್ನುವ ಕ್ಯಾಂಪೇನ್ ಮಾಡಿದ್ದೀನಿ. ಇಂದು ವಿಜಯ್ ಟಾಟಾ ಯಾರು ಅಂಥ ಗೊತ್ತು. ಮನೆಗೆ ಹೋಗಿ ಊಟ ಮಾಡಿದ್ದೀನಿ ಅಂದಿದ್ದಾರೆ. ಹಾಗಿದ್ದರೆ ಗೊತ್ತಿಲ್ಲದವರ ಮನೆಗೆ ಊಟಕ್ಕೆ ಹೋಗುತ್ತಾರಾ? ಅವರು ಒಪ್ಪಿಕೊಂಡರೆ ನಾನೇ ದೂರು ವಾಪಸ್ ತೆಗೆದುಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ವಿಜಯ್ ಟಾಟಾ.
ಇನ್ನು ಉದ್ಯಮಿ ವಿಜಯ್ ಟಾಟಾ ಸಮಯ ಟಿವಿ ನ್ಯೂಸ್ ಚಾನೆಲ್ ಮಾಲೀಕರಾಗಿದ್ದವರು. ಸದ್ಯಕ್ಕೆ ಸಮಯ ಟಿವಿ ಮಾಲೀಕತ್ವದಿಂದ ಹಿಂದೆ ಸರಿದಿದ್ದಾರ. ಇವರ ವಿರುದ್ಧ ಹಲವು ವಂಚನೆ ಪ್ರಕರಣಗಳೂ ಇವೆ. ವಿಚಾರಣೆ ನಡೆಯುತ್ತಿದೆ.



